ಕಲಾವಿದ ಕೋಲ್ಯಾರು ರಾಜು ಶೆಟ್ಟಿ ಅವರು ಮುಂಬೈ ಮಹಾನಗರದಲ್ಲಿ ಕಳೆದ ಆರು ದಶಕಗಳಿಂದ ಮಾಡುತ್ತಾ ಬಂದಿರುವ ಸಾಂಸ್ಕೃತಿಕ ಪರಿಚಾರಿಕೆ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಸದ್ದು ಗದ್ದಲವಿಲ್ಲದೆ ಅವರು ಗೈದ ನುಡಿಸೇವೆ ಮಹತ್ವದ್ದು. ಈಗ ಅವರಿಗೆ ಎಂಬತ್ತರ ಸಂಭ್ರಮ. ಅವರ 33ನೆಯ ಕೃತಿ ಇದೀಗ ಕನ್ನಡ ವಿಭಾಗದ ನೂತನ ಪ್ರಕಟಣೆಯಾಗಿ ಬೆಳಕು ಕಂಡಿದೆ . ರಾಜು ಶೆಟ್ಟಿ ಅವರ ಸಾಹಿತ್ಯ ಸಾಧನೆ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆಯ ಕಿರು ಅವಲೋಕನ ಇಲ್ಲಿದೆ.

ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ. ಯಕ್ಷಗಾನ ರಂಗಭೂಮಿಗೆ ಮುಂಬೈ ಕೊಟ್ಟ ಕೊಡುಗೆಯೂ ಗಮನಾರ್ಹವಾದುದು. ವಾಣಿಜ್ಯ ನಗರವಾದ ಮುಂಬೈಯನ್ನು ಸಾಂಸ್ಕೃತಿಕ ನಗರವಾಗಿ ಬೆಳೆಸುವಲ್ಲಿ ಅನೇಕ ಕನ್ನಡ ಮನಸ್ಸುಗಳು ಶ್ರಮಿಸಿವೆ.ಅವರಲ್ಲಿ ಕೋಲ್ಯಾರು ಅವರೂ ಒಬ್ಬರು.

ಹಿರಿಯ ಕಲಾವಿದ ಕೋಲ್ಯಾರು ರಾಜು ಶೆಟ್ಟಿ ಅವರು ಮುಂಬೈಯ ತುಳು ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಈಗ ಅವರಿಗೆ 80 ರ ಸಂಭ್ರಮ.ಪ್ರಾಚೀನ ಕನ್ನಡ ಕಾವ್ಯದ ಕುರಿತು ವಿಶೇಷವಾದ ಆಸ್ಥೆ,ಅಭಿರುಚಿ, ನಾಡು ನುಡಿಗಳ ಬಗೆಗೆ ಒಂದು ರೀತಿಯ ಆಸಕ್ತಿ,ಯಕ್ಷಗಾನ ರಂಗಭೂಮಿಯ ಬಗೆಗಿನ ಉಟ್ಕತ ಪ್ರೇಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಂದು ರೀತಿಯ ಲವಲವಿಕೆಯನ್ನು ನಾವು ಅವರ ವ್ಯಕ್ತಿತ್ವದಲ್ಲಿ ಕಾಣಬಹುದು. ಯಕ್ಷಗಾನ ರಂಗಭೂಮಿಯ ಲೇಖಕರಾಗಿ, ಪ್ರಸಂಗ ಕರ್ತೃವಾಗಿ, ವೇಷಧಾರಿಯಾಗಿ, ತಾಳಮದ್ದಳೆಯ ಅರ್ಥಧಾರಿಯಾಗಿ, ಕಲಾವಿದರಾಗಿ ಅನೇಕ ನೆಲೆಗಳಲ್ಲಿ ಹೆಸರು ಮಾಡಿರುವ ಅವರು ಜೀವನದಲ್ಲಿ ಪಟ್ಟಪಾಡು ಅಷ್ಟಿಷ್ಟಲ್ಲ. ಕೋಲ್ಯಾರು, ಶಾಲೆಯಲ್ಲಿ ಕಲಿತದ್ದಕ್ಕಿಂತ ಜೀವನ ಶಾಲೆಯಲ್ಲಿ ಅರಿತದ್ದೆ ಹೆಚ್ಚು. ಯಕ್ಷಗಾನ ಕಲೆಯ ಕುರಿತು, ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ವೈವಿಧ್ಯಮಯವಾದ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ನೂರಾರು ಲೇಖನಗಳನ್ನು ಬರೆದ ಅವರು ಹೊರನಾಡಾದ ಮುಂಬೈಯ ಓದುಗರಲ್ಲಿ ಪ್ರೇಕ್ಷಕರಲ್ಲಿ ಸಾಂಸ್ಕೃತಿಕ ಅಭಿರುಚಿಯನ್ನು,ಜಾಗೃತಿಯನ್ನು ಕಲಾಭಿಮಾನವನ್ನು ಬಿತ್ತಿ ಬೆಳೆದವರು.

