ಮೂರು ತಲೆಮಾರಿನ ಯಕ್ಷಗಾನ ಪರಂಪರೆಗೆ ಗೌರವ, ರೂ. 5 ಲಕ್ಷದ ಪ್ರಶಸ್ತಿ

ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಹತ್ತು ಹಲವು ಸೇವಾ ಕೈಂಕರ್ಯಗಳನ್ನು ನಡೆಸುತ್ತಿರುವ ಮೈಸೂರಿನ ಡಿ.ರಮಾಬಾಯಿ ಚಾರಿಟೆಬಲ್‌ ಫೌಂಡೇಶನ್‌ ಮತ್ತು ಎಂ. ಗೋಪಿನಾಥ ಶೆಣೈ ಚಾರಿಟೆಬಲ್‌ ಟ್ರಸ್ಟ್‌ ಈ ಎರಡು ಸಂಸ್ಥೆಗಳು, ಕಳೆದ ಐದು ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಸಾಧಕರು ಮತ್ತು ಸಾಧಕ ಸಂಸ್ಥಗಳಿಗೆ ರಾಷ್ಟ್ರಮಟ್ಟದಲ್ಲಿ ರಮಾಗೋವಿಂದ ಪುರಸ್ಕಾರ ನೀಡುತ್ತಾ ಬಂದಿದ್ದು, ಕಳೆದ ಮೂರು ತಲೆಮಾರುಗಳ ಕೆರೆಮನೆ ಕುಟುಂಬದ ಯಕ್ಷಗಾನ ಪರಂಪರೆ ಮುಂದುವರಿಸಿಕೊಂಡು ಬಂದಿರುವ ಹೊನ್ನಾವರ ತಾಲೂಕಿನ ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಮೈಸೂರಿನ ರಮಾಗೋವಿಂದ ಪುರಸ್ಕಾರಕ್ಕೆ ಈ ವರ್ಷ ಆಯ್ಕೆ ಮಾಡಲಾಗಿದೆ.

ಜ. 5ರಂದು ಸಂಜೆ 6ಕ್ಕೆ ಮೈಸೂರು ಕಲಾಮಂದಿರದಲ್ಲಿ ಹಿರಿಯ ಸಂಗೀತ ವಿದ್ವಾಂಸ ವಿದ್ಯಾಭೂಷಣರಿಂದ ಚಾಲನೆ. ದೊರೆಯುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದ್ದು ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಶಿವಾನಂದ ಹೆಗಡೆ ಸ್ವೀಕರಿಸಲಿದ್ದಾರೆ.

1934ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಸ್ಥಾಪಿಸಿದ ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿಗೆ ಇದೀಗ 85ರ ಸಂಭ್ರಮ. ಭಾರತೀಯ ಪೌರಾಣಿಕ ಕತೆಗಳನ್ನು ಯಕ್ಷಗಾನ ಕಲೆಯ ಮೂಲಕ ಅದರ ಶುದ್ಧತೆ ಹಾಗೂ ಪರಂಪರೆ ಕೆಡದ ಹಾಗೆ ಪ್ರದರ್ಶಿಸುತ್ತಾ ಬಂದಿದೆ.

ಶಿವರಾಮ ಹೆಗಡೆಯ ನಂತರ ಕೆರೆಮನೆ ಶಂಭು ಹೆಗಡೆ ಹಾಗೂ ಈಗ ಮೂರನೇ ತಲೆಮಾರಿನ ಕೆರೆಮನೆ ಶಿವಾನಂದ ಹೆಗಡೆಯವರ ನೇತೃತ್ವದಲ್ಲಿ ಮಂಡಳಿ ಯಶಸ್ವೀ ಯಾಗಿ ಮುನ್ನಡೆದಿದೆ.

ಭಾರತವಲ್ಲದೆ ಇಂಗ್ಲಂಡ್‌, ಅಮೆರಿಕ, ಸೇನ್‌, ಬಹರೇನ್‌, ಫ್ರಾನ್ಸ್‌ ಚೀನಾ, ನೇಪಾಳ ಮುಂತಾದ ಕಡೆಗಳಲ್ಲಿ. ಸುಮಾರು 9000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕೆರೆಮನೆ ಮೇಳ ನೀಡಿದೆ.

ಯಕ್ಷಗಾನ ಶಿಕ್ಷಣ, ಕಲೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಹಾಗೂ ಕಲೆಯ ಪ್ರಸರಣದ ಮುಖ್ಯೋದ್ದೇಶಗಳನ್ನು ಹೊಂದಿರುವ ಮಂಡಳಿಯು ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿದ್ದು, 33 ವರ್ಷಗಳಿಂದ ಗುರುಕುಲ ಮಾದರಿಯಲ್ಲಿ ವಿದ್ಯಾರ್ಥಿ ವೇತನದೊಂದಿಗೆ ಯಕ್ಷಗಾನ ತರಬೇತಿ ನೀಡುತ್ತಿದೆ.

