• ಡಾ. ಎಂ. ಪ್ರಭಾಕರ ಜೋಶಿ

ಹತ್ತನೆಯ ಶತಮಾನದ ಬಳಿಕ ಪ್ರಕರ್ಷಕ್ಕೆ ಬಂದು ಮುಂದೆ ಭಾರತದಾದ್ಯಂತ ಒಂದು ದೊಡ್ಡ ಸಾಂಸ್ಕೃತಿಕ ಅಲೆಯಾಗಿ, ಚಳುವಳಿಯಾಗಿ ರೂಪುಗೊಂಡದ್ದು ಭಕ್ತಿ ಪಂಥ. ಅದರಲ್ಲೂ ವಿಶೇಷವಾಗಿ; ವೈಷ್ಣವ ಭಕ್ತಿ ಸಂಪ್ರದಾಯಗಳು. ಅದರ ವಾಹಕಗಳಾಗಿ ಹುಟ್ಟಿಕೊಂಡ (ಅಥವಾ ಮೊದಲೆ ಇದ್ದ ಪ್ರಕಾರಗಳ ರೂಪಾಂತರವಾಗಿ ಮೈದಳೆದ) ಪ್ರಕಾರಗಳಲ್ಲಿ ಯಕ್ಷಗಾನವೂ ಒಂದು. ಯಕ್ಷಗಾನವು ಪ್ರಾಯಶಃ ಮೂಲತಃ ಒಂದು ಕಾವ್ಯ ಪ್ರಕಾರದ ಹೆಸರು ಬಯಲಾಟ, ಪ್ರಬಂಧ ಜಾತಿ; ಅದನ್ನಾಧರಿಸಿದ ಪ್ರದರ್ಶನಗಳಿಗೆ ಆಟ, ಬಯಲಾಟ, ನಟ್ಟುವ ಮೇಳ, ಕೇಳಿಕೆ ಮೊದಲಾದ ಹೆಸರುಗಳಿದ್ದಂತೆ ಕಾಣುತ್ತದೆ. ಈಗ ನಾವು ಅಂತಹ ಪ್ರದರ್ಶನಗಳಿಗೂ, ಅವುಗಳಿಗೆ ಆಧಾರವಾಗಿರುವ ಪ್ರಬಂಧಗಳಿಗೂ ಯಕ್ಷಗಾನವೆಂದೇ ವ್ಯವಹರಿಸುತ್ತೇವೆ. ಆದರೂ – ಆ ಪ್ರಬಂಧಗಳಿಗೆ ಯಕ್ಷಗಾನ ಪ್ರಸಂಗಗಳೆಂಬ ಹೆಸರು ಹೆಚ್ಚು ರೂಢಿಯಾಗಿದೆ.

ಹದಿನಾರನೆಯ ಶತಮಾನದಿಂದೀಚೆಗೆ ಇಂತಹ ಪ್ರಸಂಗಗಳ ರಚನೆಯ ಅವಿಚ್ಛಿನ್ನ ಪರಂಪರೆ ಇಂದಿನವರೆಗೂ ನಡೆದು ಬಂದಿದೆ. ಅದರಲ್ಲಿ ಇಪ್ಪತ್ತನೆಯ ಶತಮಾನದ ಆರಂಭದ ತನಕ (ಅಂಶತಃ ಆ ಬಳಿಕವೂ) ಯಕ್ಷಗಾನ ಪ್ರಸಂಗ ರಚನೆ ಪ್ರಧಾನವಾದ ವಸ್ತು – ಆಕರಗಳಾಗಿ ಒದಗಿ ಬಂದವುಗಳೆಂದರೆ ಗದುಗಿನ ಭಾರತ, ತೊರವೆ ರಾಮಾಯಣ, ಲಕ್ಷ್ಮೀಶನ ಜೈಮಿನಿ ಭಾರತ | ಈ ಮೂರು ಕಾವ್ಯಗಳು. ಜತೆಗೆ ಹರಶ್ಚಂದ್ರ ಕಾವ್ಯ, ಕೃಷ್ಣಾರ್ಜುನಸಂಗರ ಕಾವ್ಯಗಳು, ಕನಕದಾಸರ ನಳಚರಿತ್ರೆ ಮೊದಲಾದವುಗಳನ್ನು ಆಧರಿಸಿಯೂ ಪ್ರಸಂಗಗಳು ರಚನೆಗೊಂಡಿವೆ. ಆ ಅವಧಿಯಲ್ಲಿ ದೊರೆಯುವ ಸುಮಾರು ಇನ್ನೂರು ಪ್ರಸಂಗಗಳಲ್ಲಿ ಹೆಚ್ಚಿನವು ಈ ಮೂರು ಕಾವ್ಯಗಳನ್ನು ಆಧರಿಸಿ ರಚಿತವಾಗಿವೆ. ಕನ್ನಡಿಗರಿಗೆ ಆ ಅವಧಿಯಲ್ಲಿ ಭಾಷೆ ಮತ್ತು ಅಭಿವ್ಯಕ್ತಿಯ ವ್ಯುತ್ಪತ್ತಿಗೆ ಆಕರವಾಗಿದ್ದವುಗಳಲ್ಲಿ ಈ ಮೂರು ಕಾವ್ಯಗಳು ಪ್ರಧಾನವೆಂಬುದು ಪ್ರಸಿದ್ಧವಷ್ಟೆ?

• ಅಂದರೆ ಯಕ್ಷಗಾನವು ಅಂದರೆ ಸಾಕು. ಆದರೆ ಪ್ರಬಂಧ, ಪ್ರದರ್ಶನ, ಗಾಯನಗಳಿಗೂ ಆ ಹೆಸರು ಬಂದಿದೆ. ಹಾಗಾಗಿ ಪ್ರಸಂಗ/ಕಾವ್ಯ ಎಂಬ ಶಬ್ದ ಇದೆ.

ಯಕ್ಷಗಾನ ಪ್ರಸಂಗವೆಂದರೆ ಕಥಾನಕದ ಗೀತಾತ್ಮಕ ಕಥನ. ಕಥಾ ಪ್ರಸಂಗವನ್ನು ಅದು ವಿವಿಧ ರಾಗ, ತಾಳ, ಛಂದೋಬಂಧಗಳಲ್ಲಿ ನಿರೂಪಿಸುತ್ತದೆ. ಅದೊಂದು ಬಗೆಯ ಗೀತ ಪ್ರಬಂಧ, ಕಥನ ಕಾವ್ಯ, ನಾಟಕ ಎಲ್ಲವೂ ಹೌದು. ನಾಟಕವೆಂದರೂ – ಅದರ ಕಥನವು ಕಾವ್ಯದಂತೆ. ನಿರೂಪಣಾತ್ಮಕವಾಗಿ ಪ್ರಥಮ ಪುರುಷದಲ್ಲೆ ಇರುತ್ತದೆ. ಅಂದರೆ ಬೇರೊಬ್ಬರು ನಿರೂಪಿಸಿದಂತೆ. ಛಂದೋ ವೈವಿಧ್ಯ ಮತ್ತು ಹಾಡುವಿಕೆಯ ಮಟ್ಟು ( pattern)ಗಳ ವಿನ್ಯಾಸದ ದೃಷ್ಟಿಯಿಂದ ಯಕ್ಷಗಾನ ಪ್ರಸಂಗ ಸಾಹಿತ್ಯವು ಅತ್ಯಂತ ಸಮೃದ್ಧವಾಗಿದೆ. ಪ್ರಾಯಶಃ ಅನ್ಯತ್ಯ ದುರ್ಲಭವೆನಿಸುವಷ್ಟು ಶ್ರೀಮಂತಿಕೆ ಇದರಲ್ಲಿದೆ.

ನೂರಕ್ಕೂ ಮಿಕ್ಕಿದ ಛಂದೋ ಬಂಧಗಳು ಮತ್ತು ಸುಮಾರು ಆರುನೂರು ಮಟ್ಟು(ಗತಿವಿನ್ಯಾಸ)ಗಳು ಇಲ್ಲಿವೆ ಎಂದು ತಜ್ಞರು ಗುರುತಿಸಿದ್ದಾರೆ. ಒಂದೇ ಛಂದೋ ಬಂಧವು ಹಾಡುವಿಕೆಯಲ್ಲಿ ಬೇರೆ ಬೇರೆ ವಿನ್ಯಾಸ ಪಡೆಯುತ್ತದೆ. (ಡಾ.ಎನ್.ನಾರಾಯಣ ಶೆಟ್ಟಿ, ಹೊಸ್ತೋಟ ಮಂಜುನಾಥ ಭಾಗವತರ ಸಂಶೋಧನೆಗಳು).

