ಡಾ.ಎಂ. ಪ್ರಭಾಕರ ಜೋಶಿ

1
ಯಕ್ಷಗಾನ ರಂಗದ ವಿಚಿತ್ರ ಪ್ರತಿಭೆಗಳಲ್ಲೊಂದು ಜಲವಳ್ಳಿ ವೆಂಕಟೇಶರಾವ್. ಓದುಬರಹದ ಗಳಿಕೆ, ಕೌಟುಂಬಿಕವಾದ ಹಿನ್ನೆಲೆ ಯಾವುದೂ ಇಲ್ಲದೆ ಅವರು ಪ್ರಜ್ವಲಿಸಿದ ರೀತಿ ವಿಸ್ಮಯಕರ. ಹೊನ್ನಾವರದ ಸುತ್ತಲಿನ ಸಮೃದ್ಧ ಕಲಾ ವಾತಾವರಣ –ಕರ್ಕಿ, ಕೆರೆಮನೆ ಮನೆತನಗಳು, ದೇವರು ಹೆಗಡೆ– ಇವರೆಲ್ಲರ ಪ್ರಭಾವದಿಂದ ಕಲಾವಿದನಾಗಿ ರೂಪುಗೊಂಡರೂ ತನ್ನ ಕಾಲದ ಪ್ರಚಂಡ ಪ್ರತಿಭಾಶಾಲಿಗಳಾರನ್ನೂ ಅವರು ಅನುಕರಣೆ ಮಾಡದಿದ್ದುದು ವಿಶೇಷ. ಇದು ಅವರಲ್ಲಿದ್ದ ಮೇಲ್ದರ್ಜೆಯ ಸ್ವಂತಿಕೆಗೆ ದೃಷ್ಟಾಂತ. ಓರ್ವ ಪ್ರಭಾವಿ ಮತ್ತು ವಿಭಿನ್ನ ರೀತಿಯ ಕಲಾವಿದನಾಗಿ ಅವರು ರಂಗದಲ್ಲಿ ಬಹುಕಾಲ – ಬೆಳಗಿದವರು; ಮೆರೆದವರು. ಈ ನೆಲೆಯಲ್ಲಿ ಅವರು ಗಳಿಸಬೇಕಿದ್ದ ಮನ್ನಣೆ ಪಡೆದಿಲ್ಲವೆಂದೆ ಹೇಳಬಹುದು.
2
ಜಲವಳ್ಳಿ ಅವರನ್ನು ಕಾಣುವ ಮೊದಲ ಸಂದರ್ಭ ಒದಗಿದ್ದು 1969ರಲ್ಲಿ ಹೊನ್ನಾವರದ ಹಳದೀಪುರ ಜಾತ್ರೆಯ ಸಂದರ್ಭ. ದಿ|ಕಡತೋಕಾ ಮಂಜುನಾಥ ಭಾಗವತರು ಏರ್ಪಡಿಸಿದ್ದ ಆಟದಲ್ಲಿ (ಅವರು ಆಗಲೇ ಧರ್ಮಸ್ಥಳ ಮೇಳದಲ್ಲಿ ಭಾಗವತರಾಗಿ, ನನಗೆ ಪರಿಚಿತರಾಗಿದ್ದರು). ನಾನು ‘ವೇಷಧಾರಿ’(?)ಯಾಗಿ ಆಹ್ವಾನಿತನಾಗಿದ್ದೆ. ದಿ|ಕಡತೋಕ ಕೃಷ್ಣ ಭಾಗವತರೂ ಇದ್ದರು. ಅಂದು ನನಗೆ ಉತ್ತರ ಕನ್ನಡದ ಪ್ರಸಂಗ-ಪ್ರದರ್ಶನ ವಿಧಾನದ ವಿಭಿನ್ನತೆ ಮತ್ತು ಶ್ರೇಷ್ಠತೆಗಳ ಒಂದು ಒಳ್ಳೆಯ ಮಾದರಿಯನ್ನು ಹತ್ತಿರದಿಂದ ರಂಗದಲ್ಲೆ (ನಾನು ಗದಾಪರ್ವದ ಕೃಷ್ಣನಾಗಿದ್ದೆ) ಕಾಣುವ ಅವಕಾಶ ಸಿಕ್ಕಿತು. ಯಕ್ಷಗಾನ ಪದ್ಯಗಳ–ರಂಗದ ವಿತರಣೆಯಲ್ಲಿ ಎಷ್ಟೊಂದು ಸಾಧ್ಯತೆಗಳಿವೆ ಅನಿಸಿತು. ಅದೊಂದು ನವೀನ- ಕಲಾದರ್ಶನವಾಗಿತ್ತು. ಅಂದು ಗದಾಪರ್ವದ ಕೌರವನಾಗಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಭೀಮನಾಗಿ ಜಲವಳ್ಳಿ ಭಾಗವತರಾಗಿ ಉಭಯ ಕಡತೋಕರು ಇದ್ದರು. ಅಂದಿನ ಚಿಟ್ಟಾಣಿ – ಜಲವಳ್ಳಿ ಜೋಡಿ, ಈಗಲೂ ನನ್ನ ಕಣ್ಣ ಮುಂದೆ ಬರುತ್ತಿದೆ. ಅನಕ್ಷರ ಪರಂಪರೆಯ ಇವರಿಬ್ಬರೂ–ಏಕಕಾಲದಲ್ಲಿ ಬೆಳಕಿಗೆ ಬಂದವರು, ಜೊತೆಗಾರರಾಗಿ ಪ್ರಸಿದ್ಧರಾದವರು ಎಂಬುದು ಒಂದು ಗಮನಾರ್ಹ ಅಂಶ.
