ವಿಶ್ವಕ್ಕೇ ವಕ್ಕರಿಸಿದ ಮಾರಕ ರೋಗ ಕೊರೋನಾದಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿರುವಂತೆಯೇ , ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವೂ ಇದಕ್ಕೆ ಹೊರತಾಗಲಿಲ್ಲ . ನಾವು ಮೂಡಬಿದಿರೆಯಲ್ಲಿ ಕಳೆದ ಏಳು ವರ್ಷಗಳಿಂದ ಯಕ್ಷೋಪಾಸನಂ ಸಂಘದ ವತಿಯಿಂದ ಪ್ರತೀ ಮಂಗಳವಾರ ಹೊಸ ಮಾರಿಗೂಡಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ವಾರದಕೂಟವೂ ಕಳೆದ ಎರಡು ತಿಂಗಳುಗಳಿಂದ ಸ್ಥಗಿತಗೊಂಡ ಕಾರಣ, ಕನಿಷ್ಠ ಆನ್ ಲೈನ್ ಮೂಲಕವಾದರೂ ನಡೆಸುವ ಯೋಚನೆ ಮೂಡಿದ್ದೇ ತಡ, ನಮ್ಮ ಸದಸ್ಯರೊಂದಿಗೆ ಸಮಾಲೋಚಿಸಿದೆ.

ಪ್ರಾಯೋಗಿಕವಾಗಿ ಒಂದು ಕೂಟವನ್ನು ಮಾಡುವ ಬಗ್ಗೆ ನಿರ್ಧರಿಸಿ 14.05.2020 ನೇ ಗುರುವಾರ ಸಂಜೆ 6.00 ಕ್ಕೆ ಮುಹೂರ್ತ ನಿಗದಿ ಪಡಿಸಲಾಯಿತು‌. ಆದರೂ, ನಮ್ಮ ಸದಸ್ಯರ ಹೆಚ್ಚಿನಂಶ ಮಂದಿ, ನೆಟ್‌ವರ್ಕ್ ಪ್ರದೇಶದಿಂದ ಹೊರಗಿದ್ದ ಕಾರಣ ನಮ್ಮ ಸಂಘದ ಭಾಗವತರಾದ ಸಂಪಿಗೆ ಮಾಧವ ಆಚಾರ್ಯ, ಅವರ ಸುಪುತ್ರ, ನಮ್ಮ ಸಂಘದ ಕಿರಿಯ ಸದಸ್ಯರಾದರೂ , ಮದ್ದಲೆ ವಾದನದಲ್ಲಿ ಪರಿಣತರಾದ ಮಾಸ್ಟರ್ ಶ್ರವಣ ಕುಮಾರ್, ದೂರದ ಮೈಸೂರಿನಲ್ಲಿ ಇರುವ ಗುರುಪ್ರಸಾದ್ ಅಲಂಕಾರು , ಸುನೀಲ್ ಹೊಲಾಡು ಹಾಗೂ ನಾನು ಈ ಕಾರ್ಯಕ್ರಮಕ್ಕೆ ಲಭ್ಯರಾದೆವು. ನನಗೆ ಈ ಆನ್ಲೈನ್ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದ ಕಾರಣ , ಗುರುಪ್ರಸಾದ್ ಹಾಗೂ ಸುನೀಲರು ಈ ಬಗ್ಗೆ ಮುತುವರ್ಜಿ ವಹಿಸಿ , ಕಾನ್ಫರೆನ್ಸ್ ಕಾಲ್ ಮೂಲಕ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಈ ಆನ್ಲೈನ್ ತಾಳಮದ್ದಳೆ ಕೂಟ ವು ಯಶಸ್ವಿಯಾಗಿ ಪ್ರಸ್ತುತವಾಯಿತು ಎಂಬುದು ಸಂತಸದ ವಿಷಯ.

ಪ್ರಾರಂಭಿಕ ನೆಲೆಯಲ್ಲಿ ಈ ಆನ್ಲೈನ್ ಕೂಟವನ್ನು ಏರ್ಪಡಿಸಿದ ಕಾರಣ , ಪ್ರಾರಂಭದಲ್ಲಿ ಹಲವಾರು ವಿಘ್ನಗಳು ಬಾಧಿಸಿದ್ದು ಸುಳ್ಳಲ್ಲ . ಪ್ರಾರಂಭದಲ್ಲಿ ಉತ್ತರನ ಪೌರುಷ ಆಖ್ಯಾನ ಎಂದು ನಿರ್ಧರಿಸಿದರೂ , ಉತ್ತರ ಹಾಗೂ ಗೋಪಾಲಕ ಪಾತ್ರವೆರಡೂ ಹಾಸ್ಯ ರಸ ಸ್ಫುರಿಸಬೇಕಾದ ಪಾತ್ರವಾದ ಕಾರಣ , ವಾಲಿ ಮೋಕ್ಷ , ಸುಗ್ರೀವ ಸಖ್ಯ ಮುಂತಾದ ಪ್ರಸಂಗಗಳು ಪ್ರಸ್ತಾಪಿಸಲ್ಪಟ್ಟು , ಕೊನೆಘಳಿಗೆಯಲ್ಲಿ ಅಂದರೆ , ಸಂಜೆ ಐದು ಘಂಟೆಗೆ ಕರ್ಣಬೇಧನ ಆದೀತೆಂದು ನಿರ್ಧರಿಸಿದೆವು . ಆರು ಘಂಟೆ ಹೊತ್ತಿಗೆ ಗುರುಪ್ರಸಾದರು ಎಲ್ಲಾ ಐದು ಮಂದಿಯನ್ನು ಕಾನ್ಫರೆನ್ಸ್ ಕರೆಗೆ ತಂದು, ಸೆಟ್ ಆಗುವಾಗ ಸಂಜೆ 6.30 ಆಯಿತು .