ಯಕ್ಷಗಾನ ಕಲೆಯ ಉಳಿವಿಗೆ ಹಾಗೂ ಅಭಿವೃದ್ಧಿಗೆ ಹಲವಾರು ಕಾರ್ಯಕ್ರ ಮಗಳನ್ನು ಹಮ್ಮಿಕೊಂಡಿದೆ, ದೇಶ- ವಿದೇಶಗಳಲ್ಲಿ ಯಕ್ಷ ಕಲೆಯ ಬಗ್ಗೆ ಅರಿವು ಮೂಡಿಸಲು ಮಂಡಳಿಯು ಶ್ರಮಿಸುತ್ತಿದೆ.

ಶಿವಾನಂದ ಹೆಗಡೆ ಪ್ರತಿವರ್ಷ ತಂದೆ ಹೆಸರಿನಲ್ಲಿ ರಾಷ್ಟ್ರೀಯ ನಾಟ್ಯೋತ್ಸವ ನಡೆಸುತ್ತಿದ್ದಾರೆ. ದೇಶದ ನಾನಾಭಾಗದ ಕಲಾ ಪ್ರಕಾರವನ್ನು ನೋಡಲು ಅವಕಾಶ ನೀಡಿದ ಶಿವಾನಂದ ಹೆಗಡೆಗೆ ಸಿಕ್ಕ ಪುರಸ್ಕಾರ ಕೆರೆಮನೆ ಪರಂಪರೆಗೆ ಸಂದ ಗೌರವವಾಗಿದೆ.

ಮೈಸೂರಿನಲ್ಲಿ ಮಂಗಳೂರು ಗಣೇಶ ಬೀಡಿ ಉದ್ಯಮ ಪ್ರಾರಂಭಿಸಿ, ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ ಬೆಳೆದ ಗೋವಿಂದರಾವ್‌ ಮತ್ತು ಅವರ ಪತ್ನಿ ರಮಾ ಇವರ ಹೆಸರಿನಲ್ಲಿ ಮಕ್ಕಳು ಪ್ರತಿಷ್ಠಾನ ಸ್ಥಾಪಿಸಿ ಕಳೆದ 5 ವರ್ಷಗಳಿಂದ ವಿವಿಧ ಕ್ಷೇತ್ರದ ಸಾಧಕರು ಮತ್ತು ಸಂಸ್ಥೆಗಳಿಗೆ ಪ್ರತಿಷ್ಠಾನ ಪ್ರಶಸಿ ನೀಡಿ ಗೌರವಿಸುತ್ತಿದೆ.

ಪುರಸ್ಕಾರದ ಜೊತೆ ರೂ. 5 ಲಕ್ಷ ನಗದು ಪ್ರದಾನ:

ಸಂಸ್ಥೆಗಳಿಗೆ ನೀಡುವ ಪುರಸ್ಕಾರವನ್ನು ಈ ಬಾರಿ ಅಂಧ ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವ ಗದಗ ಜಿಲ್ಲೆ ಹೊಳೆಆಲೂರಿನ ಜ್ಞಾನಸಿಂಧು ವಸತಿ ಶಾಲೆ ಮತ್ತು ಯಕ್ಷಗಾನ ಕಲೆಯ ಏಳ್ಗೆಗೆ ಕಳೆದ ಎಂಟೂವರೆ ದಶಕಗಳಿಂದ ಟೊಂಕಕಟ್ಟಿ ನಿಂತಿರುವ ಉತ್ತರ ಕನ್ನಡ ಜಿಲ್ಲೆ ಕೆರೆಮನೆಯ ಇಡುಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ನೀಡಲಾಗುತ್ತಿದೆ. ಈ ಎರಡೂ ಸಂಸ್ಥೆಗಳು ಪುರಸ್ಕಾರದ ಜೊತೆ ತಲಾ ರೂ. 5 ಲಕ್ಷ ನಗದನ್ನು ಪಡೆಯಲಿವೆ. ಮೆಡಿಸನ್‌ ಬಾಬಾ ಎಂದೇ ಹೆಸರಾಗಿರುವ ದೆಹಲಿಯ ಓಂಕಾರನಾಥ ಶರ್ಮಾ, ವೈದ್ಯಕೀಯ ಕ್ಷೇತ್ರದಲ್ಲಿ ಸಾರ್ಥಕ ಐವತ್ತು ವರ್ಷಗಳನ್ನು ಪೂರೈಸಿರುವ ಮೈಸೂರಿನ ಡಾ. ಕೆ.ಆರ್‌.ಕಾಮತ್‌ ಮತ್ತು ಅದ್ಭುತ ಸಂಗೀತ ಸಂಘಟಕ ಮೈಸೂರಿನ ಸಿ.ಆರ್‌. ಹಿಮಾಂಷು ಅವರು ತಲಾ ರೂ. 3 ಲಕ್ಷ ನಗದು ಮತ್ತು ಸ್ಥರಣಿಕೆಯನ್ನೊಳಗೊಂಡ ಪುರಸ್ಕಾರವನ್ನು ಸ್ಪೀಕರಿಸಲಿದ್ದಾರೆ.

error: Content is protected !!
Share This