• ಡಾ। ಎಂ. ಪ್ರಭಾಕರ ಜೋಶಿ

ಮಹತ್ವದ ವಿದ್ವಾಂಸರು ಒಬ್ಬರ ಬಳಿಕ ಒಬ್ಬರು ಅಗಲಿ ಹೋಗುತ್ತಿದ್ದಾರೆ. ಮೊನ್ನೆ ತಾನೇ ನಮ್ಮನ್ನಗಲಿದ ಹಿರಿಯ ಸಂಶೋಧಕ, ಕಲಾವಿದ, ಅಧ್ಯಾಪಕ, ಭಾಗವತ, ಮಾಹಿತಿ ನಿಧಿ ಪು. ಶ್ರೀನಿವಾಸ ಭಟ್ಟರ ನಿಧನ ಯಕ್ಷಗಾನ, ಕಾವ್ಯ, ಜಾನಪದ ಸಂಶೋಧನೆಗಳಿಗಾದ ಎಂತಹ ನಷ್ಟ ಎಂಬುದನ್ನು ಅವರನ್ನು ಬಲ್ಲ. ಅವರಿಂದ ಮಾರ್ಗದರ್ಶನ ಪಡೆದವರೇ ಬಲ್ಲರು.

ಮೂಲತಃ ಮೂಲ್ಕಿ ಬಳಿಯ ಕವತ್ತಾರು ಪುತ್ತೂರಿನ ಪುರೋಹಿತ ಮನೆತನದ ಭಟ್ಟರು ಬಾಲ್ಯದಿಂದಲೇ ಸಾಂಸ್ಕೃತಿಕ ಅಧ್ಯಯನಾಸಕ್ತರಾಗಿ ಬೆಳೆದವರು. ಅಧ್ಯಾಪಕರಾಗಿ ಕಟೀಲು ಶಾಲೆಯನ್ನು ಸೇರಿ ಹಿರಿಯ ಆಸ್ರಣ್ಣರು, ವಿ। ಅಜಾರು ಲಕ್ಷ್ಮೀ ನಾರಾಯಣ ರಾವ್, ಮುಖ್ಯೋಪಾಧ್ಯಾಯ ಪುಚ್ಚಕ್ಕೆರೆ ಕೃಷ್ಣ ಭಟ್ಟರ ಪ್ರೋತ್ಸಾಹದಿಂದ ಕಲಾ ಕಾರ್ಯ, ಸಂಶೋಧನೆ ಗಳಲ್ಲಿ ಐದು ದಶಕಗಳ ಕಾಲ, ಅನನ್ಯ ರೀತಿಯಲ್ಲಿ ದುಡಿದ ವಿದ್ವಾಂಸರು. ಅರ್ಥಗಾರಿಕೆ, ಭಾಗವತಿಕೆ ಗಳಲ್ಲಿ ಪಳಗಿ, ಎರಡು ದಶಕಗಳ ಕಾಲ ದುಡಿದು, ಆ ಬಳಿಕ ಸಂಶೋಧನೆ, ಲೇಖನ, ಭಾಷಣಗಳಲ್ಲಿ ಹೆಚ್ಚು ಪ್ರವೃತ್ತರಾದರು. ಕಟೀಲಿನ ಯಕ್ಷಗಾನ ಸಪ್ತಾಹ, ನವರಾತ್ರಿ ಕಲೋತ್ಸವಗಳಲ್ಲಿ ಸಕ್ರಿಯ ಕಾರಕರ್ತರಾಗಿಯೂ ದುಡಿದವರು.

ಯಕ್ಷಗಾನ ಪ್ರಸಂಗ ಸಾಹಿತ್ಯ, ಹಳಗನ್ನಡ ಕಾವ್ಯಗಳು, ಹಸ್ತಪ್ರತಿ, ಶಾಸನಗಳು, ತೌಳವ ಆಚಾರವಿಚಾರ, ಜಾನಪದ ಈ ವಿಚಾರಗಳಲ್ಲಿ ಪು. ಶ್ರೀ.ಯವರು ಓರ್ವ ಅಥಾರಿಟಿ, ಡಾ| ಗುರುರಾಜ ಭಟ್, ಮಂಜೇಶ್ವರ ಗೋವಿಂದ ಪೈ, ಸುರತ್ಕಲ್ ವೆಂಕಟಾರಾಯಾಚಾರ್ಯ ಮುಂತಾದವರ ಹಾದಿಯಲ್ಲಿ ನಡೆದ ಸಂಶೋಧಕರು. ಸದಾ ವಿಚಾರಸಂಗ್ರಹ, ಸೂಕ್ಷ್ಮ ಪರಿಶೀಲನೆ ಮತ್ತು ದೇಸೀ ಮಾದರಿಯ ವಿಶ್ಲೇಷಣೆಗಳಲ್ಲಿ ಸಾರ್ಥಕ ಪರಿಶ್ರಮಿ, ಕೋಶವ್ಯಕ್ತಿ.

