ನಾಳೆ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ‘ಪಟ್ಲ ಪ್ರಶಸ್ತಿ’ ಪ್ರದಾನ

ಪುರುಷೋತ್ತಮ ಬಿಳಿಮಲೆ

ಸುಮಾರು 40 ವರ್ಷಗಳಿಂದ ಡಾ. ಎಂ. ಪ್ರಭಾಕರ ಜೋಶಿ (ಜನನ 1946) ಯವರನ್ನು ನಾನು ಹತ್ತಿರದಿಂದ ನೋಡುತ್ತಲೇ ಬಂದಿದ್ದೇನೆ. ಅವರ ಚುರುಕಿನ ಅರ್ಥಗಾರಿಕೆ ಮತ್ತು ಆಕರ್ಷಕ ಭಾಷಣಗಳಿಗೆ ಕಿವಿಗೊಟ್ಟಿದ್ದೇನೆ. ಪತ್ರಿಕೆಗಳಲ್ಲಿ ಅವರು ಬರೆಯುವ ಸಂಕ್ಷಿಪ್ತ ಲೇಖನಗಳಲ್ಲಿ ಹುದುಗಿರುವ ಅಪಾರ ಅರ್ಥಗಳನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ಅವರು ಬರೆದ ಹಲವು ಪುಸ್ತಕಗಳನ್ನು ಮತ್ತೆ ಮತ್ತೆ ಪರಾಮರ್ಶಿಸುತ್ತಲೇ ಬಂದಿದ್ದೇನೆ. ನಾವಿಬ್ಬರೂ ಭಿನ್ನ ಭಿನ್ನ ನೆಲೆಗಳಿಂದ ನಮ್ಮ ಚರಿತ್ರೆ, ವರ್ತಮಾನ, ಸಂಸ್ಕೃತಿ, ಭಾಷೆ, ಕಲೆ ಇತ್ಯಾದಿಗಳನ್ನು ನೋಡುತ್ತಲೇ ಬಂದವರು.

ಈ ತಾತ್ವಿಕ ಭಿನ್ನತೆಯು ಅವರ ಬಗೆಗಣ ನನ್ನ ಗೌರವವನ್ನು ಸದಾ ಹೆಚ್ಚು ಮಾಡುತ್ತಲೇ ಬಂದಿದೆಯಲ್ಲದೆ, ಒಂದಿನಿತೂ ಕಡಿಮೆ ಮಾಡಿಲ್ಲ. ಅವರು ಶಂಕರಾಚಾರ್ಯ, ವರಾಹಮಿಹಿರ, ಕುಮಾರಿಲ, ಮಧ್ವಾಚಾರ್ಯ, ಮೊದಲಾದವರ ಬಗ್ಗೆ ಅಸ್ಖಲಿತವಾಗಿ ಮಾತಾಡುವಾಗ ನಾನು ಮೈನಿಮಿರಿಸಿ ಕೇಳುತ್ತೇನೆ. ಹಾಗೆಯೇ ನಾನು ಕಲ್ಕುಡ, ಕಲ್ಲುರ್ಟಿ, ದಲಿತರು, ಪಂಪ, ಮೊದಲಾದವರ ಬಗ್ಗೆ ಹೇಳಿದರೆ ಡಾ. ಜೋಶಿಯವರು ಮನದುಂಬಿ ಆಲಿಸುತ್ತಾರೆ. ಕನ್ನಡದ ಮಹಾಪ್ರತಿಭೆ ಡಾ. ಶಿವರಾಮ ಕಾರಂತರು ತಮ್ಮ ‘ಅಳಿದ ಮೇಲೆ’ ಕಾದಂಬರಿಯಲ್ಲಿ ಹೇಳಿದ- ‘ನಮ್ಮೆಲ್ಲರ ಸಮಷ್ಟಿ ಬಾಳ್ವೆಗೆ ನಾವು ಸಲ್ಲಿಸಬೇಕಾದ ಋಣವೆಂದರೆ ಇದೇ ಖಂಡಿತ, ಅದೇ ಖಂಡಿತ ಎಂದು ಇನ್ನೊಬ್ಬರ ಗಂಟಲನ್ನು ಹಿಸುಕಿ ಅವರ ವಾಣಿಯನ್ನು ನಿರ್ಬಂಧಿಸದಿರುವುದು’ ಎಂಬ ಮಾತು ನಮ್ಮಿಬ್ಬರ ಮಟ್ಟಿಗೆ ಸದಾ ನಿಜವಾಗುತ್ತಲೇ ಬಂದಿದೆ.

