– ಡಾ. ಎಂ. ಪ್ರಭಾಕರ ಜೋಶಿ

ಯಕ್ಷಗಾನದ ಮಹೋನ್ನತ ನಟ, ಸಂಘಟಕ, ಕನ್ನಡ ಸಾಂಸ್ಕೃತಿಕ ಲೋಕದ ಓರ್ವ ಅನನ್ಯ ಸಿದ್ಧಿಯ ಸಾಧಕ ಕೆರೆಮನೆ ಶಂಭು ಹೆಗಡೆ ಲವಲವಿಕೆಯ ಸಕ್ರಿಯತೆಯಲ್ಲಿದ್ದಾಗಲೇ ನಿಧನರಾದುದು ಸ್ವೀಕರಿಸಲಾಗದ ಸತ್ಯ. ತನ್ನ ಆರಾಧ್ಯ ದೇವರು ಇಡಗುಂಜಿ ಮಹಾಗಣಪತಿಯ ಸನ್ನಿಧಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಲೆ, ಇನ್ನು ಪೋಗುವೆ ನಾ ಮುನಿಪನೆಡೆಗೆ ಎಂಭ ಪದ್ಯಕ್ಕೆ ಅವರು ಬದುಕಿದ ರಂಗದಿಂದಲೇ ನಿರ್ಗಮಿಸಿದ್ದು ಒಂದು ಘನತೆಯ ನಿರ್ಯಾಣ.

ಯಕ್ಷಗಾನರಂಗದ ಮಹೋನ್ನತ ಕಲಾವಿದ ಶಿವರಾಮ ಹೆಗಡೆ ಮುಕಾಂಬಮ್ಮರ ಪುತ್ರ (ಜನನ 1938, ನಟವರ ಮಹಾಬಲ ಹೆಗಡೆಯವರ ಸೋದರನಾಗಿ ವಂಶದ ಹಿನ್ನೆಲೆ, ಗುರುಪರಂಪರೆ, ಅವಕಾಶ, ಹುಟ್ಟು ಪ್ರತಿಭೆ ಪರಿಕರಗಳಲ್ಲಿ ಭಾಗ್ಯಶಾಲಿ. ಪಾರಂಪರಿಕ ಕಲಾಶಿಕ್ಷಣ, ಆಧುನಿಕ ವಿದ್ಯೆ, ರಂಗವಿಜ್ಞಾನದ ಉನ್ನತ ಶಿಕ್ಷಣ ಹೊಂದಿ ಆ ಎಲ್ಲ ಸಂಪತ್ತನ್ನು ತನ್ನ ಸಾಧನೆಯಿಂದ ಬೆಳೆಸಿ, ಓರ್ವ ಪ್ರಯೋಗಸಮರ್ಥ ಮಾದರ ಸಾಧಕನಾಗಿ ಬೆಳೆದ ಕ್ರಿಯಾಶಾಲಿ, ದೈವದತ್ತ ಕಲಾಸಂಪತ್ತು, ಪ್ರತಿಭೆ, ಸದಭಿರುಚಿ, ಸಂವಹನಕೌಶಲ, ಚಿಂತನಶೀಲತೆ, ಸತತ ಪರಿಶ್ರಮಶೀಲತೆ, ಛಲಬೆರೆತ ಅತಿವಿರಳ ಓರ್ವ ಮಹಾಪ್ರವೃತ್ತ ಫೆನಾಮೆನನ್.

