ಡಾ. ಎಂ. ಪ್ರಭಾಕರ ಜೋಶಿ

“ಜೀರ್ಣೋದ್ಧಾರವೆಂಬ ಸಾಂಸ್ಕೃತಿಕ ವಿನಾಶ” – ಇದು ದೇವಮಂದಿರಗಳ ಜೀರ್ಣೋದ್ಧಾರಾದಿ ನವೀಕರಣ ವ್ಯವಸ್ಥೆಗಳ ಕುರಿತು, ನಮ್ಮ ಸಾಂಸ್ಕೃತಿಕ ಕ್ಷೇತ್ರದ ಮಹಾಚೇತನರೆನಿಸಿದ ಡಾ| ಶಿವರಾಮ ಕಾರಂತರು ಉದ್ಧರಿಸಿದ ನುಡಿ. ಈ ಮಾತು, ಕಾಲಕ್ರಮದಲ್ಲಿ ಹೆಚ್ಚು ಹೆಚ್ಚು ಸತ್ಯವಾಗುತ್ತಿರುವುದು ಖೇದಕರ. ದೇವ ದೈವಾಲಯಗಳ ರಚನೆ, ಪುನಾರಚನೆ, ಉದ್ದಾರ, ಜೀರ್ಣೋದ್ಧಾರ, ನಿರ್ಮಾಣ, ಪ್ರತಿ ನಿರ್ಮಾಣಗಳ ಕುರಿತು, ಒಮ್ಮೆ ಸಾವಧಾನವಾಗಿ, ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿ, ದಶಕಗಳು ಮುಂದುವರಿದಿದೆ.

ಜೀರ್ಣೋದ್ದಾರದ ಉಬ್ಬರ

ಸುಮಾರು 1970ರ ಬಳಿಕ, ಕರ್ನಾಟಕದ ವಿವಿಧ ಭಾಗಗಳಲ್ಲಿ ದಕ್ಷಿಣ ಭಾರತದ ಹಲವೆಡೆ, ವಿಶೇಷತಃ ಕನ್ನಡ ಕರಾವಳಿಯಲ್ಲಿ ವಿವಿಧ ರೀತಿಯ ದೇವಮಂದಿರಗಳ ಜೀರ್ಣೋದ್ಧಾರದ ಒಂದು ದೊಡ್ಡಉಬ್ಬರವೆ ಬಂದಿತು. ಜೊತೆಗೆ ನವೀನಮಂದಿರಗಳ ರಚನೆ, ಪರಿವರ್ತನೆಗಳೂ ಭರದಿಂದ ಜರಗಿದುವು, ಈಗಲೂ ಜರಗುತ್ತಿವೆ. ಬ್ರಹ್ಮಕಲಶೋತ್ಸವಗಳ ಸರಣಿ ಅವ್ಯಾಹತವಾಗಿ ಸಾಗಿದೆ. ಇದಕ್ಕೆ ಬೇರೆ ಬೇರೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಕಾರಣಗಳಿವೆ. ಅದು ಅಂತಿರಲಿ.

ಅಂತೂ ಒಂದು ಬಗೆಯ ಸಾಮಾಜಿಕ ಐಕ್ಯ, ಜಾಗೃತಿ, ಶ್ರದ್ಧೆ ಮತ್ತು ಉತ್ಸವಪ್ರಿಯತೆಗಳ ಅಲೆ ಇದೆಂದು ಸ್ವೀಕೃತವಾಗಿದೆ. ಈ ಕುರಿತು ಬೇರೆ ರೀತಿಯ ಅಭಿಪ್ರಾಯಗಳೂ ಇವೆ.

‘ದೇವರು ಅರ್ಥಾತ್ ಆರಾಧ್ಯ ದೇವಸ್ಥಾನವು ಒಳ್ಳೆಯದಾದರೆ, ಭಕ್ತರು ಉದ್ದಾರವಾಗುತ್ತಾರೆ’ ಎಂದು ಒಂದು ನೆಲೆ. ‘ಭಕ್ತರು ಆರ್ಥಿಕವಾಗಿ ಬಲಿಷ್ಠರಾದರೆ ಅವರ ಆರಾಧನಾ ಸ್ಥಳಗಳೂ ಉದ್ಧಾರವಾಗುತ್ತವೆ’ ಎಂದು ಇನ್ನೊಂದು ವಿಶ್ಲೇಷಣೆ. ಎರಡೂ ನಿಜವೇ.

ಜೀರ್ಣೋದ್ದಾರವೆಂದರೇನು?

