ಕಾರ್ಕಳ ತಾಲೂಕಿನ ಮಾಳದಿಂದ ಮಂಗಳೂರಿಗೆ ಬಂದು ನೆಲೆಸಿದ ತನ್ನ ಅದಮ್ಯ ಜೀವನಾಸಕ್ತಿ ಮಗು ಸಹಜ ಕುತೂಹಲಗಳಿಂದ ಬೆಳೆದ ಡಾ.ಪ್ರಭಾಕರ ಜೋಷಿ ಎಂಬ ಯಕ್ಷಗಾನದ ಹೆಮ್ಮೆಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಅವರನ್ನು ಕಾಣುವ ಪ್ರಯತ್ನವಿದು.

ಯಕ್ಷಗಾನ -ತಾಳಮದ್ದಳೆ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧಕರಿವರು. ದಿ.ಶೇಣಿ ಗೋಪಾಲಕೃಷ್ಣ ಭಟ್, ದಿ.ದೇರಾಜೆ ಸೀತಾರಾಮಯ್ಯ ಮುಂತಾದ ಧೀಮಂತ ಅರ್ಥಧಾರಿಗಳ ಜತೆಗೆ ಸಹ ಕಲಾವಿದನಾಗಿ ಬೆಳೆದ ಡಾ.ಜೋಷಿಯವರು ಆಗಾಗ ಹೇಳುವ ವಿನಮ್ರ ಮಾತು “ ನಮ್ಮಂತವರ ಕಾಲುಗಳು ಅಂತವರ ಹೆಗಲ ಮೇಲಿವೆ”. ಬಾಗಿದ ಮನವುಳ್ಳ ವ್ಯಕ್ತಿತ್ವಕ್ಕೆ ಮಾತ್ರ ಸಹಜವಾಗಿ ಇಂತಹಾ ಮಾತು ಬರಬಲ್ಲದು.

ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕನಾಗಿ ಮುಂದೆ ಅದೇ ಕಾಲೇಜಿನ ಕಾಲೇಜಿನ ಪ್ರಾಂಶುಪಾಲನಾಗಿಯೂ ಕೆಲಸ ನಿರ್ವಹಿಸಿದ ಜೋಷಿಯವರು ವಿದ್ಯಾರ್ಥಿಗಳಿಗೆ ಪ್ರಿಯರಾದ ಪ್ರಾಧ್ಯಾಪಕರಾಗಿದ್ದವರು. ವೃತ್ತಿಯಿಂದ ವಾಣಿಜ್ಯಶಾಸ್ತ್ರ ಬೋಧಕನಾಗಿದ್ದು ಪ್ರವೃತ್ತಿಯಿಂದ ತತ್ವಶಾಸ್ತ್ರ, ವೇದ-ವೇದಾಂತ, ದರ್ಶನ ಶಾಸ್ತ್ರ, ಸೌಂದರ್ಯ ಶಾಸ್ತ್ರಗಳ ಸ್ವಾಧ್ಯಾಯ ಮತ್ತು ಉಪನ್ಯಾಸ ಇವುಗಳಿಂದ ಅನನ್ಯರಾಗಿ ಡಾ.ಜೋಷಿಯವರು ಕಾಣಿಸುತ್ತಾರೆ. ಶಂಕರ ಭಗವತ್ಪಾದರು, ಅದ್ವೈತ ಸಿದ್ಧಾಂತ, ಕುಮಾರಿಲ ಭಟ್ಟ, ಮಹಾಮಾಹೇಶ್ವರ ಅಭಿನವ ಗುಪ್ತಪಾದಾಚಾರ್ಯರ ಬಗೆಗೆ ಅನೇಕ ಉಪನ್ಯಾಸಗಳನ್ನೂ ಮಾಡಿದ್ದಾರೆ. ಅವರನ್ನು ಸುಮ್ಮನೆ ಈ ವಿಷಯಗಳ ಬಗ್ಗೆ ಕೆದಕಿದರೆ ಲಹರಿ ಬಂದಂತೆ ಗಂಟೆಗಟ್ಟಲೆ ಮಾತನಾಡುತ್ತಾರೆ. ಅದ್ವೈತ ಶಾಸ್ತ್ರವನ್ನು ನೋಮ್ ಚೋಮ್ಸ್ಕಿಯ ಭಾಷಾಶಾಸ್ತ್ರಕ್ಕೂ ಮತ್ತು ಆಚಾರ್ಯತ್ರಯರ ದರ್ಶನಗಳಿಂದಾಗಿ ಅಭಿನವ ಗುಪ್ತಪಾದಾಚಾರ್ಯರಿಗೆ ಸಿಗದ ಮಹತ್ವದವರೆಗೂ ಭಾವತೀವ್ರತೆಯಿಂದ ಅತ್ಯಂತ ನಿಖರವಾಗಿ ಮಾತನಾಡುತ್ತಾರೆ ಡಾ.ಜೋಷಿಯವರು.