ಕಳೆದ ಆರು ದಶಕಗಳಿಂದ ಮುಂಬೈಯಲ್ಲಿ ನೆಲೆಸಿ ಯಕ್ಷಗಾನ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಾಗಿಯೇ ಸೇವೆ ಸಲ್ಲಿಸುತ್ತ ಬಂದಿರುವ ರಾಜು ಶೆಟ್ಟಿ ಅವರು ನಡುಗನ್ನಡ ಸಾಹಿತ್ಯದ ಕಂಪನ್ನೂ ಜನಸಾಮಾನ್ಯರಿಗೆ ಉಣ ಬಡಿಸುವ ಕೆಲಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡವರು. ಬಹಳ ಹಿಂದೆಯೇ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕವಿಗಳ ಮಹಾಕಾವ್ಯ ಕೃತಿಗಳನ್ನು ಸರಳಗನ್ನಡದಲ್ಲಿ ತರುವ ಪ್ರಯತ್ನ ಮಾಡಿತ್ತು. ಯಾಕೋ ಆ ಯೋಜನೆ ನಿಂತು ಹೋಯಿತು. ನಮ್ಮಹಿಂದಣ ಕವಿಗಳ ಹಿರಿಮೆ ಗರಿಮೆಯನ್ನು ತಿಳಿಯ ಪಡಿಸುವ ನಿಟ್ಟಿನಲ್ಲಿ ರಾಜು ಶೆಟ್ಟಿ ಅವರು ರಚಿಸಿರುವ ಜೈಮಿನಿ ಭಾರತ ಕಥಾ ಸೌರಭ (ಲಕ್ಷ್ಮೀಶನ ಜೈಮಿನಿ ಭಾರತದ ಸರಳಾನುವಾದ), ಹರಿಶ್ಚಂದ್ರ ಕಾವ್ಯ ಸರಳಾನುವಾದ, ವೀರೇಶ ಚರಿತೆ ಸರಳಾನುವಾದ ಮೊದಲಾದ ಕೃತಿಗಳಿಗೆ ವಿಶೇಷವಾದ ಮಹತ್ವವಿದೆ. ರಾಘವಾಂಕ ಹಾಗೂ ಲಕ್ಷ್ಮೀಶನ ಈ ಬೃಹತ್ ಕಾವ್ಯ ಕೃತಿಗಳನ್ನು ಹೊಸಗನ್ನಡದಲ್ಲಿ ಸರಳವಾಗಿ ಸುಂದರವಾಗಿ ಅನುವಾದಿಸಿ ಪ್ರಕಟಿಸಿರುವುದು ಸಾಹಸದ ಕೆಲಸ. ಇದು ರಾಜಶೆಟ್ಟಿ ಅವರ ಮಹತ್ವದ ಕನ್ನಡ ಕಾಯಕವೂ ಹೌದು.ಕೋಲ್ಯಾರು ಅವರು ಒಳ್ಳೆಯ ಲೇಖಕರು. ಅಷ್ಟೇ ಅಲ್ಲ ಅವರು ಒಳ್ಳೆಯ ಸಹೃದಯರು. ಮಧ್ಯಕಾಲೀನ ಕನ್ನಡ ಕವಿಗಳ ಕೃತಿಯನ್ನು ಹಿಕ್ಕಿ ತೆಗೆದು ಅಲ್ಲಿರುವ ಸಾರಸತ್ವವನ್ನು ತಿಳಿಗನ್ನಡದಲ್ಲಿ ಪ್ರಕಟಿಸುವುದರೊಂದಿಗೆ ಅವರು ಜನಸಾಮಾನ್ಯರಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಿಸುವ ಕೆಲಸವನ್ನು ಅಲೆ ಬೇಸರವಿಲ್ಲದೆ ಮಾಡಿದ್ದು ಉಲ್ಲೇಖನೀಯ ಸಂಗತಿ .