ಮಠ ಮಂದಿರ ಭೂತಾಲಯಾದಿ ಮತಧರ್ಮ ಕೇಂದ್ರಗಳ ಜೀರ್ಣೋದ್ಧಾರ ಎಂದರೆ-ಜೀರ್ಣವಾದುದರ, ಅರ್ಥಾತ್ ಶಿಥಿಲವಾದುದರ ಉದ್ದಾರ, ಎಂದರೆ ಎತ್ತಿಹಿಡಿಯುವಿಕೆ, ಸರಿಪಡಿಸುವಿಕೆ ಎಂದು ಅರ್ಥವಷ್ಟೆ? ಇಲ್ಲಿ ‘ಮೊದಲು ಇದ್ದ ಸ್ಥಿತಿಗೆ ಸರಿ ಬರುವಂತೆ’, ‘ಪೂರ್ವವತ್” ಎಂಬುದು ಗ್ರಾಹ್ಯ, ಕಟ್ಟಡ, ವಿಧಿ ವಿಧಾನ, ವಿನಿಯೋಗ, ನಡವಳಿಕೆಗಳ ಸುವ್ಯವಸ್ಥೆ ಮಾಡುವುದೆಂಬುದು ಜೀರ್ಣೋದ್ದಾರದ ಸಂಕಲ್ಪ, ಅದರಲ್ಲಿ ಹೊಸದಾಗಿ ಆಗುವ ಕಟ್ಟುವಿಕೆಗಳೊ, ರಚನೆಗಳೊ, ಸೇರ್ಪಡೆಗಳೊ ಇದ್ದಲ್ಲಿ ಅವುಗಳು ಆ ಕ್ಷೇತ್ರದ ಮೂಲವಾಸ್ತು ಒಟ್ಟು ಪರಿಸರ ಸ್ವರೂಪಗಳಿಗೆ ಹೊಂದಿಕೊಂಡೆ ಆಗಬೇಕು ಎಂಬುದು ಪ್ರಾಯಃ ಈ ಸಂಕಲ್ಪದ ಭಾಗ. ಆದರೆ ಆಗಿರುವುದೂ, ಆಗುತ್ತಿರುವುದೂ ಬೇರೆ.

ಗುರುತು ಸಿಗದ ಪುನಾರಚನೆ

ಜೀರ್ಣೋದ್ಧಾರ, ದುರಸ್ತಿಗಳ ಹೆಸರಲ್ಲಿ ಹಲವು ಕಡೆಗಳಲ್ಲಿ ಅಲ್ಲ ಹೆಚ್ಚಿನೆಡೆಗಳಲ್ಲಿ ಆಗಿರುವುದು ಕ್ಷೇತ್ರಗಳ ಸಾರಾಸಗಟು ಪುನಾರಚನೆ. ಹಿಂದಣ ಮಂದಿರ, ಸುತ್ತಮುತ್ತಲಿನ ಚಿತ್ರ, ಸನ್ನಿವೇಶಗಳು ಗುರುತೇ ಸಿಗದೆ ಹಾಗೆ ಆಗಿರುವ ಸ್ಥಿತಿ. ಇದನ್ನು ಸಾಂಸ್ಕೃತಿಕ ವಿನಾಶ ಅಥವಾ ವಿಧ್ವಂಸವೆಂದು ಹೇಳಬೇಕಾಗಿದೆ. ಸಾಂಸ್ಕೃತಿಕ ವಿಸ್ತರಣ ಅಥವಾ ಮುಂದುವರಿಕೆ ಆಗಬೇಕಾದಲ್ಲಿ ಆಗಿರುವ ಸ್ಥಿತಿ ತದ್ವಿರುದ್ಧವಾದುದು. ಇದರ ಹಿಂದೆ ಶ್ರದ್ಧೆ, ಅಪಾರ ಪರಿಶ್ರಮ, ತ್ಯಾಗ, ದಾನ ಎಲ್ಲ ಇದೆ ನಿಜ. ಆದರೂ ಇದು, ಸಾಂಸ್ಕೃತಿಕ ವಿವೇಕ ಎಂದು ಹೇಳಲು ಬರುವುದಿಲ್ಲ.