ಪ್ರಭಾಕರ ಜೋಶಿಯವರ ಪ್ರತಿಭೆಗೆ ಹಲವು ಮುಖಗಳಿವೆ. ಅವರು ಶೇಣಿ, ಸಾಮಗ, ಕುಂಬ್ಳೆ, ಕೋಳ್ಯೂರು ಪೆರ್ಲ ಪರಂಪರೆಗೆ ಸೇರಿದ ತಾಳಮದ್ದಳೆಯ ಸಮರ್ಥ ಅರ್ಥಧಾರಿ. ತಕ್ಕ ಇದಿರಾಳಿ, ಸರಿಯಾದ ಸಮಯ, ಸಂದರ್ಭ ಮತ್ತು ಪ್ರೇಕ್ಷಕರು ದೊರೆತಾಗ ಜೋಶಿಯವರ ಮಾತುಗಳು ಹೊಸ ಹೊಳಪು ಪಡೆದು, ಗಂಭೀರವಾಗುತ್ತವೆ. ಪುರಾಣದ ಚೌಕಟ್ಟನ್ನು ಬೇಧಿಸದೆ, ಪಾತ್ರಗಳಿಗೆ ನವೀನ ಆಯಾಮ ನೀಡುವಲ್ಲಿ ಜೋಶಿಯವರು ಸಿದ್ಧಹಸ್ತರು. ಇಂಥದ್ದೇ ಕೆಲಸ ಮಾಡಿದ ಗಿರೀಶ ಕಾರ್ನಾಡರು ಇವತ್ತು ಅಂತರರಾಷ್ಟ್ರೀಯ ಮಟ್ಟದ ಲೇಖಕ. ಆದರೆ ಜೋಶಿಯವರಿಗೆ ಅಂಥ ವಿಸ್ತಾರ ದೊರೆಯಲಿಲ್ಲ. ಅದಕ್ಕೆ ಅವರು ಕಾರಣರಲ್ಲ. ನೈಜ ಮತ್ತು ಸೃಜನಾತ್ಮಕ ಪ್ರತಿಭೆಯನ್ನು ಗುರುತಿಸಲಾಗದ ನಾವು ಕಾರಣರು.

ಒಬ್ಬ ಶ್ರೇಷ್ಠ ಕಲಾವಿದ ಅತ್ಯುತ್ತಮ ಲೇಖಕನೂ ಆಗಿರುವ ಉದಾಹರಣೆ ವಿಶ್ವದಲ್ಲಿಯೇ ಕಡಿಮೆ. ಜೋಶಿಯವರು ಕಲಾವಿದನಾಗಿ ಯಕ್ಷಗಾನದ ಒಳ ಹೊರಗನ್ನು ಚೆನ್ನಾಗಿ ಬಲ್ಲವರು. ಅನೇಕ ಸಹ ಕಲಾವಿದರ ಬಗ್ಗೆ ಲೇಖನ ಬರೆವ ಹೃದಯ ವೈಶಾಲ್ಯವನ್ನೂ ಅವರು ತೋರಿದ್ದಾರೆ. ರಂಗದ ಮೇಲೆ, ಮತ್ತು ರಂಗದ ಹೊರಗೆ ಕಲಾವಿದರೊಡನೆ ಹಾಗೂ ಅಭಿಮಾನಿಗಳೊಡನೆ ಸರಸ ಸಂಭಾಷಣೆಯಲ್ಲಿ ತೊಡಗಬಲ್ಲವರು. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಅವರನ್ನು ಗೊತ್ತಿಲ್ಲದವರಿಲ್ಲ. ಸಣ್ಣ ದೊಡ್ಡ ಹೋಟೆಲುಗಳಲ್ಲಿ ಕೆಲಸ ಮಾಡುವವರೂ ಕೂಡಾ ಜೋಶಿಯವರನ್ನು ಕಂಡಾಗ ಸಂಭ್ರಮಿಸಿ, ಸ್ವಾಗತಿಸಿ, ತಿಂಡಿ ತಿನ್ನಿಸಿ, ಬೀಳ್ಕೊಳ್ಳುವುದುಂಟು.

