ಅಣ್ಣುಹಿತ್ತಲು, ಮೂಡ್ಕಣಿ ,ಕೆರೆಮನೆ, ಕರ್ಕಿ ಹಾಸ್ಯಗಾರ, ಇಡಗುಂಜಿ ಯಾಜಿ, ಬಳ್ಕೂರು ಯಾಜಿ, ಚಿಟ್ಟಾಣಿ, ಕೊಂಡದಕುಳಿ, ಜಲವಳ್ಳಿ ಮನೆತನದ ಅಲ್ಲದೇ ಇನ್ನೂ ಅನೇಕ ಯಕ್ಷಗಾನ ಕಲಾವಿದರ ತವರೂರಾದ ಹೊನ್ನಾವರ ತಾಲ್ಲೂಕು ನಿಜಾರ್ಥದಲ್ಲಿ ಯಕ್ಷ ಮಣಿಗಳ ಹೊನ್ನಿನ ಗಣಿ.

ಶರಾವತಿ ನದಿ, ಜೋಗದಲ್ಲಿ ರೌದ್ರಳಾಗಿ
ಧುಮ್ಮಿಕ್ಕಿ ರಾಜ್ಯಕ್ಕೇ ಬೆಳಕು ನೀಡಿದರೆ
ಮುಂದೆ ಪ್ರಶಾಂತವಾಗಿ ಹರಿದು ಸಾಗರ ಸೇರುವವರೆಗೂ ರಾಷ್ಟ್ರಕ್ಕೆ ನೀಡಿದ್ದು, ದಡದಲ್ಲಿ ಚೆಲ್ಲಿದ್ದು ಯಕ್ಷ ರತ್ನಗಳನ್ನು.

ಅಂತಾ ರತ್ನಗಳಲ್ಲಿ ಶ್ರೀಪಾದ ಹೆಗಡೆ, ಹಡಿನಬಾಳ ಒಬ್ಬರು.

ತುಂಬಾ ಹಳೆಯ ನೆನಪುಗಳ ಖಜಾನೆಗೆ ಕೈ ಹಾಕಿದರೆ ಶ್ರೀಪಾದ ಹೆಗಡೆ,ಹಡಿನಬಾಳ ಅವರ ವೇಷದ ಕುರಿತು ಸ್ಪಷ್ಟ ಚಿತ್ರಣ ನನ್ನಲ್ಲಿಲ್ಲ.ಆದರೆ ಕಳೆದ ಹತ್ತು ವರ್ಷಗಳಿಂದ ಇಚೆಗೆ ಯಾವಾಗಿನಿಂದ ಕೆರೆಮನೆ ಮೇಳದ ಮುಖ್ಯ ಪ್ರತಿ ನಾಯಕ ಕಲಾವಿದರಾಗಿ ಬೆಂಗಳೂರಿಗೆ “ಸಪ್ತಕ” ಆಯೋಜಿಸುವ ಯಕ್ಷಗಾನ ಪ್ರದರ್ಶನಕ್ಕೆ ಬರಲು ಪ್ರಾರಂಭ ಮಾಡಿದರೋ,ನಾನು ಸಹಿತ ಹಲವಾರು ಯಕ್ಷಗಾನ ಪ್ರೇಮಿಗಳು ಅವರ ಹುಚ್ಚು ಅಭಿಮಾನಿಗಳೇ ಆದೆವು. ಇದರಲ್ಲಿ ಶಾಸ್ತ್ರೀಯ ಸಂಗೀತ ಶ್ರೋತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ನನಗೆ ಹೆಮ್ಮೆಯ ಸಂಗತಿ.

“ಸಪ್ತಕ ” ಸಂಸ್ಥೆ ಏಳು ವರ್ಷದ ಹಿಂದೆಯೆ ಶ್ರೀಪಾದ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಿತ್ತು. ಅವರ ಕೊನೆಯ ಕಷ್ಟದ ದಿನಗಳಲ್ಲಿ “ಸಪ್ತಕ” ತನ್ನ ಅಭಿಮಾನೀ ಬಳಗದವರಿಂದ ಸುಮಾರು ಒಂದು ಲಕ್ಷ ರೂಪಾಯಿ ಸಂಗ್ರಹಿಸಿ ಅವರಿಗೆ ಧನ ಸಹಾಯ ಮಾಡಿದೆ.

