ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ, ಹನ್ನೊಂದನೆಯ ವರ್ಷದ ಸರ್ಪಂಗಳ ಯಕ್ಷೋತ್ಸವ ಮತ್ತು ಸರ್ಪಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಕ್ಟೋಬರ್ 15, 2022 ರಂದು ರಾತ್ರಿ 9.00 ಗಂಟೆಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಜರಗಲಿದೆ. ಸಂಜೆ 6.00 ರಿಂದ 11.00ರ ವರೆಗೆ ‘ಹನುಮೋದ್ಭವ ಮಾರಣಾಧ್ವರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ. 2022ನೆಯ ಸಾಲಿನ ‘ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ಯನ್ನು ಪಿ. ಟಿ. ಜಯರಾಮ ಅವರಿಗೆ ನೀಡಲಾಗುತ್ತಿದೆ. ಪ್ರಸಿದ್ಧ ಪದ್ಯಾಣ ಮನೆತನದ ಜಯರಾಮ ಭಟ್ಟರು ಸುಮಾರು ಮೂರು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಭಾಗವತರಾಗಿ, ಮದ್ದಲೆವಾದಕರಾಗಿ ತಿರುಗಾಟ ನಡೆಸಿದ ಅನುಭವ ಉಳ್ಳವರು. ಈ ವರ್ಷದ ‘ಸರ್ಪಂಗಳ ಕಲಾಸೇವಾ ಪುರಸ್ಕಾರ’ವನ್ನು ಕಟೀಲು ಮೇಳದಲ್ಲಿ ಸುಮಾರು ಐದು ದಶಕಗಳ ಕಾಲ ನೇಪಥ್ಯಕಲಾವಿದರಾಗಿ ಸೇವೆ ಸಲ್ಲಿಸಿದ ಪುತ್ತು ನಾಯ್ಕ ಬಸಕೋಡಿ ಇವರಿಗೆ ನೀಡಲಾಗುತ್ತಿದೆ. ಅಂದು ಜರಗಲಿರುವ ಸಮಾರಂಭದಲ್ಲಿ ಪರ್ಯಾಯ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ‘ಸರ್ಪಂಗಳ ಯಕ್ಷೋತ್ಸವ’ದ ಆಯೋಜಕರಾದ ಡಾ. ಶೈಲಜಾ ಎಸ್. ಮತ್ತು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Share This