– 2 –

ಪ್ರಸ್ತುತ ಲಕ್ಷ್ಮೀಶ ಕವಿಯ ಜೈಮಿನಿ ಭಾರತವನ್ನು ಆಧರಿಸಿ ರಚಿತವಾದ ಯಕ್ಷಗಾನ ಪ್ರಸಂಗ ಪ್ರಬಂಧಗಳ ಒಂದು ಸ್ಕೂಲವಾದ ಪರಿಶೀಲನೆಗೆ ಇಲ್ಲಿ ಯತ್ನಿಸಿದೆ. ಜೈಮಿನಿ ಅಶ್ವಮೇಧ ಆಧಾರಿತವಾದ, ಒಟ್ಟು ಐವತ್ತಮೂರು ಪ್ರಸಂಗಗಳು ಗುರುತಿಸಲ್ಪಟ್ಟಿವೆ. (ಡಾ.ಪಾದೇಕಲ್ಲು ವಿಷ್ಣುಭಟ್ಟ: ಯಕ್ಷಗಾನ ಗ್ರಂಥ ಸೂಚಿ) ಮತ್ತು ಪಾಯಶಃ ಇವೆಲ್ಲವೂ ಒಂದೊಂದು ಕಾಲ ಪ್ರಯೋಗದಲ್ಲಿದ್ದವು. ಈ ಪೈಕಿ ಅರ್ವಾಚೀನ ಯಕ್ಷಗಾನ ರಂಗದಲ್ಲಿ ಸುಮಾರು 15-20 ಪ್ರಸಂಗಗಳು ಪ್ರಯೋಗ ಪ್ರಾಚರ‍್ಯವನ್ನು ಹೊಂದಿವೆ. ಉಳಿದವು ಹಿಂದೆ ಸರಿದಿವೆ. ಪ್ರಯೋಗ ಪ್ರಸಿದ್ಧಿಗೆ – ಪ್ರಸಂಗದ ಲಭ್ಯತೆ, ಪ್ರಯೋಗ ರೂಢಿ ಕಲಾವಿದರ ಅಭ್ಯಾಸ ಮೊದಲಾದವು ಕಾರಣ ಹೊರತು ಪ್ರಸಂಗದ ಗುಣಮಟ್ಟವೆ ಕಾರಣವೆನ್ನುವಂತಿಲ್ಲ. ಉದಾ: ಈಗ ಪ್ರಚಲಿತವಿರುವ ಸುಧನ್ವಕಾಳಗ ಪ್ರಸಂಗವು ಮುದ್ರಿತವಾದ ಮೇಲೆ, (ಅಷ್ಟೇ ಒಳ್ಳೆಯ ಅನ್ಯಕರ್ತೃಕ ಸುಧನ್ವ ಪ್ರಸಂಗಗಳಿದ್ದರೂ) ಈ ಪ್ರಸಂಗವೇ ಚಾಲ್ತಿಯಾಯಿತು. ಹಿಂದೆ – ಸಂಪರ್ಕ ಕಡಮೆ ಇದ್ದ ಕಾಲದಲ್ಲಿ, ಒಂದು ಕಥಾನಕದ ಪ್ರಸಂಗವನ್ನು ಬಯಲಾಟವಾಗಿ ಆಡಿಸಬೇಕಿದ್ದರೆ, ಪ್ರಯೋಗ ರೂಢ ಪ್ರತಿ ಸಿಗದಿದ್ದರೆ, ಸ್ಥಳೀಯವಾಗಿಯೆ ಪ್ರಸಂಗವನ್ನು ಬರೆಸುವುದಿತ್ತು. ಹಾಗಾಗಿಯೇ ಒಂದು ಕಥಾನಕದ ಹಲವು ರಚನೆಗಳು ಇರಲು ಕಾರಣ. ಈ ಪೈಕಿ ಪ್ರತಿ ಮಾಡಲ್ಪಟ್ಟು ರಕ್ಷಿತವಾದವು ಉಳಿದಿದೆ. ಎಷ್ಟೋ ರಚನೆಗಳು ಕೆಲವೇ ಪ್ರಯೋಗ ಕಂಡು ಆ ಬಳಿಕ ನಷ್ಟವಾಗಿರಬಹುದು. ಈ ರೀತಿ ಅಪ್ರಸಿದ್ಧವಾಗಿ ಉಳಿದು, ನಷ್ಟವಾದ ಪ್ರಸಂಗಗಳು ನೂರಾರು ಇರಬಹುದು (ಈ ಹೊಳಹನ್ನು ನನಗಿತ್ತವರು, ಸಂಶೋಧಕ ದಿ| ಪು.ಶ್ರೀನಿವಾಸ ಭಟ್ ಕಟೀಲು ಅವರು). ಇತ್ತೀಚಿನ ಉದಾಹರಣೆಗಳು: ದಿ| ಮಾಂಬಾಜಿ ಭಾಗವತರು ಬರೆದ (1930) ದೇವೀಮಹಾತ್ಮೆ.

ಕೆಲವೊಮ್ಮೆ, ಪ್ರಸಿದ್ಧವಾದ ಪ್ರಸಂಗಗಳಲ್ಲಿ ಕೆಲವು ಭಾಗಗಳು ರಂಗಕ್ಕೆ ಅಷ್ಟಾಗಿ ಹೊಂದದೆ ಹೋದಾಗ, ಇಡಿಯ ಪ್ರಸಂಗವನ್ನು ಅಥವಾ ಭಾಗವನ್ನು, ಭಾಗವತರು, ಕವಿಗಳು ಬೇರೆಯಾಗಿ ರಚಿಸುವುದಿದೆ. ಇಂತಹ ಸಂದರ್ಭಗಳು – ಅಶ್ವಮೇಧ ಪ್ರಸಂಗಗಳಿಗೆ (ಅರ್ಥಾತ್ ಜೈಮಿನಿ ಆಧಾರಿತ ಕೃತಿಗಳ) ಸಂಬAಧಿಸಿ ಕಾಣುವುದಿಲ್ಲ. ಅಂದರೆ ಈ ಪ್ರಸಂಗಗಳೆಲ್ಲ ರಂಗದೃಷ್ಟಿಯಿAದ ಅನುಕೂಲವಾಗಿವೆ ಎಂದು ತಿಳಿಯಬಹುದು.

-3-

ಜೈಮಿನಿ ಭಾರತದ ಆಧಾರದಲ್ಲಿ ರಚಿತವಾದ ಒಟ್ಟು ಐವತ್ತೊಂಬತ್ತು ಯಕ್ಷಗಾನ ಪ್ರಸಂಗಗಳು ಲಭ್ಯವಾಗಿದ್ದು – ಈ ಪೈಕಿ ಕೆಲವು ಉಲ್ಲೇಖಗಳಲ್ಲಿ ಮಾತ್ರ ಕಾಣುತ್ತವೆ. ಪ್ರಸಂಗಯಾದಿ ಹೀಗಿದೆ:

ಅಶ್ವಮೇಧ ಪರ್ವ – ಕುದ್ರೆಪ್ಪಾಡಿ ಈಶ್ವರಪ್ಪಯ್ಯ, ಶಿವರಾಮ ಹೆಗಡೆ ಬಾಳೆಗದ್ದೆ.
ಅಶ್ವಮೇಧ ಜ್ವಾಲೆ – ಹೊಸೋಟ ಮಂಜುನಾಥ ಭಾಗವತ, ವೈ. ಚಂದ್ರಶೇಖರ ಶೆಟ್ಟಿ
ವಾಜಿಗ್ರಹಣ-ಯೌವನಾಶ್ವ -ಬಡೆಕ್ಕಿಲ ವೆಂಕಟರಮಣ ಭಟ್ಟ, ಶಿರೂರು ಫಣಿಯಪ್ಪಯ್ಯ,
ಅನುಸಾಲ್ವ ಗರ್ವಭಂಗ, ನೀಲಧ್ವಜ ಕಾಳಗ: ಅಜ್ಜನಗದ್ದೆ ಶಂಕರ ನಾರಾಯಣ
ಯೌವನಾಶ್ವ: ಅನುಸಾಲ್ವ : ಚವರ್ಕಾಡು ಶಂಭು ಜೋಯ್ಸ, ಜಾನಕೈ ತಿಮ್ಮಪ್ಪ ಹೆಗಡೆ.

ಸುಧನ್ವ ಕಾಳಗ (ಸುಧನ್ವ ಮೋಕ್ಷ): ಮುಲ್ಕಿ ರಾಮಕೃಷ್ಣಯ್ಯ, ಕುದ್ರೆಪಾಡಿ ಈಶ್ವರಪ್ಪಯ್ಯ, ಅಜ್ಞಾತಕವಿ, ವೆಂಕಟೇಶ.ವಿ.ಪೈ, ಹೊಸ್ತೋಟ ಮಂಜುನಾಥ ಭಾಗವತ, ಸುರಕುಂದ ಅಣ್ಣಾಜಿರಾವ್, ಬೀಚಾಡಿ ನಾರಾಯಣ ಉಪಾಧ್ಯ – ಹೀಗೆ ಏಳು ಕವಿಗಳಿಂದ ರಚಿತವಾಗಿವೆ.

ನೀಲಧ್ವಜ ಕಾಳಗ : ಪೂರ್ವೋಕ್ತ ಎರಡು ರಚನೆಗಳಲ್ಲದೆ, ನಾಗಪ್ಪಯ್ಯ ಹೆಗಡೆ ತ್ಯಾಗಲಿ, ಶಿರೂರು ಪಣಿಯಪ್ಪಯ್ಯ, ಅಜ್ಞಾತಕವಿಯೊಬ್ಬ, ಗಂಗಾಧರ ರಾಮಚಂದ್ರಯ್ಯ – ಹೀಗೆ ಆರು ಜನ ಕವಿಗಳಿಂದ ರಚಿತವಾಗಿದೆ.

ಪ್ರಮೀಳಾ ಸಂಧಾನ – ಪ್ರಮೀಳಾ ಕಲ್ಯಾಣ : ಇದು ಪೆರುವಡಿ ಸಂಕಯ್ಯ ಭಾಗವತ, ಓರ್ವ ಅಜ್ಞಾತ ಕವಿ ಹೀಗೆ ಇಬ್ಬರಿಂದ ರಚಿತ ಪ್ರಸಂಗಗಳಿದ್ದು, ಇನ್ನೊಂದು ಪ್ರಸಂಗ (ಅಜ್ಞಾತಕರ್ತೃಕದಲ್ಲೂ) ಪ್ರಮೀಳೆಯ ಕಥೆ ಒಳಗೊಂಡಿದೆ.

