ಏರ್ಯ ಲಕ್ಷ್ಮೀನಾರಾಯಣ ಆಳ್ವ

ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಅದೇ ತಾನೇ ಪ್ರಾರಂಭವಾಗಿತ್ತು.

ಕೇಂದ್ರದ ಪ್ರಥಮ ನಿರ್ದೇಶಕರಾಗಿ ವಿದ್ವತ್ಕವಿ ಎಸ್‌.ವಿ. ಪರಮೇಶ್ವರ ಭಟ್ಟರು ನಿಯುಕ್ತರಾಗಿದ್ದರು. 1968ರ ಜೂನ್ ಅಥವಾ ಜುಲೈ ಮಂಗಳೂರು. ಗಣಪತಿ ಹೈಸ್ಕೂಲು ಸಭಾ ಮಂದಿರದಲ್ಲಿ ಎಸ್ವಿಪಿ ಅವರ ಸ್ವಾಗತ- ಅಭಿನಂದನ ಕಾರ್ಯಕ್ರಮ. ಅದರ ಸಂಯೋಜನೆ ಏರ್ಯ ಲಕ್ಷ್ಮೀನಾರಾಯಣ ಆಳ್ವರದು, ಸಭಾಧ್ಯಕ್ಷತೆ ಡಾ| ಶಿವರಾಮ ಕಾರಂತರದು. ಅವರು ಭಾಷಣ ಮಾಡುತ್ತ ಹೇಳಿದರು “ಈ ಏರಿಯಾವನ್ನೆಲ್ಲ

ಆಳುತ್ತಿರುವ ಆಳ್ವರು ನನ್ನನ್ನು ಕರೆದಿದ್ದಾರೆ. ಮೈಸೂರಿನ ಈ ನಾಣ್ಯ (ಪ್ರೊ| ಎಸ್ವಿಪಿ). ನಮ್ಮ ಕರಾವಳಿಯಲ್ಲಿ ಹೇಗೆ ಚಲಾವಣೆಯಾಗುತ್ತದೆ ಎಂಬುದನ್ನು ನೋಡುವ ಕುತೂಹಲ ನನಗೂ ಇದೆ’! ಕಾರಂತರು ಹೇಳಿದ ನಾಣ್ಯ ಕರಾವಳಿಯಲ್ಲಿ ಚೆನ್ನಾಗಿ ಚಲಾವಣೆಯಾಯಿತು. ಹಾಗೆಯೇ ಆಳ್ವರ ಕುರಿತು ಹೇಳಿದ ‘ಏರಿಯಾ’ ಭೌಗೋಳಿಕವಲ್ಲ- ಮಾನಸಿಕ. ಬಹುವಿಧದ ಅಭಿರುಚಿ- ಆಸಕ್ತಿ ಮನೋಧರ್ಮಗಳ ಜನರನ್ನೆಲ್ಲ ಆಳ್ವರು ತಮ್ಮ ಕಾಂತ ವ್ಯಕ್ತಿತ್ವದಿಂದ ಗೆದ್ದಿದ್ದರು. ಅದನ್ನೇ ಕಾರಂತರು ‘ಕಾರಂತ ಸಮ್ಮಿತ’ವಾಗಿ ಕಾರಂತ ಶೈಲಿಯಲ್ಲಿ ವರ್ಣಿಸಿದ್ದರು.

ಹೌದು- ‘ಏರ್ಯ ಲಕ್ಷ್ಮೀನಾರಾಯಣ ಆಳ್ವ’ ಎಂಬ ದೀಘ ನಾಮೋಲ್ಲೇಖ ಬೇಕಾಗಿಲ್ಲ – “ಆಳ್ವ” ಎಂದರೆ ಸಾಕು. ಅದು ಎಲ್ಲರ ಮನದಗಲವನ್ನು

ಹಬ್ಬಿಕೊಳ್ಳುತ್ತದೆ. ಅದಕ್ಕೆ ಮುಖ್ಯ ಕಾರಣ ಸ್ಫಟಿಕ ಶಲಾಕೆಯಂತಹ ಅವರ ಪಾರದರ್ಶಕ ವ್ಯಕ್ತಿತ್ವ ಹಾಗೆಯೇ ಬಹುವಿಧಾಸಕ್ತಿ, ಆಸಕ್ತಿ ಮಾತ್ರವಲ್ಲ ಅನೇಕ ಕ್ಷೇತ್ರಗಳಲ್ಲಿ ಪ್ರಕಟವಾದ ಅವರ ಅಪರಿಮಿತಿ ಶಕ್ತಿ. ಧರ್ಮ, ಸಮಾಜ, ಸಾಹಿತ್ಯ ಈ ಮೂರೂ ಅವರಿಗೆ ಅತ್ಯಂತ ಪ್ರಿಯ; ಮೂರರಲ್ಲೂ ಅವರಿಗೆ ನಿರಾಯಾಸ ಪ್ರವೇಶ.

