ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ, ಸಂಘಟಕ ಮಲ್ಪೆ ವಾಸುದೇವ ಸಾಮಗ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದು, ಯಕ್ಷಗಾನ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ.

ಅವರಿಗೆ 71 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಕೋವಿಡ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ನಿಧನರಾಗಿದ್ದಾರೆ.
ಯಕ್ಷಗಾನ ರಂಗದಲ್ಲಿ ತನ್ನ ವಾಕ್ಪಟುತ್ವದಿಂದ ಖ್ಯಾತಿಗಳಿಸಿದ್ದ ವಾಸುದೇವ ಸಾಮಗರು, ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ಅಮೃತೇಶ್ವರಿ ಮೇಳದ ಮೂಲಕ ಯಕ್ಷಗಾನ ವೃತ್ತಿರಂಗಕ್ಕೆ ಕಾಲಿಟ್ಟಿದ್ದರು. ನಂತರ ಧರ್ಮಸ್ಥಳ, ಕದ್ರಿ, ಕರ್ನಾಟಕ, ಸುರತ್ಕಲ್, ಸಾಲಿಗ್ರಾಮ, ಬಗ್ವಾಡಿ, ಸೌಕೂರು ಮೇಳಗಳಲ್ಲಿಯೂ ಕಲಾ ಸೇವೆ ಸಲ್ಲಿಸಿದ್ದಾರೆ. ಮೇಳದ ಯಜಮಾನಿಕೆಯನ್ನೂ ಹೊತ್ತಿದ್ದರು. ಉತ್ತರಕುಮಾರ, ಯಕ್ಷಲೋಕ ವಿಜಯ ಪ್ರಸಂಗದ ಪ್ರದೀಪ, ಭಾನುತೇಜಸ್ವಿ ಪ್ರಸಂಗದ ಭಾನುತೇಜಸ್ವಿ ಮೊದಲಾದ ಪಾತ್ರಗಳು ಅವರಿಗೆ ಅಪಾರ ಜನಮನ್ನಣೆ ತಂದುಕೊಟ್ಟಿವೆ.

ಯಕ್ಷಗಾನದಲ್ಲಿ ಮೊದಲ ಬಾರಿಗೆ ಕೋರ್ಟ್ ಸನ್ನಿವೇಶವನ್ನು ಸೃಷ್ಟಿ ಹೊಸ ದಾಖಲೆ ಮಾಡಿದವರು. ಸಂಯಮಂ (ಸಂಚಾರಿ ಯಕ್ಷಗಾನ ಮಂಡಳಿ) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಸಮಯ ಮಿತಿಯ ತಾಳಮದ್ದಳೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಕೊನೆಯ ತಾಳಮದ್ದಲೆಯನ್ನು ಕೆಲದಿನಗಳ ಹಿಂದೆ ಮೂಡುಬಿದರೆಯ ಅಲಂಗಾರಿನಲ್ಲಿ ನಡೆಸಿದ್ದರು.

error: Content is protected !!
Share This