ತೆಂಕುತಿಟ್ಟಿನ ಹಿರಿಯ ಕಲಾವಿದ,  ಕಾಡಮಲ್ಲಿಗೆ ತುಳು ಯಕ್ಷಗಾನದ ‘ಮೈಂದಾ ಗುರಿಕಾರ’ ಪಾತ್ರದ ಮೂಲಕ ಖ್ಯಾತಿಯ ಉತ್ತುಂಗ ಏರಿದ   “ಅಭಿನವ ಕೋಟಿ’ ಅಭಿದಾನದ ಕೆ.ಎಚ್‌. ದಾಸಪ್ಪ ರೈ ಯವರಿಗೆ 2019 – 20 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಲಭಿಸಿದೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಯೂ ಪ್ರತಿ ವರ್ಷ  ಹಿರಿಯ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡುತ್ತಿದೆ. ಮಂಗಳೂರು ಹಾಗೂ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ‌ ಪ್ರತಿಷ್ಠಾನಗಳನ್ನೊಳಗೊಂಡ ಜಂಟಿ ಸಮಿತಿಯು ಪ್ರಶಸ್ತಿಯ ಆಯ್ಕೆಯನ್ನು ನಡೆಸಿದೆ

ಇದೇ ನ.29 ರಂದು   ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ‘ಪಾರಿಜಾತ’ ಸಭಾಗೃಹದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ. ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ಆಯೋಜಿಸಿರುವ 8 ನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಪರ್ವ’ದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು  ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ತುಳು ಭಾಷಾ ಪ್ರಸಂಗಗಳ ಕಥಾನಾಯಕ ಪಾತ್ರಗಳಿಗೆ ತನ್ನದೇ ಆದ ವಿಶಿಷ್ಟ  ಸೌಮ್ಯ ನಡೆಯಿಂದ ಜೀವ ತುಂಬಿ ಯಕ್ಷ ಪ್ರೇಮಿಗಳ ಮನಸ್ಸಿನಲ್ಲಿ ಛಾಪು ಮೂಡಿಸಿದ ಕೆ.ಎಚ್. ದಾಸಪ್ಪ ರೈಯವರಿಗೆ ಸದ್ಯ 70 ವರ್ಷ. ಈ  ಇಳಿ ವಯಸ್ಸಿನಲ್ಲೂ ಆಗೊಮ್ಮೆ ಈಗೊಮ್ಮೆ ಬಣ್ಣ ಹಚ್ಚಿ ರಂಗಸ್ಥಳ ಏರುವ ಮೂಲಕ ಯಕ್ಷಗಾನದ ನಂಟನ್ನು ಉಳಿಸಿಕೊಂಡಿದ್ದರೂ ಸದ್ಯ ಯಕ್ಷಗಾನ ತಿರುಗಾಟದಿಂದ ನಿವೃತ್ತರು. ಪ್ರಸ್ತುತ  ಪತ್ನಿ ಚಿತ್ರವತಿ , ಮಗ ದೇವಿ ಪ್ರಸಾದ್ ಮತ್ತು ಮೊಮ್ಮಕ್ಕಳೊಂದಿಗೆ ಪುತ್ತೂರಿನ ಬಪ್ಪಳಿಗೆ ‘ಯಕ್ಷಧಾ’ ನಿವಾಸದಲ್ಲಿ ನಿವೃತ್ತ ಜೀವನ ಸಾಗಿಸುತಿದ್ದಾರೆ.

ಯಕ್ಷ ಪಯಣ :

ಪುತ್ತೂರು ತಾಲೂಕು ಈಶ್ವರಮಂಗಲದ ಕುತ್ಯಾಳದಲ್ಲಿ 1950ರಲ್ಲಿ ಬೈಂಕಿ ರೈ ಮತ್ತು ಕುಂಜಕ್ಕೆ ದಂಪತಿಯ ಪುತ್ರನಾಗಿ ಇವರು  ಜನಿಸಿದರು.  ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದು ತನ್ನ 16ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರ ಪ್ರವೇಶಿಸಿದರು. ಕೆ.ಎಸ್‌. ಬಾಬು ರೈ ಅವರ ಪ್ರೇರಣೆಯ ಮೇರೆಗೆ ಅವರಲ್ಲೇ ನಾಟ್ಯಾಭ್ಯಾಸ ಮಾಡಿ ಸುಮಾರು 18 ವರ್ಷ ಕರ್ನಾಟಕ ಮೇಳ; ಆ ಬಳಿಕ ಕದ್ರಿ, ಕಣಿಪುರ, ಮಂಗಳಾದೇವಿ ಹೀಗೆ ದೀರ್ಘ‌ಕಾಲ ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಕಲಾಸೇವೆ ಮಾಡಿ 2008ರಲ್ಲಿ ನಿವೃತ್ತರಾದರು. ಯಕ್ಷರಂಗದಲ್ಲಿ  ಅವರದು ಒಟ್ಟು ನಾಲ್ಕೂವರೆ ದಶಕಗಳ ಸುದೀರ್ಘ ತಿರುಗಾಟ .ಅದರಲ್ಲಿ  ಕಣಿಪುರ ಶ್ರೀ ಗೋಪಾಲಕೃಷ್ಣ ಪ್ರಸಾದಿತ ಯಕ್ಷಗಾನ ಮಂಡಳಿ ಕುಂಬಳೆ ಮೇಳವನ್ನು ಕಟ್ಟಿ ಆರು ವರ್ಷ ನಡೆಸಿದರು.