ಸಾಮಾನ್ಯ ಜನರೊಡನೆ ಇಂಥ ಅಪೂರ್ವ ಸಂಬಂಧ ಸಾಧಿಸಿಕೊಂಡ ಡಾ. ಜೋಶಿಯವರು ವಿದ್ವತ್ ಲೋಕದಲ್ಲಿಯೂ ಪ್ರಸಿದ್ಧರು. ಅವರು ಬರೆದ ಕೃಷ್ಣ ಸಂಧಾನ, ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ವಾಗರ್ಥ, ಮುಡಿ, ಭಾರತೀಯ ತತ್ವಶಾಸ್ತ್ರ, ತತ್ವ ಮನನ ಮೊದಲಾದ ಕೃತಿಗಳು ಯಕ್ಷಗಾನ ಅಧ್ಯಯನಗಳಿಗೆ ಪ್ರೌಢತೆಯನ್ನೂ, ಗಾಂಭೀರ್ಯವನ್ನೂ ತಂದು ಕೊಟ್ಟಿವೆ. ಯಕ್ಷಗಾನಕ್ಕೆ ಸಂಬಂಧಿಸಿದ ಅನೇಕ ಸಂದೇಹಗಳನ್ನು ಪರಿಹರಿಸಿದ ಕೀರ್ತಿ ಅವರದು. ಯಕ್ಷಗಾನವನ್ನು ಭಾರತದ ಇತರ ಅನೇಕ ಕಲೆಗಳ ಜೊತೆಗಿರಿಸಿ ತೌಲನಿಕವಾಗಿ ವಿಮರ್ಶಿಸುವ ವಿದ್ವತ್ತು ಅವರಿಗಿದೆ.

ಡಾ. ಪ್ರಭಾಕರ ಜೋಶಿಯವರು ಇತ್ತೀಚೆಗೆ ’ಕುಮಾರ ವ್ಯಾಸ ಭಾರತ ಮತ್ತು ಯಕ್ಷಗಾನ’ ಎಂಬ ಒಂದು ಅತ್ಯಂತ ಮಹತ್ವದ ಸುದೀರ್ಘ ಲೇಖನವನ್ನು ಬರೆದಿ ದ್ದಾರೆ. ಈ ಲೇಖನದಲ್ಲಿ ಅವರು ಮಧ್ಯಕಾಲೀನ ಕನ್ನಡ ಕಾವ್ಯಗಳಾದ ನರಹರಿಯ ತೊರವೆ ರಾಮಾಯಣ, ಕುಮಾರವ್ಯಾಸನ ಕರ್ನಾಟಕ ಭಾರತ ಕಥಾ ಮಂಜರಿ, ಲಕ್ಷ್ಮೀಶನ ಜೈಮಿನಿ ಭಾರತ, ನಿತ್ಯಾತ್ಮ ಶುಕಯೋಗಿಯು ಕನ್ನಡ ಭಾಗವತ ಮೊದಲಾದವು ಯಕ್ಷಗಾನ ಪ್ರಸಂಗಗಳ ಮೇಲೆ ಬೀರಿದ ಪರಿಣಾಮಗಳನ್ನು ಸಾಧಾರವಾಗಿ ಚರ್ಚಿಸುತ್ತವೆ.

