ಕೆ.ಕೃಷ್ಣ ಮಧ್ಯಸ್ಥ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಕರಾವಳಿಯ ದಕ್ಷಣ ಕನ್ನಡ ದ ಕಾಸರಗೋಡು ಭಾಗದಿಂದ ಒಳನಾಡು ಮಲೆನಾಡು ಭಾಗಕ್ಕೆ ವಲಸೆ ಬಂದ ಪಂಡಿತ ಪರಂಪರೆಯ ಲ್ಲಿ ಅಳಿದುಳಿದವರನ್ನು ಕಳೆದುಕೊಳ್ಳುತ್ತಿದ್ದೇವೆ. ಕೆ.ಕೆ.ಮಧ್ಯಸ್ಥ ಕೆ.ಕೃಷ್ಣ ಮಧ್ಯಸ್ಥ ಬುಧವಾರ ಜೂನ್ 21 ರಂದು ತೀವ್ರ ಅನಾರೋಗ್ಯ ದಿಂದ ನಿಧನರಾಗಿದ್ದಾರೆ. ಭಾಷಾಪಂಡಿತರಾಗಿ, ಗಮಕ ವ್ಯಾಖ್ಯಾನ ಕಾರರಾಗಿ, ಯಕ್ಷಗಾನ ಪ್ರಸಂಗ ಕರ್ತ ರಾಗಿ, ವೇಷಧಾರಿಯಾಗಿ, ಅರ್ಥಧಾರಿಯಾಗಿ ಸಂದವರು. ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಶಿಕ್ಷಕರಾಗಿ ನಿಷ್ಠಾವಂತ ಪ್ರೇಕ್ಷಕರಾಗಿ ಮುಖ್ಯವಾಗುತ್ತಾರೆ.

ಗಡಿಭಾಗದ ಕಾಸರಗೋಡಿನ ಕುಂಜಾರು ಗ್ರಾಮದ ಈಶ್ವರ ಮಧ್ಯಸ್ಥ ಮತ್ತು ದೇವಕಿ ದಂಪತಿಯ ಪುತ್ರರಾಗಿ 1943 ರ ಜೂನ್ 2ರಂದು ಜನಿಸಿದವರು. ಇವರ ಹಿರಿಯ ಸಹೋದರ ನೀ.ನಾ. ಮಧ್ಯಸ್ಥ ಸಹ ತ್ರಿಭಾಷಾ ಪಂಡಿತರು, ಸಾಹಿತಿ ಹಾಗೂ ತಾಳಮದ್ದಲ್ಲಿ ಅರ್ಥದಾರಿಗಳು. ಮತ್ತೊಬ್ಬ ಸಹೋದರ ಬೆಳ್ತಂಗಡಿಯ ಸುಬ್ರಮಣ್ಯ ಮಧ್ಯಸ್ಥ ಕೂಡ ಈ ಇಬ್ಬರು ಸಹೋದರರಂತೆ ಸಾಹಿತಿ ಮತ್ತು ಯಕ್ಷಗಾನ ಕಲಾವಿದರು.

ಬಿ.ಎ., ಬಿ ಎಡ್ ಪದವೀಧರರಾದ ಕೆ.ಕೆ.ಮದ್ಯಸ್ಥರು 1965 ರ ಸುಮಾರಿಗೆ ಮಲೆನಾಡಿನ ಸಾಗರ ಪ್ರಾಂತ್ಯಕ್ಕೆ ಬಂದರು. ಬೆಳೆಯೂರಿನ ಶಾಲೆಯಲ್ಲಿ , ಸಾಗರದ ನಿರ್ಮಲ ಬಾಲಿಕಾ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಪತ್ನಿ ಗಿರಿಜಾ , ಇಬ್ಬರು ಪುತ್ರಿಯರು ಹಾಗೂ ಏಕೈಕ ಪುತ್ರ ಯಕ್ಷಗಾನ ಭಾಗವತ, ಅವಧಾನಿ ಪ್ರಶಾಂತ್ ಮಧ್ಯಸ್ಥ ಇದ್ದಾರೆ.

