“ಶ್ರೀರಾಮಾ… ಕರಕಂಜದಂಗುಲಿಯೊಳಿಟ್ಟಾ ಮುದ್ರೆಯಂ ನೋಡುತಂ | ನಾರೀ ಜಾನಕಿ ಶೋಕಿಸುತಾ ಅದನಂ ಕಂಗಳ್ಕೆ ತಾ ಒತ್ತುತಂ | ಹೇರಾಳಾಸ್ರುತ ಶೋಕ ಬಿಂದು ಜಲದಿಂ ಸರ್ವಾಂಗಮಮ್ ಲೇಪಿಸಲ್|  ಕಾರುಣ್ಯಾಂಬುದಿ ರಾಮ ರಾಮಾ ಎನುತ ಆಶಾಭಾವದಿಂ ಕಂಡಳು… ಶ್ರೀರಾಮಾ…”

ಗಂಗಾನದಿಯ ಪ್ರವಾಹದಂತೆ ಒಮ್ಮೆ ಮಂದಗಾಮಿನಿಯಾಗಿ ಮಗುದೊಮ್ಮೆ ರಭಸದಿಂದ ವಿದ್ಯುತ್ ಸಂಚಾರ ಮಾಡುತ್ತ ಈ ರಾಗ ಪ್ರವಾಹ ದೇಹದಲ್ಲಿ ರೋಮಾಂಚನದ ಅಲೆಗಳನ್ನೇ ಎಬ್ಬಿಸಿ ಬಿಡುತ್ತದೆ.

ಪಾರ್ತಿ ಸುಬ್ಬನ ಚೂಡಾಮಣಿ ಪ್ರಸಂಗದ ಈ ಪದವೊಂದು ಸಾಕು ಯಕ್ಷ ಕವಿಯ ಭಾವ ಸದೃಶ ಹೃದಯದ ಸಾಕ್ಷ್ಯ ಬರೆಯಲು. ಕೆಲವು ಘಳಿಗೆಯ ಮೊದಲು ಬಂದ ದಶಕಂಠ ಉಡುಗೊರೆಯ ರಾಶಿ ರಾಶಿಯನ್ನು ತನ್ನ ಪದತಲದಲ್ಲಿಟ್ಟು ಕಾಲಿಗೆರಗಿ ಗೋಗರೆದರೂ ಅತ್ತ ನೋಡದ ಜಾನಕಿ,  ತನ್ನ ದುರವಸ್ಥೆಗೆ ಮರುಗುತ್ತಾಳೆ. ತನ್ನ ಇನಿಯ ರಾಮಚಂದ್ರನನ್ನು ನೆನೆಯುತ್ತಾ ನೆನೆಯುತ್ತಾ  ತೀರಾ ಅಪರಿಚಿತ ಸ್ಥಳ ಅಶೋಕವನದಲ್ಲಿ ಶೋಕ ಸಾಗರದಲ್ಲಿ ಮುಳುಗಿರುತ್ತಾಳೆ.

ರಾತ್ರಿ ಅಂತಃ ಪುರದಲ್ಲಿ ನಿದ್ರಿಸಲಾಗದ ರಾವಣ ಮಂಡೋದರಿಯ ಬಾಹುವನ್ನು ತಳ್ಳಿ  ಅಶೋಕವನದತ್ತ ಬಂದು ಸೀತೆಯೆದುರು ಮಂಡಿಯೂರುತ್ತಾನೆ. ತನ್ನದೆಲ್ಲವನ್ನು ಅರ್ಪಿಸಿ “ರಾವಣೋ ಲೋಕ ರಾವಣಾ…” ಎನ್ನಿಸಿಕೊಂಡವ ಇಲ್ಲಿ ತೃಣ ಮಾತ್ರಕ್ಕೆ ತನ್ನ ವ್ಯಕ್ತಿತ್ವವನ್ನು ಮಾರಿಕೊಳ್ಳುತ್ತಾನೆ. ಮೂರು ಲೋಕವನ್ನು ನಡುಗಿಸಿದ ಭುವನದಲ್ಲಣ ರಾವಣ ಸೀತೆಯಲ್ಲಿ ಕಂಪನವನ್ನು ತರಿಸುವಲ್ಲಿ ವಿಫಲನಾಗಿ ದಾಸಾನು ದಾಸ ಭಾವದಿಂದ ನಿಂತರೂ ಜಾನಕಿ ಕಂಪಿಸುವುದಿಲ್ಲ. ಆಕೆಯ ಹೃದಯ ಮಾತ್ರ ರಾಮನಿಗಾಗಿ ಕಂಪಿಸುತ್ತದೆ. ರಾವಣ ನೀಡಿದ ಪ್ರಲೋಭಗಳೆಲ್ಲವೂ ಮುಳ್ಳಿನಂತೆ ಚುಚ್ಚಲಾರಂಭಿಸುತ್ತವೆ. ಅತ್ತು ಅತ್ತು ಕಣ್ಣೀರು ಬತ್ತಿರುತ್ತದೆ. ಲೋಕ ವೀರ ರಾವಣ ಜಾನಕಿ ಎಂಬ ಬಾಲೆಯ ಸ್ಥಿರತೆಯ ಮುಂದೆ ಘೋರವಾಗಿ ಸೋತು ಅವಮಾನಿತನಾಗಿ ತೆರಳಿ ಬಿಡುತ್ತಾನೆ.

