ಮಂಥನಕರ

ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಭಾರತದ ಧಾರ್ಮಿಕ, ಸಾಮಾಜಿಕ, ರಾಜಕೀಯ ರಂಗಗಳಲ್ಲಿ ದೊಡ್ಡ ಚರ್ಚೆಗಳನ್ನು, ಮಂಥನಗಳನ್ನು ಹುಟ್ಟು ಹಾಕಿದ ಓರ್ವ ಮಹತ್‌ ವಿದ್ಯಮಾನ Phenomenon. ವಿಶೇಷ ಗೌರವ, ಪೂಜ್ಯತೆ, ಮತ್ತು ಹಾಗೆಯೇ ವಿರೋಧಗಳನ್ನು ಪ್ರೇರೇಪಿಸುವ ಅವರ ಸಾಧನೆ-ನಮ್ಮ ಕಾಲದ ವಿಶಿಷ್ಟ ಚಾರಿತ್ರಿಕ ಸಂಗತಿಗಳಲ್ಲಿ ಉದ್‌ ಭವಗಳಲ್ಲಿ ಒಂದಾಗಿದೆ. ಶಿಷ್ಯರಿಗೆ, ಬೆಂಬಲಿಗರಿಗೆ ಹೇಗೋ, ವಿರೋಧಿಗಳಿಗೆ, ಮಹಾ ಟೀಕಾಕಾರರಿಗೂ ಅವರು ಒಂದು ಸಂದರ್ಭ ಬಿಂದು, ಒಂದು ಚರ್ಚಾ ಕೇಂದ, ಅದರ ಆಗ್ರಹ, ಆವೇಶ, ಅಪೇಕ್ಷೆ, ಆಕ್ಷೇಪ, ಮೆಚ್ಚುಗೆಗಳ ಕೇಂದ್ರವಾಗಿ ಫೋಕಲ್‌ಪಾಯಿಂಟ್‌ ಆಗಿರುವ ನವನೀತ ಶಕ್ತಿ ಕೇಂದ್ರ.

ಮಹಾಪ್ರಯಾಣ

ತೊಂಭತ್ತು ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ರಾಮಕುಂಜದ ಹಳ್ಳಿಯಲ್ಲಿ ಹುಟ್ಟಿದ ವೆಂಕಟ್ರಾಮ ಎಂಟು ವರ್ಷಕ್ಕೇ ಸನ್ಯಾಸಿಯಾಗಿ,ಇದೀಗ ಎಂಭತ್ತು ವರ್ಷಗಳ ಯತಿ ಜೀವನದಲ್ಲಿ ಅಸಾಧಾರಣವಾದ  ಸಾಧನೆಗಳನ್ನು ಗೈದ ವಿಶ್ವೇಶ ತೀರ್ಥರ ಬದುಕಿನ ಬಗೆ ಒಂದು ಗ್ರಂಥ, ಸ್ಮೃತಿ. ಆ ಪಯಣ, ಏಳುಬೀಳುಗಳ, ಕಲ್ಲು ಮುಳ್ಳು, ಹೂ, ಹಣ್ಣು ದೈವಾನುಗ್ರಹ, ಒಲುಮೆ, ದೃಢ ನಿಲುವುಗಳ ಮಹಾಪಥ.

ವಿವಿಧ ಪ್ರಭಾವ

ಶ್ರೀ ಪೇಜಾವರರನ್ನು ರೂಪಿಸಿದ ಪ್ರಭಾವಗಳು, ಹುಟ್ಟೂರಿನ ಸಂಸ್ಕಾರ, ಮಾಧ್ವ ಪರಂಪರೆ, ಗಾಂಧಿಯುಗದ ಸುಧಾರಕ, ಸತ್ಯಾಗೃಹಿ ದೃಷ್ಟಿ, ಗುರು, ಮಹಾ ಪಂಡಿತ, ಯತಿ, ಕಟ್ಟುನಿಟ್ಟಿನ ಸಂಪ್ರದಾಯವಾದಿ ಶ್ರೀ ವಿದ್ಯಾಮಾನ್ಯ ತೀರ್ಥರ ವ್ಯಕ್ತಿತ್ವ ಯಕ್ಷಗಾನ ಕಲೆಯ ಪುರಾಣ ಸೃಜನಶೀಲತೆಯ ದೃಷ್ಟಿ, ಜೊತೆಗೆ ಒಳಗಿನಿಂದ ಇದ್ದ  ಜ್ವಲಂತವಾದ ತುಡಿತ, ಪ್ರತಿಭೆ, ಸೇವಾ ಸಂಕಲ್ಪ.. ಇವೆಲ್ಲವನ್ನೂ ಪಾಕವಾಗಿಸಿ ಒಂದು ಅಖಂಡ ಸಮರ್ಪಿತ, ಸತತ ಪರಿಶ್ರಮ, ಕ್ರಿಯಾಶೀಲ ಬದುಕನ್ನು ಜೀವಿಸಿದ, ಪ್ರವರ್ತಿಸಿದ ಕ್ಷೇತ್ರಗಳನ್ನು ಉದ್ದೀಪಿಸಿದ ಪೇಜಾವರರು, ಆ ಎಲ್ಲವನ್ನೂ ವಿಸ್ತರಿಸಿ ಬೆಳೆಸಿದವರು.