ತಾರುಣ್ಯದಲ್ಲೆ ದೊಡ್ಡ ಕಲಾವಿದನಾಗುವ ಲಕ್ಷಣ ತೋರಿ, ಗುರು ಮಾಯಾರಾವ್‍ರಿಂದ ಕೊರಿಯೋಗ್ರಫಿ ಶಿಕ್ಷಣ ಪಡೆದು, ದೇಶದ ವಿವಿಧ ರಂಗಪ್ರಕಾರಗಳನ್ನು, ಸಂಸ್ಕೃತಿಯ ಮುಗ್ಗುಲುಗಳನ್ನು ಪರಿಶೀಲಿಸಿ ಅರಿವಿಗೆ ಅಳವಡಿಸಿಕೊಳ್ಳುವ ಭಾಗ್ಯ ಪಡೆದವರು ಶಂಭು ಹೆಗಡೆ. ಅಂತಹ ಜ್ಞಾನವನ್ನು ಯಕ್ಷಗಾನಕ್ಕೆ ಸಮರ್ಥವಾಗಿ, ವಿವೇಚನೆಯಿಂದ ತನ್ನ, ಕಲಾಮಾಧ್ಯಮದ ಸಮಗ್ರವಾಗಿ ಗ್ರಹಿಕೆಯ ಜತೆಯಲ್ಲಿ ತಂದರು. ವೇಷಧಾರಿ, ಮೇಳದ ಸಂಘಟಕ, ಕಲಾಚಿಂತಕ, ಗುರು ಈ ನಾಲ್ಕು ಸ್ಥಾನಗಳಲ್ಲಿ ತನ್ನದಾದ ಪ್ರಸ್ಥಾನವೊಂದನ್ನು ಸ್ಥಾಪಿಸಿ ರಂಗಕ್ಕೆ ಅರ್ಥಪೂರ್ಣ ವಿಸ್ತರಣದ ಮುಖವನ್ನು ನೀಡಿದರು.

ಸಾಲಿಗ್ರಾಮ ಮೇಳದ ವೇಷಧಾರಿಯಾಗಿ, 1968ರಲ್ಲಿ ದೊಡ್ಡ ಕಲಾವಿದನೊಬ್ಬನ ಆಗಮನದ ಘೋಷಣೆಗೈದರು. ತನ್ನ ತಂದೆ ಸ್ಥಾಪಿಸಿದ್ದ ಇಡಗುಂಜಿ ಮೇಳದ ಘನಸ್ಸಂಘಟನೆ 1974 ರಲ್ಲಿ. ಅಲ್ಲಿಂದ ಶಂಭು ಹೆಗಡೆ ಪರ್ವ, ಕೊನೆಯುಸಿರಿನ ತನಕ.

ಮೇಳದ ವಿಧಾನ, ತಿರುಗಾಟ, ಪ್ರಸಂಗಗಳ ಆಯ್ಕೆ ಪ್ರದರ್ಶನದ ವಿವರ, ಅರ್ಥಗಾರಿಕೆ ಮತ್ತು ಪ್ರದರ್ಶನ ಸಿದ್ಧಾಂತಗಳಲ್ಲಿ ಬಣ್ಣದ ಮನೆ, ರಂಗಸ್ಥಳದ ರಚನೆಯಲ್ಲಿ ಬೆಳಕು, ಬಣ್ಣ, ಪ್ರೇಕ್ಷಕರ ಆಸನ ಸೌಲಭ್ಯ ಎಲ್ಲದರಲ್ಲಿ ಶಂಭು ಚಿಂತನೆ ಮಾಡಿ ಪರಿಷ್ಕಾರ ತಂದರು. ಆರ್ಥಿಕ ಬಲವಿಲ್ಲದಿದ್ದರೂ ಒಂದು ವ್ರತವಾಗಿ ಮೇಳ ನಡೆಸಿ ಕಲಾದೃಷ್ಟಿಯಿಂದ ಗೆದ್ದರು. ಅಣ್ಣ ಮಹಾಬಲ ಹೆಗಡೆ, ಭಾಗವತ ನೆಬ್ಬೂರು ನಾರಾಯಣ, ಕಲಾವಿದರು, ಸಿಬ್ಬಂದಿ, ಮಿತ್ರರು ಮತ್ತು ಪತ್ನಿ ಗೌರಿ ಹೆಗಡೆ ಇವರೆಲ್ಲ ಅಭಿಯಾನಕ್ಕೆ ಗಟ್ಟಿ ಬೆಂಬಲ ನೀಡಿದರು. ಶಿವರಾಮ ಹೆಗಡೆ ಕೂಡ ಇಳಿವಯಸ್ಸಿನಲ್ಲೂ ಮಗನ ಮೇಳದಲ್ಲಿ ತಿರುಗಾಟ ಮಾಡಿದರು.

ಇಡಗುಂಜಿಯ ಪ್ರೇಕ್ಷಕರ ಒಂದು ದೊಡ್ಡ ಬಳಗವೇ ಸಿದ್ಧವಾಗಿದೆ. ಇದು ಇಡಗುಂಜಿ ಮೇಳದ ಸಭೆ ಎಂದು ಸ್ಪಷ್ಟವಾಗಿ ಗೋಚರವಾಗುವ ಮಟ್ಟಿಗೆ ಅದರ ಒಟ್ಟು ಪ್ರೇಕ್ಷಕ ವರ್ಗದ ಪ್ರತ್ಯೇಕತೆ ಕಾಣುತ್ತದೆ.