ಅಶೋಕವನ ಮೌನವಾದಂತೆ ಸೂಕ್ಷ ರೂಪಿಯಾಗಿ ಅವಿತಿದ್ದ ಹನುಮ ಸೀತೆಯೆದುರು ಬಂದು ನಿಂತು ತನ್ನ ಮತ್ತು ರಾಮನ ಬಗ್ಗೆ ಹೇಳತೊಡಗಿದರೂ ರಾವಣನ ಮಾಯೆಯ ಅನುಮಾನದಿಂದ ಅತ್ತ ತಿರುಗದೇ ತನ್ನವ್ವೆ ಅವನಿಯನ್ನೇ ನೋಡುತ್ತಿರುತ್ತಾಳೆ. ಆಗ ಹನುಮ ತನ್ನ ಕೈ ಅಗಲಿಸಿ ತನ್ನೊಡೆಯ ರಾಮನಿತ್ತ ಚೂಡಾಮಣಿಯನ್ನು ತೋರಿಸಿ ಸೀತೆಯ ಕೈಯ್ಯಲ್ಲಿರಿಸುತ್ತಾನೆ….ಅಷ್ಟೇ   ಬತ್ತಿ ಹೋದ ಹೃದಯ ರಾಮನ ಕಾರುಣ್ಯಾಂಬುದಿಯಲ್ಲಿ ಮಿಂದುಬಿಡುತ್ತದೆ. ಅತ್ತು ಅತ್ತು ಕಣ್ಣೀರು ಬತ್ತಿದ್ದ ಕಣ್ಣಿಗೆ ಅದನ್ನು ಒತ್ತುತ್ತಿದ್ದಂತೆ ಮಧುರ ಅನುಭವಕ್ಕೆ ಸ್ಪಂದಿಸಿ ಕಣ್ಣೀರು ಒಸರುತ್ತದೆ. ಶೋಕ ಬಿಂದು ಸರ್ವಾಂಗವನ್ನೂ ವ್ಯಾಪಿಸಿಕೊಳ್ಳುತ್ತದೆ.

ಈ ಸನ್ನಿವೇಶದ ಪದವಿದು  “ ಕರಕಂಜದೊಳಿಟ್ಟಾ ಮುದ್ರೆಯಂ………”

ಯಕ್ಷಗಾನದ ಅಗ್ರಗಣ್ಯ ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ಹಾಡಿದ ಈ ಹಾಡು ಕೇಳಿ ಹೃದಯ ತುಂಬಿಕೊಳ್ಳದ ಯಕ್ಷಗಾನ ಅಭಿಮಾನಿಗಳಿದ್ದಾರೆಯೇ ಹೇಳಿ? ಸೀತೆಯಾದ ಕಲಾವಿದ ಪಾತ್ರದ ಒಳಹೊಕ್ಕಿ ಪರಕಾಯ ಪ್ರವೇಶ ಮಾಡಲು ಇನ್ನೊಂದೇ ಪಡಿ ಮೆಟ್ಟಲು ಉಳಿದಿದ್ದರೆ,  ಮಾಯೆಯೇ ಆವರಿಸಿಕೊಂಡಂತೆ ಸಹಜವಾಗಿ ಆ ಮೆಟ್ಟಲು ದಾಟಿ ಪರಕಾಯ ಪ್ರವೇಶದಿಂದ ಜಾನಕಿಯೇ ಆಗಿಬಿಡುವಂತಹ ಗಾಯನವದು. ಯಕ್ಷಗಾನದ ಚೂಡಾಮಣಿ ಪ್ರಸಂಗ ಅತ್ಯಂತ ಪ್ರಾಚೀನವಾದ ಪ್ರಸಂಗ. ರುದ್ರ ಭೀಕರ ಶೃಂಗಾರ ಹಾಸ್ಯ ಕರುಣ ಹೀಗೆ ಬಹು ರಸಾಭಿವ್ಯಕ್ತಿಗೆ ಹತ್ತಿರವಾಗುವ ಈ ಪ್ರಸಂಗ ಮನಸ್ಸಿಗೆ ಬಹಳ ಹತ್ತಿರವಾಗುತ್ತದೆ.

