ಜೂನ್ 23, 2024ರಂದು ಮಟ್ಟಿ ಮುರಲೀಧರ ರಾವ್ ಹಾಗೂ ಪೆರ್ಲ ಕೃಷ್ಣ ಭಟ್ ಸ್ಮರಣೆಯಲ್ಲಿ ನೀಡಲ್ಪಡುವ ಯಕ್ಷಗಾನ ಕಲಾರಂಗ ಪ್ರಶಸ್ತಿ ಸ್ವೀಕರಿಸಲಿರುವ ಈರ್ವರು ಕಲಾ ಸಾಧಕರ ಕಿರು ಪರಿಚಯ

ಜಬ್ಬಾರ್ ಸಮೊ

ಅವಕಾಶವನ್ನು ಆಸಕ್ತಿಯಿಂದ ಬಳಸಿಕೊಂಡು ಪ್ರಯತ್ನಶೀಲರಾದಾಗ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆ ಜಬ್ಬಾರ ಸಮೊ. ಯಕ್ಷಗಾನದ ಯಾವ ಹಿನ್ನಲೆಯೂ ಇಲ್ಲದ ಇವರು ಇಂದು ತಾಳಮದ್ದಲೆಯ ಪ್ರಸಿದ್ಧ ಅರ್ಥಧಾರಿಯಾಗಿ ಗುರುತಿಸಲ್ಪಟ್ಟಿದ್ದಾರೆ.

1995ರಲ್ಲಿ ಕಿನ್ನಿಗೋಳಿ ಯಕ್ಷಲಹರಿಯ ತಾಳಮದ್ದಲೆ ಸ್ಪರ್ಧೆ. ಕೊಯ್ಕುಳಿಯ ಯುವರಂಗ ತಂಡದ ‘ಶೂರ್ಪನಖಾ ಮಾನಭಂಗ’ ಪ್ರಸಂಗ ಪ್ರಥಮ ಬಹುಮಾನ ಗಳಿಸಿತು. ಜಬ್ಬಾರರ ಘೋರಶೂರ್ಪನಖಿ ಶ್ರೋತೃಗಳ ಪ್ರಶಂಸಗೆ ಪಾತ್ರವಾಯಿತು. ಅದೇ ವಾರ್ಷಿಕೋತ್ಸವದಲ್ಲಿ ರಾವಣನ ಅರ್ಥ ಒಪ್ಪಿಕೊಂಡವರಿಗೆ ಬರಲು ಸಾಧ್ಯವಾಗದಾಗ ಯಕ್ಷಲಹರಿ ಪೆರ್ಲ ಕೃಷ್ಣ ಭಟ್ಟರ ವಿಭೀಷಣನಿಗೆ ರಾವಣನ ಅರ್ಥ ಹೇಳುವ ಅವಕಾಶ ಕೊಟ್ಟಿತು. ರಾವಣ ಜನಮೆಚ್ಚುಗೆಯನ್ನೂ ಗಳಿಸಿತು. ಆಗ ಅವರಿಗೆ ಸುಮಾರು ಮೂವತ್ತು ವರ್ಷ. ಅಲ್ಲಿಂದ ಮುಂದೆ ಮೂರು ದಶಕ ಜಬ್ಬಾರರು ಬೇಡಿಕೆಯ ಅರ್ಥಧಾರಿಯಾಗಿ ತಮ್ಮನ್ನು ಈ ಕ್ಷೇತ್ರದಲ್ಲಿ ಸ್ಥಾಪಿಸಿಕೊಂಡಿದ್ದಾರೆ.