ಡಾ. ಜೋಶಿಯವರು ನಡುಗನ್ನಡ ಪಠ್ಯಗಳು ಹಾಗೂ ಯಕ್ಷಗಾನಗಳ ನಡುವಣ ಸಂಬಂಧಗಳ ಕುರಿತು ಈ ಮುಂದಿನಂತೆ ಹೇಳುತ್ತಾರೆ- ‘ತಮಗೆ ಲಭ್ಯವಿದ್ದ ಒಂದೋ ಹಲವೋ ಮೂಲಗಳಿಂದ ಕತೆಯನ್ನು ತೆಗೆದುಕೊಂಡು ಆ ಮೂಲದ ಆಶಯದೊಂದಿಗೆ ಪದ್ಯ ರೂಪದಲ್ಲಿ ಕತೆ ಹೇಳುವುದು ಹೆಚ್ಚಿನ ಪ್ರಸಂಗಗಳ ಕ್ರಮವಾಗಿದೆ.

ಹಾಗಾಗಿ ಅಲ್ಲಿ ವೈಶಿಷ್ಟ್ಯವೇನಿದ್ದರೂ ಬಂಧಗಳ ಪದ ಪ್ರಯೋಗಗಳ ಮತ್ತು ರಂಗ ಅನ್ವಯದ ವಿಷಯಗಳಲ್ಲಿ. ಹೀಗಾಗಿ ಪಾರ್ತಿಸುಬ್ಬನ ರಚನೆಗಳಿಂದ ತೊಡಗಿ, ಜತ್ತಿ ಈಶ್ವರ ಭಾಗವತರ ರಚನೆಗಳ ವರೆಗೂ ಹಿಂದಿನ ಕಾವ್ಯವನ್ನೇ ಹೆಚ್ಚು ಕಡಿಮೆ ತದ್ವತ್ತಾಗಿ ಅನುಸರಿಸಿ, ಕತೆಯನ್ನು ಹಾಡುಗಳಾಗಿ ಪ್ರಸಂಗ ರೂಪದಲ್ಲಿ ಬರೆದುದು ಕಾಣುತ್ತದೆ. ಪಾರ್ತಿಸುಬ್ಬನಿಗೆ ತೊರವೆ ರಾಮಾಯಣ ಮತ್ತು ಕಥಕ್ಕಳಿ ರಾಮಾಯಣಗಳು ಆಕರಗಳು. ರಾಮಾಯಣ ಪ್ರಸಂಗಗಳನ್ನು ಬರೆದ ಹೆಚ್ಚಿನ ಯಕ್ಷಗಾನದ ಕವಿಗಳಿಗಳು ತೊರವೆಯನ್ನು ಅನುಸರಿಸಿದ್ದಾರೆ. ಅದೇ ರೀತಿ ಯಕ್ಷಗಾನ ಮಹಾಭಾರತ ಪ್ರಸಂಗಗಳಲ್ಲಿ ಹಲವಕ್ಕೆ ಕುಮಾರವ್ಯಾಸ ಭಾರತವು ಆಕರ. ಪಾಂಡವಾಶ್ವಮೇಧ ಪ್ರಸಂಗಗಳಿಗೆ ಲಕ್ಷ್ಮೀಶನ ಜೈಮಿನಿ ಭಾರತವು ನೇರ ಆಧಾರ, ಆಕರ. ಇದೇ ಪರಂಪರೆಯಲ್ಲಿರುವ ಕೃಷ್ಣ ಸಂಧಾನವು ಮುಖ್ಯವಾಗಿ ಕುಮಾರವ್ಯಾಸ ಭಾರತದ ಸಂಗ್ರಹಾನುವಾದದಂತಿದೆ’  –ಜೋಶಿಯವರ ಈ ಮಾತುಗಳನ್ನು ಆಧರಿಸಿ ಇಡೀ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಹೊಸದಾಗಿ ಬರೆಯಲು ಸಾಧ್ಯವುಂಟು.

ಹಳಗನ್ನಡ (ರನ್ನನ ಗದಾಯುದ್ಧಂ), ನಡುಗನ್ನಡ (ಗದುಗಿನ ಭಾರತ ) ಮತ್ತಿತರ ಪಠ್ಯಗಳನ್ನು ಯಕ್ಷಗಾನ ಪ್ರಸಂಗಗಳಾಗಿ ಮಾರ್ಪಡಿಸಿದಾಗ ಕಲಾವಿದರಿಗೆ ಪುರಾಣ ಪಾತ್ರಗಳನ್ನು ರಂಗದ ಮೇಲೆ ಅಭಿನಯಿಸುವ ಅವಕಾಶ ಲಭಿಸಿತು.