ಮಾಧ್ಯಮ ಮಾರ್ಗ

ವಿಶ್ವೇಶ ತೀರ್ಥರ ವ್ಯಕ್ತಿತ್ವ, ಜೀವನಗಳು ಹಗ್ಗದ ಮೇಲಿನ, ಕತ್ತಿಯಲಗಿನ ಧಾರೆಯ ಮೇಲಣ ನಡಿಗೆ. ಅವರೊಬ್ಬ ಪೀಠಾಧಿಪತಿ. ಅದರಲ್ಲೂ ಪಾರಂಪರಿಕ ಶ್ರದ್ಧೆ, ಮಡಿ ಮೈಲಿಗೆ, ಪದ್ಧತಿಗಳಿಗೆ ಬಹಳ ಮಹತ್ವ ನೀಡುವ ‘ಮಾಧ್ವ ಪೀಠದ ಯತಿ. ಅವರ ಶಕ್ತಿ ಓರ್ವ ಪೀಠಾಧಿಪತಿಯಾಗಿಯೇ ಇರುವಂತಹದು. ಯತಿಯ ಮತ್ತು ಮಠೀಯವಾದ ನಿಯಮಗಳು, ಶಿಷ್ಯವರ್ಗದ ಸೀಮೆ ಇವನ್ನು ಪಾಲಿಸುತ್ತಲೆ ಧರ್ಮ ಸಮಾಜಗಳನ್ನು ಸುಧಾರಿಸುತ್ತಾ ಸಾಗಬೇಕು. ಆ ಕಡೆ, ಸ್ವತಂತ್ರ ಸುಧಾರಣವಾದಿಗಳ ಅತಿ ನಿರೀಕ್ಷೆ, ಟೇಕೆಗಳು- ಹೀಗಾಗಿ ಪೇಜಾವರರೆಂದರೆ ಅತಿ ಸಂಪ್ರದಾಯಶೀಲ, ಇತ್ತ ಎಡ ಪಂಥೀಯರ ಟೀಕೆಗೆ ಗುರಿಯಾದ ‘ಉಭಯ ಸಮ್ಮತ-ಉಭಯ ವಿರೋಧಿ’ ಯತಿ. ಕನಕ ಮಂಟಪ, ಗೋಪುರ ವಿವಾದ, ದಲಿತರಕೇರಿಗೆ ಪ್ರವೇಶ, ಯತಿಗಳ ವಿದೇಶ ಯಾತ್ರೆ ವಿಚಾರ, ಪಂಚಾಂಗ ವಿವಾದ, ಹೀಗೆ ಹಲವು ಚರ್ಚೆಗಳಲ್ಲಿ ಮಾಧ್ಯಸ್ಥ ಮಾರ್ಗದಿಂದ ಅದು ಹೇಗೋ ಅವರು ನಿರ್ವಹಿಸುತ್ತಾ ಒಂದು ಮಟ್ಟದಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ತುಂಬಾ ನೋವನ್ನೂ ಉಂಡಿದ್ದಾರೆ, ನುಂಗಿದ್ದಾರೆ.