ಸಂಪಾಜೆ ಪರಿಸರದಲ್ಲಿ ವಾರದ ಕೂಟಗಳಲ್ಲಿ ಅರ್ಥ ಹೇಳಿಕೊಂಡಿದ್ದ ಜಬ್ಬಾರ್ ಇಂದು ಪ್ರಮುಖ ಅರ್ಥಧಾರಿಯಗುವಲ್ಲಿ ಅದೃಷ್ಟದೊಂದಿಗೆ ಅವರ ನಿರಂತರ ಪರಿಶ್ರಮ, ಸತತ ಅಭ್ಯಾಸ ಕಾರಣವಾಗಿದೆ. ತಾಳಮದ್ದಲೆಗಾಗಿಯೇ ರಾಮಾಯಣ, ಮಹಾಭಾರತ, ಭಾಗವತ, ಪುರಾಣಗಳ ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನ ಅವರ ಅರ್ಥಗಾರಿಕೆಯಲ್ಲಿ ಸ್ಪಷ್ಟವಾಗುತ್ತದೆ. ನಿರರ್ಗಳ ಮಾತುಗಾರಿಕೆ, ವಿಷಯ ಮಂಡನೆ-ಖಂಡನೆ ಪ್ರತ್ಯುತ್ಪನ್ನಮತಿತ್ವ, ಪಾತ್ರದ ಸ್ವಭಾವವರಿತು ಅಭಿವ್ಯಕ್ತಿಸುವ ಕ್ರಮ, ಬೇರೆಯವರನ್ನನುಕರಿಸದ ಮಾತಿನ ಶೈಲಿ ಇವೆಲ್ಲಾ ಅವರ ಅರ್ಥಾನುಸಂಧಾನದಲ್ಲಿವೆ. ಪ್ರಸಂಗ ಪಠ್ಯಕ್ಕೆ ನಿಷ್ಠರಾಗಿ ಕುತರ್ಕಕ್ಕೆ ಇಳಿಯದ ಸಂಯಮವಿದೆ. ತುಳು ಮತ್ತು ಅರೆ ಭಾಷೆಗಳಲ್ಲೂ ಅರ್ಥಹೇಳಿದ್ದಾರೆ.

ಕಾಸರಗೋಡಿನಿಂದ ಯಲ್ಲಾಪುರದವರೆಗೆ ಕರೆನಾಡು – ಮಲೆನಾಡುಗಳಲ್ಲಿ, ಮುಂಬೈ, ನಾಸಿಕ, ಪೂನಾ, ಬೆಂಗಳೂರು, ಮೈಸೂರು ಅಲ್ಲದೆ ಬಹರೈನ್, ದುಬೈಗಳಲ್ಲೂ ತಮ್ಮ ಅರ್ಥಗಾರಿಕೆಯ ಸೊಗಸಿನಿಂದ ಅವರು ಅಭಿಮಾನಿಗಳನ್ನು ಗಳಿಸಿದ್ದಾರೆ. ಪ್ರತೀವರ್ಷ ನೂರಾರು ತಾಳಮದ್ದಲೆಗಳಲ್ಲಿ ಭಾಗವಹಿಸುತ್ತಿರುವ ಅವರಿಗದು ಪ್ರವೃತ್ತಿಯೊಂದಿಗೆ ವೃತ್ತಿಯೂ ಆಗಿದೆ. ಆ ಕಾರಣಕ್ಕಾಗಿಯೇ ಇರಬೇಕು ರೇಶ್ಮೆ ಇಲಾಖೆಯಲ್ಲಿ 28 ವರ್ಷಗಳ ಸೇವೆಮಾಡಿ ಸ್ವಯಂನಿವೃತ್ತಿ ಪಡೆದು 10 ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಇದಕ್ಕೇ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಕಲೆಯ ಮೇಲಿನ ಪ್ರೀತಿ ಇನ್ನೊಂದು ಕಾರಣ. ತಮ್ಮ ಮಾತಿನ ಬಲದಿಂದಲೇ ಆಗಾಗ ಹವ್ಯಾಸಿ ವೇಷಧಾರಿಯಾಗಿಯೂ ಪಾತ್ರ ನಿರ್ವಹಿಸುತ್ತಿದ್ದಾರೆ.
ಬಲಿ, ಶುಕ್ರಾಚಾರ್ಯ, ಕಾರ್ತವೀರ್ಯ, ವಾಲಿ, ಸುಗ್ರೀವ, ರಾವಣ, ಪ್ರಹಸ್ತ, ಅಂಗದ, ಇಂದ್ರಜಿತು, ಅರ್ಜುನ, ಕರ್ಣ ಹೀಗೆ ಎಲ್ಲಾ ಸ್ವಭಾವದ ಪಾತ್ರಗಳನ್ನು ಅನನ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಧೀರೋದಾತ್ತ ಮತ್ತು ಧೀರೋದ್ಧತ ಪಾತ್ರ ಪ್ರಸ್ತುತಿಯಲ್ಲಿ ತನ್ನತನ ಮೆರೆದಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಅವರ ಮಾತಿನಿಂದ ಪ್ರಭಾವಿತರಾದ ಹಲವರು ಈ ಹವ್ಯಾಸ ರೂಢಿಸಿಕೊಂಡಿದ್ದಾರೆ. ಅವರಿಗೆ ಮಾರ್ಗದರ್ಶಕರಾಗಿ ಅವರೊಂದಿಗೆ ಅರ್ಥ ಹೇಳುತ್ತಾ ಯುವ ಅರ್ಥಧಾರಿಗಳನ್ನು ನಿರ್ಮಿಸಿದ್ದಾರೆ. ಪತ್ನಿ, ಮೂವರು ಮಕ್ಕಳ ಸುಖೀ ಕುಟುಂಬದ ಯಜಮಾನರಾದ ಜಬ್ಬಾರ್ ಈಗ ಪುತ್ತೂರಿನ ಪಡೀಲಿನಲ್ಲಿ ನೆಲೆಯಾಗಿದ್ದಾರೆ.

