–   ಡಾ.ಎಂ.ಪ್ರಭಾಕರ ಜೋಶಿ

[ಕಡಬ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಜರಗಿದ ಸಾಹಿತ್ಯ ಯಕ್ಷಗಾನ ಗೋಷ್ಠಿಯ ಅಧ್ಯಕ್ಷ ಭಾಷಣ. 29-02-2020, ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯ]

ಸಾಹಿತ್ಯ ಸಂಸ್ಕೃತಿ ಬಂಧುಗಳೆ,

ಸಮಕಾಲೀನ ಭಾರತೀಯ ಸಮಾಜದ ಓರ್ವ ಶ್ರೇಷ್ಠ ಸುಧಾಕರ ಚೇತನರಾಗಿ ಧಾರ್ಮಿಕ, ಸಾಹಿತ್ಯ, ಕಲೆ, ಶಿಕ್ಷಣಗಳಿಗೆ ರಾಮಕುಂಜದ ಕೊಡುಗೆಯೆನಿಸಿದ, ರಾಮಕುಂಜದಿಂದ ರಾಮಜನ್ಮಭೂಮಿವರೆಗೆ ವಿಸ್ತರಿಸಿದ  ವಾಮನ ಮೂರ್ತಿ ಶ್ರೀ ವಿಶ್ವೇಶತೀರ್ಥರ ಜನ್ಮಭೂಮಿ ಇದು. ಅವರನ್ನು ನೆನೆದು ಅವರ ನಿತ್ಯ ಸಕ್ರಿಯ ಚೈತನ್ಯ ನಮ್ಮೆಲ್ಲರಿಗೆ ಸದಾ ಪ್ರೇರಕವಾಗಿರಲಿ ಎಂದು ಹಾರೈಸುತ್ತೇನೆ. ಶ್ರೀಗಳು ಸ್ವತಃ ಉತ್ಕೃಷ್ಟ ಸಂಸ್ಕೃತಿ ವಿಶ್ಲೇಷಕರು, ಲೇಖಕರು ಮತ್ತು ಉತ್ಕಟ ಯಕ್ಷಗಾನ ಪ್ರೇಮಿ. ಉಡುಪಿಯಲ್ಲಿ ಅವರ ಐದು ಪರ್ಯಾಯಗಳಲ್ಲಿ ಹಂತ ಹಂತವಾಗಿ ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ಒದಗಿದೆ. ಈಗ ಯಕ್ಷಗಾನವು ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಧಾನ ಚಟುವಟಿಕೆಯಾಗಿ ಸ್ಥಾಪಿತವಾಗಲು ಅವರೇ ಕಾರಣ. ಕಲೆ, ಕಲಾವಿದರಿಗೆ ಪ್ರೋತ್ಸಾಹಕ, ಸ್ವತಃ ಪ್ರೇಕ್ಷಕನಾಗಿ, ಮತ್ತು  ಉಡುಪಿ ಯಕ್ಷಗಾನ ಕಲಾರಂಗಕ್ಕೆ ನೀಡಿದ ದೊಡ್ಡ ಆಶ್ರಯ ಪ್ರೋತ್ಸಾಹಗಳನ್ನು ಸಂದರ್ಭದಲ್ಲಿ ದಾಖಲಿಸುತ್ತೇನೆ. ನಾನು ಅವರೊಂದಿಗೆ ಎರಡು ಬಾರಿ ತಾಳಮದ್ದಲೆ ಅರ್ಥ ಹೇಳಿದುದನ್ನು ಒಂದು ವಿಶೇಷ ಸ್ಪೂರ್ತಿಯಾಗಿ ನೆನಪಿಸುತ್ತೇನೆ. ಹಾಗೆಯೆ ರಾಮಕುಂಜ, ಆತೂರು, ಶರವೂರು ವಲಯದ ಯಕ್ಷಗಾನ ಚಟುವಟಿಕೆಗಳು, ಅವುಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ನಾನು ಭಾಗವಹಿಸುತ್ತಿರುವ ಸಂತಸವನ್ನು ಪ್ರಸ್ತಾಪಿಸುತ್ತಿದ್ದೇನೆ.

