ಅರ್ಥಗಾರಿಕೆ ಮತ್ತು ಯಕ್ಷಗಾನ ಸಂಘಗಳು

– ಡಾ. ಎಂ. ಪ್ರಭಾಕರ ಜೋಶಿ

ಯಕ್ಷಗಾನ ಸಂಘವೆಂದರೆ – ನಮ್ಮ ಕರಾವಳಿ ಪ್ರದೇಶದಲ್ಲಿ ಮುಖ್ಯವಾಗಿ – ಯಕ್ಷಗಾನ ತಾಳಮದ್ದಳೆಗಳನ್ನು ನಿಯತವಾಗಿ ಅಭ್ಯಾಸ ಕೂಟಗಳಾಗಿ ನಡೆಸುವ ಸಂಘ, ಆಸಕ್ತರ ಗುಂಪು ಎಂದು ತಾತ್ಪರ್ಯ. ಇಂತಹ ಸಂಘಗಳು ಸುಮಾರು ಇಸವಿ 1960ರವರೆಗೆ ಕರಾವಳಿ, ಮಲೆನಾಡುಗಳಲ್ಲಿ ಸುಮಾರು ನೂರೈವತ್ತು ಇದ್ದವು. ಈಗ ಅವುಗಳ ಸಂಖ್ಯೆ ಕೆಲವು ದಶಕಗಳಷ್ಟಿರಬಹುದು. ಅದಕ್ಕೆ ಬೇರೆ ಬೇರೆ ಕಾರಣಗಳಿವೆ.

ಸಂಘದ ಮೂಲ ಪರಿಕಲ್ಪನೆ – ಅಭ್ಯಾಸ, ಅಧ್ಯಯನ ಮತ್ತು ಸೀಮಿತ ಪ್ರದೇಶದಲ್ಲಿ ನಿಶ್ಚಿತ ಹಾಗೂ ವಿಶೇಷ ದಿನಗಳಂದು ಮತ್ತು ಆಹ್ವಾನದ ಮೇಲೆ ಪ್ರದರ್ಶನ ನೀಡುವುದಾಗಿದೆ. ನನ್ನ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಮಾಳ, ಕಾರ್ಕಳ, ನಾರಾವಿ, ಸಾಣೂರು, ಮೂಲ್ಕಿ ಹೀಗೆ ಹಲವೆಡೆ ಇಂತಹ ಸಂಘಗಳಿದ್ದವು. ಅಷ್ಟೇ ಅಲ್ಲ ಆ ಸಂಘಗಳು ಬೇರೆ ಆಹ್ವಾನಿತ ಕಲಾವಿದರನ್ನು ಸೇರಿಸಿಕೊಳ್ಳದೆಯೆ ಉತ್ತಮ ಮಟ್ಟದ ಪ್ರದರ್ಶನಗಳನ್ನು ನೀಡುವಷ್ಟು ಸಶಕ್ತವಾಗಿದ್ದವು.

ಈ ಸಂಘಗಳಲ್ಲಿ ಸಾಮಾನ್ಯವಾಗಿ ಒಂದು ಪುರಾಣವನ್ನು ಅಥವಾ ಪ್ರಸಂಗ ಸರಣಿಯನ್ನು ತೆಗೆದುಕೊಂಡು, ನಿಯತ ದಿನಗಳಲ್ಲಿ (ವಾರಕ್ಕೊಮ್ಮೆ, ಪಕ್ಷಕ್ಕೊಮ್ಮೆ ಇತ್ಯಾದಿಯಾಗಿ) ಎರಡು ಮೂರು ಗಂಟೆಗಳ ಕಾಲ ಅದನ್ನು – ದೇವಾಲಯ, ಮನೆ, ಭಜನಾ ಮಂದಿರ, ಶಾಲೆ- ಇಂತಹ ಕಡೆ, ನಿರಂತರವಾಗಿ ಕೂಟಗಳನ್ನು ನಡೆಸುತ್ತಿದ್ದರು. ಪದ್ಯಗಳನ್ನು ಬಿಡದೆ, ಕಥಾಭಾಗವನ್ನೂ ಬಿಡದೆ ಸಮಗ್ರವಾಗಿ ಪ್ರದರ್ಶನ ಸಾಗುವುದು ಇದರ ವಿಧಾನ. ಪಾತ್ರಗಳನ್ನು (ಸ್ವಭಾವಾನುಗುಣವಾಗಿ) ಬದಲಿಸಿ ಒಬ್ಬನೇ ಎಲ್ಲ ಬಗೆಯ ಪಾತ್ರಗಳನ್ನು ಹೇಳಲು ಸಿದ್ಧರಾಗುವ ಹಾಗೆ ಪಾತ್ರ ವಿತರಣೆ ನಡೆಸುವುದು ಅರ್ಥವಿಧಾನವಾಗಿತ್ತು. ಆದರೆ ಅದು ಸದಾ ರೂಢಿಯಲ್ಲಿರಲಿಲ್ಲ.