ಯಕ್ಷಗಾನ ಒಂದು ಸರ್ವಾಂಗ ಸುಂದರ ಕಲೆ. ಈ ಕಲೆಯ ಉದ್ಧಾರಕ್ಕೆ ಶ್ರಮಿಸಿದ ಹಿರಿಯ ಕಲಾವಿದರ ಜೀವನ ಸಾಧನೆಯನ್ನು ಲೋಕಮುಖಕ್ಕೆ ಪರಿಚಯಿಸುತ್ತಾ ಬಂದವರು ಕೋಲ್ಯಾರು.ರಾಜು ಶೆಟ್ಟಿ ಅವರದು ಸದ್ದು ಗದ್ದಲವಿಲ್ಲದ ಕಲಾ ಸೇವೆ.ಶ್ರೀಕೃಷ್ಣ ಕೃಪಾ ಯಕ್ಷಗಾನ ಮಂಡಳಿ ರೇರೋಡ್ ಇದರಲ್ಲಿ ವೇಷಧಾರಿ ಮತ್ತು ಸಂಚಾಲಕನಾಗಿ ದುಡಿದಿದ್ದಾರೆ.ನೀಲಾವರ ಮೇಳದಲ್ಲಿ ಪ್ರಬಂಧಕರಾಗಿ ಕೆಲಸ ಮಾಡಿದ್ದಾರೆ.

ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ಹಿರಿಯ ಕಲಾವಿದರೊಂದಿಗೆ ಕೂಟಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಗುರು ನಾರಾಯಣ ಯಕ್ಷಗಾನ ಮಂಡಳಿ, ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸಾಕಿನಾಕ, ಜನಪ್ರಿಯ ಯಕ್ಷಗಾನ ಮಂಡಳಿ, ಗೀತಾಂಬಿಕಾ ಯಕ್ಷಗಾನ ಮಂಡಳಿ ಅಸಲ್ಫಾ, ಘಾಟ್ಕೊಪರ್, ಬಂಟ ಕಲಾವೇದಿಕೆ ಈ ಎಲ್ಲ ಮೇಳಗಳಲ್ಲಿ ಕಲಾವಿದನಾಗಿ ಭಾಗವಹಿಸಿದ್ದಲ್ಲದೇ ದೇವೇಂದ್ರ, ರಾಮ, ಶ್ರೀಕೃಷ್ಣ ಮೊದಲಾದ ವೇಷಗಳನ್ನು ಮಾಡಿ ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಹೊಸ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ತಿಳಿಯಪಡಿಸುವ ಕೆಲಸದಲ್ಲಿ ಇವತ್ತಿಗೂ ನಿರತರಾಗಿದ್ದಾರೆ ಈ ವೀಳ್ಯದ ಸವಿಗಾರ.

