ಹೌದು, ಅವರನ್ನು ಹಾಗಷ್ಟೇ ಹೇಳಲು ಸಾಧ್ಯ. ಹೇಗೆ ಬಣ್ಣಿಸೋಣ ಅವರನ್ನು? ಸಂಸ್ಕೃತ ವಿದ್ವಾಂಸ, ಪ್ರವಚನಕಾರ, ಕವಿ, ಅನುವಾದಕ, ಚಲನಚಿತ್ರ ಸಾಹಿತಿ, ಮಹಾವಾಗ್ಮಿ, ವಿಮರ್ಶಕ, ಪ್ರತಿಭಾಪುಂಜ, ಎಲ್ಲನಿಜ. ಆದರೆ – ಶಬ್ದಗಳು ಬರಡು. ಬಹುಭಾಷಾ ಸ್ವಾಧೀನ ಮಹಾಪಂಡಿತ ಬನ್ನಂಜೆ ಅವರನ್ನು ಬಣ್ಣಿಸಲು ನಮ್ಮ ಭಾಷೆ ಸೋಲುತ್ತದೆ.

ನೂರೈವತ್ತು ಗ್ರಂಥಗಳು, ಮೂವತ್ತು ಸಾಏರ ಗಂಟೆಗಳಷ್ಟು ಪ್ರವಚನಗಳು, ನೂರಾರು ಕವಿತೆ, ಸಾವಿರದಷ್ಟು ವಿಮರ್ಶೆಗಳು, ಹಲವು ಪ್ರಮುಖ ಮೂಲಗಾಮಿ ಸಂಶೋಧನೆಗಳು – ಶಂಕರ, ರಾಮಾನುಜ, ಮಧ್ವ ಚಲನಚಿತ್ರ (ಜಿ.ವಿ.ಅಯ್ಯರ್‌ ನಿರ್ದೇಶಿತ) ಗಳ ಸಾಹಿತ್ಯ, ದೇಶವಿದೇಶ ಪ್ರವಾಸ, ಇಪ್ಪತ್ತೈದು ವರ್ಷ ಪತ್ರಿಕಾರಂಗದ ದುಡಿಮೆ. ಅಪ್ರಕಟಿತವಾಗಿ ಉಳಿದಿರುವ ಕೃತಿಗಳು ನಲವತ್ತೈದು. ಗೌಪ್ಯನಾಮದಲ್ಲಿ ಪ್ರಕಟವಾದ ಬರಹಗಳು ಬೇರೆ. ತುಳು ಕನ್ನಡ ಸಂಸ್ಕೃತದಲ್ಲಿ ಕವನಗಳು. ಮುನ್ನುಡಿ , ಬೆನ್ನುಡಿ, ಮೆಚ್ಚುನುಡಿ, ಪತ್ರ ಇನ್ನೆಷ್ಟೋ? ‘ಹತ್ತು ಜನರ ಸಂಸ್ಥೆಯು ಮಾಡುವ ಕೆಲಸವನ್ನು ಒಂದು ಜೀವಮಾನದಲ್ಲಿ ಮಾಡಿದ ಬನ್ನಂಜೆಯವರ ದೈತ್ಯ  ವಿಕ್ರಮಕ್ಕೆ ‘ಪವಾಡ’ ಶಬ್ದ ಹೆಚ್ಚೆನಿಸೀತೆ?

ತಂದೆ ತರ್ಕ ಕೇಸರಿ ಪಡುಮನ್ನೂರು ನಾರಾಯಣ ಆಚಾರ್ಯ, ಅಣ್ಣ ವಿದ್ವಾಂಸ ರಾಮಾಚಾರ್ಯ, ಗುರುಗಳು ವಿದ್ಯಮಾನ್ಯ ವಿಶ್ವೇಶಶೀರ್ಥರು. ಹದಿನೈದನೆ ವರ್ಷಕ್ಕೆ ಕಾವ್ಯ ರಚನೆ. ಇಪ್ಪತ್ತರಲ್ಲಿ ಮಹಾಕವಿ ಬಾಣಭಟ್ಟನ ಮಹಾಕೃತಿಯ ಅನುವಾದ. ಇಪ್ಪತ್ತೈದರಿಂದ ಆಜಾರ್ಯ ಮಧ್ವರ ಸರ್ವಮೂಲ ಗ್ರಂಥಗಳ ಐದು ಬೃಹತ್‌ ಸಂಪುಟಗಳ ವಿದ್ವತ್ ಸಂಪಾದನೆ, ಏಳುದಶಕ ಸತತ ತಿರುಗಾಟ, ಬರಹ-ಭಾಷಣ-ಸಂಶೋಧನೆ ಉಪನ್ಯಾಸ ಹರಟೆ- ಶಾಸ್ತ್ರ ಕಾವ್ಯ ಸುಹೃತ್‌ ವಿಹಾರ. ‘ಒಲ್ಲೆ ಆಗದು’ ಎಂಬ ಮಾತಿಲ್ಲ.

ಮಾತು ಮೋಹಕ, ಚುಂಬಕ. ಅನುವಾದಗಳು ಬರಹಗಳ ಮಲ್ಲಿಗೆ. ಕನ್ನಡ, ಮಿದುವಾದ ತುಳು, ಸರಳ ಪ್ರಗಲ್ಬ  ಸಂಸ್ಕೃತ, ಇಂಗ್ಲಿಷ್‌, ಏನೂ ಕಡಿಮೆಯಿಲ್ಲ. ಕೊನೆವರೆಗೂ ಮುದ್ದಾದ ಕೈಬರಹ. ಸದಾ ಸಮನ್ವಯ, ಸದಾ ಭಿನ್ನಮತ. ಬಂಧು ಮಿತ್ರ ಪರಚಿತರಲ್ಲಿ ಅಂತಸ್ತಿನ ಅಂತರವಿಲ್ಲದ ಪಂಚಕಜ್ಜಾಯ ಮಿಲನ ಮಿಶ್ರಣ. ಸದಾ ವ್ಯಸ್ತ ಆದರೂ ನೋ ಟೆನ್ಶನ್‌. ಆಸ್ತಿಕ, ಆಜಾರವಂತ, ನಾಸ್ತಿಕರಿಗೂ ಮಿತ್ರ. ಕಲೆಗಳ ಮರ್ಮಜ್ಞ ಇದೆಲ್ಲ ಇನ್ನೆಲ್ಲಿ? ಇಂತಹವರು ಬೇರೆ ಇಲ್ಲ. ಸದಾ ಮನದಲ್ಲಿ ಬೇಕಾಗಿ ಇರುವರು.

ಡಾ. ಎಂ. ಪ್ರಭಾಕರ ಜೋಶಿ

error: Content is protected !!
Share This