ತಮಿಳುನಾಡೀಕರಣ

ದೇವಾಲಯಗಳ ಜೀರ್ಣೋದ್ದಾರ ಮತ್ತು ಹೊಸ, ಮಂದಿರಗಳ ನಿರ್ಮಾಣಕ್ಕೆ ಆದರ್ಶವಾಗಿ ನಿಂತಿರವುದು, ತಂಜಾವೂರು-ತಿರುಪತಿ ಮಾದರಿಯ ಚೋಳ, ದ್ರಾವಿಡ ಶೈಲಿಯ ಗೋಪುರ, ದ್ವಾರ, ಆವರಣಗಳು. ನಮ್ಮ ಅನೇಕ ದೇವಾಲಯಗಳು ಈಗ, ತಮಿಳುನಾಡಿನಿಂದ ನೇಠ ಎತ್ತಿತಂದು ಸ್ಥಾಪಿಸಿದ ರಚನೆಗಳಂತೆ ಕಾಣುತ್ತವೆ. ಇದು ಮಂದಿರಗಳ ಪ್ರಾಚೀನರೂಪವನ್ನು ದಿಕ್ಕಾಪಾಲುಮಾಡಿದೆ.

ತುಳುನಾಡಿನ ದೇವಾಲಯಗಳ ರೂಪ ಶೈಲಿಯು ಅತ್ತ ಕೇರಳದ, ಈ ಕಡೆ ಹೊಯ್ಸಳರ ಮತ್ತು ಸ್ಥಳೀಯ ಶೈಲಿಯ ಹದವಾದ ಸಮನ್ವಯದಿಂದ ಸಿದ್ಧವಾದುದು. ನೋಟಕ್ಕೂ ಅಂದವಾಗಿ, ಸ್ಥಳದ ಬಳಕೆಯಲ್ಲೂ ಬಹಳ ಉಪಯುಕ್ತವಾಗಿ ಇರುವ ಶೈಲಿ ಅದು. ಚಿಕ್ಕ ಚಿಕ್ಕ ದೇವಾಲಯಗಳಲ್ಲೂ ಕೂಡ, ಸಾಕಷ್ಟು ಸ್ಥಳವಿರುವುದನ್ನು ಕಾಣುತ್ತೇವೆ. ಮೇಲಾಗಿ ಅದು ನಮ್ಮ ಪ್ರದೇಶದ ಶೈಲಿ, ನಮ್ಮ ಗುರುತು. ಅದನ್ನು ಕಡೆಗಣಿಸಿದ ‘ಭವ’ವೈಭವೀಕೃತ’ (?) ನಿರ್ಮಾಣಗಳು ಅನುಚಿತ.

ಕಾಂಕ್ರೀಟ್ ಬನಗಳು

ನಮ್ಮ ಪ್ರದೇಶದ ವಿಶಿಷ್ಪಶ್ರದ್ಧಾಕೇಂದ್ರಗಳಾದ ನಾಗಬನ, ಬ್ರಹ್ಮರಗುಂಡ ಗಳೂ ಈ ಭವ್ಯತೆಯ ಆಕರ್ಷಣೆಗೆ ಬಲಿಯಾಗಿವೆ. ಶ್ರದ್ಧೆಯ ಬಲದಿಂದಲೆ ಆಗಲಿ, ಎಷ್ಟೋ ಕಡೆ ಉಳಿದಿದ್ದ ಸುಂದರವಾದ ಹುಲುಸಾದ, ಮರಗಿಡ ಪೊದರುಗಳಿಂದ ರಾರಾಜಿಸುತ್ತಿದ್ದವನಗಳು ನಾಶವಾಗಿ, ಕಾಂಕ್ರೀಟಿನ ರಚನೆಗಳುಂಟಾಗಿವೆ. ಇದು ‘ನಾಗಬನ’ದ ಪರಿಕಲ್ಪನೆಗೂ, ಅದು ನಿರ್ಮಿಸುವ ಪರಿಸರದ ಕಲ್ಪನೆಗೂ ತದ್ವಿರುದ್ಧವಾದ, ಇನ್ನೊಂದು ಬಗೆಯ ಸಾಂಸ್ಕೃತಿಕ ಅನೌಚಿತ್ಯವಾಗಿದೆ.

