25 ಅಂದಾಗ ಆದೀತೋ ಎಂದರು. 50 ರ ಕಡೆಗೆ ಎಂದಾಗ ಕೂಡೀತೋ ಎಂದರು. 75 ಆಗೋ ಸಾಧ್ಯತೆ ಎಂದಾಗ ಮಾಡಿಯಾರೋ ಕಂದರ. 100 ಆಯ್ತು ಎಂದಾಗ ಏನೋ ಆಯ್ತು ಅಂದರು. ಈಗ 125 ರ ಕಡೆಗೆ ಹೋಗ್ತಾ ಇದೆ.
ತಾಳಮದ್ದಳೆ ಎಂಬ ವಾಚಿಕ ಅಭಿವ್ಯಕ್ತಿಯ, ವಾಗ್ ವೈಭವದ, ಮಾತೇ ಕತೆಯಾದ, ಮಾತಿನ ಅರಮನೆಯಾದ, ಮಾತಿನ ಮಂಟಪ ಕಟ್ಟುವ ಯಕ್ಷಗಾನದ ಅಪೂರ್ವ ಪ್ರಭೇದ.
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ವತಿಯಿಂದ ಸಂಚಾಲಕ ಎನ್. ಅಶೋಕ ಭಟ್ ಉಜಿರೆ ಸಂಚಾಲಕತ್ವದಲ್ಲಿ 2022 ಫೆ.12 ರಂದು ಸುರತ್ಕಲ್ ನಲ್ಲಿ ರಜತ ವರ್ಷಾಚರಣೆಗೆ ಚಾಲನೆ ನೀಡಲಾಯಿತು.
ವಿಠಲ ಶಾಸ್ತ್ರಿಗಳ ನೆನಪಿನಲ್ಲಿ ಪ್ರತಿಷ್ಠಾನದ 25 ವರ್ಷಗಳ ಮೆಲುಕಿನಲ್ಲಿ ಮಾಡಹೊರಟದ್ದು 25 ತಾಳಮದ್ದಳೆಗಳ ಗುರಿ.
ಈಗ ತಲುಪಿದ್ದು 100+.
ಆ.7 ರಿಂದ ಬೆಳ್ತಂಗಡಿಯಲ್ಲಿ ವಿದ್ವಾನ್ ಉಮಾಕಾಂತ ಭಟ್ಟರ ಅರ್ಥ ವೈಭವದಲ್ಲಿ ಸಪ್ತಾಹ ನಡೆಯಲಿದೆ. ಎಂಬಲ್ಲಿಗೆ ಒಂದು ಹನ್ನೊಂದಾಗಿ ಮುಂದುವರಿದು ಅದು 111 ತಾಳಮದ್ದಳೆಯಾಗುತ್ತಾ ಸರಣಿಯ ವಿಜಯಪತಾಕೆ ಹಾರಿಸುವತ್ತ ರಥದಂತೆ ಮುಂದೆ ಸಾಗುತ್ತಿದೆ. ಹಾಗೆ ಗೆಲುವಿನ ಕೇತನದ ಲಾಂಛನವನ್ನು ಜಗದ್ವ್ಯಾಪಿ ಕಾಣಿಸಲು ಹೊರಟ ಧ್ವಜದಂಡಧಾರಿ ಅಶೋಕ ಭಟ್ಟರು ಅವಿಶ್ರಾಂತ ಕಲಾವಿದ.
ಅಕ್ಟೋಬರ್ ನಲ್ಲಿ ಅರ್ಥಪೂರ್ಣವಾಗಿ ಸಮಾರೋಪವೂ ನಡೆಯಲಿದೆ.
