ಕರಾವಳಿ ಕರ್ನಾಟಕದ ಯಕ್ಷಗಾನ ಕ್ಷೇತ್ರದಲ್ಲಿ ನಡೆದ ಅಧ್ಯಯನ, ಅವಲೋಕನವೇ ಕಡಿಮೆ. ಯಕ್ಷಗಾನವನ್ನೇ ಹೋಲುವ ಆದರೂ ಭಿನ್ನವಾಗಿರುವ ತಾಳಮದ್ದಳೆಯಲ್ಲಂತೂ ಇನ್ನೂ ಕಡಿಮೆ. ಅನೇಕ ಸಂದರ್ಭಗಳಲ್ಲಿ ತಾಳಮದ್ದಳೆಯ ಅಧ್ಯಯನಕ್ಕಿಂತಲೂ ಪೂರ್ವದ ಅನುಭವ ಸಾಂದ್ರ ಮಾಹಿತಿಗಳ ಸಂಗ್ರಹವೂ ಕೊರತೆಯಾಗಿ ಕಾಣುತ್ತದೆ. ಈ ಕೊರತೆಯನ್ನು ನೀಗಿಸಲು ಇದೀಗ ಧೈರ್ಯವಾಗಿ ಸೂಚಿಸಬಹುದಾದ ಕೃತಿಯೇ ಈ “ಅರ್ಥಾಲೋಕ”. ಹಿರಿಯ ಸ್ನೇಹಿತರೂ ಕಲಾವಿದರೂ ಆದ ರಾಧಾಕೃಷ್ಣ ಕಲ್ಚಾರ್ ರವರು ತನ್ನ ದೀರ್ಘಕಾಲದ ಅನುಭವ ಮತ್ತು ಆಳವಾದ ಅಧ್ಯಯನ ಇವೆರಡರ ಮೂಲಕ ರಚಿಸಿದ ಕೃತಿ ಇದಾಗಿದೆ.

ಒಬ್ಬ ಕಲಾಸಕ್ತನಿಗೆ ಕಲಾವಿದನಾಗಬೇಕೆಂಬ ಅನನ್ಯ ಹಂಬಲವಿದ್ದರೆ ಈ ಕೃತಿಯನ್ನು ಒಂದೆರಡು ಸಾರಿ ಓದಿಕೊಂಡು ಮನನ ಹಾಗೂ ಪಾಲನೆ ಮಾಡಿದರೆ ಧಾರಾಳ ಸಾಕು. ಜೊತೆಗೆ ತಾಳಮದ್ದಳೆಯ ಪರಿಸರದಿಂದ ಹೊರಗಿದ್ದವರು ಅದರ ಮಾತುಗಾರಿಕೆಯ ಬಗ್ಗೆ ಸಂಶಯದಿಂದಲೂ ಕುತೂಹಲದಿಂದಲೂ ಪ್ರಶ್ನಿಸುವ ಪ್ರಶ್ನೆಗಳ ಉತ್ತರಗಳಿಗೂ ಈ ಕೃತಿ ಸಾಕು.

ಎಲ್ಲರಿಗೂ ಎಲ್ಲಾ ರೀತಿಯಿಂದಲೂ ದಕ್ಕಬಲ್ಲ ಹಾಗೂ ಒಗ್ಗಬಲ್ಲ ಕೃತಿಯೊಂದರ ಅಗತ್ಯ ತಾಳಮದ್ದಳೆ ಕ್ಷೇತ್ರಕ್ಕಿತ್ತು. ಈ ಅಗತ್ಯವನ್ನು ಪುಟಗಳ ಮಿತಿಯ ಈ ಪುಟ್ಟ ಕೃತಿ ಪೂರೈಸಿದೆ ಎನ್ನುವ ಪ್ರಾಮಾಣಿಕ ಅನಿಸಿಕೆ ನನ್ನದು. ಕೃತಿಯಲ್ಲಿ ಬರುವ ಎಲ್ಲ ಸ್ವತಂತ್ರ ಲೇಖನಗಳು ಪ್ರೌಢವಾಗಿಯೂ ಮಾಹಿತಿಪೂರ್ಣವಾಗಿಯೂ ಕೈದೀವಿಗೆಯಾಗಿಯೂ ಇದೆ. ಇದೇ ಈ ಕೃತಿಯ ಶ್ರೇಷ್ಠತೆ. ಇಂತಹಾ ಕೃತಿಯನ್ನು ಕಲ್ಚಾರ್ ರಂತಹಾ ಕಲಾವಿದರಿಂದಲೇ ಆಶಿಸಬಹುದು ಎನ್ನುವ ಕಾರಣಕ್ಕೆ ನಾನವರನ್ನು ಅಭಿನಂದಿಸುತ್ತೇನೆ.

ಡಾ.ಸುಂದರ ಕೇನಾಜೆ.

error: Content is protected !!
Share This