ಭಾರತೀಯತೆ, ಹಿಂದುತ್ವ ಮಾಧ್ವತ್ವ ಬ್ರಾಹ್ಮಣ್ಯ, ಪ್ರಗತಿಶೀಲ ಸುಧಾರಕತ್ವಗಳನೆಲ್ಲ ಬೆಸೆಯುತ್ತಾ, ಚೌಕಟ್ಟುಗಳನ್ನು ಮುರಿಯದೆ ವಿಸ್ಕರಿಸಿದ ಅವರ ಚೈತನ್ಯ, ಓಡಾಟ, ಆರೋಗ್ಯಗಳಂತೂ ಆಶ್ಚರ್ಯಕರ.

ಸುಧಾರಕ, ಪೋಷಕ

ನಮಗೆ ಇಂದು ಸಹಜವಾಗಿ ಕಾಣುವ ವಿಚಾರ ಅರ್ಧಶತಮಾನದ ಹಿಂದೆ ವರ್ಜ್ಯವಾಗಿ, ಒಪ್ಪಿದವರೇ ಬಹಿಷ್ಕೃತರಾಗಿ ಕಾಣುವ ಸನ್ನಿವೇಶ ಹಲವಿತ್ತು. ಈಗಲೂ ಇವೆ. ಪೇಜಾವರರ ಎರಡನೆಯ ಪರ್ಯಾಯ ಕಾಲಕ್ಕೆ ಕೃಷ್ಣ ಮಠದ ಮುಖ್ಯ ಕಾರ್ಯಕ್ರಮಗಳಲ್ಲಿ ಯಕ್ಷಗಾನಕ್ಕೆ ಸ್ಥಾನವಿರಲಿಲ್ಲ. ಅದೇನಿದ್ದರೂ ಬೀದಿಯಲ್ಲಿ ಆಗುತ್ತಿತ್ತು. ವಿಶ್ವೇಶ ತೀರ್ಥರು, ಮೊದಲ ಬಾರಿಗೆ ನಾಟ್ಯಾಚಾರ್ಯ ಕುರಿಯ ವಿಠಲಶಾಸ್ತ್ರಿಗಳ ಮತ್ತು ಬಡಗುತಿಟ್ಟಿನ ಮೇಳಗಳಿಂದ, ಕೃಷ್ಣಮಠದ ಕಾರ್ಯಕ್ರಮಗಳಲ್ಲಿ ಅವುಗಳನ್ನುವಿರೋಧದ ಮಧ್ಯೆ ಅಳವಡಿಸಿದರು. ಆ ಬಳಿಕ ಯಕ್ಷಗಾನ ನಿರಂತರವಾಗಿ ಈಗ ಎಲ್ಲಾ ಪರ್ಯಾಯ ಮಠಗಳೂ ರಾಜಾಂಗಣಲ್ಲಿ ಯಕ್ಷಗಾನಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತವೆ. ಶ್ರೀ ಗಳ ಹಿಂದಣ ಪರ್ಯಾಯದಲ್ಲಿ ಪ್ರಾಯಶಃ 300ಕ್ಕೂಮಿಕ್ಕಿ ಯಕ್ಷಗಾನ ಪ್ರದರ್ಶನಗಳಾಗಿವೆ.

ವಾರ್ಷಿಕವಾಗಿ ನೀಡುವ ಪೇಜಾವರ ಶ್ರೀಪ್ರಶಸ್ತಿ, ರಾಮವಿಠಲ ಪ್ರಶಸ್ತಿಗಳಲ್ಲಿ ಯಕ್ಷಗಾನ ಕ್ಷೇತ್ರಕ್ಕೆ , ಸಂಸ್ಥೆಗಳು, ಕಲಾವಿದರಿಗೆ ದೊಡ್ಡ ಪಾಲು. ಬಾಲ್ಯದಲ್ಲಿ ಮೆಚ್ಚಿದ ಈ ಕಲೆಯನ್ನು ಆಸಕ್ತಿಯಿಂದ ಅವರು ವ್ರ ತವಾಗಿ ಮಾಡಿದ್ದಾರೆ. ಕಲೆ, ಕಲಾವಿದರಿಗಾಗಿ, ಕಲ್ಯಾಣ, ಸಹಾಯ ಕಾರ್ಯಗಳಲ್ಲಿ ದಾಖಲೆ ನಿರ್ಮಿಸಿದ ಯಕ್ಷಗಾನ ಕಲಾರಂಗದ ಪ್ರಧಾನ ಪೋಷಕರಾಗಿ ಅವರು ಮಾದರಿ ನಿರ್ಮಿಸಿದ್ದು, ಉಳಿದ ಮಠಾಧೀಶರೂ ಅದನು ಅನುಸರಿಸಿದ್ದಾರೆ. ಯಕ್ಷಗಾನದ ಕುರಿತು ವಿಶ್ಲೇಷಣಾತ್ಮಕವಾಗಿ ಮಾತಾಡಬಲ್ಲ ಶ್ರೀಗಳು ತಾಳಮದ್ದಲೆಯಲ್ಲಿ ಅರ್ಥವನ್ನು(ಈ ಲೇಖಕನ ಜೊತೆಯಲ್ಲೂ) ಹೇಳಿದ್ದಾರೆ.