ಯಕ್ಷಗಾನದ ಹಿಮ್ಮೇಳ ಅರ್ಥ ಕಂಡುಕೊಳ್ಳುವುದೇ ಇಂತಹ ಪ್ರಸಂಗಗಳಿಂದ. ಯಕ್ಷಗಾನಕ್ಕೆ ಅಪರಿಚಿತರಾದವರು ಹಲವರು ನನ್ನಲ್ಲಿ ಕೇಳಿದಂತಹ ಪ್ರಶ್ನೆಯೊಂದಿದೆ….” ಯಕ್ಷಗಾನದ ಭಾಗವತರೇಕೆ ಕಿರಿಚಿಕೊಂಡು ಹಾಡುತ್ತಾರೆ?” ಆಗ ಅನ್ನಿಸಿ ಬಿಡುತ್ತದೆ. ಮಂಡೂಕ ತಾನು ಸಿಕ್ಕಿಹಾಕಿಕೊಂಡ ಕೂಪವನ್ನೇ ಪ್ರಪಂಚವೆಂದು ತಿಳಿದುಕೊಳ್ಳುತ್ತದೆಯಂತೆ. ಇಲ್ಲಿ “ಸಿಕ್ಕಿಹಾಕಿಕೊಂಡ” ಎಂಬ ಶಬ್ದ ಪ್ರಯೋಗ ಅದೇಕೋ ಬಹಳಷ್ಟು ಹಿತವಾಗಿ ಕಾಣುತ್ತದೆ. ಗಾಯನ ನರ್ತನ ಅಭಿನಯ ನಾಟಕ ಇದು ಸಮನ್ವಯಗೊಳ್ಳುವುದು ಭಾವನೆಯಿಂದ. ಆ ಭಾವ ಪ್ರಚೋದನೆಗೊಳಗಾಗಿ ಬಹಿರಂಗಕ್ಕೆ ಕಾಣುವಾಗಲೇ ಅದು ’ ಕಲೆ ’ ಎಂದು ಕರೆಸಲ್ಪಡುವುದು. ಸನ್ನಿವೇಶದ ಒಳ ಹೊಕ್ಕು ಭಾಗವತ ಭಾವ ಪ್ರಚೋದನೆಗೆ ಒಳಗಾಗಿ ಹಾಡಿದರೆ ಅದು ಮುನ್ನೆಲೆಯ ಕಲಾವಿದನಲ್ಲಿ ಪ್ರಚೋದನೆಯನ್ನುಂಟುಮಾಡುತ್ತದೆ. ಆಗಲೇ ಪಾತ್ರಧಾರಿಯು ರಂಗದ ಮೇಲೆ ಅವತಾರ ಪುರುಷನಾಗುವುದು. ಅವೇಶಗೊಂಡು ಉತ್ಕಟಾವಸ್ಥೆಗೆ ತಲಪುವುದು. ಇಲ್ಲಿ ದೃಶ್ಯ  ಬಹಳ ಗೌಣವಾಗಿ ಪರಿಸರ ಕೇವಲ ಸಂಕೇತವಾದರೆ ಅಭಿನಯ ಮಾತ್ರ ನೈಜತೆಯನ್ನು ಬಿಂಬಿಸುತ್ತದೆ. ಹಾಗಾಗಿ ಸಂಕೇತವಾಗಿರುವ ಮಾಧ್ಯಮವನ್ನು ಭಾಗವತ ಹಿಮ್ಮೇಳದೊಂದಿಗೆ ಪರಿಪೂರ್ಣಗೊಳಿಸುತ್ತಾನೆ. ಬರೆದ ಬರಹದಲ್ಲಿ ಗಮನಾರ್ಹವಾದುದನ್ನು ಉಲ್ಲೇಖಿಸುವುದಕ್ಕೆ ಬಣ್ಣ ಲೇಪಿಸಿ ಗಾಢವಾಗಿಸಿದಂತೆ ಭಾಗವತ ತನ್ನ ಗಾಯನದಿಂದ ದೃಶ್ಯಕ್ಕೆ ಬಣ್ಣವನ್ನು ತುಂಬಿ ಗಾಢವಾಗಿಸುತ್ತಾನೆ. ಗಾಢವಾದುದು ಅತಿರೇಕ ಎಂದು ಅಂದುಕೊಂಡರೂ ಯಕ್ಷಗಾನದಲ್ಲಿ ಪ್ರತಿಯೊಂದೂ ಸಾಂಕೇತಿಕವಾಗಿ ಬಿಂಬಿಸಲ್ಪಡುವುದರಿಂದ ಭಾಗವತ ಹಾಡಿನಿಂದಲೇ ಎಲ್ಲವನ್ನು ತುಂಬಿಕೊಡಬೇಕಾಗುತ್ತದೆ.

