ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಿ.ರಾಜಶೇಖರ ಬುಧವಾರ ನಗರದ ಆದರ್ಶ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಜಿ.ರಾಜಶೇಖರ ಅವರಿಗೆ ಹಲವು ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಲೇ ಇತ್ತು. ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.

ಪ್ರಮುಖ ಸಾಮಾಜಿಕ ಹೋರಾಟಗಾರು ಹಾಗೂ ಚಿಂತಕರಾಗಿದ್ದ ಜಿ.ರಾಜಶೇಖರ ಜನಪರ ಚಳವಳಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಕರಾವಳಿಯ ಕೋಮುವಾದದ ವಿರುದ್ಧ ಗಟ್ಟಿಯಾಗಿ ಧನಿ ಎತ್ತುತ್ತಿದ್ದರು.

ನೇರ ನಡೆ ನುಡಿಗೆ ಹೆಸರಾಗಿದ್ದ ಅವರು ಜೀವನದುದ್ದಕ್ಕೂ ಸರಳ ವ್ಯಕ್ತಿತ್ವ ಹಾಗೂ ಆಡಂಬರವಿಲ್ಲದ ಜೀವನ ಶೈಲಿ ಪಾಲಿಸಿದವರು.

ಜಿ.ರಾಜಶೇಖರ 2019ರಲ್ಲಿ ಬಿದ್ದು ತಲೆಗೆ ಗಂಭೀರ ಪೆಟ್ಟುಬಿದ್ದಿತ್ತು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ ಎಂಬ ಅಪರೂಪದ ಪಾರ್ಕಿನ್‌ಸನ್ಸ್‌ ಕಾಯಿಲೆ ಇರುವುದು ದೃಢಪಟ್ಟಿತ್ತು. ಮಿದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಂತ ಹಂತವಾಗಿ ನೆನಪಿನ ಶಕ್ತಿ ಕಳೆದುಕೊಂಡಿದ್ದರು. ದೇಹದ ಭಾಗಗಳು ಸ್ವನಿಯಂತ್ರಣ ಕಳೆದುಕೊಂಡಿದ್ದವು.

ಮಾತನಾಡಲು ಹಾಗೂ ನಡೆದಾಡಲು ಸಾದ್ಯವಾಗದ ಸ್ಥಿತಿ ತಲುಪಿದ ಬಳಿಕ ಸಾರ್ವಜನಿಕ ಸಭೆ, ಹೋರಾಟ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರು. ಕೊನೆಗೆ ನಡೆಯಲೂ ಸಾಧ್ಯವಾಗದೆ ಹಾಗೂ ಆಹಾರ ನುಂಗಲಾಗದೆ ದೀರ್ಘ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಕೊನೆಯುಸಿರೆಳೆದರು.

ಜಿ.ರಾಜಶೇಖರ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ 8 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಸಮೀಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಹತ್ತು ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

error: Content is protected !!
Share This