ಅವರ ಪರಿಸರ, ಶಿಕ್ಷಣ ಪರ ಹೋರಾಟಗಳದ್ದೇ ಒಂದು ಪ್ರತ್ಯೇಕ ಅಧ್ಯಾಯ….

ಇಂತಹ ಅನೇಕ ಪುರೋಗಾಮಿ ಕ್ರಮಗಳ, ಸೇವಾ ಕಾರ್ಯಗಳ ದೊಡ್ಡ ಇತಿಹಾಸವೇ ಅವರ ಜತೆ ಇದೆ. ವಿದ್ಯಾಸಂಸ್ಥೆಗಳ, ಮಠ, ಅತಿಥಿಗೃಹಗಳ ಸ್ಥಾಪನೆ, ಪೋಷಣೆ, ಇತರ ಸಂಸ್ಥೆಗಳಿಗೆ ದಾನಗಳಲ್ಲಿ ಅವರಿಂದ ಸಂದ ಸೇವ ದೊಡ್ಡದು. ಆದರೆ ಅವರೆಷ್ಟು ನಿಸ್ಪೃಹರೆಂದರೆ ಅವರಿಂದ ನೇರ ಅಥವಾ ಪರೋಕ್ಷವಾಗಿ ನಡೆಯುವ ಸೇವಾ ಕಾರ್ಯಗಳ ವಿವರವೇ ಅವರ ಬಳಿ ಇಲ್ಲ! ಮಠದಲ್ಲೂ ಸಿಗುವುದಿಲ್ಲ!

ದಲಿತ ವಸತಿಗಳಿಗೆ ಅವರ ಪ್ರವೇಶ ಎಬ್ಬಿಸಿದ ಅಲೆ, ಕೋಲಾಹಲ ಒಂದು ಮಹತ್ವದ ಘಟನೆ. ನಕ್ಸಲ್‌ ಬಾಧಿತ ಪ್ರದೇಶಗಳಿಗೆ ಅವರು ನೆರವಾಗಿದ್ದಾರೆ. ರಾಮಜನ್ಮಭೂಮಿ ಹೋರಾಟದಲ್ಲೂ ಅವರು ನೆರವಾಗಿದ್ದಾರೆ. ರಾಮಜನ್ಮಭೂಮಿ ಹೋರಾಟದಲ್ಲೂ ಅವರು ಪ್ರಮುಖರಾಗಿ, ಆ ಕುರಿತ ಪರ-ವಿರೋಧ ಚರ್ಚೆ ಇಂದಿಗೂ ಮುಂದುವದಿದ. ರಾಮಜನ್ಮಭೂಮಿ ಸಂಬಂಧಿತ ಎರಡು ಟ್ರಸ್ಟ್‌ಗಳ ವಿವಾದಕ್ಕೂ ಅವರು ಮಧ್ಯಸ್ಥಿಕೆ ವಹಿಸಿದ್ದಾರೆ.  ಅಂತಹ ನಿದರ್ಶನಗಳು ಹಲವು. ಸತತ ತಪಸ್ಸು, ಹೋರಾಟದ ಸಂಘರ್ಷ, ಸಮನ್ವಯ, ಪಾಂಡಿತ್ಯ ಸುಧಾರಣೆಗಳಿಂದ ಶತಮಾನದ ಮಹಾ ಯತಿಯಾಗಿ ‘ನಾನಾ ಜನಸ್ಯ ಶುಶ್ರುಷಾ ಕರ್ತವ್ಯಾ ಕರವನ್ಮಿತೇ (ನಾನಾ ಜನರ ಸೇವೆಯೆಂಬುದು, ನಾವು ದೇವರಿಗೆ ಕೊಡುವ ತೆರಿಗೆಯಂತೆ, ಕರ್ತವ್ಯವಾಗಿದೆ) ಎಂಬ ಆಚಾರ ಮಧ್ದರ ಮುತಿಗೆ, ಜೀವಂತ ಕೃತಿರೂಪರಾಗಿದ್ದಾರೆ. ಅವರ ಆರಾಧ್ಯ ಶ್ರೀವಿಠಲನಂತೆ ಅನನ್ಯರಾಗಿದ್ದಾರೆ.

