ಸಿದ್ಧ ಹಿಮ್ಮೇಳ ಕಲಾವಿದ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರ ‘ ಅಗರಿ ಮಾರ್ಗ’ ಕೃತಿಗೆ 2019 ನೇ ಸಾಲಿನ  ಯಕ್ಷಗಾನ ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿ ಬಂದಿದೆ. ಬ್ಯಾಂಕ್ ಅಧಿಕಾರಿಯಾಗಿ, ಯಕ್ಷಗಾನ ಕಲಾವಿದರಾಗಿ ಮತ್ತು ಸಾಹಿತಿಯಾಗಿ ಮೂರರಲ್ಲೂ ಯಶಸ್ಸನ್ನು ಸಾಧಿಸಿದ ಕೆಲವೇ ಕೆಲವು ಮಹಾನುಭಾವರ ಸಾಲಿಗೆ ಉಳಿತ್ತಾಯರೂ ಸೇರ್ಪಡೆಯಾಗಿದ್ದಾರೆ. 

ಕಲಾವಿದನಾಗಿ ಯಶಸ್ಸನ್ನು ಸಾಧಿಸಲೂ ಅದಕ್ಕಾಗಿ ಬಹಳಷ್ಟು ಸಮಯವನ್ನು ಮೀಸಲಿಡಬೇಕಾಗುತ್ತದೆ. ಸಾಹಿತಿಗೆ ಅಧ್ಯಯನದ ಜೊತೆಗೆ  ಕವಿಹೃದಯವೂ ಇರಬೇಕಾಗುತ್ತದೆ. ಬ್ಯಾಂಕ್ ಉದ್ಯೋಗಸ್ಥರಾಗಿ ಅವರ ಜವಾಬ್ದಾರಿಯೂ ಬಹಳ ದೊಡ್ಡದೇ. ಅವರು ತಮ್ಮ ವಾದನದಲ್ಲಿ ಭಾಗವತರನ್ನು ಅನುಸರಿಸಿಕೊಂಡು ಹೋಗುವ ತಮ್ಮ ಅಪೂರ್ವ ಲಯ ಸಿದ್ಧಿಯಿಂದಾಗಿ ಇಷ್ಟವಾಗುತ್ತಾರೆ.   

ಅಗರಿ ಮಾರ್ಗದ ಬಗ್ಗೆ ಹೇಳುವುದಾದರೆ ಈ ಗ್ರಂಥ ರಚನೆ ಬಹಳ ಕ್ಲಿಷ್ಟಕರವಾಗಿದ್ದಿರಬಹುದೆಂದು ನಾನು ಖಂಡಿತಾ ಊಹಿಸಬಲ್ಲೆ. ಈ ಗ್ರಂಥರಚನೆಯ ಹಿಂದೆ ಅವರ ಅಪಾರ ಶ್ರಮ ಅಡಗಿರಬಹುದೆಂಬುದು ನಿರ್ವಿವಾದ. ಯಾಕೆಂದರೆ ಸಾಧಾರಣವಾಗಿ ಅಗರಿಯವರ ಬಗ್ಗೆ ಬರೆಯುವುದೆಂದರೆ ಅದು ಅತ್ಯಂತ ಸಾಹಸದ ಕಾರ್ಯ. ಅಗರಿಯವರ ಪ್ರಪಂಚದಲ್ಲಿ ಎಲ್ಲವೂ ಜೊಳ್ಳುಗಳಿಲ್ಲದ ಕಾಳುಗಳೇ ತುಂಬಿವೆ. ನಿಮಗೆ ಸಿಗುವ ಎಲ್ಲಾ ಕಾಳುಗಳಲ್ಲಿ ಯಾವುದನ್ನು  ಆರಿಸಬೇಕು ಯಾವುದನ್ನು ಬಿಡಬೇಕು ಎಂಬ ಉಭಯಸಂಕಟ ಕಾಡದೆ ಬಿಡದು. ಆದುದರಿಂದ ಕೃಷ್ಣಪ್ರಕಾಶ ಉಳಿತ್ತಾಯರು ‘ಅಗರಿ ಮಾರ್ಗ’ಎಂಬ ಕೃತಿಯನ್ನು ಸಿದ್ಧಪಡಿಸುವ ಮೊದಲು ಬಹಳಷ್ಟು ಅಧ್ಯಯನದ ಪೂರ್ವ ತಯಾರಿಯನ್ನು ಮಾಡಿರಬಹುದು. ಉಳಿತ್ತಾಯರ ಅಗರಿ ಮಾರ್ಗವು ಯಕ್ಷಗಾನ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಲಿದೆ ಎಂಬುದು ಖಂಡಿತ. 

error: Content is protected !!
Share This