ತಾಮ್ರಧ್ವಜ ಕಾಳಗ: ಹಳೆಮಕ್ಕಿ ರಾಮ. ಪ್ರಸಿದ್ಧ ಕೃತಿ.

ಬಭ್ರುವಾಹನ-ದೇವಿದಾಸ, ಪೆರುವಡಿ ಸಂಕಯ್ಯಭಾಗವತ, ಹೊಸ್ತೋಟದ ಮಂಜುನಾಥ ಭಾಗವತ, ಅಜ್ಞಾತಕವಿಕೃತ (ಪ್ರಮೀಳಾ ಘೋರ ಭಾಷಣ ಕಥೆಗಳ ಸಹಿತ) – ಹೀಗೆ ನಾಲ್ಕು ಕೃತಿಗಳಿವೆ.

ವೀರತಾಮ್ರ ಧ್ವಜ: ಶ್ರೀನಿವಾಸ ಅಡಿಗ ಕುಪ್ಪಾರು.

ಚಂದ್ರಹಾಸ ಚರಿತ್ರೆ: ಚಂದ್ರಹಾಸ, ವಿಷಯೆ ಕಲ್ಯಾಣ, ಭಕ್ತ ಚಂದ್ರಹಾಸ ಎಂಬ ಹೆಸರುಗಳಲ್ಲಿ ಚಂದ್ರಹಾಸನ ಕಥೆಯನ್ನು ಮಟ್ಟಿ ವಾಸುದೇವ ಪ್ರಭು, ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ, ಮೈರ್ಪಾಡಿ ವೆಂಕಟರಮಣಯ್ಯ, ಜಾನಕೈ ತಿಮ್ಮಪ್ಪ ಹೆಗಡೆ, ಮಾಲೆಕೊಡ್ಲು ಶಂಭು ಗಣಪತಿ ಭಟ್ಟ, ವಿಷ್ಣು ಸಭಾಹಿತ, ಸೂರ್ವೆ ಹಮ್ಮಣ್ಣ ನಾಯಕ, ಜಿ.ಪರಮೇಶ್ವರ ಭಟ್ಟ, ಬಲಿಪ ನಾರಾಯಣ ಭಾಗವತ (ಹಿರಿಯ), ಆಲೆಟ್ಟಿ ರಾಮಣ್ಣ ಶಗ್ರಿತ್ತಾಯ, ಕೀರಿಕ್ಕಾಡು ವಿಷ್ಣು ಭಟ್, ಕೆ.ಎನ್.ಈಶ್ವರ ಭಟ್ಟ, ಶ್ರೀನಿವಾಸ ಅಡಿಗ ಕುಪ್ಪಾರು. ಈ ಹದಿಮೂರು ಕವಿಗಳು ಬರೆದ ಪ್ರಸಂಗಗಳಿದ್ದು ಜೈಮಿನಿ ಕಥೆಯ ಪ್ರಸಂಗಗಳಲ್ಲಿ ಒಂದೇ ಕಥೆಯ ಅತಿ ಹೆಚ್ಚು ರಚನೆಗಳಿರುವುದು. ಚಂದ್ರಹಾಸ ಚರಿತ್ರೆಯ ಪ್ರಸಂಗಗಳ ರೂಪದಲ್ಲಿ.

ಕುಶಲವ, ಲವಕುಶ : ಪಾರ್ತಿಸುಬ್ಬ, ಸುರಕುಂದ ಅಣ್ಣಾಜಿ ರಾವ್, ಕೀರಕ್ಕಾಡು ವಿಷ್ಣುಭಟ್, ಜಲಜಸಖ ಬೆಳ್ಳಾರೆ, ಹಟ್ಟಿಯಂಗಡಿ ರಾಮಭಟ್ಟ, ವೆಂಕಟೇಶ ವಿ.ಪೈ, ಹೀಗೆ ಆರು ರಚನೆಗಳು.

ಲವಣಾಸುರ ವಧೆ: ಗೆರೆಸೊಪ್ಪೆ ಶಾಂತಪ್ಪಯ್ಯ, ನಾರಾಯಣ ಅಡಿಗ.
ವೀರವರ್ಮ : ಹಿರಿಯ ಬಲಿಪ ನಾರಾಯಣ ಭಾಗವತ, ಜಾಣ ರಾಮಚಂದ್ರ, ನಾಗೇಶ ಪೂಜಾರಿ, ಕೆ.ಎನ್.ಓಬಯ್ಯ ಆಚಾರ್, ಶಿರೂರು ಫಣಿಯಪ್ಪಯ್ಯ – ಹೀಗೆ ಐದು ರಚನೆಗಳಿವೆ.

(ಈ ಎಲ್ಲ ಪ್ರಸಂಗ-ಕವಿ ಮಾಹಿತಿಗೆ – ಆಕರ: ಡಾ.ಪಾದೆಕಲ್ಲು ವಿಷ್ಣುಭಟ್ಟರ ಕವಿ ಲಕ್ಷ್ಮೀಶನ ಜೈಮಿನಿ ಭಾರತ ಆಧಾರಿತ ಯಕ್ಷಗಾನ ಪ್ರಸಂಗಗಳು ಯಕ್ಷಗಾನ ಗ್ರಂಥಸೂಚಿ, ಯಕ್ಷಗಾನ ಕೇಂದ್ರ, ಉಡುಪಿ). ಹೀಗೆ ಜೈಮಿನಿ ಭಾರತವನ್ನು ಆಧಾರಿಸಿ ವಿಫುಲ ಕೃತಿ ರಚನೆ ಆಗಿದ್ದು – ಸುಧನ್ವ, ಚಂದ್ರಹಾಸ, ಲವಕುಶ, ನೀಲಧ್ವಜ, ಬಭ್ರುವಾಹನ ಈ ಕಥೆಗಳ ಮೇಲೆ ಅಧಿಕ ರಚನೆಗಳು ಕಂಡು ಬರುತ್ತವೆ.

ಈ ಪೈಕಿ ಎರಡು ಬಗೆಯ ರಚನೆಗಳಿವೆ ಒಂದು – ನೇರವಾಗಿ ಲಕ್ಷಿö್ಮÃಶನ ಕಾವ್ಯವನ್ನು ಆಧರಿಸಿ, ಅದೇ ನಡೆಯಲ್ಲಿ, ಹಲವು ಬಾರಿ ಅದೇ ಶಬ್ದ ಪ್ರಯೋಗಗಳೊಂದಿಗೆ ರಚಿತವಾದ ಪ್ರಸಂಗಗಳು. ಎರಡು-ಪೂರ್ವ ಪ್ರಸಿದ್ಧ ಪ್ರಸಂಗಗಳನ್ನು ಆಧರಿಸಿ, ಅದರ ನಡೆಯನ್ನು ಹೊಂದಿ, ಕೆಲವೆಡೆ ಸಂಸ್ಕರಿಸಿ, ರಚಿತವಾದ ಛಾಯಾ ಪ್ರಸಂಗಗಳು. ಉದಾ: ಬಲಿಪ ಭಾಗವತರ ಚಂದ್ರಹಾಸ, ಹೊಸ್ತೋಟ ಭಾಗವತರ ಬಭ್ರುವಾಹನ ಇತ್ಯಾದಿ. ಇವು ಮುಖ್ಯವಾಗಿ – ವಸ್ತುವನ್ನು ರಂಗಕ್ಕೆ ಮತ್ತಷ್ಟು ಅನುಕೂಲಗೊಳಿಸುವ ಅಥವಾ ಕಾಲಮಿತಿಗೆ ಹೊಂದಿಸಿ ಪುರ‍್ರಚನೆಗೊಳಿಸಿದ ಪ್ರಸಂಗಗಳು.