ಸೀತಾನದಿ ಸಂಸ್ಮರಣ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕ ಪುರಸ್ಕಾರ, ಜಯ ಸುವರ್ಣ ಮಾತೋಶ್ರೀ ಪುರಸ್ಕಾರ ಮೊದಲಾದವು ಅವರ ಸಾಧನೆಯನ್ನು ಹುಡುಕಿಕೊಂಡು ಬಂದಿವೆ . ರಾಜ ಶೆಟ್ಟಿ ಅವರ ಜೀವನ ಸಾಧನೆಯನ್ನು ಅಧ್ಯಯನ ಮಾಡಿ ಪಾರ್ವತಿ ಪೂಜಾರಿಯವರು ಕೃತಿಯೊಂದನ್ನು ರಚಿಸಿದ್ದು ಗಮನೀಯ ಅಂಶ.ಹೊಟೇಲು ಉದ್ಯಮದಲ್ಲಿದ್ದೂ ಕಳೆದು ಹೋಗದೆ ಸಾಹಿತ್ಯ ಸಂಸ್ಕೃತಿಗಳ ಉನ್ನತಿಯ ಆದರ್ಶವನ್ನು ಅವರು ಸತತವಾಗಿ ಕೈಗೆತ್ತಿಕೊಂಡುಬಂದಿದ್ದಾರೆ. ಯಕ್ಷಗಾನ ಪೀಠಿಕಾ ಸೌರಭ, ಶನೀಶ್ವರ ಮಹಾತ್ಮೆ , ಜೈಮಿನಿ ಭಾರತ ಕಥಾ ಸೌರಭ, ಹರಿಶ್ಚಂದ್ರ ಕಥಾ ಸೌರಭ, ವೀರೇಶ ಚರಿತೆ, ಯಕ್ಷ ಪ್ರಶ್ನಾವಳಿ, ಅಮರ ಸಿಂಧೂದ್ಭವ, ಹಂಸ ಸಂದೇಶ ಅಮಾತ್ಯವಿದುರ, ಸಮಗ್ರ ಭೀಷ್ಮ, ಶ್ರೀದೇವಿ ಮಹಾತ್ಮೆ, ಶಬರಿಮಲೆ ಅಯ್ಯಪ್ಪ, ದಾನ ಶೂರ ಬಲಿ ಚಕ್ರವರ್ತಿ, ನಮ್ಮ ತುಳು ನಾಡು, ವೀರಮಣಿ ಕಾಳಗ ಸುಧನ್ವ ಕಾಳಗ, ಸಿರಿ ಕಥಾನಕ ಮೊದಲಾದ 33 ಕೃತಿಗಳನ್ನು ಅವರು ಬರೆದು ಪ್ರಕಟಿಸಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ಛಾಪು
ಮೂಡಿಸಿದ್ದಾರೆ. ಕಟೀಲು ಕ್ಷೇತ್ರ ಮಹಾತ್ಮೆ ಬಪ್ಪನಾಡು ಕ್ಷೇತ್ರ ಮಹಾತ್ಮೆ, ಕೊಲ್ಲೂರು ಕ್ಷೇತ್ರ ಮಹಾತ್ಮೆ ಮೊದಲಾದ ತುಳು ಪ್ರಸಂಗಗಳನ್ನ ಅವರು ರಚಿಸಿದ್ದು ಅವು ಇನ್ನೂ ಬೆಳಕು ಕಂಡಿಲ್ಲ ಎಂಬುದು ತುಸು ಬೇಸರದ ಸಂಗತಿ. ದೂರದ ಮುಂಬೈ ಮಹಾನಗರಿಯಲ್ಲಿ ತಮ್ಮನ್ನು ತಾವು ರೂಪಿಸಿಕೊಂಡು ಕಲಾವಿದನಾಗಿ ಅವರು ಬೆಳೆದು ಬಂದ ಪರಿ ಅಚ್ಚರಿ ಹುಟ್ಟಿಸುವಂತಿದೆ.