ಪೌರಾಣಿಕ ಪ್ರಸಂಗಗಳಲ್ಲಿ ರಾವಣ, ಕಂಸ, ಮಹಿಷಾಸುರ, ಯಮಧರ್ಮ, ಹಿರಣ್ಯಕಶಿಪು, ಭೀಮ, ಕೌರವ, ಕೀಚಕ, ವಾಲಿ, ಇಂದ್ರಜಿತು, ಜರಾಸಂಧ ಇತ್ಯಾದಿ  ಪ್ರತಿನಾಯಕನ ಪಾತ್ರಗಳಲ್ಲಿಯೇ ಹೆಚ್ಚು ಮಿಂಚಿದವರು . ಕೋಟಿ, ಕೋಡ್ದಬ್ಬು, ಕೊಡ್ಸರಾಳ್ವ, ದೇವುಪೂಂಜ, ಕಾಂತಬಾರೆ, ಮೈಂದ ಗುರಿಕಾರ, ಶಾಂತ ಕುಮಾರ ಇದು ತುಳು ಆಟಗಳಲ್ಲಿ ವರಿಗೆ ಕೀರ್ತಿ ತಂದು ಕೊಟ್ಟ ಪಾತ್ರಗಳು  . ಮುಂಬೈ, ಚೆನ್ನೈ ದೆಹಲಿ, ಬೆಹರಿನ್, ಕತಾರ್, ದುಬೈ, ಮಸ್ಕತ್ ಹೀಗೆ ದೇಶ-ವಿದೇಶಗಳಲ್ಲಿಯೂ ತನ್ನ ಕಲಾ ಪ್ರೌಡಿಮೆಯನ್ನು ಮೆರೆಯುವ ಮೂಲಕ ಯಕ್ಷ ಪ್ರಿಯರ ಮನ ತಣಿಸಿದ್ದಾರೆ.

ತುಳು ಯಕ್ಷಗಾನ ರಂಗದ ಸಾತ್ವಿಕ ನಾಯಕ ಪಾತ್ರ ಗಳಲ್ಲಿ ಮೆರೆದು ಅಭಿನವ ಕೋಟಿಯೆಂದೇ ಜನಾದರಣೆ ಪಡೆದ ಕಲಾವಿದ ರೈಗಳು. 1965ರ ಒಂದು ದಿನ ಕಲಾವಿದ ಬಾಬು ರೈಗಳು ತನ್ನ ಸಂಬಂಧಿ ಬಾಲಕನನ್ನು ಕರ್ನಾಟಕ ಮೇಳದ ಯಜಮಾನರಿಗೆ ಪರಿಚಯಿಸಿ ಮೇಳಕ್ಕೆ ಸೇರಿಸಿದರು. ಬಾಲಕ ರೈಗಳಿಗೆ ಆಗ ಚೌಕಿಯಲ್ಲಿ ಸಿಕ್ಕಿದ ಜಾಗ ಮೇರು ಹಾಸ್ಯಗಾರ ಮಿಜಾರು ಅಣ್ಣಪ್ಪ ನವರ ಪಕ್ಕದ್ದು. ಇದರಿಂದ ಹಾಗೂ ಮೇಳದಲ್ಲಿದ್ದ ಘಟಾನುಘಟಿಗಳಾದ ನಾರಂಬಾಡಿ ಸುಬ್ಬಯ್ಯ ಶೆಟ್ಟಿ, ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಮಂಕುಡೆ ಸಂಜೀವ ಶೆಟ್ಟಿ ಮುಂತಾದ ಕಲಾವಿದರ ಒಡನಾಟದಿಂದ ದಾಸಪ್ಪ ರೈಗಳು ತಯಾರಾದರು.

