ಮಂಗಳೂರಿನ ಕೊಡಿಯಾಲಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಫೆ.12ರಿಂದ 14ರ ವರೆಗೆ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥದಾರಿ ಡಾ। ಪ್ರಭಾಕರ ಜೋಶಿ ಆಯ್ಕೆಗೊಂಡಿದ್ದಾರೆ.

ಡಾ| ಜೋಶಿ ಅವರನ್ನು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಲೂರ ಅವರು ಸ್ವಾಗತಿಸಿದರು. ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಮೋಹನ್ ರಾವ್, ಮಂಗಳೂರು ತಾಲೂಕು ಕ.ಸಾ.ಪ. ಅಧ್ಯಕ್ಷೆ ವಿಜಯಲಕ್ಷ್ಮೀ ಜಿ. ಶೆಟ್ಟಿ, ಗೌರವ ಕೋಶಾಧ್ಯಕ್ಷೆ ಪೂರ್ಣಿಮಾ ಪೇಜಾವರ, ಪೊಳಲಿ ನಿತ್ಯಾನಂದ ಕಾರಂತ, ಎಕ್ಕಾರು ಪದ್ಮನಾಭ ಭಟ್, ಶಿವಶಂಕರ್, ಪ್ರಭಾಕರ ಪ್ರಭು ಉಪಸ್ಥಿತರಿದ್ದರು.

ಸಮ್ಮೇಳನಾಧ್ಯಕ್ಷರ ಪರಿಚಯ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ|ಎಂ. ಪ್ರಭಾಕರ ಜೋಶಿ ಅವರು ಅಗ್ರಮಾನ್ಯ ಅರ್ಥಧಾರಿ ಪ್ರಭಾವೀ ಭಾಷಣಕಾರ, ವಿಮರ್ಶಕ, ಚಿಂತಕ, ಕವಿ, ಬಹುಭಾಷಾ ವಿಶಾರದ, ಸಮರ್ಥ ಅಧ್ಯಾಪಕ, ಬೆಸೆಂಟ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಅಂಕಣಕಾರ, ಸಂಘಟಕ, ಖ್ಯಾತ ಸಂಶೋಧಕ, ಆಪ್ತ ಸಲಹೆಗಾರರಾಗಿ ಜೋಶಿ ಅವರು ಬಹುಮಾನ್ಯರು.

ಮೂಲತಃ ಕಾರ್ಕಳ ತಾಲೂಕು ಮಾಳದವರಾದ ಜೋಶಿ ಅವರು ಎಂ.ಕಾಂ, ಹಿಂದಿ ಸಾಹಿತ್ಯರತ್ನ (ಪ್ರಯಾಗ) ಮಂಗಳೂರು ವಿ.ವಿ.ಯಿಂದ ಯಕ್ಷಗಾನದಲ್ಲಿ ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಸಂಸ್ಕೃತ ಕನ್ನಡ, ಹಿಂದಿ, ಮರಾಠಿ, ತುಳು, ಕೊಂಕಣಿ ಭಾಷೆಗಳ ಜ್ಞಾನ ಸಂಪನ್ನರು, ವಿವಿಧ ಸಂಘ – ಸಂಸ್ಥೆಗಳ ಪದಾಧಿಕಾರಿ, ಸಲಹೆಗಾರರಾಗಿ, ಅಧ್ಯಾಪಕ ಸಂಘಗಳ ನೇತಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಸಂಘಟಕರಾಗಿ ದುಡಿಯುತ್ತಿರುವ ಇವರು ಕಲಾವಿದರಿಗೆ ನೆರವು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಜಾಗರ, ಕೇದಗೆ ಯಕ್ಷಗಾನ ಪದಕೋಶ ಭಾರತೀಯ ತತ್ವಶಾಸ್ತ್ರವೇ ಮೊದಲಾದ ಹದಿನೆಂಟು ವೈಚಾರಿಕ ಕೃತಿಗಳ ಜತೆಗೆ ಕೃಷ್ಣ ಸಂಧಾನ ಪ್ರಸಂಗದ ಪಿಎಚ್.ಡಿ. ಮಹಾಪ್ರಬಂಧ ರಚಿಸಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ಅಕಾಡೆಮಿಯ ಜೀವಮಾನ ಸಾಧನಾ ಪ್ರಶಸ್ತಿ, ಪ್ರೊ| ಎಂ. ಮರಿಯಪ್ಪ ಭಟ್ಟ ವಿದ್ವತ್ ಪ್ರಶಸ್ತಿ, ಶೃಂಗೇರಿ ದಕ್ಷಿಣಾಮ್ನಾಯ ವಿದ್ವತ್ ಸಮ್ಮಾನ, ಕುಕ್ಕಿಲ ಕೃಷ್ಣ ಭಟ್ಟ ಪ್ರಶಸ್ತಿ, ಶೇಣಿ ಪ್ರಶಸ್ತಿ, ವಿ.ವಿ. ಯಕ್ಷಗಾನ ಸಮ್ಮೇಳನ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

Share This