ಯಕ್ಷಗಾನ ಪ್ರಸಂಗಗಳು ಮತ್ತವುಗಳ ಆಕರಗಳ ಬಗೆಗಿನ ಭಟ್ಟರ ಶೋಧನೆಗಳು ಮಾರ್ಗದರ್ಶಿ, ಕೃಷ್ಣಾರ್ಜುನ, ದೇವಿ ಮಹಾತ್ಮ ಪ್ರಸಂಗಗಳ ಬಗೆಗೆ ಅವರು ಬರೆದ ಲೇಖನಗಳು ಪ್ರಸಂಗ ಆಕರ ವಿಚಾರದಲ್ಲಿ ಕ್ಲಾಸಿಕ್‌ಗಳು. ತುಳುನಾಡಿನ ಭೂತಗಳು, ಗರಡಿಗಳು, ನಂಬುಗೆ, ಆಚರಣೆ, ಸ್ಥಳನಾಮ, ವಸ್ತು ವಿಶೇಷಗಳ ಕುರಿತು ಅವರಲ್ಲಿ ಅಪಾರ ಮಾಹಿತಿಗಳಿದ್ದವು. ಈ ಕುರಿತು ಅವರು ಯುಗಪುರುಷ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನ ಮಾಲೆ ಒಂದು ವ್ಯಾಪಕ ಸರಪಳಿ, ಕೋಲಬಲಿ, ಜನಪದ ಶತಪಥ ಎಂಬ ಹೆಸರುಗಳಲ್ಲಿ ಸಂಕಲಿತವಾಗಿ ಪ್ರಕಟವಾಗಿರುವ ಈ ಲೇಖನಗಳು ದೇಸೀ ಸಂಶೋಧನೆಯಲ್ಲಿ ಮಾದರಿಗಳಾಗಿವೆ. ಒಂದು ಶಬ್ದ ಒಂದು ಚಿಕ್ಕ ವಿಷಯ – ಅಡ್ಕ, ನಾಗಬನ, ನೇಗಿಲು, ನುಡಿಗಟ್ಟು- ಯಾವುದೇ ಇರಲಿ, ಅದರ ಸುತ್ತ ಚಕ್ರದೃಷ್ಟಿ ಬೀರಿ ಸಮಗ್ರವಾಗಿ ಬರೆಯುವ ಅವರ ಶೈಲಿಯು ವಿಚಿತ್ರ, ವಿಶಿಷ್ಟ ಪ್ರಾದೇಶಿಕ ಜಾನಪದದ ಬಗೆಗೆ ತುಂಬಿದ ಕಣಜ ಅವರು.

ಯಕ್ಷಗಾನ ಮೇಳ, ಕಲಾವಿದರ ಜತೆ ನಿಕಟ ಸಂಪರ್ಕ ಹೊಂದಿದ್ದಪು. ಶ್ರೀ. ಅವರು ಬರೆದ ಯಕ್ಷಗಾನ ಕಲಾವಿದರು ಪರಿಚಯ ಗ್ರಂಥಗಳು (ಎರಡು ಸಂಪುಟ
-ಯುಗಪುರುಷ ಪ್ರಕಾಶಿತ), ಆ ಕ್ಷೇತ್ರದ ಆದ್ಯ ಸಂಕಲನಗಳು. ಕಲಾವಿದನ ವೈಶಿಷ್ಟ್ಯಗಳನ್ನು ರಂಗವಿಧಾನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಭಟ್ಟರ ವಿಧಾನ ಆಂತರಿಕ ವಿಮರ್ಶೆಯ ಸಾಟಿಯಿಲ್ಲದ ಮಾದರಿ, ಐನೂರಕ್ಕೂ ಮಿಕ್ಕಿ ಲೇಖನಗಳನ್ನವರು ಬರೆದಿದ್ದಾರೆ. ಎಷ್ಟೊಂದು ಆಸಕ್ತಿ, ಎಷ್ಟು ಕೆಲಸ, ಏನು ಸಮತೋಲ!