ಜೈಮಿನಿ ಭಾರತದ ಒಟ್ಟು ಕಥಾನಕವು ಒಂದು ಅಶ್ವಮೇಧ – ದಿಗ್ವಿಜಯವಾಗಿದ್ದರೂ, ಅದು ನಿರೀಕ್ಷಿತ ಸರಳಗತಿಯಲ್ಲಿ ಇಲ್ಲ. ಮೊದಲಿನಿಂದ ಕೊನೆಯ ತನಕವೂ ವಿವಿಧ ಮಟ್ಟಗಳಲ್ಲಿ ವೈವಿಧ್ಯ, ವೈಶಿಷ್ಟ್ಯ, ವಿಭಿನ್ನತೆಗಳಿಂದ ಕೂಡಿದೆ. ಬೇರಾವ ಪುರಾಣದಲ್ಲೂ ಇಲ್ಲದಂತಹ ಕಥಾ ಸ್ವಭಾವಗಳು ಇಲ್ಲಿ ಕಾಣುತ್ತವೆ. ಅಶ್ವಸಂಗ್ರಹ, ಅನುಸಾಲ್ವನಿಂದ ಅಶ್ವಾಪಹಾರ, ಪ್ರಮೀಳೆ ಅರ್ಜುನ ಮುಖಾಮುಖಿ ಮತ್ತು ಪ್ರಮೀಳಾ ಸಂಧಾನ ಕಲ್ಯಾಣ, ನೀಲಧ್ವಜದ ಕಥೆಯಲ್ಲಿ ಬರುವ ಜ್ವಾಲೆಯ ದೇಶಪ್ರೇಮ ಮತ್ತು ಸೇಡು. ಹೀಗೆ ಮೊದಲ ಭಾಗದಲ್ಲಿ ಒಂದು ಬಗೆಯ ವೈವಿಧ್ಯವಿದೆ. ಮುಂದೆ ಬರುವ ಸುಧನ್ವ, ತಾಮ್ರಧ್ವಜ, ವೀರವರ್ಮರ ವೀರವೈಷ್ಣವತ್ವದ ಕಥೆಗಳ ಸೊಗಸು ಪ್ರತ್ಯೇಕ. ಆ ಮೂರು ಕೂಡ ಒಂದೇ ತೆರನಾಗಿಲ್ಲ. ಸುಧನ್ವನ ಧರ್ಮ ಸಂಕಟ ಮತ್ತು ತಪ್ತತೈಲ ಕಟಾಹ ಪರೀಕ್ಷೆ, ಯುದ್ಧದಲ್ಲಿ ಕೃಷ್ಣದರ್ಶನ, ತಾಮ್ರಧ್ವಜದ ವಿಕ್ರಮ, ಮಯೂರಧ್ವಜದ ಮಹಾತ್ಯಾಗ, ವೀರವರ್ಮನಿಗೆ ಹರಿಪಾದಸ್ಪರ್ಶದಿಂದಾದ ಸಾರ್ಥಕ್ಯಗಳು ಒಂದು ಬಗೆಯಾದರೆ. ಬಕದಾಲ್‌ಭ್ಯನ ಔನ್ನತ್ಯ ಇನ್ನೊಂದು ಬಗೆ. ವೈಷ್ಣವನಾದ ಅರ್ಜುನನಿಗೆ ಇದಿರಾಗುವವರೂ ವೈಷ್ಣವರೇ. ಅವರಿಗೆ ಅರ್ಜುನನು, ಇದಿರಾಳಿ ಮತ್ತು ಹರಿದರ್ಶನಕ್ಕೆ ಮಾಧ್ಯಮವೂ ಹೌದು. ಹಾಗಾಗಿ ಬೇರಾವುದೇ ಕಥಾ ಪ್ರಕರಣಗಳ ಸಂಘರ್ಷಕ್ಕಿಂತ, ಈ ವಸ್ತುಗಳು ಭಿನ್ನ.

ಕಥೆಯೊಳಗೆ ಕಥೆ ಎಂಬ ತಂತ್ರದAತೆ – ಜೈಮಿನಿ ಭಾರತವು ಬಹು ಆಯಾಮ ಮಹಾಕಾವ್ಯ. ಅರ್ಜುನ ಬಭ್ರುವಾಹನರ ಸಂಘರ್ಷವು ಅಜ್ಞಾತ ಪುತ್ರನಿಗೂ ತಂದೆಗೂ ಆಗುವ ಕಲಹದ ರೂಪದಲ್ಲಿ ವಿಶ್ವಾದ್ಯಂತ ಕಥೆಗಳಲ್ಲಿರುವ ಆಶಯವಿದೆ. (ಉದಾ: ಸೊಹ್ರಾಬ್ ರುಸ್ತುಂ ಕಥೆ). ಈ ನೆಪದಿಂದ ಇಲ್ಲಿ ಲವಕುಶರ ಕಥೆ ನಿರೂಪಣೆಗೊಂಡು ರಾಮಾಯಣವನ್ನು ಒಳಗೊಂಡಿರುತ್ತದೆ. ಅರ್ಜುನನು ಇದಿರಿಸಬೇಕಾದ ಹಿರಿಯ ವ್ಯಕ್ತಿಯ ರೂಪದಲ್ಲಿ ಚಂದ್ರಹಾಸನಿದ್ದು, ಅವನ ಪೂರ್ವ ಕಥಾ ರೂಪದಲ್ಲಿ, ಭಾರತೀಯ ಕಥಾ ಪ್ರಪಂಚದಲ್ಲೆ ವಿಶಿಷ್ಟವೆನಿಸಿದ ಚಂದ್ರಹಾಸ ಚರಿತ್ರೆ ಒಳಗೊಂಡಿದೆ. ಹೀಗೆ ಜೈಮಿನಿ ಭಾರತದ ಕಥೆಯು ನರನು (ಅರ್ಜುನ, ಮನುಷ್ಯ) ಪ್ರಯಾಣದ ಮೂಲಕ, ಶೋಧನೆಯಿಂದ ವಿಶಿಷ್ಟ ಮಹಾಪುರುಷರನ್ನು ಸಂಪರ್ಕಿಸುವ, ತಿಳಿಯುವ ಅರಿವಿನ ಪಯಣದ ಕಥೆ (ಜೈಮಿನಿ ಭಾರತದಲ್ಲಿ ಪ್ರಯಾಣ ಆಶಯ Travel Motiff ಕುರಿತು ಹಿರಿಯ ವಿಮರ್ಶಕ ಡಾ.ಸಿಎನ್.ರಾಮಚಂದ್ರನ್ ಬರೆದ ಲೇಖನದ ಪ್ರೇರಣೆ) ಕಥೆ ಸಾಗುತ್ತಿದ್ದ ಹಾಗೆ, ಬರುವ ಮುಖ್ಯ ಪಾತ್ರಗಳು ಹೆಚ್ಚು ಹೆಚ್ಚು ಪರಿಪಕ್ವರಾಗಿರುವುದು ಇದರ ಇನ್ನೊಂದು ವಿಶೇಷತೆ.

ಹೀಗೆ – ಕಥಾನಕ, ಕಥಾ ವಸ್ತುಗಳಲ್ಲೂ, ರಚನೆಯಲ್ಲೂ ಗಟ್ಟಿತನ ಹೊಂದಿರುವ ಲಕ್ಷ್ಮೀಶನ ಜೈಮಿನಿ ಭಾರತವು ಯಕ್ಷಗಾನ ರಂಗಕ್ಕೆ ಹಲವು ಪ್ರಸಂಗಗಳಿಗೆ ಆಕರವಾದುದು ಸಹಜ. ಯುದ್ಧ ದಿಗ್ವಿಜಯಗಳು ಮತ್ತು ಧಾರ್ಮಿಕ ನೆಲೆಯಲ್ಲೂ ನಮಗೆ ಅರ್ಥೈಸಲು ಕಷ್ಟವಾಗಿರುವ ವಿರೋಧದ ಮೂಲಕ ದೈವಕೃಪೆ ಪಡೆಯಲೆಳೆಸುವ ವಿಧಾನ) – ಇವೆಲ್ಲ ಇದ್ದರೂ, ಕಥೆಗಳು ಸಾಗುವ ರೀತಿ, ಕಥಾ ವಸ್ತು ವ್ಯತ್ಯಾಸ, ವಿವರಗಳಿಂದ ರಸಪೋಷಣೆ, ರಂಗಯೋಗ್ಯತೆಗಳು ಚೆನ್ನಾಗಿ ಒದಗಿ ಬಂದಿವೆ. ಹೆಚ್ಚಿನ ಕಥೆಗಳ ವಿನ್ಯಾಸವು ನಾಟಕೀಯತೆ, ರಂಗಯೋಗ್ಯತೆ ಹೊಂದಿರುವುದು ಕಾಣುತ್ತದೆ. ಲಕ್ಷ್ಮೀಶನ ರಚನಾ ಸರಣಿ ನಾಟಕೀಯತೆಯ ಮಾದರಿಯಾಗಿದೆ.

– 4 –

ಯಕ್ಷಗಾನ ತೆಂಕು ತಿಟ್ಟಿನಲ್ಲಿ ವ್ಯವಸಾಯಿ ಮೇಳಗಳ ತಿರುಗಾಟ ಆರಂಭದಲ್ಲಿ, ‘ದೇವರ ಸೇವೆ’ ಎಂಬ ಮೊದಲ ಪ್ರದರ್ಶನಕ್ಕೆ ‘ಪಾಂಡ ವಾಶ್ವಮೇಧ’ ಪ್ರಸಂಗ ಎಂದು – ಈ ಜೈಮಿನಿ ಆಧಾರಿತ ಮೂರಾಲ್ಕು ಪ್ರಸಂಗಗಳ ಸಂಕಲನವನ್ನು ಆಡುವುದು ಸಂಪ್ರದಾಯ.