ಈ ಗೋಷ್ಠಿಯಲ್ಲಿ ಮೂವರು ತಜ್ಞರು – ಮೂರು ಮಹತ್ತ್ವದ ವಿಷಯಗಳ ಬಗೆಗೆ, ಅಧ್ಯಯನ ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ. ಡಾ. ಗಣರಾಜ ಕುಂಬಳೆ (ಎಸೆವ ಕನ್ನಡಕ್ಕೆ ಯಕ್ಷಗಾನದ ಬಗೆಗೆ) ಡಾ. ಸಿಬಂತಿ ಪದ್ಮನಾಭ (ಶಿಕ್ಷಣದಲ್ಲಿ ಕನ್ನಡ), ಮತ್ತು ಡಾ. ಧನಂಜಯ ಕುಂಬಳೆ (ಕನ್ನಡ ಸಾಹಿತ್ಯದ ಇತ್ತೀಚಿನ ಒಲವು ನಿಲುವು) – ಇದು ಆ ವಿಷಯಗಳಲ್ಲಿ ನಾವು ಯೋಚಿಸಬೇಕಾದ ಹಲವು ವಿಚಾರಗಳನ್ನು ಓರಣವಾಗಿ ಮಂಡಿಸಿದ್ದಾರೆ.

ಕನ್ನಡ ಎಸೆಯಬೇಕಾದರೆ ಯಕ್ಷಗಾನದ ಒಸಗೆಯ ಒಪ್ಪದ ಅಂದ ನಾವು ಒಪ್ಪಲೇ ಬೇಕಾದುದು. ಕರಾವಳಿ, ಮಲೆನಾಡು ಪ್ರದೇಶಗಳ ವಾಙ್ಮಯದ ಮಾತು, ಬರಹ, ರಂಗ ಪ್ರದರ್ಶನಗಳು, ನಿತ್ಯದ ನಡೆ ನುಡಿ ನಡತೆ ರೂಪಗಳಲ್ಲಿ, ಯಕ್ಷಗಾನದ ಅಚ್ಚು,ಬೆಲ್ಲವಾಗಿ ಸೇರಿಕೊಂಡಿದೆ. ಪ್ರದೇಶದ ಅನೇಕ ಸಾಹಿತಿಗಳುಯಕ್ಷಗಾನದ ಪ್ರೇರಣೆಯನ್ನು ಪಡೆದು ಬರೆದವರು, ಯಕ್ಷಗಾನದ ಕುರಿತು ಬರೆದವರು, ಯಕ್ಷಗಾನಗಳನ್ನೂ ಬರೆದವರು.

ಭಾಷೆ, ವ್ಯುತ್ಪತ್ತಿ, ಮಾತಿನ ಅಂದ, ಪುರಾಣ, ಸಂಸ್ಕೃತಿ ಜ್ಞಾನಗಳಲ್ಲಿ ಯಕ್ಷಗಾನದ ಕೊಡುಗೆ ಹೇಳಬೇಕಾಗಿಲ್ಲ. ಅಂತರ್ಗತ ಕುಂಬಳೆ ಪಾರ್ತಿಸುಬ್ಬಯ್ಯ ನಿಂದ ಇಂದಿನ ಕವಿಗಳ ತನಕ ಅನೇಕ ಯಕ್ಷಗಾನ ಮಹಾಕವಿಗಳು, ಕವಿಗಳೂ, ಆಗಿ ಹೋಗಿದ್ದಾರೆ. ಸುಬ್ಬ, ಹಟ್ಟಿಯಂಗಡಿ ರಾಮಭಟ್ಟ, ಹಲಸಿನಹಳ್ಳಿ ಮತ್ತು ಸಮಕಾಲೀನರಾದ ಹಲವರುಮಹಾಕವಿ ಸ್ಥಾನಕ್ಕೆ ನಿಸ್ಸಂದೇಹವಾಗಿ ಅರ್ಹರು. ಹಾಗೆ ನಾವು ಹೇಳಬೇಕು, ಹೇಳುತ್ತಿಲ್ಲ. ಯಾಕೆ ಹೇಳುತ್ತಿಲ್ಲ ಎಂದರೆ ಕರಾವಳಿ ಜನಜೀವನದ ಸ್ವಭಾವ, ಅದೆಲ್ಲ ದೊಡ್ಡ ಸಂಗತಿ ಅಲ್ಲ. ಇದ್ದದ್ದೆ ಎಂಬ ಸಹಜೋಕ್ತಿ.

