ಕೈರಂಗಳ ಸಂಘದ ಕೊಡುಗೆ

ಡಾ. ಎಂ. ಪ್ರಭಾಕರ ಜೋಶಿ

ಇದೀಗ ಸ್ವರ್ಣಮಹೋತ್ಸವ ವರ್ಷದಲ್ಲಿ, ಸಹಜವಾದ ಸಂಭ್ರಮದಿಂದ ಸಾರ್ಥಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡಿರುವ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘವು ತೆಂಕುತಿಟ್ಟು ಯಕ್ಷಗಾನ ಹವ್ಯಾಸಿ, ವ್ಯವಸಾಯ ಕ್ಷೇತ್ರಕ್ಕೆ ಗಣನೀಯವಾದ ಕಾಣಿಕೆ ಕೊಟ್ಟ ಒಂದು ವಿಶಿಷ್ಟ ಸಂಸ್ಥೆ.

ಕೈರಂಗಳ – ಮುಡಿಪು ವಲಯದಲ್ಲಿ ಹಿಂದೆ ಮನೆ ಮನೆಗಳಲ್ಲಿ ತಾಳಮದ್ದಳೆ ಕುರಿತಗಳಿದ್ದವು. ಆದರೆ, 1950ರ ಸುಮಾರಿಗೆ ಈ ಪರಂಪರೆ ನಶಿಸಿತ್ತು. ಅಲ್ಲಿ ಇಲ್ಲಿ ಮೇಳಗಳಾಡುವ ಬಯಲಾಟಗಳಿದ್ದರೂ, ಸ್ಥಳೀಯವಾದ ಸಂಘವಿರಲಿಲ್ಲ. ವೇದಿಕೆಯೊಂದರ ಸಂಘಟನೆಯ ಅಗತ್ಯವಾಗಿತ್ತು. ಕೈರಂಗಳದಲ್ಲಿ ಅಧ್ಯಾಪಕರಾಗಿದ್ದ ದಿ| ಕೆ. ಕಾಂತ ರೈ ಅವರಿಂದ ಅಂತಹ ಒಂದು ಯತ್ನ ಜರಗಿದರೂ, ಅವರು ಮೂಡಬಿದ್ರೆಗೆ ತೆರಳಿದುದರಿಂದ ಅದು ಅಲ್ಲಿಗೆ ಸ್ಥಗಿತವಾಯಿತು. ಈ ಮಧ್ಯೆ ಸ್ಥಳೀಯ ಮುಖಂಡರಲ್ಲಿ ಸಂಘವೊಂದರ ಸ್ಥಾಪನೆಯ ತುಡಿತವಿತ್ತು. ಅದೇ ಕಾಲಕ್ಕೆ ಯೋಗವೆಂಬಂತೆ, ಮುಂದೆ ಈ ಸಂಘದ ಆಧಾರವೇ ಎನಿಸಿದ ಕೋಳ್ಯೂರು ಶ್ರೀ ನಾರಾಯಣ ಹೊಳ್ಳರು ಇಲ್ಲಿ ಅಧ್ಯಾಪಕರಾಗಿ ಬಂದರು.

ಸರ್ವಶ್ರೀ ಆನೆಗುಂಡಿ ಕೃಷ್ಣ ಭಟ್, ರಾಮ ಪಂಡಿತ, ರುದ್ರಯ್ಯ ಆಚಾರ್ಯ, ದೇವಪ್ಪ ಬೆಳ್ಚಾಡ, ಟಿ.ಎಸ್.ನಾರಾಯಣ ಭಟ್, ಗೋವಿಂದ ಬೆಳ್ಚಡ, ಮದಂಗಲ್ಲು ನಾರಾಯಣ ಭಟ್, ಮುಂತಾದವರು ಸೇರಿ, ತೋಡುಗುಳಿ ಶಂಕರನಾರಾಯಣ ಭಟ್ಟರು ಸ್ಥಾಪಕಾಧ್ಯಕ್ಷರಾಗಿ, ನಾರಾಯಣ ಹೊಳ್ಳರು ಪ್ರಮುಖ ಸಂಘಟಕರಾಗಿ 1954 ರಲ್ಲಿ ರೂಪುಗೊಂಡ ಈ ಸಂಘದ ಚರಿತ್ರೆ ವರ್ಣಮಯ ಮತ್ತು ಪ್ರೇರಕ. ಇದು ಆರಂಭದಲ್ಲಿ ತಾಳಮದ್ದಲೆ ಸಂಘವಾಗಿ ಸ್ಥಾಪಿತವಾಗಿ, ಆ ಬಳಿಕ ಆಟ, ಕೂಟಗಳೆರಡೆಲ್ಲೂ ಯಶಸ್ವಿಯಾಗಿ ಮುನ್ನಡೆ ಸಾಧಿಸಿತು. 1960ರಲ್ಲಿ ಪಣಂಬೂರು ಶ್ಯಾನುಭಾಗ ಪದ್ಮನಾಭಯ್ಯನವರ ಸಂಪರ್ಕದಿಂದ ಆಟದ ತಂಡವನ್ನು ರೂಪಿಸುವ ಸ್ಪೂರ್ತಿ ಒದಗಿತು.

