ಅರ್ಥಧಾರಿ, ಚಿಂತಕ ಡಾ.ಎಂ.ಪ್ರಭಾಕರ ಜೋಶಿ ಕಿವಿಮಾತು

ಕಲೆಯನ್ನು ನೋಡುವ ದೃಷ್ಟಿ ಬದಲಾಗಬೇಕಿದೆ ಎಂದು ತಾಳಮದ್ದಳೆ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ತಿಳಿಸಿದ್ದಾರೆ.

ಡಾ.ಎಂ.ಪ್ರಭಾಕರ ಜೋಶಿ ಅಭಿನಂದನಾ ಸಮಿತಿ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಜೋಶಿ ವಾಗರ್ಥ ಗೌರವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
“ಕಲೆಯಲ್ಲಿ ವೈಭವೀಕರಣ ಮೀರಿ ಸತ್ಯದರ್ಶನದ ಕಡೆಗೆ ಹೋಗಬೇಕಾದ ಅಗತ್ಯವಿದೆ. ಅಂತೆಯೇ ಕಲೆಯನ್ನು ಅವಮಾನ ಮಾಡುವ ಯಾವುದೇ ಚಟುವಟಿಕೆಯನ್ನು ವಿರೋಧಿಸಬೇಕಿದೆ” ಎಂದರು.

“ಇಂದು ಯಕ್ಷಗಾನ ಉಪಯೋಗದ ಜತೆಗೆ ದುರುಪಯೋಗವೂ ಆಗುತ್ತಿದೆ. ಕರಾವಳಿ ಉತ್ಸವದಲ್ಲಿ ಮಹಿಷಾಸುರ, ದೇವಿಯನ್ನು ಲಾರಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇದನ್ನು ನೋಡಿದಾಗ ಬೇಸರ ಆಗುತ್ತದೆ. ಇದು ಕಲೆಯನ್ನು ಅವಮಾನಿಸಿದಂತೆ ಎನ್ನುವ ಕಾರಣದಿಂದ ನಾನು ಯಾವುದೇ ಯಕ್ಷಗಾನ ತಂಡಗಳನ್ನು ಉತ್ಸವಕ್ಕೆ ಕಳುಹಿಸಿಕೊಟ್ಟಿಲ್ಲ. ಆತ್ಮವಿಶ್ವಾಸ, ಆತ್ಮಪ್ರಶ್ನೆಯ ಕಲೆಗೆ ಮುಖ್ಯ” ಎಂದು ಹೇಳಿದರು.

“ ಇಂದು ನಾವು ಉಗ್ರ ಬಲಪಂಥೀಯ, ಎಡಪಂಥೀಯ ಧೋರಣೆಯನ್ನು ಕಾಣುತ್ತಿದ್ದೇವೆ. ಯಾವುದೇ ವಿಷಯವನ್ನು ಸರಳವಾಗಿ ನೋಡುವುದು ಸರಿಯಲ್ಲ. ತಳಿಯದ ಯಾವುದೇ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ನಮ್ಮ ನಡುವೆ ಮೌಢ್ಯ ಇದೆ. ಆದರೆ, ಯಾವುದೇ ವಿಷಯವನ್ನು ಅಪಾರ್ಥ ಮಾಡಿ ತಿರುಚುವುದು ಸರಿಯಲ್ಲ” ಎಂದರು.

“ಬಾಲ್ಯದಲ್ಲಿ ಚಡ್ಡಿ ಹಾಕಿಕೊಂಡು ಶೇಣಿ ಅವರ ತಾಳಮದ್ದಳೆ ನೋಡಿದ್ದೆ ನಾನು ನಂತರದಲ್ಲಿ ಅವರ ಅರ್ಥಧಾರಿಯಾದೆ. ಇದು ಹೆಮ್ಮೆ ತಂದಿದೆ. ನನ್ನ ಯಕ್ಷಗಾನದ ಬೆಳವಣಿಗೆಯಲ್ಲಿ ಶಂಕರ ಜೋಶಿ, ಶಂಕರ ದಾಮ್ಲೆ ಅವರ ಪಾತ್ರ ಪ್ರಮುಖವಾಗಿದೆ. ಮೈಸೂರಿನಲ್ಲಿ ಅಭಿನಂದನೆ ಮಾಡಿರುವುದಕ್ಕೆ ಋಣಿಯಾಗಿದ್ದೇನೆ. ಮುಂದೆಯೂ ಯಕ್ಷಗಾನಕ್ಕೆ ಕೊಡುಗೆ ನೀಡಲು ಯತ್ನಿಸುತ್ತೇನೆ.” ಎಂದು ಹೇಳಿದರು.

