ಸಾಮಾಗ್ರಿಗಳು
ಹಾಲು – ಅರ್ಧ ಲೀಟರ್, ಆಪಲ್- ಒಂದು, ಸಕ್ಕರೆ – ಒಂದು ಕಪ್, ಏಲಕ್ಕಿ – ನಾಲ್ಕೈದು ಎಸಳು, ಕೇಸರಿ- ನಾಲ್ಕೈದು ಎಸಳು, ಅಕ್ಕಿ ಹಿಟ್ಟು- ಎರಡು ಚಮಚ
ಮಾಡುವ ಕ್ರಮ
ಮೊದಲು ಸೇಬಿನ ಸಿಪ್ಪೆ ಸುಲಿದು, ಕತ್ತರಿಸಿ, ಬೇಯಿಸಿ. ಅದನ್ನು ಪಕ್ಕದಲ್ಲಿ ತಣಿಯಲು ಬಿಡಿ. ನಂತರ ಅರ್ಧ ಲೀಟರ್ ಹಾಲಲ್ಲಿ ಒಂದು ಕಪ್ ತಂಪಾದ ಹಾಲನ್ನು ಎತ್ತಿಡಿ. ಎತ್ತಿಟ್ಟ ಹಾಲಿಗೆ ಕೇಸರಿ ಹಾಕಿ ನೆನೆಯಲು ಬಿಡಿ. ಇನ್ನುಳಿದ ಹಾಲನ್ನು ಇಪ್ಪತ್ತಿರಿಂದ ಮೂವತ್ತು ನಿಮಿಷಗಳವರೆಗೆ ಕಾಸುತ್ತಾ ಇರಿ. ಅದು ಹಲವು ಬಾರಿ ಉಕ್ಕಲಿ. ಒಟ್ಟಿನಲ್ಲಿ ಹಾಲು ಮಂದವಾಗಬೇಕು. ಆಮೇಲೆ ಕೇಸರಿ ಹಾಕಿಟ್ಟ ಹಾಲಿಗೆ ಎರಡು ಚಮಚ ಅಕ್ಕಿ ಹಿಟ್ಟನ್ನು ಗಂಟುಗಳಾಗದಂತೆ ಕಲಸಿ. ಉಕ್ಕುತ್ತಿರುವ ಹಾಲಿಗೆ ಈ ಮಿಶ್ರಣವನ್ನು ಹಾಕಿ. ಏಲಕ್ಕಿಯನ್ನೂ ಕುಟ್ಟಿ ಪುಡಿ ಮಾಡಿ ಹಾಕಿ. ಒಲೆ ಆರಿಸಿ, ಸಕ್ಕರೆ ಹಾಕಿ (ಸಕ್ಕರೆ ಹಾಕಿದ ಮೇಲೂ ಒಲೆ ಆರಿಸಬಹುದು ಆದರೆ ಸಕ್ಕರೆ ಹಾಕಿದ ಮೇಲೆ ಜಾಸ್ತಿ ಹೊತ್ತು ಕುದಿಸುವುದು ಬೇಡ)
ಈಗ, ಬೆಂದು ತಣ್ಣಗಾದ ಆಪಲ್ ಹೋಳುಗಳನ್ನು ಕಡೆಯಿರಿ. ಕುದಿದ ಹಾಲು ಸ್ವಲ್ಪ ತಣ್ಣಗಾದ ಮೇಲೆ ಕಡೆದ ಸೇಬನ್ನು ಸೇರಿಸಿ, ಕಲಸಿ ಫ್ರಿಜ್ನಲ್ಲಿ ಇಡಿ. (ಬಿಸಿ ಇರುವಾಗಲೇ ಹಾಕಿದರೆ ಹಾಲು ಒಡೆದು ಹೋಗಬಹುದು) ತಂಪಾಗಿ ಕುಡಿದರೆ ರುಚಿ. ಬಿಸಿಯಾಗಿಯೂ ಇನ್ನೊಂದು ರೀತಿಯಲ್ಲಿ ಇದು ಖುಷಿ ಕೊಡುತ್ತದೆ.