“ಆಂಗ್ಲ ಮಾಧ್ಯಮಕ್ಕೆ ಒತ್ತು ಕನ್ನಡಕ್ಕೆ ‘ಹೊಡೆತ’

ಹಿರಿಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ‘ಶ್ರೀ ಯಕ್ಷದೇಗುಲ-2019’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಪ್ರಾರಂಭಿಸುವ ಮೂಲಕ ಕನ್ನಡ ಮೂಲೆಗುಂಪಾಗುತ್ತಿದೆ. ಕನ್ನಡ ಮೂಲೆಗುಂಪಾದರೆ ಶುದ್ಧ ಕನ್ನಡವನ್ನು ಉಳಿಸಿ-ಬೆಳೆಸುವ ಯಕ್ಷಗಾನಕ್ಕೂ ಹೊಡೆತ ಬೀಳುವಂತಾಗುತ್ತದೆ ಎಂದು ಯಕ್ಷಗಾನ ವಿದ್ವಾಂಸ ಡಾ। ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.

ಕಾಂತಾವರದ ಶ್ರೀ ಯಕ್ಷದೇಗುಲದ ಆಶ್ರಯದಲ್ಲಿ ರವಿವಾರ ಸಂಜೆ ನಡೆದ ಶ್ರೀ ಕ್ಷೇತ್ರ ಕಾಂತಾವರದ ಸಭಾಭವನದಲ್ಲಿ ನಡೆದ 17ನೇ ವಾರ್ಷಿಕ ಯಕ್ಷೋಲ್ಲಾಸ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲು ಕನ್ನಡ ಕಲಿತು ನಂತರ ಉಳಿದ ಭಾಷೆಗಳನ್ನು ಅಭ್ಯಸಿಸಿದರೆ ನಮ್ಮಸಂಸ್ಕೃತಿ, ಯೋಚನ ವಿಧಾನ ಶ್ರೀಮಂತವಾಗಲು ಸಾಧ್ಯ ಎಂದರು.

ಕಾರ್ಯಕ್ರಮವನ್ನು ಸುಮತಿ ಆರ್‌. ಬಲ್ಲಾಳ್ ಉದ್ಘಾಟಿಸಿದರು. ಸಮಿತಿಯ ಗೌರವಾಧ್ಯಕ್ಷ ಡಾ| ಜೀವಂಧರ ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ಪ್ರದಾನ

ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಜಾರ್ಯ ಅವರಿಗೆ ಈ ಬಾರಿಯ ‘ಶ್ರೀ ಯಕ್ಷ ದೇಗುಲ’ ಪ್ರಶಸ್ತಿ ಪ್ರದಾನಮಾಡಲಾಯಿತು. ವಾದಿರಾಜ ಕಲ್ಲೂರಾಯ ಅಭಿನಂದನ ಭಾಷಣ ಮಾಡಿದರು.

ಕಾರ್ಕಳದ ‘ಯಕ್ಷಕಲಾರಂಗ’ದ ಅಧ್ಯಕ್ಷ ವಿಜಯ ಶೆಟ್ಟಿ, ‘ಶ್ರೀ ಯಕ್ಷದೇಗುಲ’ದ ಅಧ್ಯಕ್ಷ ಕೆ. ಶ್ರೀಪತಿ ರಾವ್‌, ಕೋಶಾಧಿಕಾರಿ ಕೆ. ಧರ್ಮರಾಜ ಕಂಬಳಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂಜಾನೆ ಮೇಳದ ಕಲಾವಿದರಿಂದ ‘ಪಾರಿಜಾತದಾಟ,’ ಮಧ್ಯಾಹ್ನ ‘ಅಂಗದ ಸಂಧಾನ’, ‘ಅತಿಕಾಯ ಕಾಳಗ’ ಕೂಟ, ಸಂಜೆ. ಶ್ರೀ ಯಕ್ಷದೇಗುಲದ ಬಾಲಕಲಾವಿದರಿಂದ ‘ರತ್ತಪ್ರಭಾ ಪರಿಣಯ’ ಆಟ ಜರಗಿತು.

ಶ್ರೀ ಯಕ್ಷದೇಗುಲದ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿದರು.

ಸಮ್ಮಾನ

ಕಾಂತಾವರ ಅ. ಹಿ.ಪ್ರಾ.ಶಾಲೆಯ ವಿಶ್ರಾಂತ ಮುಖ್ಯಶಿಕ್ಷಕಿ ಶ್ಯಾಮಲ ಅವರನ್ನು ಸಮ್ಮಾನಿಸಲಾಯಿತು. “ಶ್ರೀ ಯಕ್ಷ ದೇಗುಲ’ದ ಬಾಲಕಲಾವಿದ ಸುಜಿತ್‌ ದೇವಾಡಿಗ ಕಾರ್ತಿಕ್‌ ಕೋಟ್ಯಾನ್‌ (ಪಿಯುಸಿ), ಸುಜನ್‌, ಅಶ್ವಿತಾ, ಸುಷ್ಯಾ ಪ್ರಥಮ್‌, ಸಮೀಕ್ಷಾ (ಎಸ್ಸೆಸ್ಸೆಲ್ಸಿ) ಸಾಧಕರನ್ನುಶಾಲು ಹೊದಿಸಿ ಪ್ರಮಾಣ ಪತ್ರದೊಂದಿಗೆ ಪುರಸ್ಕರಿಸಲಾಯಿತು.

( ಉದಯವಾಣಿ )

error: Content is protected !!
Share This