ಅರ್ಥಧಾರಿ ಅಶೋಕ ಭಟ್ ಮಾತನಾಡಿ, “ಜೋಶಿ ಅವರದ್ದು ಮಾತಿನಲ್ಲಿ ಸಂಕ್ರಮಣ ಪ್ರವೃತ್ತಿ. ಆದರೆ ಸೆಟೆದು ನಿಂತರೆ ಅವರು ಕೇಸರಿ. ಅನ್ಯಭಾಷಾ ಪ್ರಯೋಗವನ್ನು ಅವರು ಎಂದಿಗೂ ಮಾಡಿಲ್ಲ. ಅವರು ಇತರೆ ಕಲಾವಿದರನ್ನು ಬೆಳೆಸಿದರು. ದೇರಾಜೆ ಅವರ ಸಮರ್ಥ ಮುಂದುವರಿಕೆ ಎಂದು ಜೋಶಿ ಅವರನ್ನು ಹೇಳಬಹುದಾಗಿದೆ” ಎಂದರು.

“ಅವರು ಅರ್ಥಧಾರಿಯಾಗಿ ಎಲ್ಲರ ಜೊತೆ ಹೊಂದಿಕೊಂಡು ಹೋಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಪ್ರತಿಸ್ಪರ್ಧಿ ಅರ್ಥಧಾರಿಗೆ ಟಾನಿಕ್ ನೀಡುವ ಗುಣ ಅವರಲ್ಲಿದೆ. ಅವರು ಯಾವುದೇ ಭಾಷೆ, ಪ್ರದೇಶಕ್ಕೆ ಹೋದರೂ ಅಲ್ಲಿ ಸುಲಭವಾಗಿ ಹೊಂದಿಕೊಳ್ಳಬಲ್ಲರು” ಎಂದು ಹೇಳಿದರು.

ಸಾಹಿತಿ ಕೌಂಡಿನ್ಯ ವಿಜಯನಾಥ್ ಭಟ್ ಮಾತನಾಡಿ, “ಪ್ರತಿಯೊಂದು ಶಬ್ದವನ್ನು ಅನಕ್ಷರಸ್ಥನಿಗೂ ಅರ್ಥ ಆಗುವಂತೆ ಜೋಶಿ ಅವರು ಮುಟ್ಟಿಸಿದ್ದಾರೆ. ಅವರು ಎಷ್ಟೇ ಎತ್ತರ ಬೆಳೆದರೂ ದೈವೀಭಾವವನ್ನು ಬಿಟ್ಟಿಲ್ಲ” ಎಂದರು.

ಯಕ್ಷಗಾನ ಚಿಂತಕ ಡಾ.ಕೆ.ಎಂ.ರಾಘವ ನಂಬಿಯಾರ್, ಡಾ.ಜೋಶಿ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಭಟ್ ದಾಮ್ಲೆ, ಅಧ್ಯಕ್ಷ ಎಂ. ಬಾಲಚಂದ್ರ ಡೋಂಗ್ರೆ, ಸಂಚಾಲಕ ಗ.ನಾ.ಭಟ್ಟ, ನೀನಾಸಂನ ಕೆ.ವಿ.ಅಕ್ಷರ, ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ನಿವೃತ್ತ ಪ್ರಾಧ್ಯಾಪಕಿ ಪ್ರೊ. ಲೀಲಾವತಿ ಎಸ್ ರಾವ್ ಇತರರು ಇದ್ದರು.

ವಿಜಯಕರ್ನಾಟಕ – 15-05-2017ರಲ್ಲಿ ಪ್ರಕಟಿತ

error: Content is protected !!
Share This