ತತ್ವಶಾಸ್ತ್ರದ ಬಗೆಗೆ “ ತತ್ವ ಮನನ” ಮತ್ತು “ ಭಾರತೀಯ ತತ್ವಶಾಸ್ತ್ರ” ಎಂಬ ಗ್ರಂಥವನ್ನೂ ಮತ್ತು ಪ್ರೊ.ಎಂ.ಎ.ಹೆಗಡೆಯವರ ಜತೆಯಾಗಿ “ ಭಾರತೀಯ ತತ್ವಶಾಸ್ತ್ರ ಪರಿಚಯ” ಮತ್ತು “ ಭಾರತೀಯ ತತ್ವಶಾಸ್ತ್ರ ಪ್ರವೇಶ” ಎಂಬ ಗ್ರಂಥವನ್ನೂ ರಚಿಸಿದ್ದಾರೆ. ಜತೆ ಜತೆಗೇ ಬ್ಯಾಂಕಿಂಗ್ ಕಾಲೇಜ್ಗಳಲ್ಲಿ ಬ್ಯಾಂಕರ್ಸ್ ಗಳಿಗೆ ಬ್ಯಾಂಕಿಂಗ್ ವಿಷಯದಲ್ಲಿ ಮತ್ತು ವಾಣಿಜ್ಯ ಶಾಸ್ತ್ರದಲ್ಲಿ ತರಬೇತಿಯನ್ನೂ ನೀಡಿದವರಿದ್ದಾರೆ. ಡಾ.ಜೋಷಿಯವರ ಪ್ರಜ್ಞಾ ಪರಿಧಿಯ ವಿಸ್ತಾರ ವಿಸ್ಮಯ ಹುಟ್ಟಿಸುವಂತಹಾದ್ದಾಗಿದೆ.

ಯಕ್ಷಗಾನಕ್ಕೆ ಸಂಬಂಧಿಸಿದಂತೆ ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ಯಕ್ಷಗಾನಪದಕೋಶ, ತಾಳಮದ್ದಳೆ, ವಾಗರ್ಥ, ಕೃಷ್ಣ ಸಂಧಾನ ಮತ್ತು ಪ್ರಯೋಗ ಎಂಬ ಪಿ.ಹೆಚ್.ಡಿ ಅಧ್ಯಯನ ಮಹಾಪ್ರಬಂಧ, ಯಕ್ಷಗಾನ ಸ್ಥಿತಿಗತಿ ಮುಂತಾದ ಹದಿಮೂರಕ್ಕೂ ಮಿಕ್ಕಿ ಸ್ವತಂತ್ರ ಕೃತಿಗಳು ಹಾಗು ಕುಕ್ಕಿಲ ಸಂಪುಟ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಅಭಿನಂದನಾ ಗ್ರಂಥ ಇವುಗಳೇ ಮುಂತಾದ ಗ್ರಂಥಗಳು ಇವರ ಸಂಪಾದನದಲ್ಲಿ ಬಂದ ಯಕ್ಷಗಾನ ಕಲಾಕ್ಷೇತ್ರದ ಮಹತ್ವಪೂರ್ಣ ಕೃತಿಗಳು.