ಯಕ್ಷಗಾನ ಗಾನಮಯವೂ ಅಗುವುದನ್ನು ಇಂತಹ ಸನ್ನಿವೇಶಗಳಿಂದಲೇ ತಿಳಿದುಕೊಳ್ಳಬಹುದು. ಅಭಿನಯದ ಭಾವೋತ್ಕಟತೆಯಿಂದ ಮಾತಿಲ್ಲದೇ ಕೇವಲ ಷಟ್ಪದಿಯಿಂದ  ಈ ಸನ್ನಿವೇಶವನ್ನು  ಭಾವ ಪೂರ್ಣಗೊಳಿಸಬಹುದು. ಯಾಕೆಂದರೆ ರಾಮಲಾಂಛನವನ್ನು ಕಂಡ ಸೀತೆ ಮೂಕಳಾಗುತ್ತಾಳೆ. ಭಾವ ಪ್ರಕಟಣೆಯಿಂದ ಮನದ ತುಮುಲವನ್ನು ಸಂವೇದನೆಯನ್ನು ಹಾಡುತ್ತಿದ್ದಂತೆ ವ್ಯಕ್ತ ಪಡಿಸುತ್ತಾಳೆ. ಕಲಾವಿದನಿಗೆ ಇಲ್ಲಿ ಮಾತಿನ ಅವಶ್ಯಕತೆಯಿರುವುದಿಲ್ಲ. ಅಂತರಂಗದಲ್ಲಿ ಅವಿತಿದ್ದ ಸೀತೆಯ ಮನಸ್ಸು ಕಲಾವಿದನಲ್ಲಿ ಅವೇಶಗೊಳ್ಳುತ್ತದೆ. ಆಡಬೇಕಾದ ಮಾತು, ಸೀತೆಯ ಭಾವನೆ, ಆವರೆಗೆ ಸೀತೆ ಅನುಭವಿಸಿದ್ದ ಅಗಲಿಕೆಯ ನೋವು, ಅದರ ಉತ್ಕಟ ಭಾವ ಉದ್ವೇಗದಿಂದ ಹೊರಬರಬೇಕಾದರೆ ಭಾಗವತ ಮೊದಲು ಆ ಸರೋವರಕ್ಕೆ ಇಳಿಯಬೇಕು. ನಂತರ ನಿಧಾನವಾಗಿ ಕಲಾವಿದನ ಕೈ ಹಿಡಿದು ಒಂದೊಂದೇ ಮೆಟ್ಟಲು ಕೆಳಗಿಳಿಸಿ ಭಾವನೆಯ ಆಳದವರೆಗೂ ಎಳೆದೊಯ್ಯಬೇಕು. ಆ ಮೂಲಕ ಮಾತು ಹೇಳದೇ ಇದ್ದುದನ್ನು ಭಾಗವತ ಸನ್ನಿವೇಶದ ಮೂಲಕ ಹೇಳಬೇಕು.

ಹನುಮಂತನ ಪ್ರಹಾರಕ್ಕೆ ಲಂಕಿಣಿಯು ಪ್ರಾಣ ಬಿಡುವಾಗಲೂ ಒಂದು ಷಟ್ಪದಿಇದೆ.