500 ದಿನಗಳಲ್ಲಿ 125ಕ್ಕೂ ಹೆಚ್ಚು ತಾಳಮದ್ದಳೆ ಸಂಘಟನೆ ಎಂದರೆ ನಿಬ್ಬೆರಗಾಗಲೇಬೇಕು. ಸರಾಸರಿ ನಾಕು ದಿನಕ್ಕೊಂದು. ಈ ಮಧ್ಯೆ ಆಹ್ವಾನಿತ ಆಟ, ಕೂಟಗಳಲ್ಲಿ ಭಾಗವಹಿಸಬೇಕು. ಸಭೆ ಸಮಾರಂಭಗಳಲ್ಲಿ ಹಾಜರಿರಬೇಕು. ಅಭಿನಂದನಾ ಭಾಷಣ ಮಾಡಬೇಕು. ಬಂಧು ಬಾಂಧವ ಓರಗೆಯವರ ಸಿಹಿಯೂಟಕ್ಕೆ ಎಡೆ ಕೊಡಬೇಕು. ಸಪ್ತಾಹಗಳಿಗೆ ಹಣಕಾಸಿನ ಕೊರತೆಯಾದರೆ ಇದೇ ಅರ್ಥಗಾರಿಕೆಯ ಸಂಭಾವನೆ ಪೂರ್ಣ ಸಮರ್ಪಣೆ. ಸಪ್ತಾಹದ ವ್ಯಾಪ್ತಿ ಸುರತ್ಕಲ್ ನಿಂದ ಆರಂಭವಾಗಿ ಉಜಿರೆ, ಮಂಗಳೂರು, ಉಡುಪಿ, ಶಿರಸಿ, ತುಮಕೂರು, ಬೆಂಗಳೂರು, ಯಲ್ಲಾಪುರ, ಸಿದ್ದಾಪುರ, ಚಿತ್ರದುರ್ಗ, ಕೋಲಾರ, ಮುಂಬಯಿವರೆಗೆ ವಿಸ್ತಾರವಾಗಿದೆ. ಇನ್ನೂ ಕೆಲ ಊರುಗಳಲ್ಲಿ ನಡೆದರೆ ಅಚ್ಚರಿಯಿಲ್ಲ. ಏಕೆಂದರೆ ಮೆಟ್ಟಿದ ಹುಲ್ಲನ್ನೇ ಜಟ್ಟಿಯಾಗಿಸಿ ವಿರೋಧದ ಹುಟ್ಟಡಗಿಸುವ ಗುಣ ಅಶೋಕ ಭಟ್ಟರದ್ದು. ಅವರ ಮಾತಿನ ಕ್ರಮಕ್ಕೆ ವಿರೋಧ ಇರಬಹುದು. ನೇರ ನುಡಿ ಮನಸಿಗೆ ಕಠೋರ ಎನಿಸಿರಬಹುದು. ಆದರೆ ಶೇಣಿ, ಸಾಮಗ, ಜೋಷಿಯ ಸಮಷ್ಟಿಯ ಪ್ರಭಾವದ ಅವರ ಅರ್ಥಗಾರಿಕೆ ಅನೇಕರ ಮೇಲೆ ಪ್ರಭಾವ ಬೀರಿದೆ. ಅಭಿಮಾನಿಗಳನ್ನು ಒದಗಿಸಿಕೊಟ್ಟಿದೆ. ಆನೆ ನಡೆದದ್ದೇ ದಾರಿ ಎಂಬಂತೆ ಸಂಘಟನೆಯಲ್ಲಿ ಸಾಗುವ ಒಂಟಿ ಸಲಗ ಅವರಾಗಿರಬಹುದು. ಆದರೆ ಅವರು ಮಾಡಿದ ಯಕ್ಷಗಾನ ಸಂಘಟನೆಯ ಕಾರ್ಯಕ್ರಮ ಆ ಕಾರಣದಿಂದ ವೈಫಲ್ಯ ಕಂಡುದಿಲ್ಲ. ವಿರೋಧ ಮಾತಾಡಿದವರನ್ನೂ ಜತೆಗೆ ಕೂರಿಸಿ ಪದ್ಯ ಹೇಳಿಸಿ, ಅರ್ಥ ಹೇಳಿಸಿದ ಗುಣಗ್ರಾಹಿ.