ಬಹುಶಃ ಬಡಗು ತಿಟ್ಟಿನಲ್ಲೂ ಹೀಗೆಯೆ ಇದ್ದಿರಬೇಕು. (ಈಗ ಇದ್ದಿರಬೇಕು. ಸುಭದ್ರಾ ಕಲ್ಯಾಣ ಪ್ರಸಂಗವನ್ನು ಆಡುತ್ತಾರೆ). ಇದಕ್ಕೆ ಕಾರಣಗಳು ಎರಡು-ಒಂದು, ಅಶ್ವಮೇಧದ ಕುದುರೆಯಂತೆ ಹೋಗುವ ದಿಗ್ವಿಜಯದ ತಿರುಗಾಟದಂತೆ ಮೇಳದ ತಿರುಗಾಟ ಎಂಬ ಹೋಲಿಕೆಯ ದಿಗ್ವಿಜಯದ ಆಶಯದ ಪರಿಕಲ್ಪನೆ. ಇನ್ನೊಂದು – ಅಶ್ವಮೇಧ ಕಥಾ ಸರಣಿಯಿಂದಾಯ್ದ ಪ್ರಸಂಗ ಸಮುಚ್ಚಯವೊಂದನ್ನು (ಸುಧನ್-ಪ್ರಮೀಳಾ-ಬಭ್ರುವಾಹನ, ತಾಮ್ರಧ್ವಜ ಅಥವಾ ಪ್ರಮೀಳಾ-ಬಭ್ರುವಾಹನ-ತಾಮ್ರಧ್ವಜ-ವೀರವರ್ಮ) ಇಡಿಯ ರಾತ್ರಿಯ ಆಟಕ್ಕೆ ವಿವಿಧ ರಸಭಾವಗಳೂ, ಯಕ್ಷಗಾನದ ಮೇಳದ ಸಾಂಪ್ರದಾಯಿಕ ವೇಷ ವಿಭಾಗದ ಎಲ್ಲ ವೇಷಗಳಿಗೂ ಅದು ಅಚ್ಚುಕಟ್ಟಾಗಿ ಹೊಂದುತ್ತದೆ. ಉದಾ: ಪೀಠಿಕೆ ವೇಷ-ಅರ್ಜುನ, ಪುಂಡುವೇಷಗಳಿಗೆ ಸುಧನ್ವ, ಬಭ್ರುವಾಹನ, ಬಣ್ಣದ ವೇಷದ ಸ್ಥಾನಕ್ಕೆ-ಅನುಸಾಲ್ವ, ವೀರವರ್ಮ, ಛೋರ ಭೀಷಣ, ಮೂರನೆಯ ಪುಂಡು ವೇಷಕ್ಕೆ ಕೃಷ್ಣ, ಭಾವನಾತ್ಮಕ ಮಾತುಗಾರಿಕೆಗೆ ಹಂಸಧ್ವಜ, ಮಯೂರ ಧ್ವಜ, ಸ್ತ್ರೀ ವೇಷಕ್ಕೆ ಪ್ರಮೀಳೆ, ಸ್ತ್ರೀ ವೇಷಗಳಿಗೆ ಪ್ರಭಾವತಿ, ಚಿತ್ರಾಂಗದೆ, ಹಿರಿಯ ಸ್ತ್ರೀ ವೇಷಕ್ಕೆ – ಸುಗರ್ಭ, ಕುಮುದ್ವತಿ ಹೀಗೆ ಎಲ್ಲ ಬಗೆಯ ವೇಷಗಳಿಗೆ ಸೂಕ್ತ ಸ್ಥಾನವುಳ್ಳದ್ದಾಗುತ್ತದೆ ಈ ಸಂಕಲನ. ಹಾಗಾಗಿ – ಮೇಳವೊಂದರ ಸಂಘಟನೆಗೆ ಅಂದರೆ ವೇಷಧಾರಿಗಳ ಆಯ್ಕೆಗೆ, ಆಧಾರವಾಗಿರುವ ಮೂರು ಜೋಡಣೆಗಳಲ್ಲಿ ಇದೊಂದು (ಅತಿಕಾಯ ಇಂದ್ರಜಿತು-ಮೈರಾವಣ ಮತ್ತು ಕುರುಕ್ಷೇತ್ರ – ಇವು ಇನ್ನೆರಡು).

ರಸಪರಿಪೋಷಣೆ ಮತ್ತು ಮತ್ತು ಸನ್ನಿವೇಶಗಳ ಸನ್ನಿವೇಶಗಳ ದೃಷ್ಟಿಯಿಂದಲೂ ಜೈಮಿನಿ ಭಾರತ ಆಧಾರಿತ ಪ್ರಸಂಗಗಳು ರಂಗದ ಬಳಕೆಯಲ್ಲಿ ಮಾನಕ ( Standard) ಎಂದು ಪರಿಗಣಿತವಾಗುತ್ತದೆ. ಪಾಂಡವರ ಒಡ್ಡೋಲಗ, ಸುಧನ್ವ ಪ್ರಸಂಗದ ಪ್ರಭಾವತಿಯ ಪ್ರವೇಶ, ಸುಧನ್ವಾರ್ಜುನ ಸಂವಾದ, ಅರ್ಜುನ ಸುಧನ್ವ, ವೃಷಕೇತು ಸುಧನ್ವ, ಪ್ರಮೀಳೆ ಅರ್ಜುನ ಸಂವಾದಗಳು ಬಣ್ಣದ ವೇಷಗಳಾದ ಅನುಸಾಲ್ವ ಘೋರಭೀಷಣರ ಪ್ರವೇಶಗಳು ಮತ್ತು ಬೇರೆ ಹಲವು ಸನ್ನಿವೇಶಗಳು ಯಕ್ಷಗಾನವೇ ಕುಣಿತಗಳ ವಿವಿಧ ವಿಧಾನಗಳನ್ನು ಬಳಸಲು ಸೂಕ್ತವಾಗಿವೆ.

ಅದೇ ರೀತಿ – ವಿವಿಧ ರಂಗಕ್ರಮಗಳ ಬಳಕೆಗೆ ಈ ಪ್ರಸಂಗಗಳ ಅವಕಾಶಗಳಿವೆ. ಸುಧನ್ವ ಕಾಳಗದಲ್ಲಿ ತಪ್ತತೈಲಕಟಾಹ ಸನ್ನಿವೇಶ, ಸುಧನ್ವ ಅರ್ಜುನ ಶ್ರೀಕೃಷ್ಣಯುದ್ಧದಲ್ಲಿ ಸನ್ನಿವೇಶ, ತಾಮ್ರಧ್ವಜ ಕಾಳಗದ ಯುದ್ಧಗಳು, ಮಯೂರಧ್ವಜನ ಬಲಿದಾನ, ವೀರವರ್ಮ ಕಾಳಗದ ಕೃಷ್ಣ, ವೀರವರ್ಮ, ಆಂಜನೇಯ, ಅರ್ಜುನ ಈ ನಾಲ್ಕು ಪಾತ್ರಗಳಿರುವ ಯುದ್ಧ ಮತ್ತು ಶರಣಾಗತಿಯ ಭಾಗ-ಇವುಗಳಲ್ಲೆಲ್ಲ ರಂಗಕ್ರಮ ಅಥವಾ ರಂಗ ರೂಢಿ(ಛಿoಟಿveಟಿಣioಟಿs)ಯ ಚಲನೆ, ರಂಗದ ಬಳಕೆ, ಕುಣಿತ ಗುಂಪು ನಿರ್ವಹಣೆಗಳಿಗೆ ಮಾದರಿ ಸಂದರ್ಭಗಳಿವೆ. ತಾಮ್ರಧ್ವಜ ಪ್ರಸಂಗವAತೂ ರಂಗರ ಜೋಡಣೆಯಲ್ಲಿ ಕ್ರಮಗಳಿಗೆ ಪ್ರಸಿದ್ಧವಾದ, ವ್ಯವಸಾಯಿ ವ್ಯವಸಾಯಿ ಕಲಾವಿದನ ರಂಗವಿಧಾನಪರಿಣತಿಯ ಅಳತೆಗೋಲಾದ ಪ್ರಸಂಗ.

ಸುಧನ್ವ ಪ್ರಭಾವತಿ ಸಂವಾದದ ಶೃಂಗಾರ, ಹಲವು ಯುದ್ಧ ಸನ್ನಿವೇಶಗಳ ವೀರರೌದ್ರ, ತಾಮ್ರಧ್ವಜ ಸುಧನ್ವರ ವೀರಭಕ್ತಿ, ಹಂಸಧ್ವಜ ಮಯೂರಧ್ವಜದ ಅತ್ಮಾರ್ಪಣಾ ಭಾವ, ಸುಗರ್ಭೆ, ಕುಮುದ್ವತಿಯರ ತಾಯ್ತನದ ಭಾವಗಳು, ಶ್ರೀಕೃಷ್ಣ ಲೀಲಾ ವಿನೋದ ರೂಪೀ ಆಧ್ಯಾತ್ಮಿಕತೆ, ಅರ್ಜುನನ ಹಿರಿತನ, ವೀರತ್ವ ಮತ್ತು ಏರಿಳಿತಗಳ ಸನ್ನಿವೇಶ ಚಿತ್ರಗಳು – ಇವೆಲ್ಲ ಸೇರಿ ಅಶ್ವಮೇಧ ಪ್ರಸಂಗ ಸರಣಿಯು ಸಮೃದ್ಧವಾಗಿದ್ದು, ಯಕ್ಷಗಾನ ಮೇಳವೊಂದರ ರಚನೆ ಮತ್ತು ಕಲಾಪೂರ್ಣವಾದ ಬಳಕೆಗೆ ಅನುಕೂಲಿರಿಸಿರುವುದು. ಇದು ಇನ್ನೊಂದು ಕಾರಣ. ಹೀಗೆ-ವಸ್ತು ವೈವಿಧ್ಯ, ಕಥಾಶಕ್ತಿಗಳು ಈ ಪ್ರಸಂಗಗಳ ಜನಪ್ರಿಯತೆಗೆ ಕಾರಣವಾಗಿದ್ದು ಶತಮಾನಗಳ ಕಾಲ ಅಸಂಖ್ಯ ಪ್ರಯೋಗಗಳನ್ನು ಆ ಪ್ರಸಂಗಗಳು ಕಾಣುತ್ತ ಬಂದಿವೆ.

