ಸುಮಾರು ಮೂರು ದಶಕಗಳ ಕಾಲ ರಾಜ್ಯದ ಬೇರೆ ಬೇರೆ ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರಾಗಿ ಸೇವೆ ಸಲ್ಲಿಸಿ, ಕೋಟ ಹದಿನಾಲ್ಕುಗ್ರಾಮದ ಯಾವುದೇ ಆಸ್ತಿವ್ಯಾಜ್ಯಗಳನ್ನು ಸುಲಭದಲ್ಲಿ ಪರಿಹರಿಸಿ ತಂದೆ ರಾಮದೇವ ಹಂದೆಯವರ ಪಟೇಲಗಾರಿಕೆಯನ್ನು ಮುಂದುವರಿಸಿ ಜನಾನುರಾಗಿಯಾಗಿದ್ದ ಕೋಟದ  ಪಟೇಲ ಎಚ್. ಶಿವಾನಂದ ಹಂದೆ (88) ಇಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾದರು. 

ಹಲವು ವರ್ಷಗಳ ಕಾಲ ಕೋಟ ಹಂದೆ ದೇವಸ್ಥಾನದ ಮೊಕ್ತೆಸರರಾಗಿ ದೇವಳದ ಅಭಿವೃದ್ಧಿ ಕಾರ್ಯದಲ್ಲಿ ದುಡಿದವರು. ಸಾಲಿಗ್ರಾಮ ಮಕ್ಕಳ ಮೇಳ,ಕೂಟ ಬ್ರಾಹ್ಮಣ ಸಮಾಜ, ಶಾಂಭವಿ ಶಾಲಾ ಯಕ್ಷಗಾನ ತರಬೇತಿ ಕೇಂದ್ರ ಈ ಮೊದಲಾದ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದವರು.

ಸುಮಾರು 1960 ರ ಹೊತ್ತಿನಲ್ಲಿಯೇ ತನ್ನ ಸಹೋದರೊಂದಿಗೆ ಹವ್ಯಾಸಿ ಯಕ್ಷಗಾನ ವೇಷಧಾರಿಯಾಗಿ ಗುರುತಿಸಿಕೊಂಡವರು. ಮೊತ್ತಮೊದಲಬಾರಿಗೆ ಹವ್ಯಾಸಿಗಳಿಗಾಗಿ ಮತ್ತು ಮಕ್ಕಳ ಅನುಕೂಲಕ್ಕಾಗಿ ಹಂದಟ್ಟು ಹರಿಕೃಷ್ಣ ಹಂದೆಯವರೊಂದಿಗೆ ಸೇರಿ ಭಾರವಾದ ಅಟ್ಟೆ ಮುಂಡಾಸುಗಳ ಬದಲಿಗೆ ಬಿದಿರು, ತಗಡು, ರಟ್ಟಿನ ಕೇದಗೆಮುಂದಲೆಗಳ ಆವಿಷ್ಕಾರದ ಪ್ರಯೋಗ ಮಾಡಿದವರು. ಅಜಪುರ ಯಕ್ಷಗಾನ ಸಂಘ ಬ್ರಹ್ಮಾವರ, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಬ್ರಾಹ್ಮಣ ಸಭಾ ಸಾಲಿಗ್ರಾಮ, ಸೇರಿದಂತೆ ಅನೇಕ ಸಂಸ್ಥೆಗಳಿಂದ ಸಮ್ಮಾನಪಡೆದವರು. ಮೃತರು ಮೂವರು ಹೆಣ್ಣುಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

error: Content is protected !!
Share This