ಹಲವುಪರಿಯಲಿಕಾದಿದಣಿದುಲಂಕಾಲಕ್ಷ್ಮಿ|

ತೊಲಗಿದಳುರಾವಣಗೆಬಂತುಕೀಳ್ದೆಸೆಯೆನುತ|

ಬಳಿಕಹನುಮಂತನಣುರೂಪಿನಿಂದಲ್ಲಲ್ಲಿಸುಳಿದಾಡಿಹುಡುಕುತಿರಲು ||

ಬಲವಂತನಿದ್ರೆಯಲಿಗೋರಿಡುತಮೆಯ್ಮರೆದು |

ಮಲಗಿರ್ದಕುಂಭಕರ್ಣನಸುಯ್ಲೊಳಗೆಸಿಕ್ಕಿ|

ಸುಳಿಸುಳಿದುವಜ್ರಕಂಬಕೆಬಡಿದುಅಲ್ಲಿಂದಪೊರವಂಟುದಣಿದನಂದು||

ಈ ಪದದಲ್ಲಿ ಲಂಕಿಣಿಯ ಮಾತು ಹನುಮಂತನ ಮಾತು ಮತ್ತು ಮುಂದಿನ ಪ್ರವೃತ್ತಿ ಎಲ್ಲವೂ ಒಂದು ವಾರ್ಧಕಷಟ್ಪದಿಯಲ್ಲಿ ತೋರಿಸಲ್ಪಡುತ್ತದೆ. ಚೂಡಾಮಣಿ ಪ್ರಸಂಗದ ವೈಶಿಷ್ಟ್ಯವೇ ಅಂತಹುದು. ಸಮರ್ಥ ಭಾಗವತ ತನ್ನ ಹಾಡಿನಿಂದಲೇ ಬಹಳಷ್ಟನ್ನು ರಂಗದ ಮೇಲೆ ತರಿಸಬಲ್ಲ. ಆರಂಭದಿಂದ ಅಂತ್ಯದವರೆಗೂ ಬರುವ ಹಲವು ಪದಗಳು ಭಾಗವತರು ಸ್ವತಃ ಮೈದುಂಬಿ ಹಾಡುವಂತಹ ಪದಗಳು.

ರಾವಣನ ಶೈಯಾಗಾರದಲ್ಲಿ ಮಲಗಿದ್ದ ಮಂಡೋದರಿಯನ್ನು ಕಂಡು ಸೀತೆಯೆಂದು ಭ್ರಮಿಸಿ ಹನುಮನುವಿಲಪಿಸುವ ದ್ವಿಪದಿ ಅದೆಷ್ಟು ಸನ್ನಿವೇಶಕ್ಕೆ ಒಪ್ಪುವಂತೆ ಚಿತ್ರಿಸಲ್ಪಟ್ಟಿದೆ.