ವೈವಿಧ್ಯ ವಿನಾಶ

ಸಂಸ್ಕೃತಿ ಎಂದರೆ ವೈವಿಧ್ಯ, ತತ್ರಾಪಿ, ‘ಹಿಂದೂ’ ಮತ-ಧರ್ಮ-ಸಂಸ್ಕೃತಿಗೆ ವೈವಿಧ್ಯವು ಜೀವಸ್ವರ. ಹೆಗ್ಗುರುತು. ಆದರೆ, ದುರದೃಷ್ಟವಶಾತ್ ಮಂದಿರ ನಿರ್ಮಾಣ, ಉದ್ಧಾರಗಳ ಪ್ರಕ್ರಿಯೆಯಲ್ಲೂ ಈ ವೈವಿಧ್ಯದ ವಿನಾಶವಾಗುತ್ತಿದೆ. ದೇವಾಲಯ, ಭೂತಾಲಯ, ಬನ, ಗುಂಡ, ಸಾನ (ಸ್ನಾನ) ಮೊದಲಾದ ಎಲ್ಲವೂ ಏಕಪ್ರಕಾರದ ವಿಶಿಷ್ಟವಾದ ಆಗಮಿಕ ಅಚ್ಚಿನಲ್ಲಿ ಎರಕಗೊಳ್ಳುತ್ತಿವೆ. ವಿವಿಧ ಗುಂಪು, ಜಾತಿ, ಬುಡಕಟ್ಟು, ಆರಾಧನಾ ಕ್ರಮಗಳಿಗೆ ಅದರದರ ಜೀರ್ಣೋದ್ದಾರ ಕ್ರಮಗಳಿವೆ. ಅದೆಲ್ಲ ಸೇರಿದ್ದು ಹಿಂದುತ್ವ’ವಷ್ಟೆ? ಆ ಪದ್ಧತಿಗಳು ಉಳಿದು ಅಗತ್ಯ ಪರಿಷ್ಕಾರ ಗಳಿಂದ ಅನ್ವಯಗೊಳ್ಳುವುದು ನಿಜವಾದ ಜೀರ್ಣೋದ್ದಾರ ಮಂದಿರದ ಉಜ್ಜೀವನದೊಂದಿಗೆ, ಪದ್ಧತಿಗಳೂ, ವೈವಿಧ್ಯವೂ ಜೀರ್ಣವಾಗಿ ಹೋಗಬಾರದು.

ಭಜನ ಮಂದಿರ

ನಾಡಿನೆಲ್ಲೆಡೆ ಇರುವ ಇನ್ನೊಂದು ಬಗೆಯ ಪೂಜಾಸ್ಥಳಗಳೆಂದರೆ, ‘ಭಜನ ಮಂದಿರ’ಗಳು (ಭಜನಾ ಮಂದಿರ ಎಂದೂ ರೂಢಿಯಿದೆ). ಇವು ಒಂದು ಬಗೆಯ ಪ್ರತಿ ದೇವಾಲಯಗಳು, ಆಗಮ, ಶಾಸ್ತ್ರ ಮಡಿಮೈಲಿಗೆ, ವರ್ಗ ವ್ಯತ್ಯಾಸಗಳಿಂದ ಮುಕ್ತವಾಗಿ, ಸರಳವಾಗಿ ಹಾಡು, ಕುಣಿತ, ಸರಳ ಪೂಜೆಗಳಿಂದ ಚಿತ್ರವನ್ನೊ, ಮೂರ್ತಿಯನ್ನೋ, ಸಂಕೇತವನ್ನೊ ಇರಿಸಿ ಆರಾಧಿಸುವ ಸ್ಥಳಗಳು. ಆಗಮದ ಕಟ್ಟುಪಾಡುಗಳನ್ನು ಮೀರುವುದೇ ಇವುಗಳ ಸ್ಥಾಪನೆಯ ಉದ್ದೇಶ. ಅವು ಮತ ಧಾರ್ಮಿಕ ಮುಕ್ತತೆಯ ಮಹತ್ವದ ಕ್ರಿಯಾರೂಪಗಳು.

ಆದರೆ, ದುರ್ದೈವದಿಂದ ಈ ಮಂದಿರಗಳು ಕೂಡ ಆಗಮೀಕರಣಗೊಂಡು, ಕಿರಿಯ ದೇವಸ್ಥಾನಗಳಾಗುತ್ತಿವೆ. ಭಜನಮಂದಿರಗಳಲ್ಲೂ ಪ್ರತ್ಯೇಕ ‘ಗರ್ಭಗುಡಿ’, ಅದರ ಒಳಸುತ್ತು ಹೊರಸುತ್ತು, ಪೂಜಾವಿಧಾನಗಳೂ ಬ್ರಹ್ಮಕಲಶಾದಿ ಪ್ರಕ್ರಿಯೆ ಗಳೂ ತಲೆಹಾಕಿವೆ. ಇವು ಭಜನ ಮಂದಿರದ ಕಲ್ಪನೆಗೇ ಕೊಡಲಿ. ಉದ್ದೇಶ ಮರೆತ, ತದ್ವಿರುದ್ದವಾದ ನಡೆ, ಸುಧಾರಕವಾದ ಚಳವಳಿಯೊಂದು, ಕಾಲಕ್ರಮದಲ್ಲಿ ವ್ಯವಸ್ಥೆಯ ಭಾಗವಾಗುವುದು ಹೀಗೆ.