ಕುಮಾರವ್ಯಾಸ ಭಾರತದಲ್ಲಿ ಕರ್ಣ ಇದು ಕೋಲ್ಯಾರು ಅವರು ಸಂಪಾದಿಸಿದ ಇತ್ತೀಚಿನ ಕೃತಿ. ಮಹಾ ಕವಿ ಕುಮಾರವ್ಯಾಸನ ಹೆಸರು ಕೇಳದ ಕನ್ನಡಿಗರಿಲ್ಲ. ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂಬ ಕವಿ ಕುವೆಂಪು ಅವರ ಮಾತಿನಲ್ಲಿ ತಥ್ಯವಿದೆ. ಕುಮಾರವ್ಯಾಸನಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನಮಾನವಿದೆ. ಕುಮಾರವ್ಯಾಸ ಪಂಡಿತ ಪಾಮರರಾದಿಯಾಗಿ ಸರ್ವ ಜನಪ್ರಿಯನಾದವನು. ಕನ್ನಡ ಸಾಹಿತ್ಯ ಚರಿತ್ರೆಯನ್ನು ಪಂಪಯುಗ, ಬಸವಯುಗ, ಕುಮಾರವ್ಯಾಸ ಯುಗವೆಂದು ವಿಭಜಿಸಿ ನೋಡುವ ಕ್ರಮವೂ ಉಂಟು. ಮಹಾಕವಿ ಪಂಪನ ಅನಂತರ ಭಾರತದ ಕಥೆಯನ್ನು ವಿಸ್ತಾರವಾಗಿ, ಕಲಾತ್ಮಕವಾಗಿ ಹೇಳಿದ ಶ್ರೇಯಸ್ಸು ಕುಮಾರವ್ಯಾಸನಿಗೆ ಸಲ್ಲುತ್ತದೆ.

ಕುಮಾರವ್ಯಾಸನೆಂಬ ಕಾವ್ಯ ನಾಮದಿಂದ ಪ್ರಸಿದ್ಧನಾದ ಈ ಕವಿಯ ಮೂಲ ಹೆಸರು ಗದುಗಿನ ನಾರಣಪ್ಪ. ಹದಿನೈದನೆಯ ಶತಮಾನದಲ್ಲಿದ್ದ ಕುಮಾರವ್ಯಾಸ ಕನ್ನಡದ ಸರ್ವೋಚ್ಚ ಕವಿಗಳಲ್ಲಿ ಒಬ್ಬ. ವೀರ ನಾರಾಯಣನೇ ಕವಿ; ಲಿಪಿಕಾರ ಕುವರವ್ಯಾಸ ಎಂಬುದು ಅವನ ವಿನಮ್ರ ನುಡಿ. ವ್ಯಾಸಭಾರತವನ್ನು ಕನ್ನಡದಲ್ಲಿ ಕೃಷ್ಣಕಥೆಯನ್ನಾಗಿ ಭಾಮಿನಿ ಷಟ್ಟದಿಯಲ್ಲಿ ಹೇಳಿದ ಶ್ರೇಯಸ್ಸು ಅವನದು. ಕುಮಾರವ್ಯಾಸ ವಿರಚಿತ ಗದುಗಿನ ಭಾರತ ಅಥವಾ ಕರ್ಣಾಟಕ ಭಾರತ ಕಥಾಮಂಜರಿಯಲ್ಲಿ ಎಂಟು ಸಾವಿರದ ಇನ್ನೂರ ನಲವತ್ತ ನಾಲ್ಕು ಭಾಮಿನಿ ಷಟ್ಟದಿಗಳಿವೆ. ಈ ಮಹಾಕಾವ್ಯದಲ್ಲಿ ಕರ್ಣನ ವೃತ್ತಾಂತ ಎಲ್ಲೆಲ್ಲಿ ದಾಖಲಾಗಿದೆ ಎಂಬುದನ್ನು ರಾಜು ಶೆಟ್ಟಿ ಅವರು ಹುಡುಕಿ ತೆಗೆದು ಪ್ರಸ್ತುತ ಕೃತಿಯನ್ನು ರಚಿಸಿದ್ದು ಇದನ್ನು ಮುಂಬೈ ವಿವಿ ಕನ್ನಡ ವಿಭಾಗ ಪ್ರಕಟಿಸಿದೆ.