ನಾನು ಏರ್ಪಡಿಸಿದ ಸುಮಾರು ಹತ್ತು ಪ್ರದರ್ಶನಗಳಲ್ಲಿ ಅವರ ಪಾತ್ರಗಳು ಈರೀತಿ ಇದೆ.

“ವಾಲಿ ಮೋಕ್ಷ”ದಲ್ಲಿ ವಾಲಿ, “ದಕ್ಷ ಯಜ್ಞ” ದಲ್ಲಿ ದಕ್ಷ ( ಎರಡು ಬಾರಿ), “ಪಂಚವಟಿ” ಯಲ್ಲಿ ಮಾಯಾ ಶೂರ್ಪನಖಿ, “ಶ್ರೀ ರಾಮಾಂಜನೇಯ”ದಲ್ಲಿ ಆಂಜನೇಯ (ಎರಡು ಬಾರಿ) “ಸೀತಾಪಹರಣ”ದಲ್ಲಿ ರಾವಣ, “ಮಾರುತಿ ಪ್ರತಾಪ” ದಲ್ಲಿ ಮಾರುತಿ(ಎರಡು ಬಾರಿ) ಹೀಗೆ ಅವರು ಮಾಡಿದ ಪಾತ್ರವನ್ನು ಪ್ರೇಕ್ಷಕರು ಎಷ್ಟು ಮೆಚ್ಚಿದ್ದರು ಎಂದರೆ ಇದೇ ಆಖ್ಯಾನ ಇರಲಿ ಶ್ರೀಪಾದ ಹೆಗಡೆ ಅವರು ಇದೇ ಪಾತ್ರ ಮಾಡಲಿ ಎಂದು ನನ್ನನ್ನು ಆಗ್ರಹ ಪೂರ್ವಕವಾಗಿ ಕೇಳಿಕೊಳ್ಳುತ್ತಾ ಇದ್ದರು.

ಅವರು ಮೂಲತಃ ಹೊನ್ನಾವರ ತಾಲ್ಲೂಕಿನ ಮಾಳಕೋಡ ಗ್ರಾಮದ ಗುಡಿಹಿತ್ಲು ಮನೆತನದವರು. ಹಾಗಾಗಿ ನನ್ನ ದಾಯಾದಿ ಬಂಧುಗಳೂ ಹೌದು.
ಹಿಂದೊಮ್ಮೆ ಮಹಾಮಾರಿ ರೋಗ ಬಂದು ಊರಿನ ಅನೇಕ ಕುಟುಂಬಗಳು ಬೇರೆ ಬೇರೆ ಊರುಗಳಿಗೆ ಗುಳೇ ಹೋಗಿ ವಸತಿ ಕಲ್ಪಿಸಿಕೊಂಡರು. ಅಂತಹ ಕುಟುಂಬಗಳಲ್ಲಿ ಇವರದೂ ಒಂದು. ಶರಾವತಿ ನದಿಯ ಆಚೆ ದಂಡೆಯಲ್ಲಿರುವ ಹಡಿನಬಾಳದಲ್ಲಿ ಅವರ ಮಾವ ಯಕ್ಷಗಾನ ಕಲಾವಿದ, ಸಂಘಟಕ ಶ್ರೀ ಸತ್ಯ ಹೆಗಡೆ ಅವರ ಆಶ್ರಯದಲ್ಲಿ ನೆಲೆ ಕಂಡು ಕೊಂಡರು. ಹಾಗೆಯೇ ಜೀವನೋ ಪಾಯಕ್ಕಾಗಿ ಕೈ ಕುಸುರಿ ಕಲೆಗಳಾದ ಹೊಲಿಗೆ, ಕಟ್ಟಿಗೆಯಲ್ಲಿ ಕೆತ್ತನೆ, ಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ( ಅವರಿಗೆ ಅಪಾರ ಬೇಡಿಕೆ ಇದ್ದ ಉಪಕಸುಬು) ಎಲ್ಲವನ್ನೂ ಮಾಡಿ ಸಂಸಾರ ರಥ ಎಳೆಯುತ್ತಿದ್ದರು. ಸಂಗಡ ಗುರು, ಸೋದರಮಾವ, ಆಶ್ರಯದಾತ ಎಲ್ಲ ಆದ ಸತ್ಯ ಹೆಗಡೆ ಅವರ ಒತ್ತಾಸೆ, ಪ್ರೋತ್ಸಾಹದಿಂದ ಗುಂಡಬಾಳಾ ಹನುಮಂತ ದೇವರ ಸನ್ನಿಧಾನದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನದಲ್ಲಿ ವೇಷ ಹಾಕಿ ಕಲಾವಿದರಾಗಿ ಬೆಳೆಯುತ್ತಾ ಬಂದರು. ಈ ಎಲ್ಲಾ ವಿಷಯ ಈಗಾಗಲೇ ಸಾಕಷ್ಟು ಪತ್ರಿಕೆಯಲ್ಲಿ, ಅವರ ಕುರಿತು ಬರೆದ ಲೇಖನದಲ್ಲಿ ದಾಖಲಾಗಿದೆ.