ಯೋಗ್ಯತೆ, ಪ್ರಭಾವ, ತತ್ತ್ವವಾದ, ಸುಧಾರಕತ್ವ, ವಿದೃತ್ತುಗಳಲ್ಲಿ ಅವರನ್ನು ಪೂರ್ವಾಚಾರ್ಯರಾದ ನರಹರಿತೀರ್ಥ, ಜಯತೀರ್ಥ, ವಾದಿರಾಜರೊಂದಿಗೆ ಹೋಲಿಸಬಹುದು.

ಕಾಲಿಟ್ಟ ನೆಲದ ನೆಲೆಯ ಚರಿತ್ರೆ ಯನ್ನು ಉಜ್ವಲಗೊಳಿಸಿ, ಅದರ ಚೌಕಟ್ಟು, ನಿಯಮ, ಮಿತಿಗಳನ್ನು ಗೌರವಿಸುತ್ತಲೇ ವಿಸ್ತರಿಸಿ ಇಟ್ಟಿಗೆಯ ಮೇಲೆ ನಿಂತು ಆಕಾಶವನ್ನೆಳೆವ ವಿಠಲ ಮೂರ್ತಿಯಂತೆ ನಿಂತಲ್ಲೆ ತಿರುಗಿ ಭಕ್ತನಿಗೆ ದರ್ಶನವಿತ್ತ ಉಡುಪಿಯ ಶ್ರೀ ಕೃಷ್ಣನ ಆರಾಧಕತ್ಹವನ್ನು ನಿಜಗೊಳಿಸಿದ, ಭಾರತೀಯತೆಯ ಈ ಆಂತರಿಕ ವಿಮರ್ಶಕ, ಚಿಕ್ಕಗಾತ್ರದಲ್ಲಿ ಭೌಮ ಶಕ್ತಿ ಅಡಗಿಸಿಕೊಂಡ ಪ್ರಹ್ಲಾದ, ಧ್ರುವರಂತಹ ಸಂತ, ಭಕ್ತ, ನಮ್ಮ ನಡುವಿನಲ್ಲಿದ್ದರು ಎಂಬುದೇ ನಿತ್ಯಸ್ಮೃತಿಯ ವಿಷಯ.

ಇದ್ದರು ಅಲ್ಲ ಅವರು ಎಂದೆಂದೂ ಇರುತ್ತಾರೆ, ಇರಬೇಕು. ಮರಳಿ ಮರಳಿ ಬರಬೇಕು. ತತ್ತ್ವ-ವಾದ-ವೇದಾಂತ ವಿಸ್ತಾರವಾಗಿ.

ಪೇಜಾವರ ಶ್ರೀಗಳ ಬಗೆಗಿನ ದಂತ ಕತೆಗಳು

ಶ್ರೀ ಪೇಜಾವರ ಸ್ವಾಮೀಜಿ ಬದುಕು-ನಮ್ಮ ಸಮುದಾಯದ ದೇಶದ ಒಂದು ಸಂಕೀರ್ಣ ಕಥನವಾಗಿರುವ ಹಾಗೆ, ಅವರ ಸುತ್ತಲೂ ಅನೇಕಾನೇಕ ಇತಿವೃತ್ತಗಳು, ಘಟನಾ ವರ್ಣನೆಗಳು, ದಂತಕತೆಗಳು, ಲೆಜೆಂಡ್‌ಗಳು ಕೇಳಿ ಬರುತ್ತವೆ.