ಯಕ್ಷಗಾನಕ್ಕೆ ಕನ್ನಡ ಸಾಹಿತ್ಯದ ಅಧ್ಯಯನ, ಪರಿಗಣನೆಗಳಲ್ಲಿ ಸ್ಥಾನ ಸಿಗಬೇಕುಎಂಬ ಹೌದಾದ, ‘ಬೇಡಿಕೆ’ ‘ಸಲಹೆಹಲವು ದಶಕಗಳಿಂದ ಇದೆ. ರಾ. ನರಸಿಂಹಾಚಾರ್ಯರ ಪ್ರಸಿದ್ಧವಾದ ಕರ್ನಾಟಕ ಕವಿ ಚರಿತೆಯಲ್ಲಿ ಯಕ್ಷಗಾನ ಕವಿಗಳ ಉಲ್ಲೇಖಗಳಿವೆ. ಪ್ರೊ. ರಂ.ಶ್ರೀ ಮುಗಳಿ ಅವರ ಸಾಹಿತ್ಯ ಚರಿತ್ರೆಯಲ್ಲಿ ಯಕ್ಷಗಾನವನ್ನು, ಉದ್ದೇಶಪೂರ್ವಕ ಬಿಟ್ಟು ಬಿಟ್ಟುದನ್ನು ಸಂಶೋಧಕ ಡಾ. ಪಾದೆಕಲ್ಲು ವಿಷ್ಣುಭಟ್ಟರು ತೋರಿಸಿದ್ದಾರೆ. (ಯಕ್ಷಗಾನ ಅಧ್ಯಯನ ಗ್ರಂಥದಲ್ಲಿ). ಇತ್ತೀಚೆಗೆಬೆಂಗಳೂರು ವಿಶ್ವವಿದ್ಯಾಲಯದ ಸಾಹಿತ್ಯ ಚರಿತ್ರೆ ಸಂಪುಟ ೫ರಲ್ಲಿ ಮತ್ತು ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರಕನ್ನಡ ಸಾಹಿತ್ಯ ಚರಿತ್ರೆಗ್ರಂಥದಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಪ್ರತ್ಯೇಕ ಅಧ್ಯಾಯಗಳಿವೆ.

ಸಂಬಂಧವಾಗಿ ನನ್ನ ಅನಿಸಿಕೆ ಇಷ್ಟು. “ಸಾಹಿತ್ಯದಲ್ಲಿ  ಸ್ಥಾನ ಕೊಡುವುದಕ್ಕೆ , ತೆಗೆಯುವುದಕ್ಕೆ ನೀವು ಯಾರು? ಅದು ಇದೆ ಮತ್ತು ಇರುತ್ತವೆ. ನಿಮಗೆ ಸಾಹಿತ್ಯ ಅಲ್ಲವಾದರೆ ಬಿಡಿ. ಪಡುಬಿದ್ರೆಯ ಓರ್ವ ಭಜನೆ ಹಾಡುಗಾರರು ಹೇಳಿದಂತೆ – ‘ನಮ್ಮದು ಭಜನೆ. ಅದರಲ್ಲಿ ತಾಳ ರಾಗ ಎಲ್ಲ ಸರಿ ಇದೆ. ಅದು ಶಾಸ್ತ್ರೀಯ ಅಲ್ಲ ಎಂದು ಯಾರಾದರೂ ಹೇಳಿದರೆ, ಅದು ಅವರ ಇಷ್ಟ. ಅವರು  ಕೇಳುವುದು ಬೇಡ. ನಮ್ಮದು ಹಾಗೇ ಇರುತ್ತದೆ.” ಯಕ್ಷಗಾನದ ಅಧ್ಯಯನವು  ಕೂಡ, ಕನ್ನಡ ಭಾಷೆ, ರಂಗ ಮತ್ತು ಸಾಹಿತ್ಯ ಇತಿಹಾಸ, ಸಂಶೋಧನೆಗಳಿಗೆ ಆಕರ. ಅದನ್ನು ಪರಿಗಣಿಸದಿದ್ದರೆ ಅಷ್ಟರ ಮಟ್ಟಿಗೆಅಧ್ಯಯನವು ಅಪೂರ್ಣವಾಗುತ್ತದೆ ಅಷ್ಟೆ.

“ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್” ಕನ್ನಡಿಗರೆಂದು ಕವಿರಾಜಮಾರ್ಗಕಾರನು ಹೇಳಿದುದನ್ನು ಇಲ್ಲಿ ಪ್ರಸ್ತಾಪಿಸಿದರು. ಆ ಉಕ್ತಿಯನ್ನು ನೇರವಾಗಿ ಯಕ್ಷಗಾನಕ್ಕೆ ಸಂಬಂಧಿಸಿ ಅನ್ವಯಿಸಿದ  ದಿ| ಗೌರೀಶ ಕಾಯ್ಕಿಣಿ ಅವರು ಹೇಳಿದ ಒಂದು ಮಾತು ವಿಶಿಷ್ಟವಾಗಿದೆ. ಅವರು ಹೇಳುವಂತೆ ಇಲ್ಲಿ – ‘ಕಾವ್ಯ ಪ್ರಯೋಗ’ ಎಂದರೆ ಕಾವ್ಯ ರಚನೆ ಅಲ್ಲ, ಪ್ರಯೋಗವೆಂಬುದಕ್ಕೆ ರಂಗ ಪ್ರಯೋಗವೆಂಬುದು ಪ್ರಸಿದ್ಧ ಅರ್ಥ, ಕಾವ್ಯವೆಂದರೆ, ನಾಟಕ (ಕಾವ್ಯೇಷು ನಾಟಕಂ ರಮ್ಯಂ) ಹಾಗಾಗಿ – ಕುರಿತು ಓದದೆ = ಅದಕ್ಕಾಗಿ ಪ್ರತ್ಯೇಕ ಅಭ್ಯಾಸ ಮಾಡದೆ, ಅಂದರೆ ಬಾಯಿಪಾಠ, ತಾಲೀಮು ಇಲ್ಲದೆ ರಂಗ ಪ್ರಯೋಗ ಮಾಡುವ ಆಟಗಳು, ಯಕ್ಷಗಾನದ ಅರ್ಥ, ನರ್ತನಾದಿಗಳೇ ಇಲ್ಲಿ ಹೇಳಿದ್ದು. ಇದು ಅವರ ಅನಿಸಿಕೆ. ಇದು ಸತಾರ್ಕಿಕವೂ, ವಿಶಿಷ್ಟವೂ ಆಗಿರುವ ನೋಟವಾಗಿದೆ.

ಯಕ್ಷಗಾನದ ಚಟುವಟಿಕೆ, ಪ್ರದರ್ಶನಗಳು, ಹೆಚ್ಚಿವೆ. ಯಕ್ಷಗಾನಕ್ಕಿದು ಉಬ್ಬರದ ಕಾಲ. ಅಂತೆಯೆ ತೆಳುವಾದ ಪರಕಲ್ಪನೆಗಳಿಗೆ, ಫ್ಯಾಶನ್ ತರಹದ ಪ್ರಸ್ತುತಿಗಳಿಗೆ ಮಹತ್ತ್ವ ಸಲ್ಲುತ್ತಿದೆ. ಜ್ಞಾನ, ಸೈದ್ಧಾಂತಿಕತೆ, ರಂಗ ಬದ್ಧತೆಗಳಿರುವ ವಿಮರ್ಶಾ ಪಂಥ ಸಕ್ರಿಯವಾಗಬೇಕಾದ ಅಗತ್ಯವಿದೆ. ಈಗಾಗಲೇ ಆಗಿರುವ ಕೆಲಸಗಳ ಪ್ರಯೋಜನ ರಂಗಕ್ಕೆ ಒದಗಬೇಕಾಗಿದೆ.

