ವೃತ್ತಿ, ಪ್ರವೃತ್ತಿ, ಸಂಸಾರ ಸಮತೋಲನದಲ್ಲಿ ಇರಬೇಕು. ಬರಹಗಳು ಕತ್ತಲಲ್ಲಿ ಬೆಳಕನ್ನು ಬಗೆಯುವ ಕೆಲಸವನ್ನು ಮಾಡುತ್ತವೆ. ಪುಸ್ತಕ ಓದಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಸುಘಾತ ಪುಸ್ತಕ ಲಯವಾದ್ಯದ ಆಳ, ಹರಹು, ಅರ್ಥ ಹಾಗೂ ವಿಷಯ ವ್ಯಾಪ್ತಿಯನ್ನು ಹೆಚ್ಚಾಗಿ ಹೊಂದಿ, ಕಲಾಮೌಲ್ಯವನ್ನು ವೃದ್ಧಿಸಿದೆ. ಹೋಗೋಣ ಜಂಬೂ ಸವಾರಿ ಪುಸ್ತಕ ಸರಳ ನಿರೂಪಣೆಯಿಂದ ಓದಿಸಿಕೊಂಡು ಹೋಗುತ್ತದೆ. ಲಘುಬರಹದಲ್ಲೂ ಜೀವನಪ್ರೀತಿ, ಜೀವನಮೌಲ್ಯಗಳನ್ನು ಇಲ್ಲಿ ಕಾಣಬಹುದು ಎಂದು ಕರ್ಣಾಟಕ ಬ್ಯಾಂಕ್ ಸಿಇಒ ಹಾಗೂ ಎಂ.ಡಿ ಮಹಾಬಲೇಶ್ವರ ಎಂ.ಎಸ್. ಅವರು ಹೇಳಿದರು.

ಅವರು ಜು.10 ರ ಸಂಜೆ ವಾಮಂಜೂರಿನ ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ , ಆನ್‌ಲೈನ್ ಮೂಲಕ ಪ್ರಸಾರವಾದ, ಚೆಂಡೆ ಮದ್ದಳೆಗಳ ನಾದಾನುಸಂಧಾನ  ಸುಘಾತ ಹಾಗೂ ಲಲಿತ ಪ್ರಬಂಧಗಳ ಸಂಕಲನ “ಹೋಗೋಣ ಜಂಬೂಸವಾರಿ” ಪುಸ್ತಕ ಅನಾವರಣಗೊಳಿಸಿ ಮಾತನಾಡಿದರು.

ಯಕ್ಷಗಾನ ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ಅವರಿಗೆ ಈಶಾವಾಸ್ಯ ಪುರಸ್ಕಾರ ನೀಡಲಾಯಿತು.

ಕರ್ಣಾಟಕ ಬ್ಯಾಂಕ್ ಅಧಿಕಾರಿ, ಲೇಖಕ, ಕಲಾವಿದ ಕೃಷ್ಣಪ್ರಕಾಶ್ ಉಳಿತ್ತಾಯ ಬರೆದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಕಾಶಿಸಿದ ಸುಘಾತ ಪುಸ್ತಕ ಹಾಗೂ ಕರ್ಣಾಟಕ ಬ್ಯಾಂಕ್ ಉದ್ಯೋಗಿ, ಲೇಖಕಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಬರೆದ, ಸಾಧನಾ ಪ್ರಕಾಶನ ಹೊರತಂದ ಹೋಗೋಣ ಜಂಬೂ ಸವಾರಿ ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು. 

ವಿಮರ್ಶಕ ಡಾ| ಎಂ. ಪ್ರಭಾಕರ ಜೋಷಿ ಅಧ್ಯಕ್ಷತೆ ವಹಿಸಿದ್ದರು. 

ಚಿಂತಕ ಲಕ್ಷ್ಮೀಶ ತೋಳ್ಪಾಡಿ ವಿಶೇಷ ಅಭ್ಯಾಗತರಾಗಿದ್ದರು.