ಒಳ್ಳೆಯ ಗ್ರಂಥ ಭಂಡಾರ, ಹಸ್ತ ಪತ್ರಿಕೆ ಸಂಗ್ರಹ ಇದ್ದ ಭಟ್ಟರು ಕೊಂಡು ಓದುವ ಗ್ರಂಥ ಪ್ರೇಮಿ, ಕಟೀಲು ಪೇಟೆಯಲ್ಲಿ ಆಬಳಿಕ ಅಜಾರಿನಲ್ಲಿ ಅವರ ಮನೆ ಪಂಚವಟಿ ಕಲಾವಿದರ, ಸಂಶೋಧಕರ ಯಾತ್ರಾ ಸ್ಥಳ, ಸಂಶೋಧನಾಸಕ್ತರಿಗೆ ಗ್ರಂಥ ಮಾಹಿತಿ, ಮಾರ್ಗದರ್ಶನ ನೀಡುವಲ್ಲಿ ಸದಾ ಸಿದ್ಧಸಹಾಯ ಹಸ್ತರಾಗಿ, ನೂರಾರು ಜನರಿಗೆ ನೆರವಾದ ಪ್ರೋತ್ಸಾಹಕ ಚೈತನ್ಯರಾದ ಭಟ್ಟರು ಇದರಲ್ಲಿ ಕೆಲವೊಮ್ಮೆ ಕೈಸುಟ್ಟುಕೊಂಡು, ಕಹಿ ಅನುಭವ ಪಡೆದರೂ ಮೌನ, ಕಿರುನಗೆಗಳೇ ಅವರ ಪ್ರತಿಕ್ರಿಯೆ. ಹುಸಿ ಪಾಂಡಿತ್ಯ, ಪ್ರದರ್ಶನಕತ್ವಗಳ ಬಗೆಗೆ ಅವರಿಗೆ ಖೇದವಿದ್ದರೂ, ಟೀಕಿಸದೇ ಸುಧಾರಿಸಿಕೊಂಡು ಹೋಗುತ್ತಿದ್ದರು.

ಯಾವುದೇ ಸಾಂಸ್ಥಿಕ ಬೆಂಬಲವಿಲ್ಲದೇ, ಓರ್ವ ಪ್ರಾಥಮಿಕ ಶಾಲಾ ಅಧ್ಯಾಪಕ ಭಟ್ಟರು ಕರ್ನಾಟಕದ ಮಟ್ಟದಲ್ಲಿ ಸಂಶೋಧಕರಾಗಿ ಮನ್ನಣೆ ಗಳಿಸಿದ್ದು ಅವರ ಗಟ್ಟಿ ಪಾಂಡಿತ್ಯಕ್ಕೆ ಸತತ ಪರಿಶ್ರಮಕ್ಕೆ ಸಂದ ಗೌರವ. ವಿಚಾರ ವಿನಿಮಯಕ್ಕೆ ಸದಾ ಒದಗುತ್ತಿದ್ದರು. ಅವರ ಟಿಪ್ಪಣಿ, ಪತ್ರಗಳು ಪ್ರಕಟವಾದರೆ ಅದೊಂದು ಗ್ರಂಥವಾದೀತು.

ಕಡಿಮೆ ಮಾತು, ಅಕೃತ್ರಿಮ ಸ್ನೇಹ, ಸಹಜ ಆತಿಥ್ಯ, ಭ್ರಮೆ ಇಲ್ಲದ ಆಸ್ತಿಕ್ಯ, ಉತ್ತಮ ವಿನೋದಶೀಲ ಸಂಭಾಷಣೆ, ಹಳ್ಳಿಗನ ಮಾತಿನ ಶೈಲಿ, ಅಚ್ಚುಕಟ್ಟಾದ ಜೀವನ ವಿಧಾನ, ತುಳುಕದ ತುಂಬು ವಿದ್ವತ್ತುಗಳ ಕಲಶ, ಜನಪದ ಪಾಂಡಿತ್ಯ ಸಿರಿ ಶ್ರೀನಿವಾಸ ಭಟ್ಟರಿಗೆ ಬದಲಿ ಇಲ್ಲ. ಅವರಂತಹವರ ಸಾಧನೆಗೆ ಅಳಿವಿಲ್ಲ, ಕಾಲಾಂತರಕ್ಕೂ ಮಹತ್ವ ಪಡೆದ ಅವರ ದಾರಿ ಪ್ರೇರಕ, ಆಪ್ಯಾಯನ ಅಭಿಯಾನ.

error: Content is protected !!
Share This