ಶಿಕ್ಷಣದಲ್ಲಿ ಕನ್ನಡವನ್ನುಕನ್ನಡದ ಶಿಕ್ಷಣ, ಮತ್ತು ಮಾಧ್ಯಮಗಳ ನೆಲೆಯಲ್ಲಿ ಪರಿಶೀಲಿಸಿದ್ದಾರೆಪ್ರಾಥಮಿಕ ಶಿಕ್ಷಣದ ಮಾಧ್ಯಮವು ಪರಿಸರದ ಭಾಷೆಯೆ ಆಗಿರಬೇಕೆಂಬ ಗಟ್ಟಿಯಾದ ಶೈಕ್ಷಣಿಕ  ಸಿದ್ದಾಂತಕ್ಕೆ, ಕಿವಿಗೊಡುವ ಮನಸ್ಥಿತಿ ಕಾಣುವುದಿಲ್ಲ. ಅವಕಾಶಗಳ ರಹದಾರಿ, ಭವಿಷ್ಯದ  ಬುನಾದಿ, ಉದ್ಯೋಗದ ಇನ್ಸೂರೆನ್ಸ್ಎಂದು ಭಾವಿಸಲಾದ ಇಂಗ್ಲೀಷ್ ಮಾಧ್ಯಮ, ಇಂಗ್ಲೀಷ್ ಪ್ರಭುತ್ವಗಳ ಕಡೆ ಕೋಟ್ಯಂತರ ಕನ್ನಡಿಗರು ಒಂದೇ ಸಮನೆ ಧಾವಿಸುತ್ತಿದ್ದಾರೆ. ಕನ್ನಡ ಶಾಲೆಗಳು ದುಸ್ಥಿತಿಯಲ್ಲಿವೆ. ಇಂಗ್ಲೀಷ್ ಶಾಲೆಗಳು ಹೇಗಿದ್ದರೂ ಬೇಕೆಂಬ ಭಾವನೆ ಬಂದಿದೆ. ಅನುದಾನಿತ ಮತ್ತು ಸರ್ಕಾರಿ ಶಾಲೆಗಳುಮುಚ್ಚಿದರೆ ಮುಚ್ಚಿ ಹೋಗಲಿಎಂಬ ರೀತಿಯಲ್ಲಿ ಸರಕಾರಿ ಧೋರಣೆಗಳಿವೆ. ಕಳೆದ ನಾಲ್ಕು ದಶಕಗಳ  ಸರ್ಕಾರಿ ಭಾಷಾ ಧೋರಣೆಯನ್ನು ಕಂಡರೆ ಇದು ಸ್ಪಷ್ಟ. ಕನ್ನಡವನ್ನು ನಾವೇಎಸೆದರೆಇನ್ನೇನು?

ಹೀಗಿರುವಾಗಮುಂದಿನ ಮೂರು ನಾಲ್ಕು ದಶಕಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಇರುವುದೇ ಸಂಶಯದ ಸಂಗತಿ. ಹೀಗಿರುವಾಗ ಸಾಹಿತ್ಯ, ಯಕ್ಷಗಾನ ಉಳಿದೀತೆ? ಚಿಂತನೀಯ. ರಾಜ್ಯಭಾಷೆ, ಆಡಳಿತ ಭಾಷೆ ಎರಡೂ ಅಲ್ಲದತುಳು ಉಳಿದಿಲ್ಲವೇ ? ದಕ್ಷಿಣ ಭಾರತೀಯ ಭಾಷೆಗಳಲ್ಲಿ ಅತ್ಯಂತ ಪ್ರಾಚೀನವಾದ ತುಳು, ಒಂದು ಚಿಕ್ಕ ಪ್ರದೇಶದಲ್ಲಿ ಉಳಿದು ಬೆಳೆದು ನಳನಳಿಸುತ್ತಿರುವುದು, ದೇಶಕ್ಕೊಂದು ಮಾದರಿ, ಆಶಾಸ್ಥಾನ, ಹಾಗಾದರೂ ಕನ್ನಡ ಉಳಿಸಬೇಕಾದ ಬಗೆಗೆ ಯೋಚಿಸಬೇಕು, ಪ್ರಯತ್ನಿಸಬೇಕು.