3
ಅಂದಿನ ಭೀಮನಾಗಿ ಜಲವಳ್ಳಿ ಅವರು ದೂತನನ್ನು ಮಾತಾಡಿಸಿದ ರೀತಿ, ಕೌರವನನ್ನು ಮೂದಲಿಸಿದ ಕ್ರಮ, ಯುದ್ಧದ ಪದ್ಯಗಳ ಕೆಲಸ, ಇವು- ಮತ್ತು ವಿಶೇಷವಾಗಿ- ಕೌರವನನ್ನು ಹೀಗಳೆಯುವ “ಭೂಪ| ಏನಾಯ್ತು ಪ್ರತಾಪ|….” ಪದ್ಯಗಳ ಆಂಗಿಕ, ವಾಚಿಕ ಅಭಿವ್ಯಕ್ತಿ ಅಸಮಾನ್ಯವೆನಿಸಿತು. ಚಿಟ್ಟಾಣಿಯಂತಹ ಪ್ರಖರ ಪ್ರಭಾವದ ಕಲಾವಿದನ ಮುಂದೆ, ಕಡಿಮೆ ಅನಿಸದ ಪಾತ್ರ ನಿರ್ವಹಣೆ ನೀಡಿದ, -ನೀಡುತ್ತ ಬಂದವರು ಜಲವಳ್ಳಿ.
4
ಮುಂದೆ ಅವರು ಸುರತ್ಕಲ್ ಪೈ ಸೋದರರ ‘ಮಹಾಮಾಯಿ’ ಮೇಳಕ್ಕೆ ಬಂದಾಗ ನಮ್ಮ ಪ್ರದೇಶದಲ್ಲಿ ಬಹಳಷ್ಟು ಮನ್ನಣೆ ಗಳಿಸಿದರು; ಪ್ರಸಿದ್ಧರಾದರು. ಮೇಳದ ಒಂದು ಮುಖ್ಯ ಆಕರ್ಷಣೆ ಅನಿಸಿದರು. ಆಗ ಅವರು ಆರಂಭದಲ್ಲಿ ಮಾಡಿದ ವೇಷ –ಅವರಿಗೆ ಅಷ್ಟಾಗಿ ಹೊಂದದ– ಗುಣಸುಂದರಿ ಪ್ರಸಂಗದ ಶೂರಸೇನ. ಮಕ್ಕಳನ್ನು ಪರೀಕ್ಷಿಸುವ ವೃದ್ಧ ರಾಜ. ಆಶ್ಚರ್ಯವೆಂದರೆ ಅವರು ಆ ಪಾತ್ರಕ್ಕಾಗಿಯೆ ಇರುವವರೆಂಬಷ್ಟು ಯಶಸ್ವಿಯಾಯಿತು ಅವರ ನಿರ್ವಹಣೆ. ಅದರಲ್ಲಿ ಅವರು -ಸಂಭಾಷಣೆಗಳಲ್ಲಿ- ಪೋಣಿಸುತ್ತಿದ್ದ ಹತ್ತಾರು ಗಾದೆಗಳು, ವಿಶಿಷ್ಟ ಪ್ರತಿಕ್ರಿಯೆಗಳು, ಭಾವವ್ಯತ್ಯಾಸಗಳು ತುಂಬ ಪರಿಣಾಮಕಾರಿಯಾಗಿ, ಶೂರಸೇನನ ಪಾತ್ರಕ್ಕೆ ಒಂದು ‘ದಾರಿ’ ಮಾದರಿ ಅನಿಸಿದ್ದು ವಿಶೇಷ. ಅವರಲ್ಲಿದ್ದ ಒಂದು ಬೇರೆ ಬಗೆಯ ಸಾಮರ್ಥ್ಯ ಆ ಪಾತ್ರದಲ್ಲಿ ಕಂಡು ಬಂದುದು, ಅವರಿಗೂ ಅಚ್ಚರಿ ಅನಿಸಿತ್ತು.

