ಯಕ್ಷಗಾನ ಕಲಾರಂಗವು ‘ಉದಯವಾಣಿ’ಯಿಂದ ಪಡೆದ ಪ್ರಯೋಜನ ಅಪಾರ. ಉದಯವಾಣಿಯ ಸಂಸ್ಥಾಪಕ ತೋನ್ಸೆ ಮೋಹನದಾಸ ಪೈಯವರ ಋಣಭಾರವೂ ಸಂಸ್ಥೆಯ ಮೇಲಿತ್ತು. ಹಾಗಾಗಿ ಪೈಯವರನ್ನು ಕರೆದು ಗೌರವಿಸೋಣ ಎಂದು ನಿರ್ಧರಿಸಿದೆವು. ನಾವೇ ಅವರ ಮನೆಗೆ ತೆರಳಿ ಗೌರವಿಸುವುದೋ ಅಥವಾ ಅವರನ್ನೇ ನಮ್ಮ ಸಂಸ್ಥೆಗೆ ಆಹ್ವಾನಿಸುವುದೋ ಎಂಬ ಯೋಚನೆಯಲ್ಲಿ ಬಿದ್ದೆವು. ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರಲ್ಲ. ವೇದಿಕೆ ಏರುವುದು ಬಹಳ ವಿರಳ. ಆದರೂ, ಒಂದು ಮಾತು ಕೇಳಿದರೆ ಹೇಗೆ ಅಂತ ಯೋಚಿಸಿ ಅವರ ವಾಹನಚಾಲಕರಾಗಿದ್ದ ಸೋಮಪ್ಪ ದೇವಾಡಿಗರಲ್ಲಿ ವಿಚಾರವನ್ನು ಪ್ರಸ್ತಾಪಿಸಿದೆವು.

ಸೋಮಪ್ಪ ದೇವಾಡಿಗರು ಕಲಾರಂಗದ ಹಿತೈಷಿಗಳಲ್ಲಿ ಒಬ್ಬರು. ‘ಧಣಿಗಳಿಗೆ ಯಕ್ಷಗಾನ ಕಲಾರಂಗದ ಬಗ್ಗೆ ಒಳ್ಳೆಯ ಅಭಿಮಾನವಿದೆ, ಒಮ್ಮೆ ಕೇಳಿ ನೋಡಿ’ ಎಂದರು. ನಾನು ಒಂದು ಸಂಜೆ ಮೋಹನದಾಸ ಪೈಯವರ ಕಚೇರಿಗೆ ಫೋನ್ ಮಾಡಿದೆ. ‘ನಮ್ಮದು ಸಣ್ಣ ಕಚೇರಿ. ನೀವು ಒಮ್ಮೆ ಬಂದು ನಮ್ಮ ಕಾರ್ಯಚಟುವಟಿಕೆಗಳನ್ನು ನೋಡಬೇಕು ಸರ್’ ಎಂದೆ ವಿನಮ್ರನಾಗಿ. ಅವರು ಒಂದು ಕ್ಷಣ ಯೋಚಿಸಿ, ‘ಸಭಾ ಕಾರ್ಯಕ್ರಮ ಎಲ್ಲ ಏನೂ ಬೇಡ, ಸುಮ್ಮನೆ ಬಂದು ಹೋಗುತ್ತೇನೆ’ ಎಂದರು. ನಿಗದಿಯಾದ ದಿನದಂದು ಸಂಜೆ ನಾವು ನಮ್ಮ ಕಚೇರಿಯ ಮುಂದೆ ಕಾದು ನಿಂತೆವು. ಹೇಳಿದ ಸಮಯಕ್ಕೆ ಕಾರು ಬಂದೇ ಬಿಟ್ಟಿತು. ನಮ್ಮದು ಮೇಲ್ಮಹಡಿಯಲ್ಲಿರುವ ಕಚೇರಿ, ಅವರಿಗೆ ಹತ್ತಲು ಕಷ್ಟವಾಗಬಹುದೆಂದು ಆಧಾರಕ್ಕೆ ಕೈಚಾಚಿದೆವು. ‘ಏನೂ ಬೇಡ, ನಾನೇ ಹತ್ತುತ್ತೇನೆ’ ಎಂದು ಸರಸರನೆ ಮೆಟ್ಟಿಲೇರಿ ಕಚೇರಿಯೊಳಗೆ ಬಂದರು. ಕುರ್ಚಿಯಲ್ಲಿ ಕುಳಿತರು. ನಮ್ಮ ಮಾತನ್ನೆಲ್ಲಾ ಕೇಳಿದರು. ನಾವು ಫಲಪುಷ್ಪ, ಹಾರ, ಪೀತಾಂಬರಾದಿಗಳನ್ನು ನೀಡಿ ಗೌರವಿಸಿದೆವು. ತುಂಬಾ ಹೊತ್ತು ಲೋಕಾಭಿರಾಮವಾಗಿ ಮಾತನಾಡಿದರು. ‘ಹೊರಡುವ’ ಎಂದು ನಿಂತರು.

`‘ಕಲಾವಿದರಿಗೆ ಸಹಾಯ ಮಾಡುವ ವಿಚಾರ ಒಳ್ಳೆಯದೇ. ಆದರೆ, ಎಷ್ಟು ಸಮಯ ಹೀಗೆ ಮಾಡುತ್ತೀರಿ? ಕಲಾವಿದರಿಗೆ ಸ್ವಾಭಿಮಾನದ, ಸ್ವಾವಲಂಬನೆಯ ಬದುಕು ಬದುಕುವುದಕ್ಕೆ ಕಲಿಸಬೇಕು’ ಹೊರಡುವಾಗ ಕಿವಿಮಾತು ಹೇಳಿದರು. ಮತ್ತೆ ನಾನು ಇಲ್ಲಿಗೆ ಬಂದು ಹೋದ ಸುದ್ದಿ ನಾಳೆ ಉದಯವಾಣಿಯಲ್ಲಿ ಬರುತ್ತದೆ ಎಂದು ಭಾವಿಸಬೇಡಿ. ನಾನು ಬಂದು ಹೋದುದರಿಂದ ನಿಮಗೆ ಏನೂ ಪ್ರಯೋಜನವಿಲ್ಲ. ನನ್ನ ಸುದ್ದಿ ಉದಯವಾಣಿಯಲ್ಲಿ ಹಾಕಬಾರದೆಂದು ಹೇಳಿದ್ದೇನೆ’ ಎಂದರು. ನಾನು ವಿನಯದಿಂದ, ‘ಸರ್, ನೀವು ನಮ್ಮ ಕಚೇರಿಗೆ ಬಂದಿರುವುದೇ ನಮ್ಮ ಭಾಗ್ಯ. ಉದಯವಾಣಿಯಿಂದ ನಾವು ಪಡೆದದ್ದು ಅಪಾರ. ನಿಮ್ಮ ಋಣವನ್ನು ತೀರಿಸಲು ಸಾಧ್ಯವಿಲ್ಲ. ನಿಮಗೆ ನಮ್ಮ ಪಾಲಿನ ಸಣ್ಣ ಗೌರವ ನೀಡಲು ನಾವು ಆಹ್ವಾನಿಸಿದೆವು, ಬೇರೆ ಯಾವ ಅಪೇಕ್ಷೆಯೂ ಇಲ್ಲ ಸರ್’ ಎಂದೆ ನಾನು.

ಕಾರಿನವರೆಗೂ ಹೋಗಿ ಬೀಳ್ಕೊಂಡು ಬಂದೆವು. ಅವರನ್ನು ಗೌರವಿಸಿದ ಧನ್ಯತೆ ಮಾತ್ರ ನಮಗಿತ್ತು. ಉಳಿದಂತೆ, ನಾವು ಅವರಿಂದ ಏನನ್ನೂ ನಿರೀಕ್ಷಿಸಿರಲಿಲ್ಲ. ಅವರು ಬಂದು ಹೋದ ಸುದ್ದಿಯನ್ನು ಉದಯವಾಣಿಗೂ ಕಳುಹಿಸಲು ಕೂಡ ಸಾಧ್ಯವಿರಲಿಲ್ಲ. ಅವರು ನಮ್ಮ ಕಚೇರಿಗೆ ಬಂದು ಹೋಗಿದ್ದಾರೆ ಎಂಬುದನ್ನು ಯಾರೂ ನಂಬಲು ಸಾಧ್ಯವಿರಲಿಲ್ಲ. ಒಂದೆರಡು ದಿನಗಳಲ್ಲಿ ನಾವು ಆ ಘಟನೆ ಮರವೆಗೆ ಸರಿಯುತ್ತಿತ್ತು.