ಮುಂದಿನ ಹಂತ – ನೃತ್ಯ, ಶಿಕ್ಷಣ, ಶ್ರೀ ಗುರುವ ಮೂಲ್ಯರೆಂಬುವರು ಬಂದರು ಕಾರ್ಮಿಕರಾಗಿದ್ದ ಓರ್ವ ಒಂದೆರಡು ಕ್ಲಾಸು ಕಲಿತ ವ್ಯಕ್ತಿ. ಆದರೆ ಬಹಳ ಸಮರ್ಥ ಪ್ರತಿಭಾವಂತ. ಅವರ ಮೂಲಕ ಕಲಾವಿದ ಗೋಪಾಲ ಬಲ್ಯಾಯರು ಮೊದಲ ನೃತ್ಯ ಗುರುಗಳಾಗಿ ಬಂದರು. ಅದೇ ವರ್ಷ ಊರಲ್ಲಿ ‘ರಾಧಾಕೃಷ್ಣ ವೇಷ’(ಚಿಕ್ಕಮೇಳ ಅಥವಾ ದಾನಾವರ್ಷ) ದ ತಿರುಗಾಟದಿಂದ ರೂ. 648/- ಸಂಗ್ರಹ (ಆಗ ಅದು ದೊಡ್ಡ ಮೊತ್ತವೇ) ಅದಕ್ಕೆ ಸದಸ್ಯರೂ ಕೊಡುಗೆ ನೀಡಿ 850 ಮಾಡಿದರು. ಇದೇ ಮೇಳದ ವೇಷ ಭೂಷಣ ಸಾಮಗ್ರಿಗೆ ಬಂಡವಾಳ. ಪಣಂಬೂರಿನ ಯಕ್ಷಗಾನ ಗುರು ಗಣಪತಿ ಆಚಾರ್ ಮತ್ತು ಪ್ರಸಿದ್ಧ ಪ್ರಸಾಧನ ಕಲಾವಿದ ರಾಘವ ರಾಯರಿಂದ ಸಾಮಗ್ರಿಗಳುಳ್ಳ ಏಕೈಕ ಹವ್ಯಾಸಿ ಸಂಘವೆಂಬ ಯಶಸ್ಸಿಗೆ ಪಾತ್ರವಾಗುವಷ್ಟು ಸಾಮಗ್ರಿ ತಯಾರಾಯಿತು. ಈ ಸಂಘವು ಬಹುಕಾಲ, ಬಹುಶಃ 1995ರ ತನಕವೂ, ತೆಂಕುತಿಟ್ಟಿನ ಹವ್ಯಾಸಿ ತಂಡಗಳಿಗೆ ವೇಷ ಸಾಮಗ್ರಿ ಒದಗಿಸುವ ಮುಖ್ಯ ಸಂಪನ್ಮೂಲವಾಗಿ ಬಹುಮೂಲ್ಯ ಸೇವೆಗೈದಿದೆ. (ಆಗ ಇವರಂತೆ ಸಾಮಗ್ರಿ ಹೊಂದಿದ್ದ ಇತರರೆಂದರೆ – ಮುಲ್ಕಿಯ ಸುವರ್ಣ ಆರ್ಟ್ಸ್ ಮತ್ತು ಮೂಡಬಿದ್ರೆ ರಾಮರಾಯರ ಸಂಸ್ಥೆ ಮತ್ತು ಸುರತ್‍ಕಲ್ಲಿನ ಕೆಳಗಿನ ಮಾರಿಗುಡಿ ಮಾತ್ರ)

ಪ್ರಸಿದ್ಧ ಸ್ತ್ರೀವೇಷಧಾರಿ ಪೈವಳಿಕೆ ಐತಪ್ಪ ಶೆಟ್ಟರಿಂದ ನಾಟ್ಯ ತರಬೇತಿ ಮತ್ತು ನಿರ್ದೇಶನ ದೊರೆತ ಬಳಿಕ ಪ್ರಗತಿಯ ಹೊಸ ಮಜಲನ್ನು ಕಂಡ ಈ ಸಂಘವು, ಹಿರಿಯ ಕಲಾವಿದರಾದ ಹೊಸಹಿತ್ತಿಲು ಮಹಾಲಿಂಗ ಭಟ್, ಆನೆಗುಂಡಿ ಗಣಪತಿ ಭಟ್ಟರ ಶಿಕ್ಷಕತ್ವದಲ್ಲಿ ಅನೇಕ ಉತ್ತಮ ಹವ್ಯಾಸಿ, ವ್ಯವಸಾಯ ಕಲಾವಿದರನ್ನು ಸಿದ್ದಪಡಿಸಿದೆ. ಅನೇಕ ಹಿರಿಯ ಭಾಗವತರು, ವೇಷಧಾರಿಗಳು, ವಾದಕರು ಈ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ದಿ| ಅಗರಿ ಭಾಗವತರ ಮಾತಿನಲ್ಲಿ “ಕೈರಂಗಳ ಸಂಘದ ಆಟವೆಂದರೆ, ಅದು ಮೇಳದ ಆಟವೇ ಸೈ”.