ಕನ್ನಡ ಕಲಿಕೆಯಲ್ಲಿ ತಿಳಿವು ಸಾಲದೆಂಬ ಮಾತು – ಬರಿಯ ದೂರಲ್ಲ. “ಸ್ನಾತಕೋತ್ತರ ಪದವಿ ಪಡೆದ ಅನೇಕರಲ್ಲಿ, ಕನ್ನಡದಲ್ಲಿ ಒಂದು ಪುಟ ಚೊಕ್ಕವಾಗಿ, ತಪ್ಪಿಲ್ಲದೆ ಬರೆಯುವ ಸಾಮರ್ಥ್ಯ ಇಲ್ಲದಿರುವ ಉದಾಹರಣೆಗಳೂ ಉಂಟು” ಎಂದು ಹಿರಿಯ ವಿದ್ವಾಂಸರಾದ ಪ್ರೊ. ಬಿ.ಎ. ವಿವೇಕ ರೈ ಅವರು ಹೇಳಿರುವ ಮಾತು – ನಮ್ಮನ್ನು ಎಚ್ಚರಿಸಬೇಕು.

……………………………………………………………………………………………………………………………………………………………………………………..

ಕನ್ನಡ ಶಿಕ್ಷಣ ಎಂದರೇನು? ಹಳೆಕನ್ನಡಕಾವ್ಯ, ಪಂಪರನ್ನನಾರ್ಣಪ್ಪ, ಕಾದಂಬರಿ, ವಿಮರ್ಶೆಇಷ್ಟೇಯಾ? ಸುತ್ತಮುತ್ತಲಿನ ನಮ್ಮ ಕನ್ನಡದ ಅಗತ್ಯಗಳೇನಿವೆ? ಅನುವಾದ, ಆಡಳಿತ ಕನ್ನಡ, ಮೊದಲಾದವನ್ನೆ ಕೇಂದ್ರೀಕರಿಸಿ ಪಠ್ಯಕ್ರಮಗಳಿರಬಾರದೆ? ಎಂಬ ಬಗೆಗೂ ಯೋಚಿಸಬೇಕು.

ಕನ್ನಡ ಸಾಹಿತ್ಯದ ಸುದೀರ್ಘವಾದ ಇತಿಹಾಸದಲ್ಲಿ ಉತ್ಕೃಷ್ಟವಾದ ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ, ವ್ಯಾಖ್ಯಾನ, ಪ್ರಬಂಧ, ಅರ್ಥಗಾರಿಕೆ, ಗಾಯನಗಳು, ಜನಪದ, ಶಿಷ್ಟಗಳು ನುಡಿ ಬೆಡಗಿನ, ಸಿರಿಯ ಅದ್ಭುತ ದೃಷ್ಟಾಂತಗಳಾಗಿ ಇವೆ. ಇದೀಗಒಂದು ಮುಖದಲ್ಲಿ ಬರಹ, ಪುಸ್ತಕ ಪ್ರಕಟನೆಗಳು ತುಂಬ ಹೆಚ್ಚಿವೆ. ಓದುಗರ ಸಂಖ್ಯೆ ಹೆಚ್ಚಿದೆಯೆ? ಗಂಭೀರ ಸಾಹಿತ್ಯವನ್ನು ಎಷ್ಟು ಜನ ಓದುತ್ತಾರೆ? ಇದೂ ಚಿಂತನೀಯ. ಮಾಧ್ಯಮಗಳು ನೀಡುವರಂಜನಾ ಸಾಹಿತ್ಯವು ಸಾಹಿತ್ಯದ ಅಭಿರುಚಿಯನ್ನು ಆಕ್ರಮಿಸಿ ನಿಂತಿದೆಯೆ? ಪ್ರಶ್ನೆ.

ಶಿಕ್ಷಣದಲ್ಲಿ ಕಲೆಯಲ್ಲಿ ಸಾಹಿತ್ಯದಲ್ಲಿ ಕನ್ನಡವನ್ನು ಬಲಪಡಿಸುವ, ಅನ್ನಕ್ಕಾಗಿ ಕನ್ನಡ, ಕನ್ನಡದ ಅನ್ನ, ಕನ್ನಡವೇ ಅದಾಗುವ ಸಂಯುಕ್ತ ಚಿಂತನೆ ನಮಗೆ ದಾರಿಯಾಗಲಿ.

error: Content is protected !!
Share This