ಮಹಾಭಾರತದಲ್ಲಿ ಕರ್ಣನಿಗೆ ವಿಶಿಷ್ಟವಾದ ಸ್ಥಾನಮಾನವಿದೆ. ಮಹಾಕವಿ ಪಂಪ ‘ಕರ್ಣ ರಸಾಯನ ಮಲ್ತೆ ಭಾರತಂ’ ಎಂದು ಘಂಟಾಘೋಷವಾಗಿ ಸಾರಿದ್ದಾನೆ. ಕರ್ಣ ದುರಂತ ನಾಯಕ. ಆತನ ಬಾಳು ಕರುಣರಸದ ಮಡುವು. ವ್ಯಾಸ, ಪಂಪ, ಕುಮಾರವ್ಯಾಸ ಹೀಗೆ ಬೇರೆ ಬೇರೆ ಮಹಾಕವಿಗಳು ಕರ್ಣನನ್ನು ಭಿನ್ನವಾಗಿ ಚಿತ್ರಿಸಿದ್ದಾರೆ. ಖ್ಯಾತ ಸಂಶೋಧಕ ಶಂ.ಬಾ ಜೋಶಿ ಅವರು ‘ಕರ್ಣ ಒಂದು ಅಧ್ಯಯನ’ ಎಂಬ ಮಹತ್ವದ ಕಿರು ಪುಸ್ತಕವನ್ನು ರಚಿಸಿದ್ದಾರೆ. ಖ್ಯಾತ ಗಮಕಿ ಜಯರಾಮ ರಾವ್ ಅವರು ಪಂಪ ಮತ್ತು ಕುಮಾರವ್ಯಾಸ ಚಿತ್ರಿಸಿದ ಕರ್ಣನ ಪಾತ್ರದ ಅನನ್ಯತೆಯನ್ನು ತೆರೆದು ತೋರಿದ್ದಾರೆ. ಕರ್ಣನ ಪಾತ್ರವನ್ನು ಕೇಂದ್ರವಾಗಿಸಿಕೊಂಡು ಕನ್ನಡದಲ್ಲಿ ಅನೇಕ ಕೃತಿಗಳು ಬಂದಿವೆ. ಕೋಲ್ಯಾರು ರಾಜು ಶೆಟ್ಟಿ ಅವರು ಇದೀಗ ‘ಕುಮಾರವ್ಯಾಸನು ಚಿತ್ರಿಸಿದ ಕರ್ಣ’ನನ್ನು ಆಯ್ದ ಪದ್ಯಗಳಲ್ಲಿ ಸೆರೆ ಹಿಡಿದಿದ್ದಾರೆ. ಕುಮಾರವ್ಯಾಸ ಪ್ರತಿನಾಯಕನಾದ ಕರ್ಣನ ಕುರಿತು ಇಷ್ಟೊಂದು ಪದ್ಯಗಳನ್ನು ಬರೆದಿದ್ದಾನೆಯೇ ಎಂದು ಬೆರಗು ಹುಟ್ಟಿಸುವಂತಿದೆ ಈ ಕೃತಿ.ದಾನ ವೀರ, ಯುದ್ಧ ವೀರ ಕರ್ಣನ ಸಾವಿನ ಅಂತಿಮ ಕ್ಷಣವನ್ನು ಕವಿ ಕುಮಾರವ್ಯಾಸ ಚಿತ್ರಿಸಿದ ಬಗೆ ಹೀಗಿದೆ “ಕಳಚಿ ದುರ್ಯೋಧನನ ಬೆಳುಗೊಡೆ,ನೆಲಕೆ ಬೀಳ್ವಂದದಲಿ ಕೌರವ, ಕುಲದ ನಿಖಿಳೈಶ್ವರ್ಯವಿಳೆಗೊರ್ಗುಡಿಸಿ ಕೆಡೆವಂತೆ, ಥಳಥಳಿಪ ನಗೆಮೊಗದ, ಬಲಿದ ಹುಬ್ಬಿನ ಬಿಟ್ಟ ಕಂಗಳ, ಹೊಳೆವ ಹಲುಗಳ ಕರ್ಣ ಶಿರ ಕೆಡೆದುದು ಧರಿತ್ರಿಯಲಿ ” ಕೋಲ್ಯಾರು ಅವರ ಸಾಹಿತ್ಯಾಸಕ್ತಿ, ಕಲಾಭಿಮಾನ, ಕ್ರಿಯಾಶೀಲತೆ ನಮಗೆಲ್ಲ ಮಾದರಿ.

  • ಪ್ರೊ. ಜಿ. ಎನ್. ಉಪಾಧ್ಯ
error: Content is protected !!
Share This