ಎರಡನೆಯ ಬಾರಿ ಅವರ ಜತೆ ವೇಷ ಮಾಡಲು ದೊರೆತ ಒಂದು ಅವಕಾಶ ತುಂಬ ಸ್ಮರಣೀಯವಾಗಿ ಅಚ್ಚಾಗಿ ನಿಂತಿದೆ. ಸುರತ್ಕಲ್ಲಿನಲ್ಲಿ ನಾನು ಪ್ರಾಧ್ಯಾಪಕನಾಗಿದ್ದ ಸಂದರ್ಭ (1971). ಸುರತ್ಕಲ್ ಮೇಳದ ನವರಾತ್ರಿ ಸೇವೆ ಆಟ, ದಿ| ವರದರಾಯ್ ಪೈಗಳ ಸ್ನೇಹದ ಒತ್ತಾಯಕ್ಕಾಗಿ ನಾನು ‘ಭೃಗು ಲಾಂಛನ’ ಪ್ರಸಂಗ (ತಿರುಪತಿ ಮಹಾತ್ಮೆಯ ಮೊದಲಭಾಗ)ದಲ್ಲಿ ವಿಷ್ಣುವಿನ ಪಾತ್ರ ವಹಿಸಿದ್ದೆ. ಜಲವಳ್ಳಿ ಅವರದು ಭೃಗು. ಯಾವುದೇ ಪೂರ್ವ ಸಮಾಲೋಚನೆಗೆ ಅವಕಾಶ ಸಿಕ್ಕಿರಲಿಲ್ಲ. ಅಗರಿ ಭಾಗವತರು ಸ್ಥೂಲವಾಗಿ ಕಥೆಯ ನಡೆ ಹೇಳಿದ್ದರು ಅಷ್ಟೆ. ಭೃಗುವಿನ ಗರ್ವ, ವಿಷ್ಣುವಿನ ವಿನಯ, ಲೀಲಾವಿನೋದ ಇದಿಷ್ಟು ಮುಖ್ಯ ವಿಷಯ.
ಅಂದಿನ ಆ ಸನ್ನಿವೇಶ ಎಷ್ಟು ಚೆನ್ನಾಗಿ ರೂಪಿತವಾಯಿತೆಂದರೆ ಇನ್ನೊಮ್ಮೆ ಅಶಕ್ಯ ಎಂಬಷ್ಟು . ಭಾಗವತರು, ಲಕ್ಷ್ಮೀ ಪಾತ್ರಧಾರಿಯೂ ಚೆನ್ನಾಗಿ ಒದಗಿ ಬಂದರು. ವಿಷ್ಣುವಿನ ಎರಡರ್ಥದ ಪ್ರತಿಕ್ರಿಯೆ, ಭ್ರಗುವನ್ನು ಹೊಗಳುವಿಕೆ, ಇತ್ಯಾದಿಗಳಲ್ಲಿ ನಾವು ‘ಪರೋಕ್ಷ ಸಂಭಾಷಣೆ’ (ತ್ರಿಕೋನ ಸಂವಾದ) ನಡೆಸಿದೆವು. ‘ಗರ್ವಿಷ್ಠ ತಪಸ್ವಿ ಮತ್ತು ಪೆದ್ದು’ ಎಂಬ ಕಲ್ಪನೆಯನ್ನು ಇಟ್ಟುಕೊಂಡು ಜಲವಳ್ಳಿ ಅದಕ್ಕೆ ನೀಡಿದ ಸ್ಪಂದನವು ಅತ್ಯತ್ತಮ. ನಾಟಕೀಯತೆಯ ಉತ್ಕ್ರಷ್ಟ ಉದಾಹರಣೆಯಾಗಿ ನನಗೀಗಲೂ ಮನದಲ್ಲಿ ನಿಂತಿದೆ.
