ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪಟ್ಟಿ ನೋಡಿದೆ. ಅವರಲ್ಲಿ ಈರ್ವರನ್ನು ಸಪ್ತಕ ಸಂಸ್ಥೆ ನಾಲ್ಕಾರು ವರ್ಷಗಳ ಹಿಂದೆಯೇ ಸನ್ಮಾನಿಸಿ ಗೌರವಿಸಿದೆ.

ಶ್ರೀಯುತ ಸುಬ್ರಹ್ಮಣ್ಯ ಧಾರೇಶ್ವರ ಅವರು ಸುಮಾರು ನಲವತ್ತೈದು ವರ್ಷಗಳಿಂದ ಪರಿಚಿತರು. ನಾನು ಗೋಕರ್ಣದಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ ವೃತ್ತಿಯಲ್ಲಿ ಇದ್ದಾಗ ಇವರು ಹದಿನೈದು ಹದಿನಾರರ ಹುಡುಗ, ಇವರ ಸಂಗೀತದ ಪ್ರೀತಿ ನಮ್ಮ ಮನೆಗೆ ಆಗಾಗ ಬರುವಂತೆ ಮಾಡುತ್ತಿತ್ತು. ಸುಮಧುರ ಸ್ವರದಲ್ಲಿ ಇವರು ಹಾರ್ಮೋನಿಯಂ ನುಡಿಸುತ್ತಾ ಅತ್ಯುತ್ತಮವಾಗಿ ಭಜನೆ ಹಾಡುತ್ತಿದ್ದರೆ ಅದಕ್ಕೆ ನನ್ನ ತಬಲಾ ಸಾಥ್ ಹಾಗೂ ಗೀತಾಳ ಹತ್ತಿರ ಕೆಲವು ರಾಗ ರಾಗಿಣಿಗಳ ಬಗ್ಗೆ ಮಾಹಿತಿ ಪಡೆಯುವ ಅವರ ಆಸಕ್ತಿ ನಮಗೆ ಆಗಲೇ ತುಂಬಾ ಖುಷಿ ಕೊಡುತ್ತಿತ್ತು.

ಮುಂದೆ ನೌಕರಿ ನಿಮಿತ್ತ ವರ್ಗಾವಣೆಯಾಗಿ ಗೋಕರ್ಣ ದಿಂದ ಹಾವೇರಿಗೆ ಹೋದೆವು. ಅವರೂ ಯಕ್ಷಗಾನ ಭಾಗವತಿಕೆ ಕಲಿಯಲು ಮಾರ್ವಿ ನಾರಾಯಣ ಉಪ್ಪೂರು ಅವರ ಬಳಿ ಹೋದರು. ಮುಂದೆ ಅವರು ಅದರಲ್ಲೇ ಪ್ರಸಿದ್ಧಿ ಪಡೆಯುತ್ತಾ ಇರುವ ವಿಷಯ ತಿಳಿದು ನಾವಿಬ್ಬರೂ ತುಂಬಾ ಖುಷಿ ಪಡುತ್ತಿದ್ದೆವು.

ಆರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಪ್ತಕ ಹಾಗೂ ತುಳುನಾಡ ಕನ್ನಡಿಗರು ಸಂಸ್ಥೆಯವತಿಯಿಂದ ಕೆರೆಮನೆ ಮೇಳದ ಆಟ ಏರ್ಪಡಿಸಿದಾಗ
ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಮ್ಮ ಮುಂದೆ ಬೆಳೆದು ಪ್ರಖ್ಯಾತ ಭಾಗವತರಾಗಿ ಇಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆ ಆದ ವಿಷಯ ತಿಳಿದು ತುಂಬಾ ಸಂತೋಷ ಆಯಿತು.

ಹಾಗೇ ಇನ್ನೊಬ್ಬರು ಶ್ರೀ ಪ್ರಭಾಕರ ಜೋಶಿ. ಅವರನ್ನು ಕೆಲವು ದಶಕಗಳಿಂದ ನನ್ನ ಬಂಧುಗಳಾದ ಕೆರೆಮನೆಯವರ ಅವರ ಒಡನಾಟದಿಂದಾಗಿ ಹಾಗೂ ಅವರ ಪ್ರಕಾಂಡ ಪಾಂಡಿತ್ಯದಿಂದಾಗಿ ಅವರ ಅಭಿಮಾನಿ ಆಗಿದ್ದೆ.

ಸಪ್ತಕ ಸಂಸ್ಥೆಯವತಿಯಿಂದ ಏರ್ಪಡಿಸುವ ತಾಳಮದ್ದಳೆ ಕಾರ್ಯಕ್ರಮಕ್ಕೆ ಎರಡು ಮೂರು ಸಲ ಅವರನ್ನು ಆಹ್ವಾನಿಸಿದೆ. ಐದು ವರ್ಷಗಳ ಹಿಂದೆ ಅವರನ್ನು ಖ್ಯಾತ ಅಂಕಣಕಾರರು, ವಿಮರ್ಶಕರು ಆದ ರವಿಶಂಕರ ಅವರ ಅಧ್ಯಕ್ಷತೆಯಲ್ಲಿ ಸಪ್ತಕದ ವತಿಯಿಂದ ಸನ್ಮಾನಿಸಿದೆ. ಅವರೂ ಸಹ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದು ತುಂಬಾ ಹೆಮ್ಮೆಯ ಸಂಗತಿ.

ಇನ್ನೊಬ್ಬರು ನಿವೃತ್ತ ಐ ಎ ಎಸ್ ಅಧಿಕಾರಿ ಶ್ರೀ ಮದನಗೋಪಾಲ ಅವರು. ಅತ್ಯುತ್ತಮ ಅಧಿಕಾರಿ ಹಾಗೇ ಅಪರಿಮಿತ ಸಂಗೀತ ಪ್ರೇಮಿ. ಹಲವು ಕಾರ್ಯಕ್ರಮಗಳಲ್ಲಿ ಶ್ರೋತ್ರು ಗಳಾಗಿ ಭಾಗವಹಿಸಿ ಖುಶಿ ಪಟ್ಟು, ಸಪ್ತಕಕ್ಕೆ ವಿಶೇಷವಾದ ಸಹಾಯ ಸಹಕಾರವನ್ನೂ ಕೊಡುತ್ತಿದ್ದಾರೆ.

ಕಳೆದ ವರ್ಷ ಹೊನ್ನಾವರದಲ್ಲಿ ಎಸ್ ಡಿ ಎಂ ಕಾಲೇಜಿನಲ್ಲಿ ನಮ್ಮ ಸಂಸ್ಥೆಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು
ಬೇರೇ ಯಾವುದೋ ಕಾರಣಕ್ಕೆ ಆಕಡೆ ಬಂದವರು ನಮ್ಮ ಕಾರ್ಯಕ್ರಮಕ್ಕೂ ಬಂದು ಪೂರ್ತಿ ಕೇಳಿ ಸಂತೋಷ ಪಟ್ಟು ಬೆಂಗಳೂರಿನ ಯುವ
ಪ್ರತಿಭಾವಂತ ಕಲಾವಿದರಾದ ಷಡಜ ಗೋಡಖಿಂಡಿ ಹಾಗೂ ರೂಪಕ ಕಲ್ಲೂರರ್ಕರ ಅವರನ್ನು ಸನ್ಮಾಸಿಸಿದರು.
ಇವರೆಲ್ಲರಿಗೂ ಹಾಗೂ ಆಯ್ಕೆಯಾದ ಎಲ್ಲ ಮಹನೀಯರಿಗೂ ಅಭಿನಂದನೆಗಳು.

error: Content is protected !!
Share This