ಮಠದ ಬೆಳ್ಳಿ ಪಾತ್ರೆಯನ್ನೋ, ದೇವರ ಆಭರಣವನ್ನೊ ಕದ್ದವನನ್ನು ಮಠದವರು ನಿರ್ಬಂಧಿಸಿ ಇಟ್ಟಾಗ ಇವರು ಬಂದು ಬಿಡಿಸಿ ಮೊದಲಾಗಿ ಊಟ ಹಾಕಿಸಿ, ಹಣ ಕೊಟ್ಟು ಕಳುಹಿಸಿದರಂತೆ. ಅವರನ್ನು ಕಟುವಾಗಿ ಖಂಡಿಸಿ ಬರೆದವರೊಡನೆ ಶ್ರೀಗಳ ಅಭಿಮಾನಿಯೊಬ್ಬರು ಜಗಳ ಮಾಡಿ, ವಾದಿಸಿ ನಿಷ್ಠುರವೂ ಆಯಿತು. ಮುಂದೆ ಆ ವ್ಯಕ್ತಿ ಶ್ರೀಗಳನ್ನು ಕಾಣಲು ಬಂದಾಗ ಅವರು ಆ ಬರೆದ ಟೀಕಾಕಾರನಿಗೆ ಶಾಲು ಹಾಕಿ ಸಂಮಾನ ನೀಡುತ್ತಾ ಇದ್ದರಂತೆ.

 ಭಿನ್ನಾಭಿಪ್ರಾಯ, ಕಟುವಾಗಿ ಹೇಳಿದವರನ್ನೂ ಕೂಡಾ ಕರೆದು ಯಾ ಹೋಗಿ ಭೇಟಿ ಮಾಡಿ ಸಂವಾದ ನಡೆಸುವ ವಿಧಾನ ಅವರದು.

ಆತಿಥೇಯರೊಬ್ಬರ ಮನೆಗೆ ಸ್ವಾಮೀಜಿ ಬೆಳಗ್ಗಿನ ಜಾವ ಬೇಗನೇ ಪರಿವಾರ ಸಹಿತ, ಹೊತ್ತಿಗೆ ಮೊದಲೇ ತಲುಪಿದರಂತೆ. ಆತಿಥೇಯರಿಗೆ ತಡವಾಗಿ ತಿಳಿದು, ಗಡಿಬಿಡಿಯಿಂದ ಬಂದು ಸ್ವಾಗತ ಸಿದ್ಧತೆ ಮಾಡುವಾಗ-ಶ್ರೀಗಳು ಅಲ್ಲೇ ಇದ್ದ ಕೆರೆಯಲ್ಲಿ ಆಗಲೇ ಸ್ನಾನ ಮಾಡಿ ಜಪ ಆರಂಭಿಸಿ ಆಗಿತ್ತಂತೆ. ರಾತ್ರಿ ದಾರಿಯಲ್ಲಿ ವಾಹನ ಕೆಟ್ಟು ಚಳಿಯಲ್ಲಿ ನಡೆದುಕೊಂಡು ಹೋಗಿ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದ್ದು, ವಾದ ಸಭೆಗಳಲ್ಲಿ ಸರಳ ತರ್ಕಗಳಿಂದ ಜಯಿಸಿದ್ದು ಮೊದಲಾದ ಘಟನೆಗಳೂ ಇವೆ. ಶಿಷ್ಯಗಡಣವನ್ನು ಸಂಚಾರದೊಂದಿಗೆ ಕರೆದೊಯ್ದು ವಾಹನದಲ್ಲಿ ಮೊಕ್ಕಾನಲ್ಲಿ ಎಲ್ಲೆಂದರಲ್ಲಿ ವೇಳೆ ದೊರೆತಾಗ ಪಾಠ ಮಾಡುವ ಶ್ರೀಗಳ ನಿಷ್ಠೆ, ಬದ್ಧತೆಗಳ ಬಗ್ಗೆ ಅನೇಕ ಅನುಭವಗಳನ್ನು ಕೇಳುತ್ತೇವೆ.

ಡಾ.ಎಂ.ಪ್ರಭಾಕರ ಜೋಶಿ

ಲೇಖಕರು ಪ್ರಸಿದ್ಧ ಯಕ್ಷಗಾನ ಸಂಶೋಧಕ, ಅರ್ಥದಾರಿ, ಲೇಖಕ, ವಾಗ್ಮಿ, ಶಿಕ್ಷಣ, ವಾಣಿಜ್ಯ ಶಾಸ್ತ್ರತಜ್ಞ, ಸಾಮಾಜಿಕ ಕಾರ್ಯಕರ್ತ

error: Content is protected !!
Share This