ನವ ಶ್ರೀಮಂತಿಕೆಯ ಪ್ರಭಾವ

ಕಲೆಗಳು, ಸಾಂಸ್ಕೃತಿಕ ಪ್ರಕಾರಗಳು, ಮಂದಿರಗಳು ಉನ್ನತೀಕರಣದ ಹೆಸರಲ್ಲಿ ವೈಭವೀಕರಣದ ಬಯಕೆಯಲ್ಲಿ ರೂಪಾಂತರ, ವಿರೂಪ ಮತ್ತು ವಿಚಲನಗೊಳ್ಳುತ್ತಿರುವುದಕ್ಕೆ, ಬಹುಶಃ ಮುಖ್ಯವಾದ ಒಂದು ಕಾರಣ-ನವ ಶ್ರೀಮಂತಿಕೆಯ ಪ್ರಭಾವ (Neo Rich Influence). ನವೀನವಾಗಿ ಬೆಳೆದಿರುವ ಸಿರಿತನದಲ್ಲಿ ಔದಾರವಿದೆ, ಸದುದ್ದೇಶವಿದೆ, ಭಕ್ತಿಶ್ರದ್ಧೆಗಳಿವೆ. ಆದರೆ, ವಿವೇಕವೂ ಇದೆ ಎಂದು ಹೇಳುವಂತಿಲ್ಲ. ಇಂದು ಧಾರ್ಮಿಕ ಕ್ರಿಯೆ, ಪ್ರಕ್ರಿಯೆಗಳಿಗೆ ದೊಡ್ಡ ಪ್ರಮಾಣದ ನೆರವು ಹರಿದು ಬರುತ್ತಿದೆ. ಅದರ ವಿವೇಚನಾ ಪೂರ್ಣವಾದ ಉಪಯೋಗವೂ ಸರಳ, ಕಲಾತ್ಮಕ, ಸಂಸ್ಕೃತಿಕ ರಕ್ಷಕ ಸ್ವರೂಪಕ್ಕೆ ಪ್ರಾಶಸ್ಯವೂ ಅಪೇಕ್ಷಿತ.

ನೇತೃತ್ವದ ಹೊಣೆ

ಈ ನಿಟ್ಟಿನಲ್ಲಿ ಸಂಬಂಧಿತ ಕ್ಷೇತ್ರ ಮುಖ್ಯರು, ದಾನಿಗಳು, ಆಗಮಜ್ಞರು, ವಾಸ್ತುತಜ್ಞರು, ಕಲೆತು ಒಳ್ಳೆಯ ಮಾದರಿಗಳನ್ನು ರೂಪಿಸಬೇಕಾಗಿದೆ. ಅದಕ್ಕೆ ಬೇಕಾದ ವಿಚಾರ ಸಂಪನ್ಮೂಲವೂ ಲಭ್ಯವಿದೆ. ರಕ್ಷಿತ ಸ್ಮಾರಕಗಳ ರಚನಾತತ್ಯದ ಮಾರ್ಗದರ್ಶಿ ಸೂತ್ರಗಳಿವೆ, ಪುರಾತತ್ತ್ವ ವಿಭಾಗದ ಇಂಟಾಕ್
(ಭಾರತೀಯ ಪಾರಂಪರಿಕ ಸಂಪದ ರಕ್ಷಣೆ ಟ್ರಸ್ಟ್) ನಂತಹ ಸಂಸ್ಥೆಗಳಿವೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ಕೊಡಮಂದಿರ ಪುನಾರಚನೆಯಲ್ಲಿ ಅದರ ಮೂಲಸ್ವರೂಪದ ರಕ್ಷಣೆಯ ನಿರ್ಬಂಧವನ್ನು ಅಗತ್ಯ ನಿಯಮವಾಗಿ ವಿಧಿಸಿರುವುದು ಗಮನಾರ್ಹ ಮತ್ತು ಶ್ಲಾಘ್ಯವಾದ ಆದರ್ಶವಾಗಿದೆ.

21-07-2007 – ಉದಯವಾಣಿ – ಸಂಸ್ಕೃತಿ ಸಮ್ಮುಖ

error: Content is protected !!
Share This