“ನೀವು ಎಷ್ಟು ಬಾರಿ ಹೀಗೆ ಈ ಪ್ರಸಂಗದಲ್ಲಿ ಜತೆ ವೇಷ ಮಾಡಿದ್ದೀರಿ?” ಎಂದು ಒಬ್ಬರು, ನಮ್ಮಿಬ್ಬರಲ್ಲೂ ಚೌಕಿಯಲ್ಲಿ ಕೇಳಿದ್ದರು. ನಾವಿಬ್ಬರೂ ಒಂದು ಕ್ಷಣ ಉತ್ತರಿಸಲಾಗದೆ, ಅವಾಕ್ಕಾದೆವು. ಆ ಬಳಿಕ ಹೇಳಿದೆವು “ಇದೇ ಮೊದಲು”! ಆಗ ಅವರು ಅವಾಕ್ಕಾದರು.
5
ಜಲವಳ್ಳಿ ಅವರಿಗೆ ದೊಡ್ಡ ಹೆಸರು ತಂದಿತ್ತ ಪಾತ್ರ ‘ಶನೀಶ್ವರ ಮಹಾತ್ಮೆ’ (ರಾಜಾವಿಕ್ರಮ)ಯ ಶನಿ. ಅವರ ಅಬ್ಬರದ ಪ್ರವೇಶ, ವಿಶೇಷವಾದ ಚಲನೆಗಳು, ವಜನಿನ, ಚೊಕ್ಕ ಮಾತುಗಳು ಅವರನ್ನು ಆ ಪಾತ್ರದ ದೊಡ್ಡ ಗುರುತು ಕಲಾವಿದನಾಗಿ ಕಾಣಿಸಿದವು. ಆ ವೇಷಕ್ಕಾಗಿಯೆ ಮಾಡಿಸಿದ್ದ ಸ್ವಲ್ಪದೊಡ್ಡ ಆಕಾರದ ಕೋಲುಕಿರೀಟ (ರಾಜ ವೇಷದ ಕಿರೀಟ) ಇರಿಸಿ, ಗದೆ ಹೆಗಲಿಗಿಟ್ಟು ಓರೆ ನೋಟ ಬೀರುತ್ತಿದ್ದ ಅವರ ಭಂಗಿ ಬಹುಕಾಲ ಫೋಟೋ, ಪೋಸ್ಟರ್, ಬ್ಯಾನರ್‍ಗಳಲ್ಲಿ ರಾರಾಜಿಸಿತ್ತು.
6
ಜಲವಳ್ಳಿಯವರು ಸೇರಿದ್ದು ಸುರತ್ಕಲ್ ಮೇಳಕ್ಕೆ. ತೆಂಕುತಿಟ್ಟಿನ ಮೇಳಗಳಲ್ಲಿ ಮುಖ್ಯ ವೇಷಧಾರಿಯಾಗಬೇಕಾದರೆ ತಕ್ಕಮಟ್ಟಿನ ಒಳ್ಳೆಯ ಮಾತುಗಾರಿಕೆ ಅಗತ್ಯ. ಕಾರಣ –ಆಗಲೇ ತೆಂಕಿನ ಎಲ್ಲ ಮೇಳಗಳಲ್ಲೂ ಒಳ್ಳೆಯ ಮಾತುಗಾರರಿದ್ದರು, ನಟರಿದ್ದರು. ಸುರತ್ಕಲ್ಲು ಮೇಳದಲ್ಲಿಯೂ –ಮಹಾವಾಗ್ಮಿಗಳಾದ ಶೇಣಿ, ತೆಕ್ನಟ್ಟೆ ಅವರು. ಜತೆಗೆ ಸಮರ್ಥರಾದ ಅನೇಕ ಕಲಾವಿದರು (ಶಿವರಾಮ ಜೋಗಿ, ಈಶ್ವರ ಭಟ್ಟ, ಪೆರುವಡಿ ಹಾಸ್ಯಗಾರರು, ಎಂ.ಕೆ ರಮೇಶಾಚಾರ್ಯ…ಹೀಗೆ ಹಲವರು.) ಇದ್ದರು. ಅವರ ಮಧ್ಯೆ ಕಾಣಿಸಿಕೊಂಡು ನಟನಾಗಿ ಸ್ಥಾಪಿತನಾಗುವುದು ಪಂಥಾಹ್ವಾನವಾಗಿತ್ತು. ಅಂಜಿಕೆಯಿಂದಲೇ ಸುಳಿ ನೀರಿಗೆ ಹಾರಿ, ಈಜಿ, ಈಸಿ, ಭಲೆ ಅನಿಸಿದವರು ಜಲವಳ್ಳಿ.