ಮಿತ್ರರ ಜತೆ ಜತೆಗೇ ಶತ್ರುಪಾಳಯವನ್ನೂ ಸಾಕುವ ಅಶೋಕ ಭಟ್ಟರು ಮನಸಿಗೆ ಅನಿಸಿದ್ದನ್ನು ನೇರ ಹೇಳುವ ಮುಲಾಜಿಲ್ಲದ ನಿಷ್ಠುರಿ. ಇದೇ ಕಾರಣಕ್ಕೆ ಕೆಲವರಿಗೆ ಹೊಟ್ಟೆ ಉರಿ.
ಹಿರಿಯ ಕಲಾವಿದರ ಜತೆಗೆ ಕಿರಿಯರಿಗೂ ಅವಕಾಶ . ಈ ಮೂಲಕ ಕಲಿಕೆ ನಿರಾಯಾಸ. ಹೆಸರಾಂತ ಕಲಾವಿದರಿಗೆ ಮನ್ನಣೆ, ಸ್ಥಳೀಯರಿಗೆ ತಪ್ಪುವುದಿಲ್ಲ ಮಣೆ. ಸಮಯಪ್ರಜ್ಞೆಗೆ ಬೆಲೆ. ಅದರಲ್ಲೇ ಮಾತಿನ ಬೆಳೆ. ಸ್ವಾಗತವೋ ಧನ್ಯವಾದವೋ ಕೊಟ್ಟರೆ ಒಂದಷ್ಟು ಯಕ್ಷಗಾನ ಇತಿಹಾಸದ ಮೊಗೆತ. ಮಾತಿನ ಓಘದಲ್ಲಿ ಹಿರಿಯ ಕಲಾವಿದರ ಕಲಾಯಾನದ ಕುರಿತಾದ ಮಾಹಿತಿ ಸಾರಸಂಗ್ರಹ ಕೇಳಲು ರಸದೌತಣ. ಪಾವಂಜೆ ಸಪ್ತಾಹ ಮುಗಿದು ವಾರವಾಗುವಷ್ಟರಲ್ಲಿ ಬೆಳ್ತಂಗಡಿ ಸಪ್ತಾಹಕ್ಕೆ ಅಣಿಯಾಗುತ್ತಿದೆ ಪ್ರತಿಷ್ಠಾನ. ಕರಪತ್ರ ಬಂದಾಗಿದೆ. ಕೋವಿಡ್ ಸಂದರ್ಭದಲ್ಲಿ ಜನಪ್ರಿಯಗೊಂಡ ಆನ್ ಲೈನ್ ಪ್ರಸಾರ ಇಂದಿಗೂ ಎಲ್ಲೆಲ್ಲೋ ಇರುವ ಕಲಾರಸಿಕರಿಗೆ ಮೆಚ್ಚಿನ ಮಾಧ್ಯಮ.
ಜೋಷಿ, ಪುತ್ತಿಗೆ, ಕೋಳ್ಯೂರು, ಕನ್ನಡಿಕಟ್ಟೆ, ಸೂರಿಕುಮೇರಿ, ಮೂಡಂಬೈಲು ಮೊದಲಾದವರ ಸಪ್ತಾಹದ ಬಳಿಕ ಈಗ ವಿದ್ವಾನ್ ಉಮಾಕಾಂತ ಭಟ್ಟ ಕೇರೆಕೈ ಅವರ ವಾಙ್ಮಯ ಪಾತ್ರಪ್ರಪಂಚದ ಸಪ್ತಾಹ. ಆ.7 ರಿಂದ 13. ನಮ್ಮ ನಿಮ್ಮ ಮನೆಗಳಲ್ಲಿ!
ಲಕ್ಷ್ಮೀ ಮಚ್ಚಿನ