ಪೌರಾಣಿಕ ಅರ್ಥಾತ್ ಯಕ್ಷಗಾನ ಮಾಧ್ಯಮಕ್ಕೆ ಹೊಂದುವ ಕಥಾನಕಗಳನ್ನು ಮಾತ್ರ ಅಳವಡಿಸುವ ಸ್ಪಷ್ಟ ನಿಲುವು ಅವರದು. ಜನಾಕರ್ಷಣೆಗಾಗಿ ಕಲೆಯೊಂದಿಗೆ ಹೊಂದಾಣಿಕೆ ಇಲ್ಲ. ಪ್ರಚಾರದಲ್ಲೂ ಘನತೆ ಕಾಪಾಡುವ ನಿಲುಮೆ. ಮೇಳನಿಷ್ಠೆಗೆ ಬಿಡದ ಒಲುಮೆ. ಇಂತಹ ಸಿದ್ಧಾಂತದ ಹಂಗಿಲ್ಲದ ಬೇರೆಯವರೊಂದಿಗೆ ಸ್ಪರ್ದಿಸಬೇಕಾಗಿ ಬಂತು. ಆದರೂ ಅವರು ತನ್ನ ನಿರ್ಧಾರದಿಂದ ವಿಚಲಿತರಾಗಲಿಲ್ಲ.

ಕಥಾನಕದ ರಂಗದ ಪ್ರಸ್ತುತಿಯಲ್ಲಿ ಹೊಸ ಅರ್ಥ, ಹೊಸ ನಾಜೂಕುಗಳನ್ನು ನೀಡುವುದು, ಬಣ್ಣ, ಬಣ್ಣಗಾರಿಕೆ, ವೇಷವಿಧಾನ, ನೃತ್ಯದ ಬಳಕೆ, ಪ್ರಸಂಗದ ರಂಗಸಂಪಾದನೆ (ಎಡಿಟಿಂಗ್)ಗಳಲ್ಲಿ ಯಕ್ಷಗಾನೀಯತೆಗೆ ಒತ್ತು ಸನ್ನಿವೇಶ ನಿರ್ಮಾಣ, ಬಿಡಿ ಮತ್ತು ಇಡಿ ಸಂದರ್ಭಗಳಿಗೆ ಸಂಬಂಧ ಕಲ್ಪನೆ, ನೃತ್ಯ ಬೇಡ ಎಂದು ನಂಬಲಾಗಿದ್ದ ದೃಶ್ಯಗಳಿಗೂ ವಿಶಿಷ್ಟ ನರ್ತನ ಚಲನಗಳ ಅಳವಡಿಕೆ – ಇವೆಲ್ಲ ಶಂಭು ಪ್ರಸ್ಥಾನದ ವಿವಿಧ ಮಜಲುಗಳು. ಹನ್ನೊಂದು ಪೂರ್ಣಾವಧಿ ತಿರುಗಾಟ. ಆ ಬಳಿಕ ಕಾಲಮಿತಿ ಸಂಯೋಜನೆಯಲ್ಲಿ ಹದಿನೈದು, ಹೀಗೆ ಮೇಳ ಯಜಮಾನಿಕೆಯ ಬೆಳ್ಳಿ ಹಬ್ಬ ಆಚರಿಸಿ, ಆ ಬಳಿಕ ಪುತ್ರ ಶಿವಾನಂದನಿಗೆ ಮೇಳದ ಹೊಣೆಗಾರಿಕೆ ನೀಡಿದರು. ಇಡಗುಂಜಿ ಮೇಳ ಸದಭಿರುಚಿ, ಕಲಾಸ್ವರೂಪದ ಬದ್ಧತೆ ಇಟ್ಟುಕೊಂಡು ಯಕ್ಷಗಾನಕ್ಕೆ ಹೊಸ ಹೊಳಪು ನೀಡಿತು. ಇದಕ್ಕೆ ನಾಡಿನಲ್ಲೂ ದೇಶದ ಹೊರಗೂ ಮನ್ನಣೆ ದೊರಕಿತು. ಹೋರಾಟದ ಅಭಿಯಾನಕ್ಕೆ ದೊರೆತ ಗೌರವ ಅದು.