ನಮ್ಮ ಆನ್ಲೈನ್ ತಾಳಮದ್ದಳೆ ಕೂಟ ಆರಂಭವಾಯಿತು . ಪೀಠಿಕೆಯ ಶ್ರೀಕೃಷ್ಣನಾಗಿ ನಾನು , ಕರ್ಣನಾಗಿ ಗುರುಪ್ರಸಾದ್ ಅಲಂಕಾರು ಹಾಗೂ ಕುಂತಿಯಾಗಿ ಸುನೀಲ್ ಕುಮಾರ್ ಹೊಲಾಡು ಭಾಗವಹಿಸಿದೆವು . ಒಬ್ಬೊಬ್ಬ ಪಾತ್ರಧಾರಿಯು ಹಲವಾರು ಮೈಲುಗಳ ಅಂತರದಲ್ಲಿದ್ದೆವು . ಭಾಗವತರಾದ ಸಂಪಿಗೆ ಮಾಧವ ಆಚಾರ್ಯ ರು ಸುಮಾರು ಆರು ಮೈಲು ದೂರದಿಂದ, ಸ್ತುತಿ ಪದ್ಯದ ಬಳಿಕ
ಧುರವೀಳ್ಯವಗೊಳುತ | ಮಾಧವ| ನಿರದಾಲೋಚಿಸುತ | ಪದ್ಯ ಕೊಟ್ಟೇಬಿಟ್ಟರು .

