ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರು ಅವಿಭಜಿತ ದಕ್ಷಿಣ ಕನ್ನಡದ ಪಂಡಿತ ಪರಂಪರೆಯವರು. ಮಾತ್ರವಲ್ಲ. ಅಖಿಲ ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ಅಳಿಯದ ಸಾರಸ್ವತಕಾರ್ಯವನ್ನುಮಾಡಿದವರು. ಕಾಶ್ಮೀರದ ಚರಿತ್ರೆಯನ್ನು ಸಂಸ್ಕೃತ ಕಾವ್ಯದಲ್ಲಿ ರಚಿಸಿದ ಕಾಶ್ಮೀರದ ಕಲ್ಹಣನ ‘ರಾಜತರಂಗಿಣಿ’ಯನ್ನು ಎರಡು ಸಂಪುಟಗಳಲ್ಲಿ ಕನ್ನಡಕ್ಕೆ ಅನುವಾದ ಮಾಡಿ ಅದರ ಪ್ರಕಟಣೆಯನ್ನೂ ಮಾಡಿದವರು ನೀರ್ಪಾಜೆ ಭೀಮ ಭಟ್ಟರು. ‘ರಾಜತರಂಗಿಣಿ’ ಕನ್ನಡಕ್ಕೆ ಅನುವಾದವಾದದ್ದು ಅದೇ ಸರ್ವಪ್ರಥಮ. ಈ ಗ್ರಂಥದ ಮೊದಲ ಭಾಗ ಪ್ರಕಟವಾದದ್ದು 1993 ಮತ್ತು ಎರಡನೆಯ ಭಾಗ ಪ್ರಕಟವಾದದ್ದು1997ರಲ್ಲಿ ಈ ಎರಡೂ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಗೌರವವೂ ಪಾತ್ರವಾಯಿತು. ಅದಕ್ಕಾಗಿಯೇ ನೀರ್ಪಾಜೆ ಭೀಮ ಭಟ್ಟರು ‘ಕನ್ನಡದ ಕಲ್ಹಣ’ ಎಂದೇ ಕರೆಯಲ್ಪಟ್ಟರು. ಇದು ತುಳುನಾಡಿಗೆ ಹೆಮ್ಮೆ ತರುವ ಸಂಗತಿ. ಮುಂದೆ ಕಾಶ್ಮೀರದ ಮತ್ತೊರ್ವ ಕವಿ ಬಿಲ್ಹಣನ ‘ವಿಕ್ರಮಾಂಕದೇವಚರಿತಂ’ ಕೂಡ ಇವರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟಿತು. ಅದು ಮಾತ್ರವಲ್ಲದೆ ಸಂಸ್ಕೃತ ಕವಿ, ಆಲಂಕಾರಿಕನಾದ ರಾಜಶೇಖರ ಕವಿಯ ‘ಕಾವ್ಯಮೀಮಾಂಸೆ’ಯನ್ನೂ ಕನ್ನಡಕ್ಕೆ ತಂದ ಅಪೂರ್ವ ಸಾರಸ್ವತ ಸಾಧಕರು ದಿ.ನೀರ್ಪಾಜೆ ಭೀಮ ಭಟ್ಟರು. ಇಂಥ ಅನುಪಮ ವಿದ್ಯತ್ತೆಯ ಸಾಹಿತ್ಯ ಕಾರ್ಯ ಮಾಡಿ ದಕ್ಷಿಣ 2,000 ಇಸವಿಯ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡದ ಹನ್ನೊಂದನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರಿವರು. ಸಂಸ್ಕೃತ ನಾಟಕ, ವಿಮರ್ಶೆ, ಕಥೆ, ಸಂಪಾದನ, ಚಿಂತನಶೀಲ ಬರಹಗಳು ಇವೇ ಮೊದಲಾದ ಸಾಹಿತ್ಯಿಕ ಪ್ರಕಾರಗಳಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲೂ ಸಮಾನ ಪ್ರಭುತ್ವ ಪಡದ ಅಪೂರ್ವ ಸಾಹಿತಿ. ಇವರ ಊರಾದ ಕನ್ಯಾನದ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಬೋರ್ಡಿನ ಸದಸ್ಯರಾಗಿಯೂ ಸಮಾಜ ಸೇವೆ ಸಲ್ಲಿಸಿದ ಇವರ ವ್ಯಕ್ತಿತ್ವವೇ ಅನನ್ಯ. ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ, ಬಂಟ್ವಾಳ ಮತ್ತು ಕನ್ನಡ ಸಾಹಿತ್ಯ ಪರಿಷತ್‌, ಬಂಟ್ವಾಳ ತಾಲೂಕು ಇವರು ಜಂಟಿಯಾಗಿ ಭೀಮ ಭಟ್ಟರ ಸಂಸ್ಮರಣಾ ಕಾರ್ಯಕ್ರಮವನ್ನು ಡಿ. 25ರಂದು ನಡೆಸಲಿದ್ದಾರೆ. ಅಂದು ‘ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ’ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳೂ ನಡೆಯಲಿವೆ.