ಚಂಡೆ ಮದ್ದಳೆ ಭಾಗವತಿಕೆಗಳ ಜೊತೆಗೆ ಕರ್ನಾಟಕ ಭಾರತ ಕಥಾಮಂಜರಿ, ತೊರವೆ ರಾಮಾಯಣ ಮೊದಲಾದ ಕಾವ್ಯಗಳ ಪಾತ್ರಗಳು ಬಣ್ಣ, ಕುಣಿತ, ವೇಷಭೂಷಣ ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ರಂಗ ಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು. ಜಾತಿ, ಮತಗಳ ಭೇದವಿಲ್ಲದೆ ಅವುಗಳನ್ನು ಲಕ್ಷಾಂತರ ಜನ ನೋಡುವಂತಾಯಿತು.

ಯಕ್ಷಗಾನದ ಇನ್ನೊಂದು ಪ್ರಕಾರವಾದ ತಾಳಮದ್ದಳೆಯಲ್ಲಿ ಕಲಾವಿದರು ಭಾಗವತರ ಹಾಡಿಗೆ ಕುಳಿತು ಅರ್ಥ ಹೇಳುತ್ತಾರೆ. ಯಕ್ಷಗಾನ ಕಲಾವಿದರನೇಕರು ತೊರವೆ ರಾಮಾಯಣದ ಪದ್ಯಗಳನ್ನೋ, ಕುಮಾರವ್ಯಾಸ ಭಾರತದ ಪದ್ಯಗಳನ್ನೋ ಎಲ್ಲೆಂದರಲ್ಲಿ ಗುನುಗುನುಸಿಕೊಂಡು ಓಡಾಡುತ್ತಿರುವುದನ್ನು ಯಾರಾದರೂ ಗಮನಿಸಬಹುದು.

ಯಕ್ಷಗಾನ ಪ್ರಸಂಗಗಳ ಮೂಲಕ ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳು ಸಾಮಾನ್ಯ ಜನರಿಗೆ ತಲುಪಿದ ರೀತಿ ಮಾತ್ರ ಅಸಾಮಾನ್ಯವಾದುದು. ಜೋಶಿಯವರು ಹಾಕಿಕೊಟ್ಟ ಹಾದಿಯಲ್ಲಿ ಹೊರಟು ಯಕ್ಷಗಾನ ಪ್ರಸಂಗಗಳಲ್ಲಿ ಮರು ಸೃಷ್ಟಿಗೊಂಡ ಕನ್ನಡ ಕಾವ್ಯಗಳ ಬಗೆಗೆ ಇನ್ನಷ್ಟು ಸೂಕ್ಷ್ಮವಾದ ಅಧ್ಯಯನ ನಡೆಯಬೇಕಾಗಿದೆ.

ಯಕ್ಷಗಾನ ಪ್ರಸಂಗಗಳ ಮೂಲಕ ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳು ಸಾಮಾನ್ಯ ಜನರಿಗೆ ತಲುಪಿದ ರೀತಿ ಮಾತ್ರ ಅಸಾಮಾನ್ಯವಾದುದು. ಜೋಶಿಯವರು ಹಾಕಿಕೊಟ್ಟ ಹಾದಿಯಲ್ಲಿ ಹೊರಟು ಯಕ್ಷಗಾನ ಪ್ರಸಂಗಗಳಲ್ಲಿ ಮರು ಸೃಷ್ಟಿಗೊಂಡ ಕನ್ನಡ ಕಾವ್ಯಗಳ ಬಗೆಗೆ ಇನ್ನಷ್ಟು ಸೂಕ್ಷ್ಮವಾದ ಅಧ್ಯಯನ ನಡೆಯಬೇಕಾಗಿದೆ.

  • ಪ್ರಜಾವಾಣಿ
error: Content is protected !!
Share This