ಸಂಘದ ಅಭ್ಯಾಸ ಕೂಟಗಳಿಗೆ ಒಬ್ಬಿಬ್ಬರು ‘ಪ್ರಸಿದ್ಧ’ ‘ಪರವೂರ’ ಭಾಗವತ, ಅರ್ಥದಾರಿಗಳನ್ನು ಕರೆಸುವುದಿತ್ತು. ಇದು-ಸಂಘದ ಕಲಾವಿದರ ಅನುಭವ ವರ್ಧನೆಗಾಗಿ ಅನುಸರಿಸುತ್ತಿದ್ದ ಕ್ರಮ. ಸಂಘದಿಂದಲೆ ‘ಆಹ್ವಾನಿತ ಕೂಟಗಳು’ನಡೆಯುವಾಗ ಹೀಗೆ ಬೇರೆ ಕಲಾವಿದರನ್ನು ಸೇರಿಸಿಕೊಳ್ಳುವುದಿತ್ತು. ಇದು ತಂಡದ ಬಲವರ್ಧನಕ್ಕಾಗಿ.

ಸಂಘಗಳಲ್ಲಿ ತಯಾರಾದ ಅರ್ಥದಾರಿಗಳಿಗೆ – ವಿಸ್ತಾರವಾದ ಪ್ರಸಂಗಾನುಭವ, ನಿರ್ವಹಣೆ, ಸಂಭಾಷಣಾ ವಿಧಾನಗಳ ಅನುಭವಗಳಿರುತ್ತದೆ. ಮುಕ್ತ ವಾತಾವರಣದಲ್ಲಿ ತಮ್ಮದೇ ಬಳಗದಲ್ಲಿ ಮಾತಾಡುವ (ಕೆಲವೊಮ್ಮೆ ಅಡ್ಡಾದಿಡ್ಡಿ ಕೂಡ) ಸ್ವಾತಂತ್ರ್ಯದಿಂದ, ಕಲಾವಿದ ಬೆಳೆಯಲು ಸಾಧ್ಯ. ಹಾಗೆ ಬೆಳೆದವರು ಅನೇಕರಿದ್ದಾರೆ. ತಾಳಮದ್ದಳೆ ಸಂಘಗಳ ಮೂಲಕ ‘ದೊಡ್ಡ’ ವೇದಿಕೆಗೆ ಬಂದ ಅರ್ಥದಾರಿಗಳಿಗೂ, ಬೇರೆ ಬೇರೆ ಕಾರಣಗಳಿಂದ (ವಿದ್ವತ್ತು, ಸ್ಥಾನಮಾನ, ಅನ್ಯಕ್ಷೇತ್ರಗಳ ಅನುಭವ ಇತ್ಯಾದಿ) ಬಂದವರಿಗೂ ಇರುವ ವ್ಯತ್ಯಾಸವೂ ಕಾಣದಿರುವುದಿಲ್ಲ.

‘ಸಂಘದ ಅರ್ಥ’ (ಅರ್ಥಗಾರಿಕೆ) ಎಂಬ ಒಂದು ಮಾತು ಯಕ್ಷಗಾನ ವಲಯದಲ್ಲಿದೆ. ಇದಕ್ಕೆ ಎರಡು ಅರ್ಥಗಳಿವೆ. ಒಂದು – ಸಂಘಗಳ ಮಟ್ಟದ, ಸ್ಥಳೀಯ ಪ್ರಸಿದ್ಧ ಅರ್ಥಗಾರಿಕೆ, ಸಾಮಾನ್ಯ ಗುಣಮಟ್ಟದ್ದು ಎಂದು. ಇನ್ನೊಂದು ವ್ಯವಸ್ಥಿತವಾದ, ಸಾಕಷ್ಟು ಪ್ರಯೋಗಾನುಭವವುಳ್ಳ ಅರ್ಥಗಾರಿಕೆ ಎಂದು.

