(ಡಾ. ಎಂ. ಪ್ರಭಾಕರ ಜೋಶಿ ಅವರ ಕುರಿತ ನುಡಿಮಾಲೆ)

ಲೇ.: ಡಾ. ಸುಂದರ ಕೇನಾಜೆ

ಪ್ರ.: ಆಕೃತಿ ಆಶಯ ಪಬ್ಲಿಕೇಷನ್ಸ್‌ , ಲೈಟ್‌ಹೌಸ್‌ ಹಿಲ್‌ ರೋಡ್‌, ಮಂಗಳೂರು-575001

ಫೋನ್‌: 0824 2443002

ಮೊದಲ ಮುದ್ರಣ: 2018 ಬೆಲೆ: ರೂ. 110

ಹಲವು ಜ್ಞಾನವಿಭಾಗಗಳಲ್ಲಿ ಅಧ್ಯಯನ ನಡೆಸಿದ್ದರೂ, ಬಹುಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದರೂ ಯಕ್ಷಗಾನ ಅರ್ಥಧಾರಿ ಮತ್ತು ವಿದ್ವಾಂಸರೆಂದೇ ಜನಮನ್ನಣೆ ಪಡೆದಿರುವ ಡಾ. ಎಂ. ಪ್ರಭಾಕರ ಜೋಶಿ ಅವರ ಅನುಭವ ಕಥನ ಇತ್ತೀಚೆಗೆ ಪ್ರಕಟವಾಗಿದೆ. ಜೋಶಿ: ಆಳ ಮನದಾಳ ಎಂಬ ಶೀರ್ಷಿಕೆಯ ಈ ಕೃತಿ ಡಾ. ಎಂ. ಪ್ರಭಾಕರ ಜೋಶಿ ಅವರ ಕುರಿತು ನುಡಿಮಾಲೆ ಎಂದು ಸೂಚಿತವಾಗಿದೆ. ಜೋಶಿಯವರ ಅನುಭವ ಲೋಕ ವಿಸ್ತಾರವಿರುವುದರಿಂದ ಈ ನುಡಿಮಾಲೆಗೆ ಇನ್ನಷ್ಟು ಮಣಿಗಳು ಸೇರಿಕೊಂಡರೆ ಯಕ್ಷಗಾನ ಕ್ಷೇತ್ರಕ್ಕೆ ಲಾಭವೇ.

ಒಟ್ಟು ಮೂರು ಭಾಗಗಳಲ್ಲಿ ಈ ಕೃತಿ ಹರಡಿಕೊಂಡಿದೆ. ಮೊದಲ ಭಾಗ‌ದಲ್ಲಿ ಜೋಶಿಯವರ ಆತ್ಮವೃತ್ತಾಂತವಿದೆ. ಬಾಲ್ಯದಿಂದ ತೊಡಗಿ ಸಾಂಸಾರಿಕದ ಬದುಕಿನವರೆಗಿನ ದೀರ್ಘ‌ ಹಾದಿಯ ಹೆಜ್ಜೆ ಗುರುತುಗಳು ಇಲ್ಲಿವೆ. ಎರಡನೆಯ ಭಾಗದಲ್ಲಿ ಯಕ್ಷಗಾನದ ಕುರಿತ ಚಿಂತನಗಳಿವೆ. ಕಲೆಯ ಕುರಿತ ದೀರ್ಘ‌ ಕಾಲದ ಅವರ ಅವಲೋಕನ, ಅಧ್ಯಯನ, ಸಂಶೋಧನಗಳ ಫ‌ಲಿತಗಳು ಇಲ್ಲಿ ಅಕ್ಷರ ರೂಪ ಪಡೆದಿವೆ. ಒಂದರ್ಥದಲ್ಲಿ ನಿಜ ಜೀವನ ಮತ್ತು ಕಲಾಜೀವನವನ್ನು ಸಮನ್ವಯ ಭಾವದಲ್ಲಿ ಸ್ವೀಕರಿಸಿ ಸಾಗಿಬಂದವರು ಜೋಶಿ. ಜೊತೆಗೆ ಅಧ್ಯಾಪನದ ವೃತ್ತಿಗೂ ನ್ಯಾಯವೊದಗಿಸಿದವರು. ಅವರಲ್ಲಿ ಕಲೆ ಮತ್ತು ಬದುಕನ್ನು ಪ್ರತ್ಯೇಕವಾಗಿ ನೋಡುವುದು ಇಲ್ಲಿ ಕೊಂಚ ಕಷ್ಟವೇ. ಮೂರನೆಯ ವಿಭಾಗದಲ್ಲಿ ಅಪೂರ್ವ ಛಾಯಾಚಿತ್ರಗಳಿವೆ. ಯಕ್ಷಗಾನದ ಇತಿಹಾಸದ ದೃಷ್ಟಿಯಿಂದಲೂ ಈ ಛಾಯಾಚಿತ್ರಗಳು ದಾಖಲೆಗೆ ಯೋಗ್ಯ. ನಾಲ್ಕನೆಯ ವಿಭಾಗದಲ್ಲಿ ಅನುಬಂಧವಿದೆ. ಅದರಲ್ಲಿ ಜೋಶಿಯವರ ಜೀವನ-ಸಾಧನೆಯ ವಿವರಗಳಿವೆ.

ಇಲ್ಲಿನ ಬರಹಗಳನ್ನು ನಿರೂಪಿಸಿ, ಅಂದವಾಗಿ ಕೃತಿಯನ್ನು ರೂಪಿಸಿದ ಡಾ. ಸುಂದರ ಕೇನಾಜೆ ಯಕ್ಷಗಾನ ಕಲೆಗೆ ಮಹತ್ವದ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಉದಯವಾಣಿ (ಹೊತ್ತು ಹೊತ್ತಿಗೆ)

error: Content is protected !!
Share This