-5-

ಮುಲ್ಕಿರಾಮಕೃಷ್ಣ ಕವಿ ರಚಿತ ಮತ್ತು ಇನ್ನೋರ್ವ ಅಜ್ಞಾತ ಕವಿ ಲಿಖಿತ ‘ಸುಧನ್ವ ಕಾಳಗ’, ಪೆರುವೊಡಿ ಸಂಕಯ್ಯ ಭಾಗವತರ ಪ್ರಮೀಳಾ ಸಂಧಾನ, ಹಳೆಮಕ್ಕಿರಾಮನ ತಾಮ್ರಧ್ವಜ, ದೇವಿದಾಸ, ಮತ್ತು ಇನ್ನೊಬ್ಬ ಕವಿಕೃತ ಬಭ್ರುವಾಹನ, ವಿವಿಧ ಕವಿಗಳ ವೀರವರ್ಮ ಪ್ರಸಂಗಗಳು, ಮಟ್ಟಿವಾಸುದೇವ ಪ್ರಭು, ಹಲಸಿನ ಹಳ್ಳಿನರಸಿಂಹ ಶಾಸ್ತ್ರಿ ಮಾಲೆಕೋಡು ಶಂಭು ಗಣಪತಿ ಭಟ್ಟ, ಮೈರ್ಪಾಡಿ ವೆಂಕಟರಮಣಯ್ಯ, ಜಿ. ಪರಮೇಶ್ವರ ಭಟ್ಟ – ಇವರ ಚಂದ್ರಹಾಸ ಚರಿತ್ರೆಗಳು, ಪಾರ್ತಿಸುಬ್ಬ, ಹಟ್ಟಿಯಂಗಡಿ ರಾಮಭಟ್ಟರ ‘ಲವಕುಶ’ ಪ್ರಸಂಗಗಳು ಇನ್ನು ಜೈಮಿನಿ ಆಧಾರಿತ ಪ್ರಸಂಗಗಳಲ್ಲಿ ಸುದೀರ್ಘ ಮತ್ತು ವಿಪುಲ ರಂಗ ಪ್ರಯೋಗ ಪ್ರಸಿದ್ಧಿ ಪ್ರಾಚರ‍್ಯಗಳನ್ನು ಪಡೆದಿವೆ. ‘ಸುಧನ್ವ’ ಮತ್ತು ‘ತಾಮ್ರಧ್ವಜ’ ಪ್ರಸಂಗಗಳು ತಾಳಮದ್ದಲೆಯ ರಂಗದಲ್ಲೂ ನಿರಂತರ ಪ್ರಯೋಗ ಪ್ರಸಿದ್ಧಿ ಹೊಂದಿವೆ.

ಹೊಸ್ತೋಟ ಭಾಗವತರು ಮತ್ತು ವೈ.ಚಂದ್ರಶೇಖರ ಶೆಟ್ಟರು ಬರೆದ ‘ಜ್ವಾಲೆ’ ಪ್ರಸಂಗಗಳು-ನೀಲಧ್ವಜದ ಹೋರಾಟ ಮತ್ತು ಆತನ ಪತ್ನಿ ಜ್ವಾಲೆಯ ದೇಶಾಭಿಮಾನ ಮತ್ತು ಸೇಡನ್ನು ಆಧರಿಸಿ, ರಚಿತವಾದ ‘ಪ್ರಾಯೋಗಿಕ’ ಪ್ರಸಂಗಗಳೆನ್ನಬಹುದು. ಅಂತೆಯೆ – ಕುದ್ರೆಪ್ಪಾಡಿ ಈಶ್ವರಪ್ಪಯ್ಯ ಮತ್ತು ಬಾಳೆಗದ್ದೆ ಶಿವರಾಮ ಹೆಗಡೆ ಇವರ ಅಶ್ವಮೇಧ, ದಿಗ್ವಿಜಯದ ಪ್ರಮುಖ ಕಥೆಗಳನ್ನು ಅಳವಡಿಸಿ ರಚಿಸಿರುವುದು, ಸಾಂಪ್ರದಾಯಿಕ ಪ್ರಸಂಗಗಳನ್ನು ಜೋಡಿಸಿ ಭಾಗವತರುಗಳು ಸಂಕಲಿಸುತ್ತಿದ್ದ ‘ಅಶ್ವಮೇಧ’ ಸಂಯುಕ್ತ ಸಂಕಲನವನ್ನು ಇನ್ನಷ್ಟು ಓರಣವಾಗಿ ರಂಗಕ್ಕೆ ಅನುಕೂರಿಸಿ ನೀಡುವ ಉದ್ದೇಶದಿಂದ ಬಂದಿವೆ. ಆದರೆ – ಮೇಳಗಳ ಮತ್ತು ಕಲಾವಿದರ ಅಭ್ಯಾಸ, ರೂಢಿಯ ಸೌರ‍್ಯಗಳಿಂದಾಗಿ ಈ ರಚನೆಗಳು ರಂಗದಲ್ಲಿ ಹೆಚ್ಚು ಪ್ರಚಾರವಾಗದೆ ಉಳಿದವು. ಹಾಗಾಗಿ ರಂಗ ಯೋಗ್ಯತೆಯೊಂದೆ ಪ್ರಸಂಗಗಳ ಪ್ರಾಚರ‍್ಯಕ್ಕೆ, ಹೆಚ್ಚಿನ ಬಳಕೆಗೆ ಕಾರಣವೆಂದು ಹೇಳುವಂತಿಲ್ಲ. ಲವಕುಶ, ಚಂದ್ರಹಾಸ ಚರಿತ್ರೆ ಈ ಕಥಾನಕಗಳು ಕಥಾಶಕ್ತಿಯಿಂದಲೆ ಮೆರೆಯುವ ಪ್ರಸಂಗಗಳು, ಪದ್ಯ ರಚನೆ, ರಸಾವಿಷ್ಕಾರ, ನಾಟ್ಯಾನುಕೂಲತೆ, ಸನ್ನಿವೇಶ ಚಿತ್ರಣ, ಅರ್ಥಗಾರಿಕೆ (ಪಾತ್ರಧಾರಿಗಳ ಆಶುಭಾಷಣ, ಸಂಭಾಷಣೆ)ಗೆ ಒದಗುವಿಕೆ ಈ ದೃಷ್ಟಿಗಳಿಂದ ಜೈಮಿನಿ ಪ್ರಸಂಗಗಳಲ್ಲಿ ಬಹಳಷ್ಟು ಉತ್ತಮ ಸಂದರ್ಭಗಳಿವೆ. ಅವನ್ನು ಪರಿಶೀಲಿಸಲು ಅವಕಾಶ ಸಾಲದು. ಕೆಲವನ್ನು ಇಲ್ಲಿ ಸೂಚನಾ ಲಕ್ಷ್ಮೀಶನ ಮಾತ್ರವಾಗಿ ಉಲ್ಲೇಖಿಸಿದೆ.

ಮುಲ್ಕಿ ರಾಮಕೃಷ್ಣ ಕವಿ ರಚಿತ ಸುಧನ್ವಕಾಳಗವು – ಲಕ್ಷ್ಮೀಶನ ಪದ್ಯಗಳನ್ನು ವಿವಿಧ ತಾಳ, ರಾಗಗಳ ಗೀತೆಗಳಾಗಿ ರಚಿಸುವಲ್ಲಿ, ಸ್ವಂತ ಕಲನೆಯಲ್ಲಿ, ಸನ್ನಿವೇಶ ನಿರ್ಮಾಣದಲ್ಲಿ ಉತ್ತಮ ಕೃತಿ. ಆರಂಭದಲ್ಲಿ ಬರುವ ಭೀಮ-ಶ್ರೀಕೃಷ್ಣಸಂವಾದ (ಈ ಸನ್ನಿವೇಶಕ್ಕೆ ದ್ವಾರಕಾ ಭೀಮ ಎಂದು ಸಂಕೇತವಿದೆ), ಕೃಷ್ಣ-ರುಕ್ಮಿಣೀ ಸಂವಾದಗಳಲ್ಲಿ ಕವಿಯು, ಲಕ್ಷ್ಮೀಶನ ಪದ್ಯಗಳ ಭಾವವನ್ನು ಸೊಗಸಾಗಿ ಬೆಳೆಸಿ ಸಂವಾದವನ್ನು ರೂಪಿಸಿದ್ದಾನೆ. ಅದೇ ರೀತಿ ಕೊನೆಯ ಭಾಗದ ಸುಧನ್ವ, ಅರ್ಜುನನ, ಕೃಷ್ಣ ಸಂವಾದದಲ್ಲೂ ರಚನಾಕೌಶಲ್ಯವನ್ನು ಕಾಣಬಹುದು. ಪ್ರೌಢವಾದ ಕಾವ್ಯಭಾಗವೊಂದನ್ನು ಸೊಗಸಾದ ಗೀತ ಪ್ರಬಂಧವಾಗಿ, ಅಂದರೆ ಪ್ರಸಂಗವಾಗಿ ಹೇಗೆ ಅನುವಾದಿಸಬಹುದೆಂಬುದಕ್ಕೆ ಸುಧನ್ವ ಕಾಳಗ ದೃಷ್ಟಾಂತವಾಗಿದೆ. ಹಳೆಮಕ್ಕಿ ರಾಮನ ತಾಮ್ರಧ್ವಜ, ಅಜ್ಞಾತ ಕರ್ತೃಕವಾದ ಬಭ್ರುವಾಹನ ಪಾರ್ತಿ ಸುಬ್ಬನ ಲವಕುಶ, ಮಾಲೆಕೊಡ್ಲು ಶಂಭು ಭಟ್ಟರು ಮತ್ತು ಹಲಸಿನ ಹಳ್ಳಿಯವರು ಬರೆದ ಚಂದ್ರಹಾಸ ಚರಿತ್ರೆಗಳು – ಪ್ರಸಂಗ ರಚನೆಯಲ್ಲಿ ಎತ್ತರದ ಮಾದರಿಗಳಾಗಿವೆ. ಹಾಡುಗಾರರ, ಪಾತ್ರಧಾರಿಗಳ ಸಂಗೀತ, ಸಾಹಿತ್ಯಗಳ ವ್ಯುತ್ಪತ್ತಿಗೆ ಇವು ಅವಶ್ಯಕ ಮೌಲಿಕ ಪ್ರಸಂಗಗಳೆಂಬುದು ಅಂಗೀಕೃತ ವಿಚಾರ.