ಅವರ ಈ ಯಶಸ್ಸಿಗೆ ಶೇಣಿಯವರ, ತೆಕ್ಕಟ್ಟಿ ಅವರ, ಅಂತೆಯೆ ಎಲ್ಲ ಸಹ ಕಲಾವಿದರ ಸಹಕಾರ ಕಾರಣ. ರಂಗದಲ್ಲಿ ವೇಷವನ್ನು ಮೆರೆಸುವ ಒಂದು ವಿಶೇಷ ಸಾಮರ್ಥ್ಯವುಳ್ಳ, ಅಸಾಮಾನ್ಯ ರಂಗ ನಿರ್ವಾಹಕ ಅಗರಿ ರಘುರಾಮ ಭಾಗವತರ ಭಾಗವತಿಕೆ ಜಲವಳ್ಳಿ ಅವರ ಯಶಸ್ಸಿಗೊಂದು ದೊಡ್ಡ ಬೆಂಬಲ, ಪ್ರೇರಕ, ಕಾರಕ. ಸಾಮಾನ್ಯವಾಗಿ – ತರ್ಕ, ಸ್ಪರ್ಧಾತ್ಮಕ ಸಂಭಾಷಣೆಗಳನ್ನೆ ಮುಂದಿಡುವ ಶೇಣಿ – ಇವರನ್ನು ಚೆನ್ನಾಗಿಯೇ ನಡೆಸಿಕೊಂಡರು. ‘ಸುರತ್ಕಲ್ ಮೇಳದ ಕಲಾವಿದರ ಒಡನಾಟ, ನನ್ನ ಬೆಳವಣಿಗೆಗೆ ಕಾರಣ’ ಎಂದು ಅವರು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ.
7
ಜಲವಳ್ಳಿ ಪರಿಣತ ನರ್ತಕವಲ್ಲವಾದರೂ, ಪರಿಣಾಮಕಾರಿ ನಟ. ಹಾಸು ಬೀಸಿನ ಕೈ ಮೈ ಚಲನೆ, ದೊಡ್ಡದಾದ ಇಡಿಯ ರಂಗವನ್ನು ಆಧರಿಸುವ ಹೆಜ್ಜೆಗಳು, ವಿವಿಧ ಭಾಷೆಗಳನ್ನು ಚೆನ್ನಾಗಿ ಅಭಿವ್ಯಕ್ತಿಸುವ ಅಗಲವಾದ ಮುಖ, ತೀಕ್ಷ್ಣವಾದ ಕಣ್ಣೋಟಗಳು, ಆಳ, ಭಾರ ಎರಡೂ ಇರುವ ಸ್ವರ, ವ್ಯವಸ್ಥಿತ ಪಾತ್ರ ಕಲ್ಪನೆ, ಹದವಾದ, ಕಲ್ಪನೆ ಭಾವನೆಗಳಿರುವ ಚೊಕ್ಕ ಮಾತುಗಾರಿಕೆಗಳಿಂದ ಜಲವಳ್ಳಿ ತನ್ನ ಕಾಲದ ಉತ್ತಮ ಕಲಾವಿದರಲ್ಲಿ ಒಬ್ಬರಾದರು. ಅನನ್ಯ ರೀತಿಯ ಪ್ರತಿಭಾವಂತ ವೇಷಧಾರಿಯಾಗಿ ಸ್ಥಾಪಿತರಾದರು. ಅವರ ಇಡೀ ರಂಗ ವ್ಯವಹಾರದಲ್ಲಿ ಕಾಣುತ್ತಿದ್ದುದು – ಪರಿಣಾಮಕಾರಿತನ, ರಂಗ ಉಪಸ್ಥಿತಿ, ಪಾತ್ರಸ್ಥಾಪನೆ ಎಲ್ಲೂ ಬೀಳಾಗದ ಮಾತು, ರಂಗಾಭಿನಯ, ಚಿತ್ರಣದ ಹದ ಮತ್ತು ಬಿಗಿ. ವಿವಿಧ ಸನ್ನಿವೇಷಗಳ, ಪಾತ್ರಸ್ತರಗಳ ಸ್ಪಷ್ಟ ಕಲ್ಪನೆ ಅವರಿಗಿತ್ತು. ಸಂಭಾಷಣೆಗಳಿಗೆ, ಹಾಸ್ಯಕ್ಕೂ ಚೆನ್ನಾಗಿ ಒದಗುತ್ತಿದ್ದರು. ಕಾಣುವ, ಕಾಣಿಸುವ ವೇಷ ಜಲವಳ್ಳಿ ಅವರದು.
