ದಿವಾಣ ಶಂಕರ ಭಟ್ಟರು ಇನ್ನಿಲ್ಲ(ನಿ.4-9-2021) ಎಂದು ಕೇಳಿ ತುಂಬ ವಿಷಾದವಾಯಿತು. ಪ್ರಸಿದ್ಧ ಮದ್ದಳೆಗಾರ ದಿವಾಣ ಭೀಮ ಭಟ್ಟರ ಪುತ್ರರಾದ ಶಂಕರ ಭಟ್ಟರು (73) ಚೆಂಡೆ ಮದ್ದಳೆಗಳಲ್ಲಿ ತನ್ನ ತಂದೆಯ ವಾದನ ನಿಖರತೆಯನ್ನು ಬಹುಕಾಲ ಕಾಪಿಟ್ಟುಕೊಂಡವರು.

ಹಾಡುಗಾರಿಕೆಯ ತಿರುಳನ್ನು ಅರಿತು ಮದ್ದಳೆ ಚೆಂಡೆಗಳನ್ನು ನುಡಿಸುತ್ತಿದ್ದವರು. ಶಂಕರ ಭಟ್ಟರಿದ್ದಾರೆ ಎಂದರೆ ಯಾವ ಭಾಗವತರಿಗೂ ನಿಶ್ಚಿಂತೆಯಲ್ಲಿ ಪದ ಹೇಳಬಹುದು. ಯಾಕೆಂದರೆ ಅವರ ನುಡಿತ ತಾಳದ ರೂಪದಲ್ಲಾಗಲಿ, ಲಯದ ಸ್ಥಿರತೆಯಲ್ಲಾಗಲಿ ಇನಿತೂ ಎಡವಟ್ಟನ್ನು ತರಲಾರದು.

ನಮ್ಮ ಕಾಲದ second line ವಾದಕರಲ್ಲಿ ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಸರಿಮಿಗಿಲೆನಿಸಿದ ನಾದವಿದ್ಯಾಪಟು ಅವರು. ಆದರೆ ಅವರ ಯೋಗ್ಯತೆಗೆ ತಕ್ಕ ಮನ್ನಣೆ ಅವರಿಗೆ ದೊರೆಯಲಿಲ್ಲ. ಇದನ್ನು ನೋಡಿದರೆ ‘ಗೆರೆ’ ಎಂದು ಹೇಳುವ ಕಾಲ್ಪನಿಕ ಪರಿಕಲ್ಪನೆ ವಾಸ್ತವ ಹೌದೇ ಎಂಬ ನೆಲೆಗೆ ತಳ್ಳಿಹೋದೇವು.

ಅವರು ಚೆಂಡೆ ಬಾರಿಸುವಾಗ ಭಾಗವತರೆತ್ತಿದ ಯಾವ ಲಯದಲ್ಲಾಗಲಿ ಭೈರವಿಅಷ್ಟ ತಾಳದ ನಡಿಗೆಯಲ್ಲಿ ಎಳ್ಳೆನಿತೂ ರೂಪವ್ಯತ್ಯಯ ಎಂಬುದಿರಲಾರದು. ಇತರ ಅನೇಕ ವಾದನಪಟುಗಳ ಕೌಶಲದಲ್ಲಿ ಬಿಡ್ತಿಗೆ ಉರುಳಿಕೆ ಮುಗಿದಾಗ ಲಯ ಹೇಗೆ ಓಟ ತಗೊಂಡಿದೆ ಎಂದು ಊಹಿಸಲೂ ಎಡೆಯಿಲ್ಲ. ಮಾತ್ರವಲ್ಲ ಅದು ಓತಿಯ ಮೈಬಣ್ಣದ ಹಾಗೆ ಅಷ್ಟತಾಳದ ಛಾಯೆಯನ್ನು ಬದಲಿಸಿ ತಿಶ್ರ (ತೈತ ತಕತ) ನಡೆಗೆ ಹೊರಳಿದ್ದು ವಾದಕರ ಅರಿವಿನಲ್ಲೂ ಇರುವುದಿಲ್ಲ.

ವಾದನವಿರಲಿ ಪದ ಹೇಳುವುದಿರಲಿ ಶಂಕರ ಭಟ್ಟರ ತಿಳಿವಳಿಕೆ ಖಚಿತ ಮತ್ತು ಸಮರ್ಪಕ. ಪ್ರಾತ್ಯಕ್ಷಿಕಗಳಲ್ಲಿ ಹಾಡುಗಾರಿಕೆಯ ನಿಜರೀತಿಯನ್ನು ಅವರು ಕರಾರುವಾಕ್ಕಾಗಿ ತೋರಿಕೊಟ್ಟದ್ದುಂಟು. ಕಟೀಲು ಕಮ್ಮಟದಲ್ಲಿ ಅವರು ಜಾಗಟೆ ಕೇಳಿ ಪಡೆದು ವಿವಾದಿತ ಹಾಡಿನ ನಡಿಗೆಯನ್ನು ಸರಿಯಾಗಿ ಹಾಡಿ ತೋರಿಸಿದ್ದಾರೆ.

ರಂಗಸ್ಥಳದಲ್ಲೂ ತಾಳಮದ್ದಳೆಯಲ್ಲೂ ನನ್ನ ಹಾಡಿಗೆ ಅವರು ಸಾರ್ಥಕ ಸಾಥಿ ನೀಡಿದುದನ್ನು ಸದಾ ನೆನಪು ಮಾಡಿಕೊಳ್ಳುವೆ. ‘ಯಕ್ಷಕೌಮುದಿ’ ದೀವಟಿಗೆ ಬೆಳಕಿನ ಆಟದಲ್ಲಿ ನಿಂತುಕೊಂಡೇ ಮದ್ದಳೆಯನ್ನು ಹೆಗಲಿಗೆ ಹಾಕಿಕೊಂಡು ಸಂತಸದಲ್ಲೆ ವಾದನ ನಡೆಸಿದ ರೀತಿ ನನ್ನ ಪಾಲಿಗೆ ಅವಿಸ್ಮರಣೀಯ. ಅವರಿಗೆ ಸದ್ಗತಿಯನ್ನು ಹಂಬಲಿಸುವೆ.

ಕೆ.ಎಂ.ರಾಘವ ನಂಬಿಯಾರ್

error: Content is protected !!
Share This