ಯಕ್ಷಗಾನ ಕಲೆಯ ಮಾತ್ರವಲ್ಲ ಒಟ್ಟು ಕಲೆ ಮತ್ತು ಸಂಸ್ಕೃತಿಯ ವಿವಧ ಮಗ್ಗುಲುಗಳನ್ನು ಸಾಕಷ್ಟು ಸಮಗ್ರವಾಗಿ ತೂಗಿ ನೋಡಿ ವಿವೇಚಿಸುವ ಹೆಗಡೆ, ಯಕ್ಷಗಾನ ವೇಷಧಾರಿ, ಮೇಳದ ಸಂಘಟಕ ಅಂದರೆ ಅದು ಸೀಮಿತವಾದ ಒಂದು ವರ್ಣನೆ. ಅವರೊಬ್ಬ ಎತ್ತರದ ಸಂಸ್ಕೃತಿ ಚಿಂತಕ. ತುಂಬ ಸಮತೋಲನ ಚಿಂತನೆ, ಅದನ್ನು ಪಾಂಡಿತ್ಯದ ಭಾರವಿಲ್ಲದೆ, ಹಗುರವೂ ಮಾಡದೆ ಅಭಿವ್ಯಕ್ತಿಸುವ ಹೆಗಡೆ, ಕನ್ನಡದ ಉತ್ಕೃಷ್ಟ ವಾಗ್ಮಿಗಳಲ್ಲಿ ಒಬ್ಬರು. ಸಮರ್ಥ ತಾಳಮದ್ದಲೆ ಅರ್ಥದಾರಿಯೂ ಹೌದು. ವಸ್ತುವಿನ ಆಯ್ಕೆ, ವಿಭಜನೆ, ಅದನ್ನು ಬೆಳೆಸುವ ಕ್ರಮ, ತಕ್ಕ ಭಾಷೆ, ಭಾವ, ಸಂದು ಕಡಿಯದ ಪ್ರಂಬಧ ರೂಪ, ಮಧ್ಯೆ ಹಿತವಾದ ರಂಜನೆಗಳಿಂದ ಕೂಡಿದ ಅವರ ಭಾಷಣಗಳು ಉಪನ್ಯಾಸದಂತೆ ಗ್ರಂಥದಂತೆ, ಕೇಳುಗನನ್ನು ಹೊಸ ದಿಕ್ಕಿಗೆ ಹಚ್ಚುವ ಸಾಮರ್ಥ್ಯವುಳ್ಳವುಗಳು. ಮೆಚ್ಚಿಸಲು, ರಂಜಿಸಲು ಹೇಳದೆ, ಅನವಶ್ಯ ಚುಚ್ಚದ, ತನ್ನ ಅಭಿಮತ ಬಿಡದೆ ಸಾಗುವ ಶಂಭು ಭಾಷಣಗಾರರಿಗೆ ಆದರ್ಶ. ಬದುಕಿನ ವಿಸ್ತಾರವನ್ನು ನೋಡಿರುವ, ನಿರ್ಮಾಣ ಸಾಧಕರಾಗಿಯೂ ದುಡಿದವರಾಗಿ ಅವರ ಮಾತು ವೇದಿಕೆ ಇರಲಿ, ಖಾಸಗಿ ಇರಲಿ ಅದಕ್ಕೆ ಬೀಸು ಇತ್ತು. ಘನತೆ ಇತ್ತು. ಅವರ ಮಾತಿನ ರೀತಿಯೇ ಪ್ರತ್ಯೇಕ. ಅತ್ಯಂತ ದುರ್ಲಭ.