ಪೀಠಿಕೆಯೇ ಶ್ರೀಕೃಷ್ಣನಿಗೆ. ಶ್ರೀಕೃಷ್ಣನ ಪಾತ್ರ ವಹಿಸಿದ ನನಗೆ ಡಾ.ಶೇಣಿಯವರು ಈ ಹಿಂದೊಮ್ಮೆ ನನ್ನಲ್ಲಿ ಹೇಳಿದ್ದ ಕುಡ್ವರೇ, ಕಣ್ಣಿನ ರೆಪ್ಪೆ ಮುಚ್ಚಿ ಯಾರಲ್ಲಾದರೂ ಮಾತಾಡಿ. ನಿಮ್ಮಿಂದ ಎಷ್ಟು ಹೊತ್ತು ಮಾತಾಡಲಿಕ್ಕಾದೀತು ? ಎಂದು ಪ್ರಶ್ನಿಸಿದ್ದು ಸ್ಮ್ರತಿ ಪಟಲದಲ್ಲಿ ಮೂಡಿತು . ಏಕೆಂದರೆ ಭಾಗವತರು ಆರು ಮೈಲು ದೂರದಲ್ಲಿದ್ದರೆ, ಶ್ರೀಕೃಷ್ಣನ ಎದುರು ಪಾತ್ರ ಕರ್ಣನಾಗಿ , ಗುರುಪ್ರಸಾದರು 300 ಮೈಲು ದೂರದ ಮೈಸೂರಲ್ಲಿದ್ದರು . ಸುನೀಲರು ಎಪ್ಪತೈದು ಮೈಲುಗಳ ದೂರದಲ್ಲಿ ಕುಂದಾಪುರದ ವಂಡ್ಸೆಯಲ್ಲಿದ್ದರು. ಡಾ.ಶೇಣಿಯವರನ್ನೇ ಮನಃಪಟಲದಲ್ಲಿ ನೆನಪಿಸಿ ಶ್ರೀಕೃಷ್ಣನ ಅರ್ಥ ಹೇಳಿದೆ. ಮಾಧವ ಆಚಾರ್ಯ ರ ಸುಶ್ರಾವ್ಯವಾದ ಹಾಡುಗಾರಿಕೆ ಹಾಗೂ ಶ್ರವಣ್ ಕುಮಾರ್ ರ ಹಿತವಾದ ಮದ್ದಲೆಯ ನುಡಿತ ನನ್ನನ್ನು ದ್ವಾಪರ ಯಗಕ್ಕೊಯ್ದ ಕಾರಣ , ಮಾಧವನಾಗಿಯೇ , ಶ್ರೀಕೃಷ್ಣನ ಪಾತ್ರದ ಅರ್ಥ ಹೇಳಿದೆ . ಗುರುಪ್ರಸಾದರ ಕರ್ಣನ ಅರ್ಥವು ಅತ್ಯುತ್ತಮವಾಗಿದ್ದ ಕಾರಣ, ನನ್ನ ಅರ್ಥವೂ ಸುಲಲಿತವಾಗಿ ಸಾಗಿತೆಂದು ಅನಿಸಿತು . ಗುರುಪ್ರಸಾದರು ಅನುಭವಿ ಅರ್ಥಧಾರಿಗಳು ಹಾಗೂ ಅರ್ಥಗಾರಿಕೆಯಲ್ಲಿ ಫ್ರೌಢಿಮೆ ಸಾಧಿಸಿದವರಾದ ಕಾರಣ , ಶ್ರೀಕೃಷ್ಣ – ಕರ್ಣನ ಅರ್ಥವು ಸುಮಾರು 1.20 ಗಂಟೆಗಳಷ್ಟು ಸಾಗಿತು . ಗುರುಪ್ರಸಾದರಿಂದ ಹಲವಾರು ಅರ್ಥಗರ್ಭಿತ ವಾದಗಳು ಮಂಡಿಸಲ್ಪಟ್ಟಿತು . ಶ್ರೀಕೃಷ್ಣನಾಗಿ ನಾನು ( ಸರಿಯೋ , ತಪ್ಪೋ ಗೊತ್ತಿಲ್ಲ ‌) ಸಮರ್ಪಕ ಉತ್ತರ ನೀಡಿದೆ‌ ( ? ) ಎಂದನಿಸಿತು . ನಂತರ ಸುನೀಲರು ಕುಂತಿಯಾಗಿ ಅತ್ಯುತ್ತಮವಾಗಿ ನಿರ್ವಹಿಸಿದರು . ತುಂಬಾ ಭಾವನೆಯನ್ನು ಹೊಂದಿ ಮಾತಾಡಿದ ಸುನೀಲರಿಗೆ ಹವಾಮಾನವು ತೊಡಕಾಗಿ ಪರಿಣಮಿಸಿತು . ಸುನೀಲರಿದ್ದ ಊರಿನಲ್ಲಿ ಸಿಡಿಲು – ಮಳೆ ಆರಂಭವಾದ ಕಾರಣ , ಕುಂತಿ – ಕರ್ಣನ ಸಂಭಾಷಣೆಯ ಮೂರು ಪದ್ಯಗಳನ್ನು ಕಡಿತಗೊಳಿಸಿ ಮಂಗಲ ಹಾಡಿದಾಗ 8.15. ಆಗಿತ್ತು . ಅಂತೂ ಆನ್ಲೈನ್ ನ ಪ್ರಾರಂಭಿಕ ಕೂಟವು ಯಶಸ್ವಿಯಾಯಿತೆಂದು ಹೇಳಬಹುದು . ನಮ್ಮ ಸಂಘದ ಮಹಿಳಾ ಸದಸ್ಯರು ಹಾಗೂ ಅರ್ಥಧಾರಿ ಗಳಾಗಿ ರುವ ಡಾ. ಸುಲತಾ ಮೇಡಂ ರವರು ಕೊನೆಯವರೆಗೂ ಶ್ರೋತೃವಾಗಿ ನಮ್ಮ ಪ್ರಸ್ತುತಿಯನ್ನು ಮೂಡಬಿದಿರೆಯಿಂದಲೇ ಆಲಿಸುತ್ತಿದ್ದುದು ಉಲ್ಲೇಖನೀಯ . ಇದು ನಮಗೆ ಆತ್ಮಸ್ಥೈರ್ಯವನ್ನೂ ತಂದು ಕೊಟ್ಟಿತು . ( ಅವರನ್ನೂ ಕಾನ್ಫರೆನ್ಸ್ ಕರೆಗೆ ಶ್ರೋತೃವಾಗಿ ಒಳಪಟ್ಟಿಸಿದ್ದೆವು )

ಈ ಯಶಸ್ಸಿನ ಬೆನ್ನೇರಿ , ಮುಂದಿನ ದಿನಗಳಲ್ಲೂ ಆನ್ಲೈನ್ ತಾಳಮದ್ದಳೆ ಕೂಟ ಪ್ರಸ್ತುತಗೊಳಿಸುವಲ್ಲಿ ನಮ್ಮ ಸಂಘವು ಸಿದ್ಧವಾಗಿದೆ ಎಂಬುದೇ ಸಂತಸದ ವಿಷಯ. ಮುಂದಿನ ದಿನಗಳಲ್ಲಿ ನಮ್ಮ ಸಂಘದ ಇನ್ನಿತರ ಅನುಭವೀ ಕಲಾವಿದರೂ ಭಾಗವಹಿಸುವುದರ ಮೂಲಕ, ಈ ಆನ್ಲೈನ್ ತಾಳಮದ್ದಳೆ ಕೂಟ ವು ಪ್ರಸ್ತುತಗೊಳ್ಳಲಿದೆ.

  • ಎಂ.ಶಾಂತರಾಮ ಕುಡ್ವ, ಮೂಡಬಿದಿರೆ

error: Content is protected !!
Share This