ಮಲೆನಾಡು ಗಮಕಲಾ ಸಂಘದ ಗಮಕ ಕಾರ್ಯಕ್ರಮಗಳಲ್ಲಿ ವ್ಯಾಖ್ಯಾನಕಾರರಾಗಿ ಭಾಗವಹಿಸಿದ್ದಾರೆ. ಸ್ಥಳೀಯ ತಾಳಮದ್ದಲೆ ಕೂಟಗಳಲ್ಲಿ ಅರ್ಥಧಾರಿಗಳಾಗಿ ತೊಡಗಿಸಿಕೊಂಡಿದ್ದರು. ಬೆಳೆಯೂರಿನ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಸೇರಿದಂತೆ ಸ್ಥಳೀಯ ಯಕ್ಷಗಾನ ಪ್ರದರ್ಶನಗಳಲ್ಲಿ ವೇಷಧಾರಿಯಾಗಿ ಸಂದಿದ್ದಾರೆ.

ಗೆಳೆಯ ಗೀತೆಗಳು, ನಾಟಕ ಕೃತಿಗಳಾದ ಸೋಲಿನಲ್ಲೂ ಗೆಲುವು, ಹೆಣ್ಣಿನ ಕೈವಾಡ, ಭಕ್ತಿ ಪರೀಕ್ಷೆ ,ಜ್ಞಾನಶ್ರೀ ಹಾಗು ಗೀತ ನಾಟಕಗಳಾದ ಶಾಕುಂತಲ, ಸೃಷ್ಟಿ ರಕ್ಷೆ, ಕ್ರಿಸ್ತ ಜನನ ಇನ್ನೂ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.6ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಕೆ.ಕೆ.ಮಧ್ಯಸ್ಥರು ಆಡಂಬರ ಇಲ್ಲದ, ಪ್ರಚಾರ ಬಯಸದ ಸರಳ ಸಜ್ಜನ. ಯಕ್ಷಗಾನ ಪ್ರಸಂಗ ಗಜೇಂದ್ರ ಮೋಕ್ಷ 2001ರಲ್ಲಿ ಪ್ರಕಟಗೊಂಡಿದ್ದು ದೊಡ್ಡ ಬಾಳೆ ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘದ ರಜತ ವರ್ಷದ ಸವಿ ನೆನಪಿಗಾಗಿ ಸಮರ್ಪಿಸಲ್ಪಟ್ಟ ಕೃತಿಯಾಗಿದೆ. ವರದಾ ಮಹಾತ್ಮೆ, ಮಕ್ಕಳ ಯಕ್ಷಗಾನ ಪ್ರಸಂಗ ಶ್ರೀ ಕೃಷ್ಣ ಲೀಲೆ ಮುಂತಾದವು ಇವರು ರಚಿಸಿದ ಪ್ರಸಂಗ ಕೃತಿಗಳು. ಬೈಬಲ್ ಆಧಾರಿತ ಕ್ಷಮಾದಾನ, ರಾಣಿ ಸಾಧನ ಎಂಬ ಎರಡು ಕೃತಿಗಳು ಯಕ್ಷಗಾನ ಪ್ರಸಂಗ ರಚನಾ ಸಾಧ್ಯತೆ ಯನ್ನು ವಿಸ್ತರಿಸಿದ ಕೃತಿಗಳು. ಅಂಡೆ ಫುಸಲ ಫುಸ್ಕುಸೋಜರ ಕಾಳಗ ಎಂಬ ಅಣಕು ಯಕ್ಷಗಾನ ಪ್ರಸಂಗವನ್ನು ರಚಿಸುವ ಮೂಲಕ ಮಧ್ಯಸ್ಥರು ತಮ್ಮ ಪ್ರಸಂಗ ರಚನಾ ಸಾಮರ್ಥ್ಯವನ್ನು ಮೆರೆದಿದ್ದಾರೆ.