8
ಅವರ ಶನಿ ಪಾತ್ರದ ವಿಶೇಷ ಪ್ರಖ್ಯಾತಿ-ಅರ್ಹವೆ ಆದರೂ, ಒಂದು ರೀತಿಯಲ್ಲಿ ಅವರ ಒಟ್ಟೂ ಕಲಾ ಸಾಮಥ್ರ್ಯಕ್ಕೆ, ಅವರ ಬೇರೆ ಪಾತ್ರಗಳಿಗೆ-ಒಂದು ಬಗೆಯಿಂದ ‘ಅನ್ಯಾಯ’ವಾಯಿತೆ? ಅನಿಸುವುದುಂಟು. ಶನೀಶ್ವರನ ಪಾತ್ರಕ್ಕೆ ಅವರು-ಬ್ರಾಂಡ್ ನಿಶ್ಚಿತವಾದುದರಿಂದ – ಅವರ ಭೀಮ, ಮಯೂರಧ್ವಜ, ಭೃಗು, ದುರ್ವಾಸ, ವಿಶ್ವಾಮಿತ್ರ, ಕಂಸ, ಹಿರಣ್ಯ ಕಶಿಪು ಹಾಗೆಯೆ – ಅರ್ವಾಚೀನ ಪ್ರಸಂಗಗಳ ಹಲವು ಪಾತ್ರಗಳು ಆ ಮಟ್ಟದಲ್ಲಿ ಗುರುತಿಸಲ್ಪಡದೆ ಉಳಿದವು. ಶನಿಯು ಜಲವಳ್ಳಿ ಅವರಿಗೆ ಅನುಗ್ರಹವನ್ನೂ ಮಾಡಿದ, ತೊಂದರೆಯನ್ನೂ ಕೊಟ್ಟ ಅನ್ನಬಹುದೇನೋ!
9
ಮೇಳದ ತಿರುಗಾಟದಲ್ಲಿ ಸಹ ಕಲಾವಿದರ ಜತೆ ಒಳ್ಳೆಯ ಸಂಬಂಧ, ಹಿರಿಯರಿಗೆ ಬಲ್ಲವರಿಗೆ ಗೌರವ ಕೊಡುವ ವಿಧಾನ ಮತ್ತು ಸದಾ ಸಂತೋಷ ತೃಪ್ತಿಗಳಿಂದಿರುವ ಸಹಜ ರೀತಿಗಳಿಂದ-ಯಶಸ್ವಿಯಾದ ಜಲವಳ್ಳಿ ದೀರ್ಘಕಾಲ ವ್ಯವಸಾಯ ನಡೆಸಿದರೂ, ಅನಾರೋಗ್ಯದಿಂದ ಪಕ್ಕನೆ ಎಂಬಂತೆ ರಂಗದಿಂದ ನಿವೃತ್ತರಾದವರು.
ಪ್ರತಿಕೂಲ ಪರಿಸ್ಥಿತಿ, ಅಕ್ಷರ ವಿದ್ಯೆಯ ಅಭಾವ (ಬಹುಶಃ ಸಹಿ ಹಾಕುವಷ್ಟೆ ವಿದ್ಯೆ ಇದ್ದದ್ದು)ಗಳ ನೆಲೆಯಿಂದ ಬಂದು, ತಾನೆಣಿಸಿದ ಕಲಾರಂಗಕ್ಕೆ ಬಂದು ತನ್ನ ಕಾಲದ ಸಿದ್ಧ, ಪ್ರಸಿದ್ಧರ ಸರಿಸಮಕ್ಕೆ ಏರಿ, ಖ್ಯಾತರಾದ ಜಲವಳ್ಳಿ ವೆಂಕಟೇಶರಾವ್ – ಸಾಧನೆಗೆ ಮನ್ನಣೆ ಇದೆ ಎಂಬ ಭರವಸೆ ಮೂಡಿಸುವ ಪ್ರೇರಕ ವ್ಯಕ್ತಿತ್ವ. ಗುಡಿಸಲಿನಲ್ಲಿ ಮೂಡಿ ಬೆಳಗಿದ ಕಲಾಪ್ರಭ.

error: Content is protected !!
Share This