ಇನ್ನು ಕಲಾವಿದನಾಗಿ ನೋಡುವುದಾದರೆ ಅವರೊಬ್ಬ ಅಭಿಜಾತ ಕಲಾವಿದ, ಯಾವ ಪ್ರಸಂಗದಲ್ಲಿ ಯಾವ ಪಾತ್ರ ನಿರ್ವಹಿಸಿದ ರೂ ಅದಕ್ಕೆ ತಮ್ಮದೇ ಛಾಪನ್ನು ಒತ್ತಿ ಸೈ ಎನಿಸಿಕೊಂಡ ವ್ಯಕ್ತಿ.

ಹನುಮಂತನ ಭಕ್ತಿ ,ವೀರ ಭಾವಾಭಿವ್ಯಕ್ತಿಯಲ್ಲಿ ಎಷ್ಟು ತಾದಾತ್ಮ್ಯ ಹೊಂದುವರೋ ಅಷ್ಟೇ ಚೆನ್ನಾಗಿ ಸೀತಾಪಹರಣದ ರೌದ್ರ ರಾವಣನಾಗಿ, ಗದಾಯುದ್ಧದ ರುದ್ರ ಭಯಂಕರ ಭೀಮ ನಾಗಿ ಅಭಿನಯಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುವ ಮಾಂತ್ರಿಕರಾಗುತ್ತಾರೆ.
ನನಗೆ ಅವರ “ದಕ್ಷ ಯಜ್ಞ” ಆಖ್ಯಾನದ ದಕ್ಷನ ಪಾತ್ರ ನಿರ್ವಹಿಸಿದ ಪರಿ ನಿಜಕ್ಕೂ ಅದ್ಭುತ ಆಗಿತ್ತು. ಅದಕ್ಕಾಗಿಯೇ ಮೇಲಿನ ತಲೆಬರಹ.