ಸೇರಾಜೆ ಸೀತಾರಾಮ ಭಟ್ಟ

ಅರ್ಥಧಾರಿ, ಹವ್ಯಾಸಿ ಕಲಾವಿದ, ಪ್ರಸಂಗಕರ್ತ, ಲೇಖಕ, ಪ್ರವಚನಕಾರ. ಸೇರಾಜೆ ಸೀತಾರಾಮ ಭಟ್ಟರು ಸೇರಾಜೆ ನಾರಾಯಣ ಭಟ್ಟ-ಶಂಕರಿ ದಂಪತಿ ಸುಪುತ್ರರು. ಬಿಎಸ್ಸಿ, ಎಲ್‍ಎಲ್‍ಬಿ ಪದವಿಧರರು.

ಯಕ್ಷಗಾನದ ಮೇರು ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳ ಸೋದರಳಿಯ. ಹಾಗಾಗಿ ಯಕ್ಷಗಾನಾಸಕ್ತಿ ವಾಂಶಿಕ ಹಿನ್ನಲೆಯಲ್ಲೂ ಇದೆ. ಅವರಲ್ಲೇ ಯಕ್ಷಗಾನ ಅಭ್ಯಾಸ ಮಾಡಿದರು. ಇವರ ಬಂಧುಗಳಲ್ಲಿ ಹಲವರು ಯಕ್ಷಗಾನ ಕಲಾವಿದರು. ಆದ್ದರಿಂದ ಯಕ್ಷಗಾನ ಕಲಾವಿದರು ಹಾಗೂ ಚೌಕಿಯ ಒಡನಾಟ ಇವರಿಗೆ ಎಳವೆಯಲ್ಲೇ ಆಯಿತು. ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸದೆ ಇದ್ದರೂ ಬಾಲ್ಯ ಮತ್ತು ಯೌವನದಲ್ಲಿ ಕುರಿಯ ಕುಟುಂಬದ ಮೇಳದಲ್ಲಿ ಹಾಗೂ ಹೊರಗಡೆ ಹವ್ಯಾಸಿಯಾಗಿ ಸಾಕಷ್ಟು ವೇಷಗಳನ್ನು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಇವರು, ಅಲ್ಲಿಂದ ಬೈಕಂಪಾಡಿಗೆ ಬಂದು ನೆಲೆನಿಂತ ಮೇಲೆ ಯಕ್ಷಗಾನ, ತಾಳಮದ್ದಲೆ ಮತ್ತು ಪುರಾಣಾಸಕ್ತಿಯನ್ನು ಬೆಳೆಸಿಕೊಂಡು ಹೆಚ್ಚು ಸಕ್ರಿಯರಾಗಲು ಸಾಧ್ಯವಾಯಿತು. ರಾಮಾಯಣ, ಮಹಾಭಾರತ, ಭಾಗವತ ಮತ್ತು ಹಲವು ಪುರಾಣಗಳ ಓದು ಅವರನ್ನು ಸಮರ್ಥ ಅರ್ಥಧಾರಿಯನ್ನಾಗಿ, ಪ್ರವಚನಕಾರರನ್ನಾಗಿ ರೂಪಿಸಿತು.