ಕರ್ನಾಟಕ ಮೇಳ ಸೀನುಸೀನರಿಗಳನ್ನು ನಿಲ್ಲಿಸಿ ಡೇರೆ ಮೇಳವಾದಾಗ ವಿಜೃಂಭಿಸಿದ “ಕೋಟಿ ಚೆನ್ನಯ’ ಪ್ರಸಂಗದ ಕೋಟಿಯ ಪಾತ್ರ ಅವರಿಗೆ ಹೊಸ ತಿರುವು ನೀಡಿತು. ಅವರು ಕೋಟಿಯಾಗಿ ಅಭಿನಯಿಸದೆ, ಅನುಭವಿಸಿ ಆ ಪಾತ್ರವನ್ನು ಮಾಡುತ್ತಿ ದ್ದರು. “ಅಭಿನವ ಕೋಟಿ’ ಎಂಬ ಬಿರುದು ಅವರಿಗೆ ಸಾರ್ಥಕವಾಗಿ ಸಂದಿತ್ತು. ಕಂಸ, ರಾವಣ ಮುಂತಾದ ಪಾತ್ರಗಳಲ್ಲಿ ಬೋಳಾರ ನಾರಾಯಣ ಶೆಟ್ಟರ ದಾರಿಯಲ್ಲಿ ಸಾಗಿ ಯಶಸ್ವಿಯಾದವರು ದಾಸಪ್ಪ ರೈಗಳು.

ಕಾಡ ಮಲ್ಲಿಗೆಯ ಮೈಂದ ಗುರಿಕಾರ

ತುಳು ಯಕ್ಷಗಾನ ದಲ್ಲಿ ಇತಿಹಾಸ ಬರೆದ “ಕಾಡ ಮಲ್ಲಿಗೆ’ ಪ್ರಸಂಗದ ವೃದ್ಧ ಮೈಂದ ಗುರಿಕಾರನಾಗಿ ಯುವಕ ರೈಗಳು ಯಶಸ್ವಿ ಯಾದರು. ರೈಗಳಿಗೆ ಹೊಸ ಇಮೇಜ್‌ ನೀಡಿದ ಪಾತ್ರವದು. ಒಂದು ವರ್ಷದ ಅನಂತರ ಮೇಳದ ಉಸ್ತುವಾರಿಯನ್ನೂ ವಹಿಸಿಕೊಂಡು 1978ರಲ್ಲಿ ಮೇಳದ ಹೋಟೆಲ್‌ನಲ್ಲಿ ಬುಕ್ಕಿಂಗ್‌ ವ್ಯವಸ್ಥೆ ಯನ್ನು ಜಾರಿಗೆ ತಂದರು. ಅದು ಮೇಳಕ್ಕೊಂದು ಆರ್ಥಿಕ ಶಕ್ತಿ ನೀಡಿತು. ಬಳಿಕ ಆ ಕಾಲದ ಉಳಿದ ಡೇರೆ ಮೇಳಗಳು ಮಳೆಗಾಲದ ಬುಕ್ಕಿಂಗ್‌ ವ್ಯವಸ್ಥೆ ಪ್ರಾರಂಭಿ ಸಿದವು. “ಕಾಡ ಮಲ್ಲಿಗೆ’ ಪ್ರಸಂಗಕ್ಕೆ ಒಂದೇ ದಿನ 60ಕ್ಕೂ ಅಧಿಕ ಆಟಗಳು ಬುಕ್ಕಿಂಗ್‌ ಆಗುತ್ತಿದ್ದವು.

ಪ್ರಶಸ್ತಿ ಬಿರುದುಗಳು 

2004ರಲ್ಲಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಪ್ರಶಸ್ತಿ, 2012ರಲ್ಲಿ ಬೋಳಾರ ಪ್ರಶಸ್ತಿ, 2011ರ ಸೌರಭ ಪ್ರಶಸ್ತಿ, 2013ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದಾಸಪ್ಪ ರೈ ಅವರನ್ನು ಹುಡುಕಿಕೊಂಡು ಬಂದಿವೆ. ‘ತುಳುನಾಡ ತುಳುಶ್ರೀ’, ‘ಯಕ್ಷರಂಗ ನಟನಾಚತುರ’, ‘ಯಕ್ಷಭಾರ್ಗವ’,ಇವು ರೈ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ನೀಡಿದ ಬಿರುದುಗಳು.

ಕತಾರ್ ನಲ್ಲಿ ಎರಡು ಸಲ  ಗುಜರಾತಿನಲ್ಲಿ ಒಮ್ಮೆ ಸೇರಿ, ವಿಶ್ವದ ವಿವಿಧೆಡೆಗಳಲ್ಲಿ 100ಕ್ಕೂ ಮಿಕ್ಕಿ ಸನ್ಮಾನಗಳು ಇವರ ಮುಡಿಗೇರಿವೆ. ಅಹಮದಾಬಾದ್, ದೆಹಲಿ, ಮುಂಬೈನಂತಹ ಮಹಾನಗರಗಳಲ್ಲಿನ  ಅಭಿಮಾನಿಗಳು ಇವರ ಅಭಿನಯಕ್ಕೆ ತಲೆದೂಗಿ ಸನ್ಮಾನಿಸಿದ್ದಾರೆ.

error: Content is protected !!
Share This