ಮೇ 27 ರಂದು ಯಕ್ಷಧ್ರುವ ಪಟ್ಲ ಸಂಭ್ರಮ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಮೂರನೇ ವರ್ಷದ ಪಟ್ಲ ಸಂಭ್ರಮ – 2018 ಕಾರ್ಯಕ್ರಮವು ಮೇ 27 ರಂದು ಅಡ್ಯಾರ್‌ನಲ್ಲಿರುವ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಿಗ್ಗೆ ಗಂಟೆ 8 ರಿಂದ ರಾತ್ರಿ 12ರ ತನಕ ಕಾರ್ಯಕ್ರಮ ನಡೆಯಲಿದೆ. ಶೇಣಿ ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿ ಬೆಳಿಗ್ಗೆ 8ರಿಂದ ಚೌಕಿ ಪೂಜೆ, ಅಬ್ಬರ ತಾಳ, 9 ರಿಂದ ಚೆಂಡೆ ಜುಗಲ್ ಬಂದಿ-ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀ ವೇಷ, 9.45ರಿಂದ ಉದ್ಘಾಟನಾ ಸಮಾರಂಭ, 10ರಿಂದ 2ರ ತನಕ ಟ್ರಸ್ಟಿನ ಸದಸ್ಯರು ಹಾಗೂ ಯಕ್ಷಭಿಮಾನಿಗಳಿಂದ ರಕ್ತದಾನ ಶಿಬಿರ. ಯಕ್ಷಗಾನ ಕಲಾವಿದರು ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಔಷಧಿ ವಿತರಣೆ, ಬೆ.11ರಿಂದ ಯಕ್ಷಸಪ್ತಸ್ವರ ಗಾನವೈಭವ, ಮಧ್ಯಾಹ್ನ 1ರಿಂದ ಮಹಿಳಾ ಯಕ್ಷಗಾನ, 2.30 ರಿಂದ 4 ರ ತನಕ ತಾಳಮದ್ದಳೆ-ಅಗ್ರಪೂಜೆ, 4 ರಿಂದ ಬಾಲಕಲಾವಿದೆಯಿಂದ ಯಕ್ಷಗಾನ ನೃತ್ಯ, 4.15 ರಿಂದ 5.15 ರ ತನಕ ಯಕ್ಷಮಿತ್ರರು ದುಬೈ ಮಕ್ಕಳ ತಂಡದಿಂದ ಯಕ್ಷಗಾನ-ಏಕದಶಿ ವೃತ ಮಹಾತ್ಮೆ, ಸಂಜೆ 5.30 ರಿಂದ 7 ರ ತನಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರಿಗೆ 1 ಲಕ್ಷ ರೂ. ನಗದಿನೊಂದಿಗೆ ಪಟ್ಲ ಪ್ರಶಸ್ತಿ 2018 ಪ್ರದಾನ ಮಾಡಲಾಗುವುದು. ವಿವಿಧ ಕಲಾವಿದರಿಗೆ ಯಕ್ಷಧ್ರುವ ಕಲಾ ಗೌರವ ಹಾಗೂ ತೆಂಕುತಿಟ್ಟಿನ ಭಾಗವತರಾದ ದಿ.ಕುಬಣೂರು ಶ್ರೀಧರ ರಾವ್‌ರವರಿಗೆ ಮರಣೋತ್ತರ ಪ್ರಶಸ್ತಿ 25 ಸಾವಿರ ರೂ. ನಗದಿನೊಂದಿಗೆ ನೀಡಲಾಗುವುದು. ಕಲಾವಿದರ ಮಕ್ಕಳಿಗೆ ವಿವಿಧ ಪುರಸ್ಕಾರ, ಕಲಾವಿದರಿಗೆ ಗೌರವಧನ, ಗೃಹ ನಿರ್ಮಾಣಕ್ಕೆ ನೆರವು ನೀಡಲಾಗುವುದು. ಯಕ್ಷಗಾನ ಪ್ರಸಂಗಗಳ ಸಂಪುಟ ಪ್ರಕಾಶನ-ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿರಿಕ್ ಪಾರ್ಟಿ ಖ್ಯಾತಿಯ ರಿಷಬ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸತೀಶ್ ಶೆಟ್ಟಿ, ಪುರುಷೋತ್ತಮ ಭಂಡಾರಿ, ಕದ್ರಿ ನವನೀತ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಪೂರ್ಣಿಮಾ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಮೊದಲಾವರಿದ್ದರು.