ಪುಟ್ಟ ಮನೆಯೊಳಗೆ ನಡೆಯುವ ಹಳತು ಹೊಸತರ ಸುಗಮ ಸಂಗಮವು ವಿಸ್ತಾರ ಜಗತ್ತಿನ ಕೈಗನ್ನಡಿ. ಈ ದೃಷ್ಟಿಕೋನವಿಲ್ಲದೇ ಇದ್ದರೆ ಬೇರು ಕಡಿದ ಮರದ ಹಾಗೆ; ಅಥವಾ ಚಿಗುರೇ ಮೂಡದ ಮರದ ಹಾಗೆ, ಎರಡೂ ಜೀವಾಂತವೇ.

  • ರಾಧಾಕೃಷ್ಣಕಲ್ಚಾರ್

ಹಳತು ಎಂಬುದರಿಂದ ಎಲ್ಲವೂ ಸ್ವೀಕಾರ್ಯವಲ್ಲ. ಹೊಸತೆಲ್ಲವೂ ನಿರಾಕರಣೀಯವೂ ಅಲ್ಲ. ಪ್ರಾಜ್ಞರು ಪರಿಶೀಲಿಸಿ ಸ್ವೀಕರಿಸುತ್ತಾರೆ; ಮೂಢರು ಅನ್ಯರು ಹೇಳಿದ್ದನ್ನು ಅನುಸರಿಸುತ್ತಾರೆ’ ಎಂಬುದು ಕವಿ ಕಾಳಿದಾಸನ ಮಾತು. (‘ಪುರಾಣಮಿತ್ಯೇವ ನ ಸಾಧು..)

ಕಲೆಯ ನೆಲೆಯಿಂದ ನೋಡಿದಾಗ ಆಧುನಿಕ ಯುಗದ ತಂತ್ರಜ್ಞಾನ ಸೌಲಭ್ಯಗಳು ತಾಳಮದ್ದಲೆಯಂತಹ ಪ್ರಾಚೀನ ರಂಗಭೂಮಿಗೆ ಎಷ್ಟು ಮತ್ತು ಹೇಗೆ ಉಪಯುಕ್ತ ಎಂಬಿತ್ಯಾದಿ ಪ್ರಶ್ನೆಗಳು ಆಗೀಗ ಕಾಡುತ್ತಿದ್ದವು. ಇತ್ತೀಚಿನ ಗೃಹಬಂಧನದ ಕಾಲದ ಕೆಲವು ಅನುಭವಗಳು ಒಂದು ರೀತಿ ಈ ಪ್ರಶ್ನೆಗಳಿಗೆ ಉತ್ತರವಾಗಿ ಒದಗಿವೆ. ಕೆಲವು ದಿನಗಳ ಹಿಂದೆ ಪುತ್ತೂರಿನ ತೆರಿಗೆ ಸಲಹೆಗಾರ ಅನಂತನಾರಾಯಣ ಅವರು ದೂರವಾಣಿಯಲ್ಲಿ ಮಾತನಾಡುತ್ತ ‘ಒಂದು ಆನ್‌ಲೈನ್ ತಾಳಮದ್ದಲೆ ಮಾಡೋಣವೆ?’ ಎಂದಾಗ “ಸಾಧ್ಯವೆ?’ ಎಂಬ ಸಂದೇಹ ಬಂತು. ಸಂದೇಹ ನಿವಾರಣೆಗೆ ಪ್ರಯೋಗವೇ ದಾರಿಯಷ್ಟೆ? ಹೊಸತನದ ಹಂಬಲದಿಂದ ನಾನು ಒಪ್ಪಿದೆ.

ಅದರ ತಾಂತ್ರಿಕ ವಿವರಗಳ ಪೂರ್ಣ ಅರಿವು ನನಗಿರಲಿಲ್ಲ. ಕಾನ್ಸರೆನ್ಸ್ ಕಾಲ್ ಮೂಲಕ ಮಾಡಬಹುದು ಎಂಬ ಅರಿವು ಮಾತ್ರವಿತ್ತು. ಎರಡೇ ದಿನಗಳಲ್ಲಿ ಇನ್ನಿಬ್ಬರು ಉತ್ಸಾಹೀ ಹವ್ಯಾಸಿಗಳನ್ನು ಜತೆ ಸೇರಿಕೊಂಡರು. ಒಬ್ಬರು ಗುಡ್ಡಪ್ಪ ಬಲ್ಯ, ಇನ್ನೊಬ್ಬರು ಭಾಸ್ಕರ ಶೆಟ್ಟಿ ಪದ್ಯಕ್ಕೆ ಕಷ್ಟವಿರಲಿಲ್ಲ ಪುತ್ತೂರು ರಮೇಶ ಭಟ್ಟರು ಹಾಡಿದ ಪದ್ಯಗಳ ಸಂಗ್ರಹ ಯಥೇಚ್ಛ ಲಭ್ಯವಿತ್ತು. ಅವರೊಂದಿಗೆ ಮಾತನಾಡಿ ಮತ್ತೆ ಅನಂತ ನನ್ನನ್ನು ಸಂಪರ್ಕಿಸುವಾಗ ನನಗಿದು ಮರತೇ ಹೋಗಿತ್ತು. ಇಷ್ಟೆಲ್ಲಾ ಆಗಿದೆ. ನೀವು ತಯಾರಲ್ವ ?’

ನನಗೆ ತಪ್ಪಿಸಿಕೊಳ್ಳುವ ದಾರಿ ಇರಲಿಲ್ಲ. ಸಣ್ಣ ಆತಂಕವೂ ಹುಟ್ಟಿ ಕೊಂಡಿತು. ಆದರೂ ಹುಂ ಅಂದೆ.’ಹೇಗೆ ಮಾಡುವುದು?’ ಅವನೇ ವಿವರ ಹೇಳಿದ,’ಮೂವರೇ ಅರ್ಥಧಾರಿಗಳು, ಶ್ರೀಕೃಷ್ಣ ಸಂಧಾನ ಪ್ರಸಂಗ.ನಿಮ್ಮ ಕೃಷ್ಣ ಬಲ್ಯರ ಕೌರವ , ಭಾಸ್ಕರ ಮಾಸ್ಟ ವಿದುರ.ರಮೇಶಣ್ಣ ಹಿಂದೆ ಹೇಳಿದ ಪದ್ಯಗಳ ಆಡಿಯೋ ರಡಿ ಉಂಟು. ವಾಟ್ಸಾಪ್ ಮಾಡ್ತೇನೆ” ಅದೂ ಆಯ್ತು.ಪದ್ಯ ಕೇಳಿದಾಗ, ಅರ್ಥಧಾರಿಗೆ ಹುಮ್ಮಸ್ಸು ಮೂಡಿಸುವಂತೆ ನಾದಮಯ. ಮಾಮೂಲಾಗಿ ಸಂಧಾನದಲ್ಲಿ ಬಳಸುವ ಪದ್ಯಗಳಿಗಿಂತ ಭಿನ್ನ ಎಡಿಟಿಂಗ್ ಬೇರೆಯಾದಾಗ ಪ್ರಸಂಗದ ಸ್ವರೂಪವೂ ಬದಲಾಗ್ತದಲ್ಲ?

“ಪದ್ಯ ಕೇಳಿದೆ.ಅರ್ಥವನ್ನೂ ಹೇಳಬಹುದು. ಮುಂದೆ?”
“ನೀವು ಮೂವರನ್ನೂ ಒಟ್ಟಿಗೆ ಸಂಪರ್ಕಿಸುತ್ತೇನೆ. ನಾನೂ ಇರ್ತೆನೆ”

ಅದೇ ಸಂಜೆ ಅಂದರೆ ದಿನಾಂಕ 26 ಮಾರ್ಚ್ 2020 ಗುರುವಾರ ರಾತ್ರಿ ಕಲಾವಿದರೂ ಅನಂತರೂ ಒಟ್ಟಿಗೆ ಲೈನಿನಲ್ಲಿ ಬಂದೆವು. ಪೂರ್ವಸಿದ್ಧತೆ, ಸಮಾಲೋಚನೆ, ಅವಧಿ ಇತ್ಯಾದಿ ಚರ್ಚೆಯಾಗಿ ಶುಕ್ರವಾರ ಬೆಳಗಿನ ಹೊತ್ತು ‘ಗಜಮುಖದವಗೆ’ ಅಂತ ನಿರ್ಣಯವಾಯ್ತು. ಫೋನ್ ಸೆಟ್ಟಿಂಗ್, ರೆಕಾರ್ಡಿಂಗ್ ಇತ್ಯಾದಿ ವಿವರವಾಗಿ ಮಾತನಾಡಿ ಒಂದು ಹಂತದ ತಯಾರಿ ಪೂರೈಸಿದವು.

ಶುಕ್ರವಾರದ ಸೂರ್ಯೋದಯದ ಹೊತ್ತಿಗೆ ನಮ್ಮ ನಮ್ಮ ಮನೆಗಳಲ್ಲಿ ಏಕಾಂಗಿಗಳಾಗಿ ಎದುರಿನ ಅರ್ಥಧಾರಿಯ ಮುಖ ಕಾಣದಿದ್ದರೂ ಒಮ್ಮೆ(ಒಮ್ಮೆ ಮಾತ್ರ ಕಂಟಿನ್ಯೂಯಿಟಿಗೆ ಅನುಕೂಲ ಇಲ್ಲದ್ರಿಂದ) ಮೊದಲ ಪದ್ಯ ಮೊಬೈಲಲ್ಲಿ ಮೊಳಗಿಸಿದ ಅನಂತ, ಸಂತೈಸಿ ‘ವಿದುರನಂ… ‘ವಿದುರಾ…’ ಅಂದೆ. ಆ ಕಡೆಯಿಂದ ವಿದುರನ ‘ಕೃಷ್ಣಾ’ ಎಂಬ ಪ್ರತಿಕ್ರಿಯೆ ಬಂದಾಗ ಅಲ್ಲಿಯವರೆಗಿನ ನಡುಕ ಕಡಿಮೆಯಾಯಿತು. ಮತ್ತೆ ಸರಾಗ ಮುಂದುವರಿಯಿತು.ನಡುವೆ ಪದ್ಯ ಇಲ್ಲದ ಕೊರತೆ ಕಾಡಿದರೂ ದೇಶವನ್ನು ಕಾಡುತ್ತಿರುವ ಕೊರೋನಾ ಅರ್ಥದಲ್ಲೂ ನುಸುಳಿಯೇ ಬಿಟ್ಟಿತು.ಅರ್ಥಗಾರಿಕೆಯಲ್ಲಿ ಕಲಾವರಣ ಭಂಗ ಮಾಡದೆ ಸಾಮಾಜಿಕ ವಿಚಾರ ಹೇಗೆ ತರುವುದು ಅನ್ನುವುದಕ್ಕೆ ನಮ್ಮ ಮಟ್ಟಿಗೆ ಮಾದರಿಯೂ ಸಿದ್ಧವಾಯಿತು. ಹೀಗೆ ಮೊತ್ತಮೊದಲ ಆನ್‌ಲೈನ್ ತಾಳಮದ್ದಳೆಯ ಪ್ರಸಂಗ ರೆಡಿ!

ಆಮೇಲೆ ಮತ್ತೆ ಎಡಿಟಿಂಗ್ ಕೆಲಸದ ಹೊಣೆ ಅನಂತರ ಹೆಗಲಿಗೆ.ಭೂಭಾರ ಹೊತ್ತವನ ಹೆಸರಿನಲ್ಲಿ ಇದನ್ನೂ ಹೊತ್ತು ನಿರ್ವಹಿಸಿದರು ಅನಂತ. 29 ಮಾರ್ಚ್ ಸಂಜೆಗೆ ಒಂದು ಸ್ವರೂಪದ ಸಂಧಾನ ಸಿದ್ಧವಾಯಿತು.ಅದಕ್ಕೆ ಹಿಂದೆ ಮುಂದೆ ಸೇರಬೇಕಾದ್ದೆಲ್ಲ ಸೇರಿ ಕಳೆಯಬೇಕಾದ್ದು ಕಳೆದು..ಈಗ ಆನ್‌ಲೈನ್ ಹಾಗೂ ತಾಳಮದ್ದಲೆ ಇತಿಹಾಸದಲ್ಲಿ ಮೊದಲ ಪ್ರಯೋಗ ಸಾರ್ವಜನಿಕರ ಕೇಳುವಿಕೆಗೆ ಸಿದ್ಧವಾಯಿತು.ತಕ್ಕಮಟ್ಟಿಗೆ ಜನಪ್ರಿಯವೂ ಆಯಿತು.

ಒಂದೆರಡು ವಾರಗಳ ಬಳಿಕ ಇನ್ನೂ ಮುಂದುವರಿದ ಪ್ರಯೋಗ ದೃಶ್ಯ ಸಹಿತ ತಾಳಮದ್ದಲೆ. ಇದಕ್ಕೆ ಮುನ್ನುಡಿ ಬರೆದವರು ‘ಯಕ್ಷಗಾನ ಕಲಾವೃಂದ ಯುಎಸ್‌ಎ’ ತಂಡದ (ಅಮೆರಿಕಾ ನಿವಾಸಿ) ಪಣಂಬೂರು ವಾಸುದೇವ ಐತಾಳರು. ಡಾ.ಎಂ.ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಟಾರ್‌ ಹಾಗೂ ವಾಸುದೇವ ರಂಗಾ ಭಟ್ ಅರ್ಥಧಾರಿಗಳಾಗಿಯೂ ಹಿಮ್ಮೇಳದಲ್ಲಿ ಕೆ.ಜೆ.ಗಣೇಶ, ಸುಧೀಂದ್ರ ಹಾಗೂ ಕೃಷ್ಣ ಇವರಿದ್ದು ‘ಶರಸೇತು ಬಂಧ’ ತಾಳಮದ್ದಲೆ ಎಂಬ ನಿರ್ಣಯವಾಯಿತು. ಇದನ್ನು ಯೂ ಟ್ಯೂಬ್ ಮೂಲಕ ಲೈವ್ ಆಗಿ ಪ್ರಸಾರ ಮಾಡುವ ಯೋಜನೆಯಿತ್ತು. ಐತಾಳರೊಂದಿಗೆ ಹೆಗಲು ಕೊಟ್ಟವರು ಡಾ.ರಾಜೇಂದ್ರ ಕೆದ್ಲಾಯ,ಡಾ.ರಮೇಶ ಕೇಕುಡ, ಶಶಿಧರ ಸೋಮಯಾಜಿ, ಶಾಂತಿ ತಂತ್ರಿ, ಅಶೋಕ ಉಪಾಧ್ಯ ಮತ್ತು ತಂತ್ರಜ್ಞಾನ ಪರಿಣತ ಅಭಿರಾಮ್ ಶಿವಸ್ವಾಮಿ.

ಕಲಾವಿದರೆಲ್ಲ ಅವರವರ ಮನೆಯಲ್ಲೇ ಕುಳಿತು ಕಾನ್ಫರೆನ್ಸ್ ಆಪ್ ಮೂಲಕ ಮೊಬೈಲಿನಲ್ಲೇ ತಮ್ಮ ಪಾತ್ರಗಳನ್ನು ನಿರ್ವಹಿಸಿದರು. ಲೈವ್ ಆಗಿ ಪ್ರಸಾರವೂ ಆಯಿತು. ನಿರೀಕ್ಷೆಗಿಂತ ಹೆಚ್ಚು ಸ್ಪಂದನವೂ ದೊರೆಯಿತು.ಮುಂದೆ ಈ ಸ್ವರೂಪದ ಪ್ರಯೋಗಗಳಿಗೆ ಮುನ್ನುಡಿಯನ್ನೂ ಬರದ ಹಾಗಾಯಿತು. ಆಮೇಲೆಯೂ ಲಿಂಕ್ ಮೂಲಕ ಹಲವರು ಇದನ್ನು ವೀಕ್ಷಿಸಿದರು.

ಇದನ್ನು ಪ್ರಸ್ತಾವಿಸುವಾಗ ನೆನಪಿಗೆ ಬರುವುದು ಡಿವಿಜಿ ಅವರ ಮಾತು,

‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ ? ಮಂಕುತಿಮ್ಮ’

ಯಾವುದೂ ಅದರಷ್ಟಕ್ಕೆ ಪರಿಪೂರ್ಣವಲ್ಲ ಜಗದ ಜನಜೀವನಕ್ಕೆ ಪ್ರಯೋಜನಕಾರಿಯಾಗಿ ಯಾವುದು ಒದಗಬೇಕಿದ್ದರೂ ಪರಸ್ಪರ ಅವಲಂಬನೆ ಬೇಕು. ಋಷಿವಾಕ್ಯ ಅಥವಾ ಋಷಿಗಳು ಪಡೆದ ದರ್ಶನ ಅಧುನಿಕ ವಿಜ್ಞಾನದೊಂದಿಗೆ ಸಮನ್ವಯ ಹೊಂದಿದಾಗ ಸಾರ್ಥಕತೆ ಪಡೆಯುವುದು. ಬೇರು ಹಳತು; ಚಿಗುರು ಹೊಸತು.ಹಾಗೆಂದು ಬೇರಿನಿಂದ ಸತ್ಯ ದೊರೆಯದಿದ್ದರೆ ಚಿಗುರು ಮೊಳೆಯುವುದೆಂತು? ಬೇರು ಎಷ್ಟು ಆಳಕ್ಕಿಳಿದರೂ ಚಿಗುರೇ ಮೂಡದಿದ್ದರೆ ಸಾರ್ಥಕವೇನು? ಎರಡೂ ಪೂರಕವಾಗಿದ್ದಾಗ ‘ಜನಜೀವನಕೆ ಜಸವು’ ಜನಜೀವನಕ್ಕೆ ಗೆಲುವು ಸಿಗುವುದು ಈ ಸಮನ್ವಯದಿಂದ.

ಮನೆಯಲ್ಲಿರುವ ಹಿರಿಯರ ಅನುಭವದ ಕಣ್ಣು ಎಳೆಯರ ಕಾಲಿಗೆ ದೀಪ. ಎಳೆಯರ ಮುಂದೊತ್ತುವ ಉತ್ಸಾಹ ಹಿರಿತನದ ಕನಸು ನನಸಾಗುವ ಬಗೆ ಮುದುಕರು ಬೇಡ ಎಂದರೆ ಯುವಕರು ಸಾಗುವ ದಾರಿ ನೇರ್ಪಡದು. ಅವರು ಕಂಡ ಬದುಕಿನ ಏರಿಳಿತಗಳು,ಸೋಲು ಗೆಲುವುಗಳು ತಾರುಣ್ಯಕ್ಕೆ ಸೋಲಾಗದಂತೆ ಕಾಯುವ ರಕ್ಷೆ ಹುಡುಗರಿಗೆ ಏನು ಗೊತ್ತಾದೀತು, ಅವರು ಮಾಡುವುದೆಲ್ಲ ತಪ್ಪು ಎಂಬ ಧೋರಣೆ ಬದುಕನ್ನು ನಿಶ್ಚಲವಾಗಿ ಮಾಡೀತು. ವೃದ್ಧಾಪ್ಯ ಕಾಣಬೇಕಾದ ಕನಸು ಎಳೆಯರ ಸುಖೀ ಜೀವನವಷ್ಟೆ?

ಪುಟ್ಟ ಮನೆಯೊಳಗೆ ನಡೆಯುವ ಹಳತು ಹೊಸತರ ಸುಗಮ ಸಂಗಮವು ವಿಸ್ತಾರ ಜಗತ್ತಿನ ಕೈಗನ್ನಡಿ. ಈ ದೃಷ್ಟಿಕೋನವಿಲ್ಲದೇ ಇದ್ದರೆ ಬೇರು ಕಡಿದ ಮರದ ಹಾಗೆ; ಅಥವಾ ಚಿಗುರೇ ಮೂಡದ ಮರದ ಹಾಗೆ ಎರಡೂ ಜೀವಾಂತವೇ.ಹಾಗಾಗಿ ಮರದ ಸೊಗಕ್ಕೆ ಎರಡೂ ಕೂಡಿರಬೇಕು.ಕಲೆಯೊಂದರ ಪ್ರದರ್ಶನದ ತಾಂತ್ರಿಕ ಗೆಲುವಿನ ಹಿನ್ನೆಲೆಯಲ್ಲಿ ಕಂಡುಕೊಳ್ಳಬಹುದಾದ ಸತ್ಯವಿದು.

(ಹೊಸದಿಗಂತ)

error: Content is protected !!
Share This