ಬಲುದೋಷಕೊಳಗಾದಪಾಪಿದಶಕಂಠ

ಮಲಗಿದಾತನು, ಇವಳುವೈದೇಹಿತಾನೆ ||

ಕಲೆಯಾಯ್ತುರಾಘವಗೆಕಾಂತೆಯಿವಳಿಂದ

ಗೆಲವಿಲ್ಲಮುಂದೆಮಗೆದಣಿವುದಿದುವ್ಯರ್ಥ ||

ತರಹರಿಸಿಮನದೊಳಗೆತನ್ನೊಡೆಯರಾಮ

ಕುರುಹುಗಳಪೇಳ್ದೆಡೆಯಕಂಡನಾಹನುಮ ||

ಪದುಮರೇಖೆಗಳಿಲ್ಲಪಾದದಲಿಮುಂದೆ

ವಿಧವತ್ವತೋರುತಿದೆಹೆಡತಲೆಯಹಿಂದೆ ||

ಮತ್ಸ್ಯಲಾಂಛನನೋಡೆಬಲತೊಡೆಯೊಳಿಲ್ಲ |

ಅಚ್ಯುತನಸತಿಯಿವಳುಸರ್ವಥಾಅಲ್ಲ ||

ಇವಳುಜಾನಕಿಯಲ್ಲವೆಂದುನಿಶ್ಚಯ್ಸ

ತವಕದಲಿಹೊರವಂಟಭೂಸುತೆಯನರಸಿ ||

ರಾಮಹನುಮದೇಹಎರಡಾದರೂಅದುಒಂದಾದಬಗೆಹೇಗೆ, ಹನುಮನ ರಾಮನೊಡನೆ ಹೊಂದಿದತಾದಾತ್ಮ್ಯ ಭಾವಜತೆಗೆ ಆತನ ಕರ್ತವ್ಯ ಪ್ರಜ್ಞೆ ಇದೆಲ್ಲವನ್ನು ಅವ್ಯಕ್ತವಾಗಿ ವ್ಯಕ್ತಪಡಿಸುವ ಈ ದ್ವಿಪದಿಗಳು ಚೂಡಾಮಣಿ ಪ್ರಸಂಗದ ಜೀವಾಳವಾಗಿ ಭಾಸವಾಗುತ್ತದೆ. ಹಲವಾರು ಭಾವಗಳನ್ನು ಸನ್ನಿವೇಶಗಳನ್ನು ಒಂದೆರಡು ಶಬ್ದಗಳ ಮೂಲಕ ತೆರೆದಿಡುವ ಯಕ್ಷಗಾನದ ದ್ವಿಪದಿಗಳು ಕಲಾವಿದನನ್ನು ಮಾತ್ರವಲ್ಲ ಪ್ರೇಕ್ಷಕನನ್ನು ರಂಗದಲ್ಲಿ ಒಂದಾಗುವಂತೆ ಮಾಡಿಬಿಡುತ್ತದೆ. ಮಾತಿಲ್ಲದೇ ಇದ್ದರೂ ಈ ದ್ವಿಪದಿಗಳಲ್ಲಿ ಬರುವ ಅಷ್ಟೊಂದು ಭಾವಸದೃಶ ಸನ್ನಿವೇಶಗಳು ವ್ಯಕ್ತವಾಗುವುದು ಭಾಗವತನ ಗಾನ ವೈವಿಧ್ಯತೆಯಿಂದ. ಹಲವುಸಲ ಅನುಮಾನ ಹುಟ್ಟಿಸುವುದು ಇದೇ , ಯಕ್ಷಗಾನದಲ್ಲಿ ಯಾವ ಭಾಗ ಪ್ರಾಮುಖ್ಯತೆಯನ್ನು ಪಡೆಯುತ್ತದೆ? ಗಾಯನವೇ? ಅಭಿನಯವೇ? ಮಾತುಗಾರಿಕೆಯೇ? ಎಲ್ಲವೂ ಪ್ರಾಮುಖ್ಯತೆ ಪಡೆದರೂ ಗಾಯನ ಇದೆಲ್ಲವನ್ನು ಪೋಣಿಸಿಕೊಂಡು ತನ್ನ ನಿಯಂತ್ರಣದಲ್ಲಿಟ್ಟು ಬಿಡುತ್ತದೆ.

ಮಂಡೋದರಿಯ ರೂಪಿನಿಂದ ಮೋಸಹೋದಂತಾದ ಹನುಮ ನಂತರ ಸೀತೆಯನ್ನು ರಾಮನ ಮಡದಿಯಾಗಿ ಒಪ್ಪಿಕೊಳ್ಳುವ ಒಂದು ಪದವಿದೆ.

ಇವಳೀಗರಾಮನಕಾಂತೆಸದ್ಗುಣವಂತೆ |

ಇವಳುಸಜ್ಜನಪಾಲೆಶೀಲೆ ||

ಇವಳುಬ್ರಹ್ಮಾದಿಸುರೌಘವಂದಿತೆಮಾತೆ |

ಇವಳುರಾಮನಪ್ರೀತೆಸೀತೆ ||

ಧರಣಿನಂದನೆಯೊಳುದೋಷವನೆಣಿಸಿದೆ |

ದುರುಳರಾವಣನಕಂಡಲ್ಲಿ ||

ಕರವೆರಡಲಿಬಾಯಹೊಯ್ದುತಪ್ಪಾಯ್ತೆಂದು |

ಶಿರವಬಾಗಿದರಾಮಾಯೆಂದು ||

ಹನುಮನಾಗಿ ಕವಿಪರಕಾಯ ಪ್ರವೇಶಿಸಿದರೆ ರಂಗದಲ್ಲಿ ಪಾತ್ರಧಾರಿ ಈ ಹೊಲಬನ್ನು ಅರಿತರೆ ಸಾಕು ಪ್ರವೇಶ ಸುಲಭವಾಗಿ ಬಿಡುತ್ತದೆ. ಹಲವು ಕಲಾವಿದರು ಕವಿಯ ಈ ದಾರಿಯನ್ನು ಅರ್ಥವಿಸಿಕೊಂಡು ಪಾತ್ರವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಾರೆ. ಯಕ್ಷಗಾನ ಪದಗಳು ಪಾತ್ರಾವಾಹನೆ ಹೇಗೆ ಸಹಕಾರಿಯಾಗುತ್ತದೆ ಎಂಬುದಕ್ಕೆ ಚೂಡಾಮಣಿಯ ಪದಗಳು ಉತ್ತಮ ನಿದರ್ಶನವಾಗಬಲ್ಲುದು.

