2002 ರಲ್ಲಿಯೇ ಪತ್ರಕರ್ತ, ಲೇಖಕ, ವಿಮರ್ಶಕರಾದ ಡಾ. ಕೆ. ಎಂ. ರಾಘವ ನಂಬಿಯಾರರಿಂದ ಅರ್ಥಧಾರಿಯ ಒಳಗು ಕೃತಿ ಪೂರ್ಣಗೊಂಡು ಕಥಾನಾಯಕರಾದ ಅಡ್ಡೆ ವಾಸು ಶೆಟ್ಟರು ಕೃತಿಯನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಕೃತಿಯ ಪ್ರಕಟಣೆಗೆ ಒಪ್ಪಿಗೆಯನ್ನು ನೀಡಿದ್ದರು. ಪ್ರಕಾಶಕರು ದೊರಕದ ಕಾರಣ ಈ ಕೃತಿ ಬಿಡುಗಡೆಯ ಭಾಗ್ಯ ಕಾಣದೇ ಹೋಗಿತ್ತು.

ಅಡ್ಡೆ ವಾಸು ಶೆಟ್ಟರು 2003 ರ ನವೆಂಬರದಲ್ಲಿ ತಮ್ಮ 79 ರ‌ ವಯಸ್ಸಿನಲ್ಲಿ ದಿವಂಗತರಾದರು.

ಬರೋಬ್ಬರಿ 17 ವರ್ಷಗಳ ಬಳಿಕ ಈ ಕೃತಿ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಅರ್ಥಧಾರಿಯ ಒಳಗು ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಉತ್ತಮ ಅರ್ಥಧಾರಿಗಳಲ್ಲೊಬ್ಬರಾಗಿ ಮೆರೆದ, ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಮೂರು ತಲೆಮಾರುಗಳ ಕಲಾವಿದರೊಡನೆ ಒಡನಾಡಿಯಾಗಿದ್ದ ದಿ. ಅಡ್ಡೆ ವಾಸು ಶೆಟ್ಟರ ಅನುಭವ ಕಥನ.

ಈ ಕೃತಿಯ ಲೇಖಕರು ವೃತ್ತಿಯಲ್ಲಿ ಪತ್ರಕರ್ತರಾಗಿ, ಪ್ರವೃತ್ತಿಯಲ್ಲಿ ಲೇಖಕ, ಯಕ್ಷಗಾನ ಕಲಾವಿದ, ಪ್ರಸಂಗಕರ್ತ, ವಿಮರ್ಶಕ, ನಿರ್ದೇಶಕ, ಸಂಶೋಧಕ ಹೀಗೆ ವಿವಿಧ ನೆಲೆಗಳಿಂದ ಯಕ್ಷಗಾನ ರಂಗಭೂಮಿಯೊಂದಿಗೆ ಕಳೆದ 60 ವರ್ಷಗಳಿಂದ ನಿಕಟವಾದ ಬಾಂಧವ್ಯವಿರಿಸಿಕೊಂಡಿರುವ ಡಾ. ಕೆ. ಎಂ. ರಾಘವ ನಂಬಿಯಾರರು.

ಕೃತಿಯನ್ನು ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ), ಉಡುಪಿ-ಬೆಂಗಳೂರು ಪ್ರಕಾಶಿಸುತ್ತಿದೆ.

10 ನೇ ಫೆಬ್ರವರಿ 2019 ರ ಆದಿತ್ಯವಾರ ಸಾಯಂಕಾಲ 4.00 ಘಂಟೆಗೆ ಈ ಕೃತಿ ಲೋಕಾರ್ಪಣೆಯಾಗಲಿದೆ.

ಕೃತಿಯ ಬಿಡುಗಡೆ ಸುವರ್ಣ ಮಹೋತ್ಸವ ಸಭಾಭವನ, ಯಕ್ಷಗಾನ ಕಲಾಕ್ಷೇತ್ರ (ರಿ), ಗುಂಡಿಬೈಲು, ಉಡುಪಿ ಇಲ್ಲಿ ನಡೆಯಲಿದೆ.

ಈ ಕೃತಿ ಬಿಡುಗಡೆ ಸಮಾರಂಭದ ಬಳಿಕ ಯಕ್ಷಗಾನ ಕಲಾಕ್ಷೇತ್ರ (ರಿ), ಗುಂಡಿಬೈಲು, ಉಡುಪಿ ಸಂಸ್ಥೆಯ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಯೂ ಇದೆ.

ಇದುವರೆಗೂ ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ಸಂಸ್ಥೆ ಸಮಾಜದಿಂದ ದೇಣಿಗೆಯನ್ನು ವಿನಂತಿಸಿದ್ದಿಲ್ಲ. ಸಂಸ್ಥೆಯ ಕಾರ್ಯಗಳನ್ನು ಕಂಡು ಮೆಚ್ಚಿದ ಕೆಲ ಹೃದಯವಂತರು ತಾವಾಗಿಯೇ ದೇಣಿಗೆಯನ್ನು ನೀಡಿರುತ್ತಾರೆ. ಉಳಿದ ಧನವನ್ನು ಸಂಸ್ಥೆಯ ಕಾರ್ಯದರ್ಶಿಯೇ ಭರಿಸುವುದು ವಾಡಿಕೆ.

ತಾವಾಗಿಯೇ ದೇಣಿಗೆಯನ್ನು ನೀಡಿರುವ ಹೃದಯವಂತರಿಗೆ ಅನಂತ ಧನ್ಯವಾದಗಳು.

ಸಂಸ್ಥೆ ಸಮಾಜದಿಂದ ನಿರೀಕ್ಷಿಸುವುದು ಕಲಾಭಿಮಾನಿಗಳ ಉಪಸ್ಥಿತಿಯನ್ನು. ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳ ಉಪಸ್ಥಿತಿಯನ್ನು ಬಯಸುತ್ತಾ ಸರ್ವರನ್ನೂ ಆದರದಿಂದ ಸ್ವಾಗತಿಸುತ್ತೇವೆ.

ಕಟೀಲು ಸಿತ್ಲ ರಂಗನಾಥ ರಾವ್
ಸ್ಥಾಪಕ ಕಾರ್ಯದರ್ಶಿ
ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ), ಉಡುಪಿ-ಬೆಂಗಳೂರು

error: Content is protected !!
Share This