ಡಾ.ಎಂ. ಪ್ರಭಾಕರ ಜೋಶಿಗೆ ಪ್ರಶಸ್ತಿ

ಡಾ.ಎಂ.ಪ್ರಭಾಕರ ಜೋಶಿ ಅಭಿಜ್ಞ ಯಕ್ಷಗಾನ ಕಲಾವಿದರಾಗಿ, ವ್ಯತ್ಪತ್ತಿಯುಳ್ಳ ಲೇಖಕರಾಗಿ, ವಿಮರ್ಶಕರಾಗಿ, ಕೋಶಕಾರರಾಗಿ ಮಾತ್ರವಲ್ಲ ತತ್ತ್ವಶಾಸ್ತ್ರಜ್ಞರಾಗಿ ಸಿದ್ದಿಹೊಂದಿದ ಪ್ರಸಿದ್ಧರು. ಪ್ರತಿಷ್ಠಿತ ಪಾರ್ತಿಸುಬ್ಬಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿಯೇ ಮೊದಲಾದ ಮಾನ ಸಮ್ಮಾನಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಆಚಾರ್ಯ ಸ್ಥಾನವನ್ನು ಗಳಿಸಿದವರು. ಯಕ್ಷಗಾನ ಕಲೆಯ. ನೆಲೆಯನ್ನು ವಿಶ್ವರಂಗ ಭೂಮಿಯ. ದೃಷ್ಟಿಯಲ್ಲಿ ನೋಡುತ್ತಾ, ಯಕ್ಷಗಾನ ಕಲೆಯ ಅಂತರಂಗ ಸೌಂದರ್ಯ ವರ್ಧಿಸುವಲ್ಲಿ ಇವರು. ಕೊಟ್ಟ ಒಳನೋಟಗಳುಳ್ಳ ಚಿಂತನೆಗಳು ಬಹಳ ಮಹತ್ವವನ್ನು ಹೊಂದಿದಂಥದ್ದು.. ಜತೆಗೆ ಭಾರತೀಯ ತತ್ತ್ವಶಾಸ್ತ್ರದ ಕುರಿತಾಗಿ ಸಂಶೋಧನಾ. ಗ್ರಂಥಗಳನ್ನೂ, ‘ತತ್ತ್ವ ಮನನ’ ಎಂಬ ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ. ಅವರು ತುಳು ಭಾಷೆಯಲ್ಲೂ ಸಾಹಿತ್ಯಿಕ ಸೇವೆಯನ್ನು ಮಾಡಿದ ಬಹುಮಾನ್ಯರಾಗಿದ್ದಾರೆ.

ಸಮಾಜದ ನಡವಳಿಕೆಯಲ್ಲಿ ಬದ್ಧತೆ, ಶಿಸ್ತು, ಎಂದೂ ದಣಿಯದ ಜೀವನೋತ್ಸಾಹ, ವಿಶ್ವಕಲೆಯ ಬಗೆಯನ್ನು ಬೆರಗುಗಣ್ಣಿನಿಂದ. ನೋಡುವ. ಮುಗ್ಧ ನೋಟ-. ವಿದಗ್ಧ ಚಿಂತನೆ; ಯಕ್ಷಗಾನ ಕಲೆಯ. ಒಳಗಿದ್ದು ಆವೇಶಕ್ಕೊಳಗಾಗದೆ ಹೊರಗಿನವನಂತೆ ಕಲೆಯನ್ನು ಕಾಣುವ. ಸ್ವಸ್ಥ ಮನಸ್ಸು ಇವೆಲ್ಲವೂ ಅನುಸ್ಮರಣೀಯ. ಬಿ.ಸಿರೋಡು ‘ಜ್ಞಾನ ಜ್ಯೋತಿ’ ಸಭಾಂಗಣ, ಕ್ಷೇತ್ರ. ಶಿಕ್ಷಣಾಧಿಕಾರಿಗಳ ಕಚೇರಿ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಜೋಶಿಯವರಿಗೆ ‘ನೀರ್ಪಾಜೆ’ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ.

ಕೃಷ್ಣಪ್ರಕಾಶ ಉಳಿತ್ತಾಯ

error: Content is protected !!
Share This