ನಟನಾಗಿ ವೇಷಧಾರಿ ಶಂಭು ಹೆಗಡೆ ಸಾಧನೆ ಎತ್ತರದ್ದು. ದೀಪಕವಾದದ್ದು. ವಿಶಾಲ ವ್ಯಾಪ್ತಿಯ ಪಾತ್ರ ನಳ, ಸಾಲ್ವ, ಶ್ರೀರಾಮ, ಹರಿಶ್ಚಂದ್ರ, ರಾವಣ, ಕೀಚಕ, ಕೃಷ್ಣ, ಕರ್ಣ, ದುರ್ಜಯ, ಬಾಹುಕ, ಅಂಬೆ, ಚಂದ್ರಮತಿ ಎಲ್ಲಿಂದೆಲ್ಲಿಗೇ ಎಷ್ಟು ವ್ಯತ್ಯಾಸ ಮಾಡಿದ ಪಾತ್ರಗಳೆಲ್ಲ ಬಹುತೇಕ ಉತ್ಕೃಷ್ಟ. ಒಂದೆರಡು ಪದ್ಯದ ಪಾತ್ರ ಮಾಡಿದಾಗಲೂ ಉದಾ: ಸುಭದ್ರಾ ಕೃಷ್ಣಾರ್ಜುನದ ದಾರುಕ ಆಶ್ಚರ್ಯಕರ ಹೊಸತನ, ಯಶಸ್ಸಿನ ಛಾಪು. ಪಾತ್ರ ಕಥಾನಕ , ಪ್ರಸಂಗ ಸನ್ನಿವೇಶ, ಬಿಡಿಪದ್ಯ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಚಿತ್ರಿಸುವ ಹೆಗಡೆ, ಮಾತು ಚಲನೆ ನೃತ್ಯ ಅಭಿನಯಗಳಲ್ಲಿ ಪ್ರಮಾಣ ಔಚಿತ್ಯ ರಸ ಚಿಂತನೆಗಳ ಚೌಕಟ್ಟು ರಚಿಸಿ ಕಾಪಾಡಿ ಮೆರೆಸಿ, ಮೆರೆದರು. ಸೊಗಸಾದ ರೂಪ, ನಾಜೂಕು ನಾಟ್ಯ ಅರ್ಥಯುಕ್ತ ಚಲನೆ, ಕಾವ್ಯಾತ್ಮಕವಾದ ಮಾತುಗಳಿಂದ ಅವರ ವೇಷ ಪರಿಪುಷ್ಪ ಅವರ ಕರ್ಣ. ದುರ್ಯೋಧನ, ಹನುಮಂತ, ನಳ, ಮದನ, ದುಷ್ಟಬುದ್ಧಿ, ರಾವಣ, ಕಂಸ, ಯಕ್ಷಗಾನ ನಟನೆಯ ಮಹೋನ್ನತ ಸಿದ್ಧತೆಯ ಅನುಕರಿಸಲೇಬೇಕಾದ ಆದರೆ ಸಿಗದ ಸೃಷ್ಟಿಗಳು. ಅನೇಕ ನಟರಿಗೆ ಅವರನ್ನು ‘ಕೋಪಿ’ ಮಾಡಿ ಅವರ ಛಾಯಾ ಕಲಾವಿದರಾಗುವವರಿರುತ್ತಾರೆ. ಶಂಭು ಹೆಗಡೆಯವರಿಗೆ ಛಾಯಾ ಕಲಾವಿದರಿಲ್ಲದಿರಲು ಕಾರಣ ಅವರ ಕಠಿಣ ದಾರಿ. ಅವರದು ಅತ್ಯಂತ ಮೋಹಕ ಅಭಿವ್ಯಕ್ತಿ.

ಸದಾ ಆರ್ಥಿಕ ಸಂಕಷ್ಟ, ಶ್ರೇಷ್ಠಕಲಾವಿದ ಸೋದರ ಗಜಾನನ ಹೆಗಡೆ ಅಕಾಲಿಕ ನಿಧನ, ಸಾಂಸಾರಿಕ ಏಳುಬೀಳುಗಳು, ಅನಾರೋಗ್ಯಕರ ಸ್ಪರ್ಧೆಯ ಬಾಧಕಗಳು ಯಜಮಾನಿಕೆಯ ಮತ್ತು ಮುಖ್ಯವೇಷದ ಹೊರೆ, ದಣಿದರೂ ವಿಶ್ರಾಂತಿ ಇಲ್ಲದ ವ್ಯಥೆಗಳ ಮಧ್ಯೆ ಆವೇಶದಿಂದ ದುಡಿದ ಹೆಗಡೆ ಛಲಕ್ಕೆ, ಹಠಕ್ಕೆ, ಸಾಹಸಕ್ಕೆ ಸೋಲರಿಯದ ಚೈತನ್ಯಕ್ಕೆ ಒಂದು ಪ್ರತಿಮೆ. ಆದರೂ ವ್ಯಕ್ತಿತ್ವ, ವಿನೋದ, ಸಂಸ್ಕಾರ ಮಾರ್ದವ ಬಿಡದೆ ಅವರು ಅವರಾಗಿಯೇ ಬೆಳೆದರು.