ಈ ಅವಧಿಯ ಉದ್ದಕ್ಕೂ ಈ ಸಂಘವು ಪ್ರತಿವರ್ಷ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿ ಪ್ರದರ್ಶಿಸಿದುದಲ್ಲದೆ ಇತರ ಸಂಘಗಳ ಜೊತೆ ಸಂಪರ್ಕವಿರಿಸಿಕೊಂಡು ಕೆಲಸ ಮಾಡಿದೆ. ಸಾಮಗ್ರಿ ಮತ್ತು ಮೇಕಪ್ ಒದಗಣೆಯಲ್ಲಿ ಈ ಸಂಘದ ಕೊಡುಗೆ ಬಹು ದೊಡ್ಡದು. ಹಲವು ‘ದೊಡ್ಡ ತಾಳಮದ್ದಲೆ ಕೂಟ’ಗಳನ್ನೂ ಇದು ಸಂಘಟಿಸಿದೆ.

ಈ ಸಂಘದ ಕೇಂದ್ರ ಸ್ಥಳ ಕೈರಂಗಳದ ಶಾಲೆ, ಸಾಮಗ್ರಿ ಉಗ್ರಾಣ, ಕಛೇರಿ ಎಲ್ಲವೂ ಮುಖ್ಯವಾಗಿ ಹೊಳ್ಳ ಮಾಸ್ತರರ ಮನೆ ಮತ್ತು ಕಛೇರಿ. ಈ ಸಂಘದ ಒಂದು ವಿಶಿಷ್ಟ ಸಂಪ್ರದಾಯವೆಂದರೆ – ಸದಸ್ಯತನ ಶುಲ್ಕವೆಂಬುದಿಲ್ಲ ! “ಸಕ್ರಿಯತೆಯೇ ಸದಸ್ಯತ್ವ” ಎಂಬುದು ಇವರ ಸೂತ್ರ.

ಈ ಸಂಘದ ಪ್ರಮುಖ ಚಾಲಕ ಶಕ್ತಿ ಅಧ್ಯಾಪಕ ಶ್ರೀ ನಾರಾಯಣ ಹೊಳ್ಳರು. ಇವರ ಸತತವಾದ ಕ್ರಿಯಾಶೀಲ ದುಡಿಮೆಯಿಂದಲೇ ಈ ಸಂಘದ ಧೀಮಂತ ಸೇವೆ, ಪ್ರಗತಿ ಸಾಧ್ಯವಾದುದು. (ಇದನ್ನು ಅವರು ಒಪ್ಪುವುದಿಲ್ಲ, ಮಾತ್ರವಲ್ಲ ಆಕ್ಷೇಪಿಸುತ್ತಾರೆ. ಆದರೆ ಇದು ಬಹುಪಾಲು ನಿಜ.) ತೆಂಕುತಿಟ್ಟಿನ ಹವ್ಯಾಸಿ ರಂಗದಲ್ಲಿ – ಅಭಿರುಚಿ ನಿರ್ಮಾಣ, ಪ್ರಸರಣ, ಸಾಮಗ್ರಿ ಒದಗಣೆ, ಸಂಘಟನೆ ಸಹಾಯಗಳಲ್ಲಿ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಸಂಘದ ಸೇವೆ ಅತ್ಯಂತ ಗಣನೀಯ, ಪ್ರಶಂಸಾರ್ಹ.

ಈ ಬಾರಿಯ ಚಿನ್ನದ ಹಬ್ಬದ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ, ಸಂಘವು ಯಕ್ಷಗಾನದ ಮತ್ತು ತನ್ನ ಅಭಿವೃದ್ಧಿಗೆ ಬೇಕಾದ ನೂತನ ಆಲೋಚನೆಗಳಿಂದ ಮುಂದುವರಿಯಲೆಂದು ಹಾರೈಕೆ.

(ಪಾಂಚಜನ್ಯ ಸ್ವರ್ಣ ಜಯಂತಿ ಸ್ಮೃತಿ ಸಂಚಿಕೆ – ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ, ಕೈರಂಗಳ – 2004)

error: Content is protected !!
Share This