ಸುಧನ್ವ ಕಾಳಗದ ಸುಧನ್ವ-ಪ್ರಭಾವತಿ ಸನ್ನಿವೇಶದ ‘ಸತಿಶಿರೋಮಣಿ ಪ್ರಭಾವತಿ ಸೊಬಗಿನಲಿ’… ನಳಿನಾಕ್ಷಿ ಕೇಳೆ ಈಗ…’ ಎಂಬ ಪದಗಳು, ಅರ್ಜುನ ಸುಧನ್ವ ಸಂವಾದದಲ್ಲಿ ‘ಸೃಷ್ಟಿಗರ್ಜುನನೆಂಬವನೆ ನೀನು’ ಎಂದು ಆರಂಭವಾಗುವ ಹಲವು ಪದ್ಯಗಳು, ಬಭ್ರುವಾಹನ ಪ್ರಸಂಗದ ಚಿತ್ರಾಂಗದೆ-ಸಖಿ ಸಂವಾದದ ‘ಅಹುದೆ ಎನ್ನಯರಮಣ’ ಎಂದು ಆರಂಭವಾಗುವ ಹಲವು ಪದ್ಯಗಳು, ತಾಮ್ರಧ್ವಜ ಕಾಳಗದ ತಾಮ್ರಧ್ವಜ-ಕೃಷ್ಣಸಂವಾದ ಇವೆಲ್ಲ ಸುಂದರ, ಅರ್ಥಗರ್ಭಿತ ಗೀತರಚನೆಯ ಉತ್ತಮ ಉದಾಹರಣೆಗಳಾಗಿವೆ.

ಪಾರಂಪರಿಕ ಪ್ರಸಂಗ ಕವಿಗಳಲ್ಲಿ ಮೂರ್ಧ್ವನ್ಯನೆನಿಸಿರುವ ಪಾರ್ತಿಸುಬ್ಬನು ರಚಿಸಿದ ಕುಶಲವರ ಕಾಳಗ ಪ್ರಸಂಗವು ಲಕ್ಷ್ಮೀಶನ ಕಾವ್ಯವನ್ನು ಅನುಸರಿಸಿದರೂ – ಹಲವು ಕಡೆ ರಂಗದ ಅಗತ್ಯ, ಸಂವಾದದ ಅನುಕೂಲ ಮತ್ತು ರಸಾಭಿವ್ಯಕ್ತಿಗಳಾಗಿ ನಡೆಯನ್ನಷ್ಟು ಪರಿಷ್ಕರಿಸಿ ಚಿತ್ರಿಸಿದೆ. ಒಂದೇ ಉದಾಹರಣೆ ರಾಮನ ಚಿಂತೆಗೆ ಕಾರಣವೇನೆಂದು ಸೀತೆ ಕೇಳುವುದು. ಇದು ಲಕ್ಷಿö್ಮÃಶನಲ್ಲಿಲ್ಲ. ಹೀಗೆ ಹಲವೆಡೆ ಬದಲಾವಣೆಗಳಿವೆ. ಈ ಪ್ರಸಂಗಗಳಲ್ಲಿ ಬರುವ ಹಲವು ಪದ್ಯಗಳು.

ಈರೇಳು ಭುವನಕೊಡೆಯ ವಿಶ್ವಪತಿ……
ಎಲ್ಲಿಗೆ ಪಯಣವಿದೇನು…….
ಕಯ್ಯಾರೆ ಖಡ್ಗವ ಕೊಟ್ಟು ತನ್ನರಸಿಯ.
ಬಲು ಬಲು ಗುಣಗಳುಳ್ಳವನೆ.
ನಂಬಿಕೊಳ್ಳೆ ನಂಬಿಕೊಳ್ಳೆ…….
ಸೀತಾನಂದನನು ಓಲೆಯ ನೋಡಿ…….
ಕುಶಲವರನು ಕಂಡ ರಾಮ…….
ಇನ್ನಾದರೂ ಬೇಡ ಬೇಡ ಮಕ್ಕಳಿರ…….
ಪತಿಯ ನೋಡಿದಳು ಸೀತೆ……..
ಇವು ಕಲಾವಿದರಿಗೂ, ಕಲಾರಸಿಕರಿಗೂ ಇಷ್ಟವಾಗಿ ನೆಲೆಗೊಂಡಿರುವ ಪದ್ಯಗಳು.

ಲಕ್ಷ್ಮೀಶನ ಕಾವ್ಯದ ಸನ್ನಿವೇಶಗಳು ಪ್ರಸಂಗಗಳಲ್ಲಿ ಬಂದಿರುವ ಬಗೆ, ಕಥಾಸರಣಿ, ಅನುಕ್ರಮ ಒಂದೇ ಕಥೆಯನ್ನು ಬೇರೆ ಬೇರೆ ಕವಿಗಳು ಪಸಂಗೀಕರಿಸಿದುದರ ತುಲನಾತ್ಮಕ ಪರಿಶೀಲನೆ ಪದಪ್ರಯೋಗ, ಪರಿವರ್ತನೆ, ಛಂದೋ ವಿಧಾನ ಇವುಗಳನ್ನು ಕುರಿತು ವಿಸ್ತಾರವಾದ ವಿಮರ್ಶೆಗೆ ಅವಕಾಶವಿದೆ. ಯಕ್ಷಗಾನ ಪರಂಪರೆಗೆ ಒಂದು ಭದ್ರ ಸಂಪತ್ತನ್ನು, ನೆಲೆಯನ್ನೂ ನೀಡಿರುವ ಲಕ್ಷ್ಮೀಶನ ಮಹಾಕಾವ್ಯದ ಕೊಡುಗೆ ಮಹತ್ವದ್ದಾಗಿದೆ.

ಅನುಬಂಧ
ಲಕ್ಷ್ಮೀಶ ವಿಸ್ತರಣ

ಯಕ್ಷಗಾನ ಪ್ರಸಂಗ ಕಾವ್ಯವೆಂಬುದು. ಪ್ರದರ್ಶನದ ಕಥಾನಕದ ಸ್ಥೂಲವಾದ ಚೌಕಟ್ಟು. ಅದನ್ನು ಹಾಡುವಿಕೆ ನೃತ್ಯ ಮಾತು ಚಲನೆಗಳ ಮೂಲಕ ನಾಟಕೀಕರಿಸುವುದು ಕಲಾವಿದರು. ಅಂದರೆ ಅವರು ನಿರ್ಮಿಸುವುದು ರಂಗಪಠ್ಯ. ಒಂದೊಂದು ಪ್ರದರ್ಶನವೂ ಒಂದು ರೂಪ, ಪಾಠ. ಹೀಗೆ ಹಲವು ಆಕರಗಳನ್ನು ಆಧರಿಸಿ ಪ್ರಸಂಗ ಕವಿ ರಚಿಸುವ ಕಾವ್ಯವು ‘ಹಲವು ಮೂಲಗಳಿಂದ ಒಂದು’ ಆಗಿ ಅದೇ ಒಂದು ಹಲವು ರಂಗರೂಪಗಳಾಗಿ ಕದರಾಗುವುದು. ಈ ಪ್ರಕ್ರಿಯೆಯನ್ನು ವಿಮರ್ಶಕ ಡಾ. ಪುರುಷೋತ್ತಮ ಬಿಳಿಮಲೆಯವರು ವಿಶ್ಲೇಷಿಸಿದ್ದಾರೆ. ಹಳಗನ್ನಡದ ಬಹುರೂಪೀ ನಿರೂಪಣೆಗಳು.

ಹೀಗೆ ಮಾಡುವಾಗ ವಸ್ತುತಃ ಇದು ಲಕ್ಷ್ಮೀಶನ ವಿಸ್ತರಣೆ ಅಥವಾ ಕನ್ನಡ ಜೈಮಿನಿ ಭಾರತದ ವಿಸ್ತರಣೆ ಆಗುತ್ತದೆ. ಇದು ಯಕ್ಷಗಾನದಂತೆ ಕಥೆಗಳಲ್ಲಿ ಎಷ್ಟು ಸಹಜವಾಗಿರುತ್ತದೆ ಎಂದರೆ – ಹಾಗೆ ನಡೆಯುತ್ತಿರುತ್ತದೆ ಎಂದೇ ನಮಗನಿಸುವುದಿಲ್ಲ. ಕಲಾವಿದರಲ್ಲಿ ಕೇಳಿದರೆ – ‘ಹಾ ಅದೊಂದು ದೊಡ್ಡ ಸಂಗ್ತಿಯಾ? ಆಟ ಕೂಟವೆಂದರೆ ಹಾಗೆ ಆಗುವುದೇ’ ಎನ್ನುತ್ತಾರೆ! ಆದರೆ ವಿಶ್ಲೇಷಿಸಿದಾಗ ಈ ಪ್ರಕ್ರಿಯೆ ಬಲು ಗಹನವಾದುದು ಎಂಬುದು ತಿಳಿಯುತ್ತದೆ.