ಸ್ನೇಹ, ಸರಳತೆಗಳು ಅವರಿಗೆ ರೂಢಿಸಿದವುಗಳಲ್ಲ. ಒಳಗಿಂದ ಬಂದ ಸ್ವಭಾವಗಳು. ಭಿನ್ನಾಭಿಪ್ರಾಯಗಳಿದ್ದು ಅವರ ಸ್ನೇಹಿತರಾಗಿರಬಹುದು. ಅವರ ಆತಿಥ್ಯ ಪಡೆದೇ ಜಗಳ ಮಾಡಬಹುದು. ಅವರೂ ತಮ್ಮ ಸಿದ್ಧಾಂತ ಬಿಡದೆ ಸಂಬಂಧ ಇರಿಸಿಕೊಳ್ಳಬಲ್ಲರು. ಶಂಭು ಹೆಗಡೆ ಅಂದರೆ ಎಲ್ಲದರಲ್ಲೂ ಬ್ಯಾಲೆನ್ಸ್, ತೋಲ, ತೂಕ.

ವರ್ತನೆ, ಸಂಪರ್ಕಗಳಲ್ಲಿ ಗೌರವ, ಅವರ ಬದುಕಿನ ರೀತಿ ಕಲಾವಿದರಿಗೆ ಆದರ್ಶ. ಚಟವೆಂದರೆ ಕಲೆ ಮಾತ್ರ. ಶಂಭು ಹೆಗಡೆಯವರ ಒಡನಾಟವು ಒಂದು ಉದ್ಗಂಥದ, ಒಂದು ಸೊಗಸಾದ ಸಮತೋಲನದ ಕಲಾಕೃತಿಯ ಒಂದು ಗಂಧವೃಕ್ಷದ ಸಾಮೀಪ್ಯದಂತೆ ಹೃದ್ಯ, ಸುಖಾವಹ, ಜ್ಞಾನಪ್ರದ, ಅವರ ಜೋಕುಗಳು, ಸೃಜನಶೀಲ ಪ್ರತಿಭಾಯುಕ್ತ.

ಆತಿಥ್ಯದಲ್ಲೂ ಕೆರೆಮನೆಯವರು ಪ್ರಸಿದ್ಧರು. ಶಿವರಾಮ ಹೆಗಡೆ ಕಾಲದಿಂದಲೇ ಅವರ ಮನೆ ಭೋಜನಶಾಲೆ. ಇವರ ಕಾಲಕ್ಕೆ ಇನ್ನೂ ಹೆಚ್ಚು.

ಕಲೆಗೊಂದು ಹೊಸ ಅರಿವು ನೀಡಿ, ಚಿಂತನ, ಕ್ರಿಯಾಶೀಲತೆಗಳನ್ನು ಬದುಕಿನಲ್ಲಿ ಬೆರೆಸಿ, ಕುಲಕ್ಕೆ, ಊರಿಗೆ, ನಾಡಿಗೆ ಅಭಿಮಾನಾಸ್ಪದರೆನಿಸಿ ಬಾಳಿದ ಕೆರೆಮನೆ ಶಂಭು ಹೆಗಡೆ ವಿಶ್ವವ್ಯಾಪಿ ಹರಹು ಪಡೆದೂ ಹಳ್ಳಿಗಾಗಿಯೇ ಬಾಳಿದ ಕಥೆ. ತ್ಯಾಗಮಾಡಿ ತನ್ನ ಸಿದ್ಧಾಂತವನ್ನು ಕಷ್ಟಪಟ್ಟು ಅನುಸರಿಸಿ ಜಾರಿಗೊಳಿಸುದವನ ಕಥೆ.

ನಮ್ಮ ನಡುವೆ ಇಂತಹ ಮಹಾ ಸಾಧಕನೊಬ್ಬನಾಗಿ ಹೋದನೆಂದು ನಾವು ಹೆಮ್ಮೆಪಟ್ಟುಕೊಳ್ಳಬೇಕಾದ ಕೆರೆಮನೆ ಶಂಭು ಹೆಗಡೆ ದಿವಂಗತರಲ್ಲ.

(ಕನ್ನಡ ಪ್ರಭದಲ್ಲಿ ಪ್ರಕಟವಾದ ಸಂಸ್ಮರಣ ಲೇಖನ)

ಶ್ರೀಮಯ ಅಮೃತ ಸಿಂಚನ – ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) – (ಮುದ್ರಣ -2011)

error: Content is protected !!
Share This