ಇದ್ದಕ್ಕಿದ್ದಂತೆ ನಮ್ಮ ಕಚೇರಿಗೆ ಟಿ. ಎಂ. ಎ. ಪೈ ಫೌಂಡೇಶನ್ನಿಂದ ಒಂದು ಫೋನ್ ಕರೆ ಬಂತು. ‘ನಮ್ಮ ಬಾಸ್ ನಿಮಗೆ ಒಂದು ಲಕ್ಷ ರೂಪಾಯಿ ಚೆಕ್ ಕೊಡಲು ಹೇಳಿದ್ದಾರೆ. ಚೆಕ್ ರೆಡಿ ಇದೆ. ಬಂದು ತೆಗೆದುಕೊಂಡು ಹೋಗಿ’ ನನಗೆ ಅಚ್ಚರಿ ಎನಿಸಿತು. ನಾನು ತಕ್ಷಣ ಹೋಗಿ ಚೆಕ್ ತೆಗೆದುಕೊಂಡು ಬಂದೆ. ಆಮೇಲೆ, ಕೃತಜ್ಞತೆ ಹೇಳಲು ಮೋಹನದಾಸ ಪೈಯವರಿಗೆ ಕರೆ ಮಾಡಿದೆ. ‘ತುಂಬ ಉಪಕಾರವಾಯಿತು, ಕಲಾರಂಗದ ಪರವಾಗಿ ಧನ್ಯವಾದಗಳು ಸರ್’ ಎಂದೆ. ‘ಯಾರಲ್ಲೂ ಹೇಳಬೇಡಿ. ಪ್ರಚಾರ-ಗಿಚಾರ ಎಲ್ಲ ಮಾಡುವುದಕ್ಕೆ ಹೋಗಬೇಡಿ’ ಎಂದರು ಆದೇಶದ ಧಾಟಿಯಲ್ಲಿ. ‘ನಾನು ಆಯ್ತು ಸರ್’ಎಂದೆ. ಇದು ಮೋಹನದಾಸ ಪೈಗಳ ವರಸೆ ! ಹಾಗೆ ನೋಡಿದರೆ ಯಕ್ಷಗಾನ ಕಲಾರಂಗವು ಅವರಿಂದ ಉಪಕೃತರಾದ ಮೌಲ್ಯವನ್ನು ಲೆಕ್ಕಹಾಕಿದರೆ ಕೆಲವು ಲಕ್ಷ ರೂಪಾಯಿಗಳಾದಾವು !

ಜುಲಾಯಿ 31, 2022ರಂದು ತೋನ್ಸೆ ಮೋಹನದಾಸ ಪೈಯವರು ನಿಧನರಾಗಿದ್ದಾರೆ. ಯಕ್ಷಗಾನ ಕಲಾರಂಗ (ರಿ.) ಸಂಸ್ಥೆಯ ಪ್ರಾತಃಸ್ಮರಣೀಯರಲ್ಲಿ ಅವರೂ ಒಬ್ಬರು. ಯಕ್ಷಗಾನ ಕಲಾರಂಗ ಮಾತ್ರವಲ್ಲ, ಇಡೀ ಯಕ್ಷಗಾನ ಕ್ಷೇತ್ರ ಸದಾಕಾಲ ಸ್ಮರಿಸಬೇಕಾದ ವ್ಯಕ್ತಿ ಅವರು. ಮೋಹನದಾಸ ಪೈಗಳ ಪರ್ವಸಂಸ್ಕಾರವೇ ಅಂಥಹದ್ದಾಗಿತ್ತು. ಅವರ ತೀರ್ಥರೂಪರಾದ ತೋನ್ಸೆ ಮಾಧವ ಪೈಗಳು ‘ಯಕ್ಷಗಾನ ಕೇಂದ್ರ’ವನ್ನು ಸ್ಥಾಪಿಸಿದವರು. ಅವರು ಮಣಿಪಾಲ ಸಂಸ್ಥೆಗಳ ಒಡೆಯರಾದರೂ ಸಂಜೆಯ ಬಿಡುವಿನಲ್ಲಿ ಮಟಪಾಡಿ ವೀರಭದ್ರ ನಾಯಕರಂಥ ಕಲಾವಿದರೊಂದಿಗೆ ಸಹಪಂಕ್ತಿಯ ಸಲ್ಲಾಪ ನಡೆಸುತ್ತಿದ್ದರು.

ಇವತ್ತು ಯಕ್ಷಗಾನ ಕಲೆಯು ಜನಪ್ರಿಯತೆಯ ತುತ್ತ ತುದಿಯನ್ನು ತಲುಪುವಲ್ಲಿ ‘ಉದಯವಾಣಿ’ಯ ಕೊಡುಗೆ ದೊಡ್ಡದು ಎಂಬುದು ನಮಗೆಲ್ಲ ತಿಳಿದಿದೆ. ‘ಉದಯವಾಣಿ’ಯಲ್ಲಿ ಬರುವ ಯಕ್ಷಗಾನ ಕಾರ್ಯಕ್ರಮಗಳ ಜಾಹೀರಾತನ್ನು ನೋಡಿ ಸಂಭ್ರಮಿಸುವ ಸಾವಿರಾರು ಮಂದಿ ಇದ್ದಾರೆ. ‘ಆಟದ ಜಾಹಿರಾತು’ ನೋಡಲೆಂದೇ ಪತ್ರಿಕೆಯನ್ನು ಖರೀದಿಸುವವರಿದ್ದಾರೆ. ಅಂಥಹ ಜಾಹೀರಾತು ಪ್ರಕಟಣೆಯ ಪರಂಪರೆಯನ್ನು ಆರಂಭಿಸಿದವರು ಮೋಹನದಾಸ ಪೈಗಳು.

‘ಯಕ್ಷಗಾನ ಏನೂ ಲಾಭದಾಯಕ ವ್ಯವಹಾರ ಅಲ್ಲ, ಅವರನ್ನು ನಾವು ಪ್ರೋತ್ಸಾಹಿಸಬೇಕು’ ಎಂದು ಯಕ್ಷಗಾನ ಪ್ರರ್ಶನಗಳ ಜಾಹೀರಾತಿಗೆ ಕಡಿಮೆ ದರವನ್ನು ಅವರು ನಿಗದಿಗೊಳಿಸಿದರು. ಕಾಸರಗೋಡಿನಿಂದ ಕಾರವಾರದವರೆಗೆ ಕರೆನಾಡಿನಲ್ಲಿಯೂ ಮಲೆನಾಡಿನಲ್ಲಿಯೂ ಯಕ್ಷಗಾನದ ಪ್ರಸರಣಕ್ಕೆ ಮಾಧ್ಯಮವನ್ನು ಒದಗಿಸಿದರು. ವಾಟ್ಸಾಪ್, ಫೇಸ್ಬುಕ್ ಗಳಿಲ್ಲದ ಕಾಲದಲ್ಲಿ ಯಕ್ಷಗಾನದ ಪ್ರಚಾರಕ್ಕೆ ‘ಉದಯವಾಣಿ’ಯೇ ವಾಹಕವಾಗಿತ್ತು. ಯಕ್ಷಗಾನ ಮಾತ್ರವಲ್ಲ , ನಾಟಕ, ಸಾಹಿತ್ಯಾದಿ ಯಾವುದೇ ಕಾರ್ಯಕ್ರಮಗಳ ಜಾಹೀರಾತುಗಳು ಕರ್ಷಿಯಲ್ ದರಗಳಿಂದ ಹೊರತಾಗಿದ್ದವು. ಎನ್. ಗುರುರಾಜ್, ಎ. ಈಶ್ವರಯ್ಯ ಮೊದಲಾದವರನ್ನು ಮುಂದಿಟ್ಟುಕೊಂಡು ಲಲಿತಕಲೆಗಳಿಗಾಗಿ ವಾರಕ್ಕೊಮ್ಮೆ ಪ್ರತ್ಯೇಕ ಪುಟವನ್ನು ಮೀಸಲಿರಿಸಿದರು. ಕಲಾವಿರ್ಶನದ ಪರಂಪರೆಯೊಂದು ಕರಾವಳಿಯ ಕಲಾವಲಯದಲ್ಲಿ ಅರಳಲು ಕಾರಣರಾದರು.