‘ಸಂಘದ ಅರ್ಥದಲ್ಲಿ ಒಳ್ಳೆಯದು’ (ಸಂಘೊಡು ಎಡ್ಡೆ) ಎಂಬುದಕ್ಕೆ – ಈ ಅರ್ಥಗಾರಿಕೆಯು ಸ್ಥಳೀಯ ಮಟ್ಟದಲ್ಲಿ ಮಾತ್ರ ಸೂಕ್ತವೆಂದೂ, ಆದರೆ ಈ ಕಲಾವಿದರು ಮುಂದೆ ಪರಿಣಿತರ, ಹಿರಿಯ ಪ್ರಮುಖ ಕೂಟಗಳಿಗೆ ಪ್ರವೇಶಿಸಲೂ ಅರ್ಹತೆಯುಳ್ಳದೆಂದೂ ಅರ್ಥವಾಗುತ್ತದೆ. ಅದು ತಾಳಮದ್ದಳೆ ಸಂಘಗಳು ಕೊಡುವ ಶಕ್ತಿ.

ಸಂಘಗಳ, ನಿಯತ ತಾಳಮದ್ದಳೆಗಳು ಯಶಸ್ವಿಯಾಗಬೇಕಾದರೆ ಅವುಗಳ ಉದ್ಧೇಶ ಫಲಿಸಬೇಕಾದರೆ ಸಾಂಗತ್ಯ ಅಗತ್ಯ. ನಿರಂತರ ಪಾತ್ರಗಳ ಬದಲಾವಣೆ, ಪ್ರಾಯೋಗಿಕ ವಿತರಣೆ ಮುಖ್ಯ. ಹಾಗೆಯೇ – ಸ್ಥಳೀಯರು ಮತ್ತು ಆಮದು (ಆಹ್ವಾನಿತರು) ಕಲಾವಿದರ ಸಾಂಗತ್ಯ. ಜತೆಗಾರಿಕೆ ಅವಶ್ಯಕ.

ಈಗ ನಿಯತವಾಗಿ ಯಕ್ಷಗಾನ ಸಂಘಗಳನ್ನು ನಡೆಸಿಕೊಂಡು ಹೋಗುವುದಕ್ಕೆ ಸಮಸ್ಯೆಗಳಿವೆ. ಸದಸ್ಯರ ವ್ಯಸ್ತತೆ, ಹೆಚ್ಚಿರುವ ಇತರ ಮಾಧ್ಯಮಗಳು ಮೊದಲಾದವು. ಆದರೆ ಈಗ ಅನುಕೂಲಗಳೂ ಇವೆ. ಗ್ರಂಥಗಳು, ಸಾಹಿತ್ಯ ಈಗ ಸುಲಭ. ಪ್ರದರ್ಶನಾವಕಾಶಗಳೂ ಇದೆ. ಪ್ರೋತ್ಸಾಹವೂ ಬೆಳೆದಿದೆ. ಗ್ರಂಥಗಳು ಇವುಗಳ ಲಾಭವನ್ನು ಪಡೆದು ತನ್ನದೇ ಸಾಮಗ್ರಿ, ಗ್ರಂಥಾಲಯ, ನಿರಂತರವಾಗಿ ಸೇರಿ ಕೂಟ ನಡೆಸುವ, ಚರ್ಚಿಸುವ ಅಭ್ಯಾಸ ಬೆಳೆಸಿ ಬೆಳೆಸಬೇಕು.

ನಮ್ಮ ಸಮುದಾಯ-ಸಮಾಜ ಈ ಬಗೆಗಿನ ಪ್ರಯತ್ನಗಳಿಗೆ ಬೆಂಬಳ ನೀಡುವಲ್ಲಿ ಹಿಂದುಳಿಯುವುದಿಲ್ಲ.

ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘ (ರಿ) ಮಧೂರು, ಕಾಸರಗೋಡು – ಸುವರ್ಣ ಕಲಶ- (ಮುದ್ರಣ : 2013)

error: Content is protected !!
Share This