ಯಕ್ಷಗಾನವು ಕೇವಲ ಸಂಪ್ರದಾಯ ಬದ್ಧತೆಯ ಕಂಬಿಗಳೆಡೆಯಲ್ಲಿರದೆ ಅದು ವಿಶ್ವರಂಗ ಭೂಮಿಕೆಯಲ್ಲಿ ಭಾರತದ ಸಮರ್ಥ ರಂಗಕಲೆಯಾಗಿ ನಿಲ್ಲಬೇಕೆಂಬ ಆಶಯ ಅವರ ಬರಹ, ಮಾತು, ಭಾಷಣಗಳಲ್ಲಿ ಕಾಣಬಹುದಾಗಿದೆ. ಡಾ.ಜೋಷಿಯವರ ವಿಚಾರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಯಕ್ಷಗಾನ ಕ್ಷೇತ್ರಕ್ಕೆ ಪ್ರಭಾವ ಬೀರಿದೆ. ಅವರ ಅಮೆರಿಕಾ ಪ್ರವಾಸ ಮತ್ತು ತತ್ಸಂಬಂಧೀ ಭಾಷಣಗಳು ಅವರ ವೈಚಾರಿಕ ಪ್ರಭಾವವನ್ನು ಅಲ್ಲಿಯೂ ಬೀರಿದೆ. ವಿಶ್ವರಂಗ ಭೂಮಿಯ ಕಣ್ಣಲ್ಲಿ ಯಕ್ಷಗಾನದ ಸ್ಥಾನ ಮತ್ತು ಅದರ ಶಕ್ತಿ ಏನೆಂಬುದನ್ನು ಅವರು ಗ್ರಹಿಸಿದ್ದಾರೆ.

ಡಾ.ಪ್ರಭಾಕರ ಜೋಷಿಯವರು ಯಕ್ಷಗಾನ ಕಂಡ ಅತ್ಯುತ್ಕೃಷ್ಟ ದರ್ಜೆಯ ಕಲಾವಿಮರ್ಶಕರು. ಅವರು
ವಿಮರ್ಶೆಯ ಕುರಿತು ಹೇಳುತ್ತಾ: “ವಿಮರ್ಶೆಯು ಕಲಾ ರಸಿಕನಿಗೂ ಕಥೆಗೂ ಹೊಸ ಪ್ರಚೋದನೆ ನೀಡಬೇಕು…ನಿಲುಮೆಗಳನ್ನು ತಳೆಯುವ ಅಥವಾ ನಿರಾಕರಿಸುವ, ಭಿನ್ನಾಭಿಪ್ರಾಯಗಳನ್ನು , ಚರ್ಚೆಯನ್ನು ಪ್ರಚೋದಿಸುವುದೂ ವಿಮರ್ಶೆಯ ಒಂದು ಕೆಲಸವೇ ಆಗಿದೆ”

“ …ಕಲಾ ಲೇಖನಗಳು ಕಲಾ ಪುರವಣಿಯ ಮೊದಲ ಪುಟದಲ್ಲೇ ಪ್ರಕಟವಾಗಿ ಜನರನ್ನಾಕರ್ಷಿಸಬೇಕು. ಸಿನೆಮಾದಂತಹ ಬರಹ, ಚಿತ್ರಗಳನ್ನು ಎಲ್ಲಿ ಪ್ರಕಟಿಸಿದರೂ ಜನ ಓದುತ್ತಾರೆ” ಇದು ತುಂಬಾ ಗಂಭೀರವಾದ ಮತ್ತು ಸಂಸ್ಕೃತಿಯನ್ನು ಕಟ್ಟುವ ಮಾತು.