ಅರ್ಥಧಾರಿಯಾಗಿ ಅಪಾರ ಪುರಾಣಜ್ಞಾನದಿಂದ ಪೌರಾಣಿಕ ಪಾತ್ರಗಳನ್ನು ಸುಂದರವಾಗಿ ಕಟ್ಟಿಕೊಡುವ ವಾಗ್ಮಿತೆ ಅವರದು. ತಾಳಮದ್ದಲೆಯಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿರುವ ಇವರ ಸಿದ್ಧಿ – ಪ್ರಸಿದ್ಧಿ ಇರುವುದು ಸೌಮ್ಯ ಪಾತ್ರಗಳ ನಿರೂಪಣೆಯಲ್ಲಿ. ರಾಮ, ಕೃಷ್ಣ, ವಿದುರ, ಅತಿಕಾಯ, ಕರ್ಣ, ಅರ್ಜುನ ಹೀಗೆ ಹಲವು ಪಾತ್ರಗಳು ಶೋತ್ರಗಳ ಮನಗೆದ್ದಿವೆ. ಚಿಕ್ಕ ಚಿಕ್ಕ ಪಾತ್ರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ಯಕ್ಷಗಾನ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿ, ತಾಳಮದ್ದಲೆಗಳ ಸಪ್ತಾಹಗಳ ಅವಲೋಕನಕಾರರಾಗಿ, ಯಕ್ಷಗಾನ ಸಂಬಂಧೀ ಕಮ್ಮಟ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ವಿವಿಧ ಸಂಸ್ಮರಣಾ, ಅಭಿನಂದನಾ ಪುಸ್ತಕಗಳಲ್ಲಿ ಲೇಖಕರಾಗಿ; ಸಂಪಾದಕ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಐದು ಪೌರಾಣಿಕ ಪ್ರಸಂಗಗಳ ಗುಚ್ಛ ಪ್ರಕಟವಾಗಿದೆ. ಇದಕ್ಕೆ ಯಕ್ಷಗಾನ ಅಕಾಡೆಮಿ ಪುಸ್ತಕ ಪ್ರಶಸ್ತಿ ಗೌರವ ಸಂದಿದೆ. ಹವ್ಯಕ ಭಾಷೆಯಲ್ಲಿ ಬರೆದ ಐದು ಪ್ರಸಂಗಗಳು ಮುದ್ರಣ ಹಂತದಲ್ಲಿವೆ. ಭಗವದ್ಗೀತೆಯನ್ನು ಸರಳ ಭಾಷೆಯಲ್ಲಿ ಭಾಮಿನಿ ಷಟ್ಪದಿಯಲ್ಲಿ ಅನುವಾದಿಸಿ ಕನ್ನಡ ಓದುಗರಿಗೆ ನೀಡಿದ್ದಾರೆ.

ಸುಮಾರು ಐದು ದಶಕಗಳಿಂದ ಪುರಾಣ ಪ್ರವಚನ ಮಾಡುವಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಹಾಗೂ ಕೇರಳದ ಹಲವು ಭಾಗಗಳಲ್ಲಿ ಇವರ ಪ್ರವಚನಗಳು ನಡೆದಿವೆ. ಈಗಲೂ ಅದರಲ್ಲಿ ಪ್ರವೃತ್ತರು. ‘ಸರ್ಪ ಸಂಕಲೆ’ ಎಂಬ ತುಳು ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನೇಮಾ ಮತ್ತು ದೂರದರ್ಶನದಲ್ಲೂ ಪಾತ್ರ ಮಾಡಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ ಶತಮಾನೋತ್ಸವ ಸಮ್ಮಾನವು ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಪತ್ನಿ, ಈರ್ವರು ಮಕ್ಕಳ ಸುಖೀ ಕುಟುಂಬದ ಯಜಮಾನರು.-

ನಾರಾಯಣ ಎಂ. ಹೆಗಡೆ

error: Content is protected !!
Share This