ಸುಮಾರು 33 ವರ್ಷಗಳ ಕಾಲ ನಿರ್ಮಲಾ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮಧ್ಯಸ್ಥರು ತಮ್ಮ ಸಹೋದ್ಯೋಗಿಗಳ ಹಾಗೂ ವಿದ್ಯಾರ್ಥಿ ಸಮುದಾಯದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ನಿವೃತ್ತಿಯ ನಂತರವೂ ಕ್ರಿಯಾಶೀಲತೆ ಕಾಪಾಡಿಕೊಂಡಿದ್ದ ಕೃಷ್ಣ ಮಧ್ಯಸ್ಥರು ಯಾವುದೇ ಕಲಾ ಪ್ರಕಾರಗಳ ಪ್ರದರ್ಶನವನ್ನು ಪ್ರೇಕ್ಷಕರಾಗಿ ಆಸ್ವಾದಿಸುತ್ತಿದ್ದರು. ರಂಗಪ್ರಸ್ತುತಿಯ ಗುಣಾವಗುಣಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತಿದ್ದರು. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ, ಪ್ರದರ್ಶನಗಳಲ್ಲಿ ತಾವು ಮೆಚ್ಚಿಕೊಂಡು ಆಸ್ವಾದಿಸಿದ ಸಂಗತಿಗಳನ್ನು ಸಮಾನ ಮನಸ್ಕರ ಜೊತೆ ಹಂಚಿಕೊಂಡು ಸಂಭ್ರಮಿಸುತಿದ್ದರು. ಆರ್ಥಿಕ ವೆಚ್ಚದ ಲೆಕ್ಕಾಚಾರವಿಲ್ಲದೆ ಪ್ರದರ್ಶನ ವೀಕ್ಷಿಸುವ ಏಕೋದ್ದೇಶದಿಂದ ಪರಸ್ಥಳಗಳಿಗೆ ಹೋಗಿ, ಖಾಸಗಿ ವಸತಿ ಗ್ರಹಗಳಲ್ಲಿ ವಾಸ್ತವ್ಯ ಮಾಡಿ ಪ್ರದರ್ಶನ ವೀಕ್ಷಿಸುತ್ತಿದ್ದರು. ಸೃಜನಶೀಲತೆ, ಸಹೃದಯತೆ ಮೇಳವಿಸಿದ್ದ ಮಧ್ಯಸ್ಥರು ನೇತ್ರದಾನ ಮತ್ತು ಅಂಗಾಂಗ ದಾನಗಳ ಮೂಲಕವೂ ತಮ್ಮ ಜೀವನಾದರ್ಶನವನ್ನು ಮಾಡಿಕೊಂಡಿದ್ದಾರೆ. ಮಣಿಪಾಲದ ಆಸ್ಪತ್ರೆಗೆ ಅಂಗಾಂಗಗಳನ್ನು, ಶಿವಮೊಗ್ಗದ ಶಂಕರ್ ಆಸ್ಪತ್ರೆಗೆ ನೇತ್ರಗಳನ್ನು ಕೆ.ಕೆ.ಮಧ್ಯಸ್ಥರು ದಾನ ಮಾಡಿದ್ದಾರೆ. ಕೆಲಕಾಲ
ಗೊರ ಮನೆಯಲ್ಲಿ ವಾಸವಾಗಿದ್ದ ಮಧ್ಯಸ್ಥರು ಅಂತ್ಯ ಕಾಲದಲ್ಲಿ ಸಾಗರದ ಜೋಗ ರಸ್ತೆಯ ಕೆಇಬಿ ಪಕ್ಕದ ವಿನೋಬಾ ನಗರದಲ್ಲಿ ವಾಸವಾಗಿದ್ದರು.

error: Content is protected !!
Share This