ಬೆಕ್ಕುಗಳಿಗೂಕೋಡುಬಂದರು |

ಸಕ್ಕರೆಯುಕಹಿಯಾಗಿಸಂದರು |

ಮಿಕ್ಕುಮಾತಿದುನಿನಗೆಜಾನಕಿ | ಸಿಕ್ಕಳಯ್ಯ ||

ಪರ್ವತವನೊಣನುಂಗಿತಾದರು |

ಇರುವೆಶರಧಿಯಕುಡಿದುಹೋದರು

ಸರ್ವಥಾಜಾನಕಿಯನೊಲಿಸಲು | ಸಾಧ್ಯವಿಲ್ಲ ||

ಸೀತೆಯನ್ನು ಕಂಡು ಮರುಳಾದ ರಾವಣ ಶೃಂಗಾರ ರಾವಣನಾಗಿ ಕಾಮಾಂಧನಾದಾರೆ, ಜತೆಗಿದ್ದವರು ಹೇಳಿದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳದ ರಾವಣ.” ಮಾತನಾಡಬಾರದೇನ…. ಓಜಾಣೆ….” ಎಂದು ದಾಸಾನುದಾಸನಾಗಿ ಬಿಡುತ್ತಾನೆ. ಶೃಂಗಾರ ರಾವಣ, ರಾವಣನ ಮತ್ತೊಂದು ವಕ್ರತೆಯನ್ನು ಸುಂದರವಾಗಿ ಬಹಿರಂಗಗೊಳಿಸುತ್ತದೆ.

ರಾವಣಾದಿಗಳ ಮಾಯಾ ವಂಚನೆಗೆ ತಾನೆ ಸ್ವತಃ ಸಾಕ್ಷಿಯಾಗಿ ಬಲಿಪಶುವಾದ ಸೀತೆ ಹನುಮನನ್ನು ಅನುಮಾನಿಸುವಾಗ ಹನುಮ ತನ್ನ ವಿಶ್ವಾಸ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೆರೆಯುವ ಸನ್ನಿವೇಶವಿದೆ. ಆ ಸನ್ನಿವೇಶದ ಪ್ರತೀ ಪದಗಳು ಛಂದಸ್ಸು, ವ್ಯಾಕರಣ ಮತ್ತು ಶಬ್ದಾಲಂಕಾರದೊಂದಿಗೆ ರಾಮ ಸೀತೆಯರ ವೈವಾಹಿಕ ಜೀವನದ ನವಿರುತನವನ್ನು ಯಕ್ಷಕವಿ ಬಹಳ ನವಿರಾಗಿ ಚಿತ್ರಿಸುತ್ತಾನೆ.ಅದರಲ್ಲೂ ಈ ಪದದಲ್ಲಿನ ಶಬ್ದ ವೈಭವ ನೋಡಿದರೆ ಅದರ ಭಾವಸ್ಪಂದನೆಗೂ ಅದು ತೆರೆದಿಡುವ ಸನ್ನಿವೇಶದ ಚಿತ್ರಣಕ್ಕೂ  ಕವಿ ಹೃದಯದ ಸ್ವ ಮಿಡಿತದ ಅನುಭವ ಭಾಸವಾಗುತ್ತದೆ.  ”ತರಹರಿಸಿಮನದೊಳಗೆತನ್ನೊಡೆಯರಾಮ |  ಕುರುಹುಗಳಪೇಳ್ದೆಡೆಯಕಂಡನಾಹನುಮ||“ ಕವಿಯ ಈ ಭಾವವನ್ನು ಅರಿತು ಕಲಾವಿದ ರಂಗದಲ್ಲಿ ಪ್ರವೃತ್ತನಾದರೆ ರಂಗಸ್ಥಳದಲ್ಲಿ ಕಾವ್ಯಮಯ ಲೋಕದ ಅನಾವರಣವಾಗಿಬಿಡುತ್ತದೆ.  ರಾಮ ಹನುಮರ ನಡುವಿನ ಸಂಭಂಧ ಯಾವ ಬಗೆಯಲ್ಲಿ ಬಿಗಿಯಲ್ಪಟ್ಟಿದೆ ಇದು ಸೀತೆಗೆ ಈ ಮೊದಲು ಅರಿವು ಇರುವುದಿಲ್ಲ. ಹಾಗಾಗಿ ರಾಮ ಈ ಅವಕಾಶವನ್ನು ಉಪಯೋಗಿಸಿಕೊಂಡು ಹನುಮನಮೂಲಕವೇ ಆ ಬೆಸುಗೆಯ ಅನಾವರಣ ಮಾಡಿಸಿಬಿಡುತ್ತಾನೆ. ಹಾಗಾಗಿ ಕವಿ ಬಹಳ ಸಾಹಸ ಪಟ್ಟು ಸ್ವತಃ  ಪಾತ್ರವಾಗಿ ಈ ಸನ್ನಿವೇಶದ ಕಾವ್ಯ ಲಯಬದ್ಧವಾಗಿ ಪೋಣಿಸಿದ್ದಾನೆ. ಅದರ ಅನುಭವ, ಚೂಡಾಮಣಿ ಪ್ರಸಂಗ ರಂಗದಲ್ಲಿ ಪ್ರದರ್ಶನವಾಗುವಾಗ ಅನುಭವಕ್ಕೆ ಬರುತ್ತದೆ. ಯಕ್ಷಗಾನ ಎಂದೋ ಇದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಿದ್ದರೆ ಅದಕ್ಕೆ ಇಂತಹ ಪ್ರಸಂಗಗಳು ತಮ್ಮ ದೇಣಿಗೆಯನ್ನು ಖಂಡಿತಾ ಸಲ್ಲಿಸಿರಬಹುದು ಎಂದು ಅರ್ಥೈಸಿಕೊಳ್ಳಬಹುದು.