ಪ್ರಥಮದಲ್ಲಿ ದೇವತೆಗಳೆಲ್ಲ ಸೇರಿ ಕೈಲಾಸ ಅಧಿಪತಿ ಈಶ್ವರನ ಅಧ್ಯಕ್ಷತೆಯಲ್ಲಿ “ಜ್ಞಾನ ಸತ್ರ” ಸಭೆ ಏರ್ಪಡಿಸಿದಾಗ, ಅಯಾಚಿತವಾಗಿ ಆಗಮಿಸಿದ “ದಕ್ಷ “ನ ಗತ್ತು, ಸಭೆಯ ಸುತ್ತಲೂ ಗಮನಿಸಿ ನೋಡಿ ಎಲ್ಲರಿಂದಲೂ ಗೌರವ ವಂದನೆಗಳನ್ನು ಅಪೇಕ್ಷಿಸಿ ಪಡೆಯುವ ಪರಿ, ಎಲ್ಲಾ ಶ್ರೀಪಾದ ಹೆಗಡೆ ಅವರದೇ ಬೇರೇ, ಹಾಗೇ ಮುಖ್ಯ ಪೀಠದಲ್ಲಿ ಕುಳಿತ ಈಶ್ವರ ತನಗೆ ಗೌರವ ಕೊಡಲಿಲ್ಲ ಎಂಬ ಕಾರಣದಿಂದ ಹೆಣ್ಣು ಕೊಟ್ಟ ಮಾವ ಎಂಬುದನ್ನೂ ನೋಡದೇ ಹಲವು ರೀತಿಯಲ್ಲಿ ಜರಿದು ,ಹಂಗಿಸಿ, ನಿಂದಿಸಿ ಸಭೆಯಿಂದ ದಿಢೀರನೆ ಹೊರಕ್ಕೆ ಹೋಗುವ ಸಂದರ್ಭದಲ್ಲಿ, ಅವರ ಭಾವಾವೇಶ ಅತ್ಯಂತ ಮನನೀಯ ಆಗಿತ್ತು. ಹಾಗೆಯೇ ದೀರ್ಘ ದ್ವೇಷಿಯಾಗಿ ದ್ವೇಷ ಸಾಧಿಸಲು ತಾನೇ ಮುಂದೆ ನಿಂತು “ನಿರೀಶ್ವರ ಯಾಗ” ಅಂದರೆ ಈಶ್ವರನಿಗೆ ಹವಿಸ್ಸನ್ನು ಅರ್ಪಿಸದೆ ಯಾಗ ಪೂರೈಸಲು ಪ್ರಯತ್ನಿಸಿ ಈಶ್ವರನನ್ನು ಅವಮಾನ ಮಾಡುವ ಸಂದರ್ಭದಲ್ಲೂ,ಮಗಳು ಪಾರ್ವತಿಯು ಸಭೆಗೆ ಬಂದು ಈಶ್ವರನಿಗೆ ಹವಿಸ್ಸು ನೀಡದೆ ಯಾಗ ಮುಂದುವರಿಸಿದಾಗ, ಪಾರ್ವತಿ ಕ್ರೋಧಾವಿಸ್ಟಳಾಗಿ ಅಗ್ನಿ ಪ್ರವೇಶ ಮಾಡಿದಾಗಲೂ ಪಶ್ಚಾತ್ತಾಪ ಪಡದೇ, ವೀರಭದ್ರನಿಂದ ಸೋತು ಸುಣ್ಣಾಗಿ ಅವಮಾನಿತನಾಗಿ, ಮುಂದೆ ಈಶ್ವರನಿಂದಲೇ ಕ್ಷಮೆಗೊಳಗಾಗಿ ಯಾಗ ಪೂರೈಸುವ ಎಲ್ಲಾ ಸಂದರ್ಭದಲ್ಲೂ ಶ್ರೀಪಾದ ಹೆಗಡೆ ಅವರ ಅಭಿನಯ, ಹಿತ ಮಿತವಾದ ಮಾತು ಅವಿಸ್ಮರಣೀಯ.

ಅನೇಕ ಪ್ರಶಸ್ತಿ ಪುರಸ್ಕಾರ ಗಳನ್ನೂ, ಸಾವಿರಾರು ಅಭಿಮಾನಿಗಳನ್ನು ಪಡೆದ ಅಭಿಜಾತ, ಅದ್ಭುತ ಕಲಾವಿದನನ್ನು ನಾವು ಕಳೆದ ಕೊಂಡೆವು.

ಭುವಿಯಲಿ ಯಕ್ಷ ರಾಜನಾಗಿ ಮೆರೆದ ಶ್ರೀಪಾದ ಹೆಗಡೆ ಅವರು ಯಕ್ಷ ನಕ್ಷತ್ರ ವಾಗಿ ಬಾನಿನಲ್ಲಿ ಬೆಳಗುತ್ತಿದ್ದಾರೆ.

  • ಜಿ.ಎಸ್. ಹೆಗಡೆ, “ಸಪ್ತಕ”, ಬೆಂಗಳೂರು
error: Content is protected !!
Share This