ಕೃಷ್ಣಪ್ರಕಾಶ ಉಳಿತ್ತಾಯ ಸ್ವಾಗತಿಸಿ, ವಿಭಾ ಕೃಷ್ಣ ಪ್ರಕಾಶ ಉಳಿತ್ತಾಯ ವಂದಿಸಿದರು. ಪತ್ರಕರ್ತ ಲಕ್ಷ್ಮೀ ಮಚ್ಚಿನ ನಿರ್ವಹಿಸಿದರು. ಇದೇ ವೇಳೆ ಹಿರಿಯ ಕಲಾವಿದರ ಒಗ್ಗೂಡುವಿಕೆಯಲ್ಲಿ ಮಂಗಲ ಸೌಗಂಧಿಕಾ ಯಕ್ಷಗಾನ ತಾಳಮದ್ದಳೆ ನಡೆಯಿತು.

ಉಳಿತ್ತಾಯ ದಂಪತಿಗಳ ಈ ವಿಶೇಷ ಸಾಧನೆ ಬಗ್ಗೆ ಅರ್ಥಧಾರಿಗಳಾದ ಹರೀಶ ಬಳಂತಿಮುಗರು ಅಭಿಪ್ರಾಯ:
ಯಕ್ಷಗಾನದಲ್ಲಿ ಹಿಮ್ಮೇಳವಾದಕರು ಅನೇಕ ಮಂದಿ ಆಗಿಹೋಗಿದ್ದಾರೆ.ಈಗಲೂ ಅನೇಕ ಮಂದಿ ಪ್ರಸಿದ್ಧರಾಗಿದ್ದಾರೆ.ಒಬ್ಬೊಬ್ಬರ ಶೈಲಿ ಒಂದೊಂದು. ಒಬ್ಬೊಬ್ಬರ ವೈಶಿಷ್ಟ್ಯ ಒಂದೊಂದು.

ವರ್ತಮಾನದ ಮದ್ದಳೆವಾದಕರಲ್ಲಿ ನಾನು ತುಂಬಾ ಇಷ್ಟಪಡುವ ಮದ್ದಳೆಗಾರರಲ್ಲಿ ಮೊದಲ ಹೆಸರು ಕೃಷ್ಣಪ್ರಕಾಶ ಉಳಿತ್ತಾಯರದ್ದು. ಹಿರಿಯ ಭಾಗವತರಿಂದ ತೊಡಗಿ ಇತ್ತೀಚಿನ ಉದಯೋನ್ಮುಖ ಭಾಗವತರ ತನಕ ಎಲ್ಲರಿಗೂ ಮದ್ದಳೆಗಾರರಾಗಿ ಒದಗುವ ಉಳಿತ್ತಾಯರು ಭಾಗವತರ ಮನೋಧರ್ಮವನ್ನು ಅರಿತು ನುಡಿಸಬಲ್ಲ ಸೂಕ್ಷ್ಮಗ್ರಾಹಿ.

ತಾಳಕ್ಕೆ ನುಡಿಸುವುದು ಮಾತ್ರವಲ್ಲ ಸಾಹಿತ್ಯಕ್ಕೆ ಬೇಕಾದಂತೆ ಅಷ್ಟೇ ಅಲ್ಲ ರಸಭಾವವನ್ನು ಅರಿತು ನುಡಿಸಬಲ್ಲ ಜಾಣ್ಮೆ ಉಳಿತ್ತಾಯರಲ್ಲಿದೆ. ಸುಮ್ಮನೇ ಲೊಟ್ಟೆಪಟ್ಟಾಂಗ ಮಾಡುವ ಜಾಯಮಾನದವರೇ ಅಲ್ಲ. ಸದಾ ಅಧ್ಯಯನನಿರತ, ಸಂಭಾಷಣೆ ಮಾಡುವಾಗಲೂ ಸಾಹಿತ್ಯಕೃತಿಗಳ ಕುರಿತೋ ಯಕ್ಷಗಾನದ ಕುರಿತೋ ಮಾತಾಡುತ್ತಾ “ಪರಸ್ಪರ ಭಾವಯಂತಂ”ಸ್ವಭಾವದವರು.

ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಬಿಡುವಿನ ವೇಳೆಯಲ್ಲಿ ಕಲಾವಿದನಾಗಿ ಲೇಖಕನಾಗಿ ಒಬ್ಬ ಗುಣಗ್ರಾಹಿಯಾಗಿ ಬೆಳೆಯುತ್ತಾ ಇರುವವರು. ಪ್ರಾಯದಲ್ಲಿ ನನಗಿಂತ ಕಿರಿಯರಾದರೂ ವಿದ್ಯೆಯಲ್ಲಿ ಅಧ್ಯಯನದಲ್ಲಿ ನನಗಿಂತ ಎಷ್ಟೋ ಹಿರಿಯರಾದ ಇವರ ಬೆಳವಣಿಗೆಯನ್ನು ಇಪ್ಪತ್ತು ವರ್ಷಗಳಿಂದ ನೋಡುತ್ತಿದ್ದೇನೆ. ಸಂತೋಷಗೊಂಡಿದ್ದೇನೆ. ಹೆಮ್ಮೆಪಟ್ಟಿದ್ದೇನೆ. ಕಳೆದವರ್ಷ ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿಪುರಸ್ಕೃತರಾದ ಇವರ “ಸುಘಾತ” ಕೃತಿ ಬಿಡುಗಡೆಯಾಗುತ್ತಿದೆ. ಇನ್ನೂ ಅನೇಕ ಸಾಹಿತ್ಯಕೃತಿಗಳು ಇವರಿಂದ ರಚಿಸಲ್ಪಡಲಿ. ಕಲಾಕ್ಷೇತ್ರದಲ್ಲೂ ಸಾಹಿತ್ಯಕ್ಷೇತ್ರದಲ್ಲೂ ಇವರು ಇನ್ನಷ್ಟು ಖ್ಯಾತರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.

ಗಂಡ ಹೆಂಡತಿ ಸಂಸಾರ ರಥದ ಎರಡು ಚಕ್ರಗಳಂತೆ. ಪರಸ್ಪರ ಮನವರಿತು ನಡೆಯಬೇಕು ಎಂಬ ಮಾತಿದ್ದರೂ ಅಂಥಾ ಸಂಸಾರಗಳು ಅಪರೂಪ. ಆದರೆ ಕೃಷ್ಣಪ್ರಕಾಶ ಉಳಿತ್ತಾಯರು ಮತ್ತು ವಿಭಾ ಉಳಿತ್ತಾಯರದ್ದು ಹಾಲುಜೇನು ಬೆರೆತಂತ ದಾಂಪತ್ಯ. ಸಹೋದರಿ ವಿಭಾ ಅರ್ಥಧಾರಿಯೂ ಹೌದು. ಉತ್ತಮ ವಿಮರ್ಶಕಿ. ಜೊತೆಗೆ ಅತ್ಯುತ್ತಮ ಲೇಖಕಿ. ಯಾವತ್ತೂ ಗಂಡನಿಗೆ ಹರಟೆ ಮಾಡದ ಅವರು ಬರಹದಲ್ಲಿ “ಹರಟೆ” ಅಥವಾ ಹಾಸ್ಯಲೇಖನಗಳಲ್ಲಿ ಒಳ್ಳೆಯ ಸಿದ್ಧಿಯನ್ನು ಪಡೆದವರು.”ಜಂಬೂಸವಾರಿ” ಎನ್ನುವುದು ವೈಭವದ ಸಂಭ್ರಮದ ಸಂತೋಷದ ಸಂಕೇತ.
ಇವರ “ಹೋಗೋಣ ಬಾ ಜಂಬೂಸವಾರಿ” ಕೃತಿಯ ಬಿಡುಗಡೆಯೂ ತುಂಬಾ ಮುದ ನೀಡುವ ವಿಷಯ. ಈ ದಂಪತಿಗಳ ಜೀವನ ಪಯಣ ಶಾಶ್ವತವಾದ ಜಂಬೂಸವಾರಿಯೇ ಆಗಲಿ ಎಂದು ಮನದುಂಬಿ ಹಾರೈಸುವೆ.– ಹರೀಶ ಬಳಂತಿಮುಗರು

error: Content is protected !!
Share This