ಸಾಹಿತ್ಯದಲ್ಲಿ ಅದರ ವಿವಿಧ ಪ್ರಕಾರಗಳೊಂದಿಗೆ ಜಾನಪದದಲ್ಲಿ ಆರಾಧನ ಕಲೆ ಮತ್ತು ಅದರ ಪದ್ಧತಿ ಪರಂಪರೆಯಲ್ಲಿ ಅವರದು ತಲಸ್ಪರ್ಶಿಯಾದ ಪರಿಜ್ಞಾನ. ಕನ್ನಡದಲ್ಲೂ ತುಳುವಿನಲ್ಲೂ ಅವರದು ಮಿತವಾದರೂ ಮೌಲಿಕವಾದ ಕೃತಿ ರಚನೆ. ಅವರು ಹೈಸ್ಕೂಲಿನ ಹೊಸ್ತಿಲನ್ನು ದಾಟಿದವರಲ್ಲ ಆದರೆ ಜಗತ್ತಿನ ಅತ್ಯುತ್ಕೃಷ್ಟ ಸಾಹಿತ್ಯಗಳನ್ನೆಲ್ಲ ಆಂಗ್ಲ ಅನುವಾದಗಳಲ್ಲಿ ಓದಿ ಅರಗಿಸಿಕೊಂಡವರು.

ಜಾನಪದ ಕೇತ್ರದಲ್ಲಿ ಅವರ ಕ್ಷಮತೆ, ತನ್ಮಯತೆ ಎಷ್ಟಿತ್ತೆಂದರೆ, 1969ರ ಜನವರಿ ಅಂತ್ಯದಲ್ಲಿ ಮಂಗಳೂರಿನಲ್ಲಿ ದ್ವಿತೀಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಾಗ, ಸ್ವತಃ ಜಾನಪದ ಪ್ರೇಮಿಯಾಗಿದ್ದ ಆಗಿನ “ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಎಚ್‌. ಎಲ್‌. ನಾಗೇಗೌಡರು ‘ಆಳ್ವರೇ ನಿಮ್ಮ ಆಳ ಈಗ ಗೊತ್ತಾಯಿತು’ ಎಂದು ಉದ್ಗರಿಸಿದ್ದರು!

ಆಳ್ವರು ಅಖಿಲ ಕರ್ನಾಟಕ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷರಾಗಿದ್ದವರು. ದಕ್ಷಿಣ ಕನ್ನಡ ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿಯೂ ಇದ್ದವರು. 15ರ ಹರೆಯದಲ್ಲೇ ಹರಿಜನರ ಸಂಘಟನೆಗಾಗಿ ಶ್ರಮ ವಹಿಸಿದವರು. ಅವರು ಕ್ರಿಶ್ಚಿಯನ್‌ ಬಂಧುಗಳಿಗೂ ಮುಸ್ಲಿಂ ಸೋದರರಿಗೂ ಸ್ಟೀಕಾರ್ಯರೂ ಪ್ರಿಯರೂ ಆಗಿದ್ದರು. ಪೇಜಾವರ ಶ್ರೀಪಾದರಿಗೂ ಅವರು ಸಮೀಪ; ಧರ್ಮಸ್ಥಳ ಹೆಗ್ಗಡೆಯವರಿಗೂ ಆತ್ಮೀಯ- ನಿಜವಾದ ಅರ್ಥದಲ್ಲಿ  ಅವರು “ವಸುಧೈವ ಕುಟುಂಬಕ. ಅವರು ‘ಇವ. ನಮ್ಮವ, ಇವ ನಮ್ಮವ, ಇವ ನಮ್ಮವ’ ಎಂಬಂತೆ ಎಲ್ಲರಿಗೂ ಬೇಕಾದವರು.

ಆಳ್ವರು ನಿಜವಾದ ಗಾಂಧೀವಾದಿ. ಆದರೆ ಅವರಿಗೆ ಗಾಂಧೀ ಮಂತ್ರ ಆಲೀ ಬಾಬನಂತೆ ಚಿನ್ನದ ಗುಹೆಯ ಬಾಗಿಲನ್ನು ತೆರೆಯಿಸುವ “ಸೀಸೇಮ್‌’ ಮಂತ್ರವಾಗಿರಲಿಲ್ಲ ಅವರುಮೊಳಹಳ್ಳಿಶಿವರಾಯರಿಂದ ಪ್ರೇರಿತರಾದ ಸಹಕಾರಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿಯೂ ಇದ್ದವರು. ಆದರೆ ತಮ್ಮ ವ್ಯವಹಾರದಲ್ಲಿ “ಹಲಸಿನ ಮೇಣ’ ತಪ್ಪಿಯೂ ತಮ್ಮ ಕೈಗೆ ಅಂಟದಂತೆ ನೋಡಿಕೊಂಡವರು. ಅವರಿಗೆ ಅನ ಸಮ್ಮಾನ- ಸತ್ಕಾರ, ಪುರಸ್ಕಾರ ಪ್ರಶಸ್ತಿಗಳು ಬಂದುವು, ಸಂದುವು. ಆದರೆ ಅವುಗಳ ಭಾರದಲ್ಲಿ ಅವರ ಕೊರಳು ಕುಸಿಯಲಿಲ್ಲ ತಮಗೆ ಏನೂ ಬಂದಿಲ್ಲ ಏನೂ ಸಂದಿಲ್ಲ ಎಂಬಂತೆ, ದೂರದಲ್ಲಿ- ತುಂಬಾ ಎತ್ತರದಲ್ಲಿ ನಿಂತವರು. ಈ ನಮ್ಮಆಳ್ವರು ಮೊನ್ನೆ ಶನಿವಾರದ ವರಗೂ ನಮ್ಮೊಂದಿಗೇ ಇದ್ದವರು! ಇದು ಇನ್ನಿಲ್ಲದ ಏರಿಯಾದ ಆ ಅಣ್ಣನಿಗಾಗಿ ತಮ್ಮನೊಬ್ಬನ ಕಂಬನಿ!

ಎಂ. ರಾಮಚಂದ್ರ

(ಉದಯವಾಣಿ)

error: Content is protected !!
Share This