ರಾವಣನ ಅಟ್ಟಹಾಸದಿಂದ ನೊಂದು ಕೊಂಡ ಸೀತೆ ರಾಮನೆಂದು ಬರುವನೋ ಎಂದು ವಿಲಪಿಸುತ್ತಾಳೆ. ತನ್ನನ್ನು ರಾಮ ಮರೆತನೇ ಎಂದು ದುಮ್ಮಾನದಿಂದ ದುಃಖಿಸುತ್ತಾಳೆ. ದುಃಖ ಅತಿಯಾಗಿ ನಿರಾಶಾಭಾವದಿಂದ ನಿರ್ವಕಾರದಿಂದ ಇರಬೇಕಾದರೆ ಬಂದ ಹನುಮ  ಚಿತ್ರಕೂಟದಲ್ಲಿ ಕಳೆದ ರಾಮ ಸೀತೆಯರು ಕಳೆದ ಮಧುರ ಘಳಿಗೆಗಳನ್ನು ಹೇಳಿದ ನಂತರ ಜಾನಕಿಗೆ ಆ ನೆನಪುಗಳು ಒಂದು ಮಾರ್ದವತೆಯನ್ನು ಸೃಷ್ಟಿಸುತ್ತಾ ಹೋಗುತ್ತದೆ. ಕೊನೆಯಲ್ಲಿ ಹನುಮ ತನ್ನೊಡೆಯನಿತ್ತ ಚೂಡಾಮಣಿಯನ್ನು ಕರಗಂಜದಂಗುಲಿಯೊಳಿಟ್ಟಾಗ.. ಮಾರ್ದವತೆ ಉತ್ತುಂಗಕ್ಕೇರಿ ಕಟ್ಟೊಡೆದು ಕಣ್ಣೀರಾಗಿ ಸರ್ವಾಂಗವನ್ನು ಲೇಪಿಸಿಕೊಳ್ಳುತ್ತದೆ. ಕರದಂಗುಲಿಯಲ್ಲಿಟ್ಟ ಆ ರಾಮ ಮುದ್ರೆಯೇ ಕರಗಿ ಹೋಗುತ್ತದೋ ಎಂಬ ಭ್ರಮೆಯಾವರಿಸಿಬಿಡುತ್ತದೆ.  ಸೀತೆ ಭಾವ ಪರವಶಳಾಗಿ ರಾಮಾ ..ರಾಮಾ ಎಂದು. ಗೋಗರೆದಾಗ ಹನುಮ ಅದುವರೆಗಿನ ದಣಿವನ್ನು ಮರೆತು ಜಾನಕಿಯ ಪಾದಕ್ಕೆರಗಿಬಿಡುತ್ತಾನೆ.

ಪ್ರಸಂಗ ಮಂಗಳವಾದಾಗ ನಮಗರಿಯದೇ ನಮ್ಮ ಹೃದಯ ರಾಮನಾಮದ ಪ್ರಚೋದನೆಯಿಂದ ರಾಮಾ ರಾಮ ಎಂದು ರಾಮಗಾನ ಹಾಡಿದರೆ ಅದು ಯಕ್ಷಗಾನದ ಮಧುರಾಮೃತದ ಸಿಂಚನವಾದಂತೆ. “ಚೂಡಾಮಣಿ” ಜಾನಕಿ ನೀಡುವ ಯಕ್ಷ ಮಣಿಯಾಗಿಬಿಡುತ್ತದೆ. ರಾಮ ನೀಡಿದ ಚೂಡಾಮಣಿ ಮುದ್ರೆಯುಂಗುರ ಬಲಾವದ ಮುದ್ರೆಯನ್ನು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತದೆ.

ಯಕ್ಷಚಿಂತನ

(ರಾಜಕುಮಾರ್, ಬೆಂಗಳೂರು)

error: Content is protected !!
Share This