ಜೈಮಿನಿ ಭಾರತದ ವಾರ್ಧಕಗಳನ್ನು ವಿವಿಧ ರಾಗತಾಳ ಬಂಧಗಳ ‘ಪದ’ಗಳಾಗಿ ಮಾಡುವ ಯಕ್ಷಗಾನ ಕಾವ್ಯ ರಚನೆ – ಒಂದು ಅನುಕಾವ್ಯ ಮಾತ್ರವಲ್ಲ ಪ್ರತಿ ಕಾವ್ಯ ಸೃಷ್ಟಿ.

ಆ ಪದಗಳನ್ನು ಬೆಳೆಸಿ ಭಾಗವತರು ನಿರ್ಮಿಸುವ ಗಾನ ರೂಪ (ಗಾನಪಠ್ಯ Musical Text ) ಬಿಂದು. ಅದನ್ನಾಧರಿಸಿ ಕಲಾವಿದನು ಮಾಡುವ ವಾಚಕ (ಅರ್ಥ; ಆಶುವಾಚಿಕ) ಮತ್ತು ಕುಣಿತ, ಅಭಿನಯಗಳು ವಿಸ್ತಾರದ ಮತ್ತೊಂದು ರೂಪ. ಅದರ ಸಾಧ್ಯತೆಗಳು ಅನಂತ.

ಸುಧನ್ವ ಪ್ರಸಂಗದಲ್ಲಿ ಪ್ರಭಾವತಿಯು
ಕಾಂತ ಕೇಳನ್ನ ಸೊಲ್ಲ | ಪಾರ್ಥನನು
ಕಂಡು ಪಿತ ಬಿಡುವನಲ್ಲ | ಎಂತು ಗೆಲವಹುದೊ ನಿನಗೆ
ಶ್ರೀ ಕೃಷ್ಣ ಸಂತಸದಿ ಸಾಧ್ವನವಗೆ || ಎಂಬ ಪದಕ್ಕೆ
ಅಥವಾ ಸುಧನ್ವನು
ಕಂಡು ಪುಳಕೋತ್ಸವದ ಹರುಷದಿ
ದಿಂಡುಗೆಡೆದುರೆ ನಮಿಸಿ ತನ್ನಾಯ|
ಗಂಡು ತನಕಿದು ಸಾಕು ತಾ
ಕೈಗೊಂಡ ಕೆಲಸ || ಎಂಬುದಕ್ಕೆ ಮಾಡುವ ರಂಗಸ್ಥಳದ ಕೆಲಸವ ಮಾತುಗಳ ಸಾಧ್ಯತೆ ಏನು, ಎಷ್ಟು? ಅದು ಎಷ್ಟೆಷ್ಟೋಇನ್ನೊಂದು ಮಟ್ಟದಲ್ಲಿ – ಅರ್ಥಗಾರಿಕೆಯಲ್ಲಿ, ಭಾಗವತಿಕೆಯಲ್ಲೂ ಲಕ್ಷ್ಮೀಶನ ಪದ್ಯಗಳನ್ನು ಬಳಸುವ ವಿಧಾನ – ಗದ್ಯಾತ್ಮಕವಾದ ಅನುಸೃಷ್ಠಿಯ ಪರಿಣಾಮ ಅಪಾರ.

ಹಲವು ವರ್ಷಗಳ ಹಿಂದಿನ ನೆನಪು. ಸುಧನ್ವಾರ್ಜುನದ ಸುಧನ್ವನಾಗಿ ನಾನು ಅರ್ಥ ಹೇಳುತ್ತಿದ್ದೆ. ಅರ್ಜುನನಾಗಿ ದಿ. ತೋಟಕುಂಜ ನಾರಾಯಣ ಶೆಟ್ಟರು “ಯಾರು ಸುಧನ್ವನೋ? ನೀ ಏಂ ಸುಧನ್ವಂ ಆಂ ಸುಧನ್ವಂ… ನಿಜವಾಗಿ ಹೌದು’ ಎಂದು ಅವರ ಅಬ್ಬರದ ಧಾಟಿಯಲ್ಲಿ ಹೇಳಿದರು. ಜಿಗ್ಗೆನಿಸಿತು… ಸ್ವಲ್ಪ ಹೊತ್ತಿನಲ್ಲಿ ಹೊಳೆಯಿತು ಅದು ಲಕ್ಷ್ಮೀಶನ ಪದ್ಯವೊಂದರ ತುಣುಕು ಬಳಕೆ ಎಂದು.

ಹೀಗೆ – ಲಕ್ಷ್ಮೀಶನ , ನಾರ್ಣಪ್ಪ, ತೊರವೆ ಪದ್ಯಗಳನ್ನು ಉದ್ಧರಿಸಿ ಅಸಾಮಾನ್ಯ ಪಂಗಾಮವನ್ನುAಟು ಮಾಡುವ ಅರ್ಥದಾರಿಗಳು ಅನೇಕರಿದ್ದರು. ಇದ್ದಾರೆ, ಇದರಲ್ಲಿ ಪಕ್ಕನೆ ನೆನಪಾಗುವವರು ದಿ| ಶೇಣಿಯವರು, ದಿ| ಕೆರೆಮನೆ ಮಹಾಬಲ ಹೆಗ್ಡೆ, ಶ್ರೀ ಮೂಡಂಬೈಲು ಶಾಸ್ತಿçಗಳು, ಹೀಗೆ ಚಂದ್ರಹಾಸ ಚರಿತ್ರೆ ಪ್ರಸಂಗದಲ್ಲಿ – ದುಷ್ಟಬುದ್ದಿ ಮತ್ತು ಮದನರೊಳಗಿನ ತಪ್ಪು ಸಂವಹನಕ್ಕೆ ಕಾರಣವಾಗಿ ಕರ್ತಗೆ ತಿರುವು ನೀಡುವ ಪ್ರಸಿದ್ಧ ಪದ್ಯ. ಶ್ರೀ ಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ತನ್ನಸುತ ಮದನಂಗೆ ನೇಮಿಸಿದ ಕರ‍್ಯಂ… ಎಂಬ (ಪತ್ರದ ಒಕ್ಕಣೆ) ಯನ್ನು ‘ದುಷ್ಟಬುದ್ಧಿ (ಮಹಾಬಲ ಹೆಗ್ಡೆ) ಮದನ (ಶಂಭು ಹೆಗ್ಡೆ) ಅವರು ಅದಕ್ಕೆ ಎರಡು ರೀತಿಯ ಅರ್ಥವನ್ನು ಹೇಳುತ್ತ, ಗೊಂದಲದ ಚಿತ್ರಣ ಮಾಡುತ್ತ ಕೊನೆಗೆ, ‘ಕೊಡು ವಿಷವ ಮೋಹಿಸುವಂತೆ ಎಂಬುದು ‘ಕೊಡು ವಿಷಯ ಮೋಹಿಸುವಾತ ! ಎಂದಾಗ ಆಗುವ ಪರಿಣಾಮವನ್ನು ನೋಡಿಯೆ ಅರಿಯಬೇಕು. ಇದೇ ಕಾವ್ಯದ ವಿಸ್ತರಣೆ. ಇಂತಹ ಸಂಧರ್ಭಗಳಿಗೆ ಲೆಕ್ಕವಿಲ್ಲ.

-ಗಮಕಿಗಳು, ಚಿತ್ರಕಾರರು, ಪುರಾಣವಾಚನ, (ದಕ್ಷಿಣ ಕನ್ನಡದ ಬಳಕೆಯಲ್ಲಿ ವಾಚಕ ಮಾಡುವುದು) ವೆಂಬ, ಈಗಿನ ಬಳಕೆಯು ಗಮಕವಾಚನ – ವ್ಯಾಖ್ಯಾನಕಾರರು, ಹಳೆಯ ಕಾವ್ಯಗಳನ್ನು ಪಾಠ ಮಾಡುವ ಅಧ್ಯಾಪಕ ಪರಂಪರೆ, ಉಪನ್ಯಾಸಕಾರರ, ವಿಮರ್ಶಕರ ಸರಣಿ ಟೀಕು ಎಂಬ ವಿವರಣೆಗಳನ್ನು ಬರೆದಿರುವ ಪಂಡಿತರು – ಇವರೆಲ್ಲರೂ ಇಂತಹ ವಿಸ್ತರಣೆಯನ್ನು ಮಾಡುತ್ತ ಬಂದದ್ದು ನಿಜ.

ಆದರೆ ಯಕ್ಷಗಾನದ ಕಲಾವಿದರು ಮಾಡಿರುವ ಈ ಬಗೆಯ ವಿಸ್ತರಣೆಯ ಬಿತ್ತರವೂ ಕಾಲಾಮೌಲ್ಯವು, ಸೃಜನವೂ ಬೇರೆಯಾದದ್ದು. ಕೆಲವು ಅಂಶಗಳಲ್ಲಿ ಶ್ರೇಷ್ಠವಾದುದೆಂದರೆ, – ಉಳಿದ ಪರಂಪರೆಗಳ ಅವಗಣನೆಯಲ್ಲ.

error: Content is protected !!
Share This