ಒಬ್ಬ ಅರ್ಥಧಾರಿಯಾಗಿಯೂ ಸೂಕ್ಷ್ಮ ವಿಮರ್ಶಕನಾಗಿಯೂ ಇಲ್ಲಿ ಉಲ್ಲೇಖಿಸಬೇಕಾದ ಜೋಷಿಯವರ ಮಾತು ” ಈ ಕ್ಷೇತ್ರದ ವಿಮರ್ಶೆಯ ತಾತ್ವಿಕ ವಿವೇಚನೆ ಆಗಿಲ್ಲ. ಹಾಗಾಗಿ ಯಕ್ಷಗಾನ ವಿಮರ್ಶಾ ಶಾಸ್ತ್ರ ಬೆಳೆದಿಲ್ಲ. ಅದು ಬೆಳೆದಿದ್ದರೆ ಯಕ್ಷಗಾನ ಇಂದು ಇರುವಂತೆ ಇರುತ್ತಿರಲಿಲ್ಲ. ಎಷ್ಟೋ ಉತ್ತಮವಾಗಿರುತ್ತಿತ್ತು. ಯಕ್ಷಗಾನ ರಂಗಕ್ಕೆ ಬೇಕಾದ ಮಾರ್ಗದರ್ಶನ ಒದಗಿಸಲು ವಿಮರ್ಶಕರು ವಿಫಲರಾಗಿದ್ದಾರೆ. ಈ ಸೋಲನ್ನು ನಾವು ಒಪ್ಪಿಕೊಳ್ಳಬೇಕು. ಇದರಿಂದಾಗಿ ವಿಮರ್ಶೆಗೆ ಮುಕ್ತವಾಗಿ ಒಡ್ಡಿಕೊಳ್ಳಲು ಯಕ್ಷಗಾನ ರಂಗ ಇನ್ನೂ ಸಿದ್ಧವಾಗಬೇಕೆಂಬ ಚಿಂತನೆ ಡಾ.ಜೋಷಿಯವರದ್ದು. ವಿಮರ್ಶಾ ಗೋಷ್ಠಿ ಅಂದರೆ ಅದೇನೋ ತಮ್ಮನ್ನು ಟೀಕಿಸುವಂತಹ ಉದ್ದೇಶ ಎಂದೇ ಕಲಾವಿದರು ತಿಳಿದಿರುವಂತೆ ಕಾಣುತ್ತದೆ. ಈ ಸಂದೇಹವನ್ನು ನಿವಾರಿಸಲು ನಾವು ಪ್ರಯತ್ನಿಸಬೇಕು”.

ಡಾ.ಜೋಷಿಯವರೆನ್ನುವಂತೆ “ ವಿಮರ್ಶೆಗೂ ಮರು ವಿಮರ್ಶೆ ಬೇಕು. ಅದು ಆಚಾರ್ಯ ಪೀಠವಾಗಿರಬಾರದು. ಯಕ್ಷಗಾನ ಸಂಶೋಧನೆಗೆ ವಿಮರ್ಶೆಯಬಲವಾದ ಅಡಿಪಾಯ ಬೇಕು. ಪ್ರೀತಿ ಬೇಕು. ನಿರ್ಭೀತಿ ಬೇಕು. ಮಾಧ್ಯಮದ ಎಚ್ಚರವಿಲ್ಲದೆ ಮಾಡುವ ವಿಮರ್ಶೆ ‘ ಒಟ್ಟಾರೆ ವಿಮರ್ಶೆ’ಯಾಗುತ್ತದೆ. ಅದರಿಂದ ರಂಗಕ್ಕೆ ಪ್ರಯೋಜನವಿಲ್ಲ.” ಇನ್ನೊಂದು ಮುಖ್ಯ ಮಾತು ಇಲ್ಲಿ ಬರುತ್ತದೆ “ ವಿಮರ್ಶೆಯನ್ನು ಯಾರು ಒಳಗಿದ್ದುಕೊಂಡೇ ಮಾಡುತ್ತಾನೋ, ಅವನ ಬಗ್ಗೆ ಬಹಳಷ್ಟು ವಿಶ್ವಾಸ ನಂಬುಗೆಗಳು ಬರುತ್ತವೆ. “

ಡಾ|ಜೋಷಿಯವರಿಗೆ ಅಭಿನಂದನೆಗಳು.

ಕೃಷ್ಣಪ್ರಕಾಶ ಉಳಿತ್ತಾಯ
ಈಶಾವಾಸ್ಯ
ಸದಾಶಿವ ದೇವಸ್ಥಾನದ ಬಳಿ
ಪೆರ್ಮಂಕಿ, ಮಂಗಳೂರು.

error: Content is protected !!
Share This