‘ಉದಯವಾಣಿ’ ಪತ್ರಿಕೆ ತನ್ನ ಇಪ್ಪತ್ತನೆಯ ಹುಟ್ಟು ಹಬ್ಬವನ್ನು ಆಚರಿಸುವಾಗ ವೈಭವದ ಯಕ್ಷಗಾನ ಪ್ರರ್ಶನಗಳನ್ನು ಆಯೋಜಿಸಿದರು. ಜಿ. ಆರ್. ಕಾಳಿಂಗ ನಾವಡ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕಡತೋಕ ಮಂಜುನಾಥ ಭಾಗವತರಂಥ ಹಿರಿಯ ಕಲಾವಿದರನ್ನು ಗೌರವಿಸಿದರು. ಹಾಸ್ಯಗಾರರನ್ನೇ ಕಲೆಹಾಕಿ ‘ಬೇಡರ ಕಣ್ಣಪ್ಪ’ ಪ್ರಸಂಗವನ್ನು ವಿಶಿಷ್ಟವಾಗಿ ಪ್ರಸ್ತುತಿ ಪಡಿಸಲು ಕಾರಣರಾದರು. ವಿಜಯನಾಥ ಶೆಣೈಯವರ ‘ಯಕ್ಷ ಮಂಡಲ’ವೂ ಸೇರಿದಂತೆ ಸಂಗೀತ ಸಭಾ, ಹಸ್ತಶಿಲ್ಪ, ರೈಟರ್ಸ್ ಕ್ಲಬ್ ಗಳಂಥ ಸಂಸ್ಥೆಗಳಿಗೆ ಬೆಂಬಲವಾಗಿ ನಿಂತರು. ಯಕ್ಷಗಾನ ಮಾತ್ರವಲ್ಲ, ಸ್ವಾತಂತ್ರ್ಯೋತ್ತರ ಸಂದರ್ಭದ ಚಾರಿತ್ರಿಕ ಮಹತ್ತ್ವದ ಸುಮಾರು ಮೂರು ದಶಕಗಳ ಅವಧಿಯಲ್ಲಿ ಕರಾವಳಿಯ ಸಮಗ್ರ ಸಾಂಸ್ಕೃತಿಕ ಬೆಳವಣಿಗೆಗೆ ‘ಉದಯವಾಣಿ’ಯ ಕೊಡುಗೆ ದೊಡ್ಡದು. ‘ಉದಯವಾಣಿ’ ಹಿಂದೆ ಮೋಹನದಾಸ ಪೈಯವರಿದ್ದರು. ವಟವೃಕ್ಷವೊಂದು ಉರುಳಿದಾಗ ಅದರ ನೆರಳಿನಲ್ಲಿ ಆಸರೆ ಪಡೆಯುತ್ತಿದ್ದ ಎಲ್ಲರಿಗೂ ಬಿರುಬಿಸಿಲಿನಂಥ ಅನಾಥಪ್ರಜ್ಞೆಯೊಂದು ಕಾಡುತ್ತದೆ.

ತೋನ್ಸೆ ಮೋಹನದಾಸ ಪೈಯವರ ದಿವ್ಯಚೇತನಕ್ಕೆ ಯಕ್ಷಗಾನ ಕಲಾರಂಗ ಶ್ರದ್ಧಾಂಜಲಿಯನ್ನು ಸರ್ಪಿಸುತ್ತದೆ.

ಮುರಲಿ ಕಡೆಕಾರ್, ಕಾರ್ಯದರ್ಶಿ, ಯಕ್ಷಗಾನ ಕಲಾರಂಗ(ರಿ), ಉಡುಪಿ.

error: Content is protected !!
Share This