‘ಅಪ್ರಾಪ್ಯ ನಾಮ ನೇಹಾಸ್ತಿ ಧೀರಸ್ಯ ವ್ಯವಸಾಯಿನಃ’
ಯೋಗ್ಯತೆ ಅರ್ಹತೆಗಳಿಂದಲೂ, ವಿಶಿಷ್ಟ ಸಾಮುದಾಯಿಕ ಕಾರಣದಿಂದಲೂ, ಯಕ್ಷಗಾನ ತಾಳಮದ್ದಲೆಯ ಕ್ಷೇತ್ರದಲ್ಲಿ ಓರ್ವ ಪ್ರಮುಖ ಅರ್ಥಧಾರಿಯಾಗಿ ಸಿದ್ಧ ಪ್ರಸಿದ್ಧರಾಗಿರುವ ಮಿತ್ರ, ಸಹಕಲಾವಿದರಾಗಿರುವ ಜಬ್ಬಾರ್ ಸಮೊ ಅವರ ಕುರಿತು ಅಭಿನಂದನ ಗ್ರಂಥವೊಂದು ಬರುತ್ತಿರುವುದು ಸಕಾಲಿಕ.ಅದಕ್ಕೊಂದು ಮುನ್ನುಡಿಯನ್ನು ಬರೆಯುವ ಸಂತೋಷ ಮತ್ತು ಗೌರವವನ್ನಿತ್ತ ಪ್ರಕಾಶಕರಾದ ಶ್ರೀ ರಾಜ ತುಂಬೆ ಮತ್ತು ಸಂಪಾದಕರಾದ ಕಲಾವಿದ ಸಾಹಿತಿ ಮಿತ್ರ ರಾಧಾಕೃಷ್ಣ ಕಲ್ಚಾರ್ ಅವರಿಗೆ ಶುಭಾಶಂಸನೆಗಳು.
ಆಸಕ್ತಿಯನ್ನು ಅಭಿರುಚಿ, ಅಭಿವ್ಯಕ್ತಿಯಾಗಿಸಿ, ನಿರಂತರ ದಶಕಗಳ ಕಾಲ ಮುಂದುವರಿಸಿ ಯಶಸ್ವಿಯಾಗಿ, ಇದೀಗ ಅರುವತ್ತರ ಹರೆಯದಲ್ಲಿರುವ ಜಬ್ಬಾರ್ ಈ ಗೌರವಕ್ಕೆ ಅರ್ಹರು. ಸಾಹಿತ್ಯದಲ್ಲಿ ಇದು ಒಂದು ವಿಶಿಷ್ಟ ಅಂಗೀಕಾರದ ದಾಖಲೆ ಕೂಡ. (ನನ್ನ ಮತ್ತು ಅವರ ಒಡನಾಟದ ವಿಚಾರ, ಅವರ ಕುರಿತಾದ ನನ್ನ ಅಭಿಪ್ರಾಯಗಳು ಪ್ರತ್ಯೇಕ ಲೇಖನವಾಗಿ ಈ ಗ್ರಂಥದಲ್ಲಿರುವುದರಿಂದ ಇಲ್ಲಿ ವಿಸ್ತರಿಸಿಲ್ಲ) ವ್ಯಕ್ತಿ, ಕಲಾವಿದ ಎರಡೂ ನೆಲೆಗಳಲ್ಲಿಯೂ ಅವರಿದಕ್ಕೆ ಯೋಗ್ಯರು.
ಪರಿಸರ ವಿಶಿಷ್ಟವಾದ ಪ್ರೋತ್ಸಾಹ, ಅಧ್ಯಯನ, ಧೈರ್ಯದ ಸಾಧನೆ, ಕೆಲವು ಇರಿಸು ಮುರಿಸುಗಳು,ಆತಂಕಗಳು ಇವುಗಳ ಮಧ್ಯೆ ತಾಳಮದ್ದಲೆ ಪ್ರಕಾರದ ಓರ್ವ ಗಣ್ಯ ಕಲಾವಿದನಾಗಿ ಅವರು ಬೆಳೆದು ನಿಂತದ್ದು ಪ್ರಶಂಸಾರ್ಹ ಮತ್ತು ಸಾಮಾಜಿಕವಾಗಿ ಕೂಡ ಮುಖ್ಯ ಸಂಗತಿಯಾಗಿದೆ.
ಗ್ರಂಥದ ಹೆಸರು ‘ಸಮ್ಮೋದ’ ವು ಒಳ್ಳೆಯ ಕಲ್ಪನೆ. ಅಭಿನಂದಿತನ ಹೆಸರಿಗೂ ಹೊಂದಿ, ಅವರ ಬಂಧು ಮಿತ್ರರ, ಅಭಿಮಾನಿಗಳ, ಸಹಕಲಾವಿದರ ಮೋದಕ್ಕೂ ಕಾರಣವಾಗುವ ಘಟನೆಯಾಗಿ ಇದೆ. ಈ ಗ್ರಂಥದಸಂಪಾದಕ ಕಲ್ಚಾರ್, ಜಬ್ಬಾರರ ನಿಡುಗಾಲದ ಮಿತ್ರ ಮಾತ್ರವಲ್ಲ, ಅವರ ಅರಂಭಿಕ ಪ್ರೇರಕ, ಮಾರ್ಗದರ್ಶಕರು ಕೂಡ. ಅವರಿಬ್ಬರ ಅರ್ಥಗಳ ಜತೆಗಾರಿಕೆ ಸುಮಾರು ೨೦೦೦ – ೨೦೧೦ ರ ಅವಧಿಯಲ್ಲಿ ಮುಖ್ಯತಃ ಉತ್ತರ ಕನ್ನಡದ ಹಲವು ಕೂಟಗಳಲ್ಲಿ ಮೆರೆದಿತ್ತು.
ಅವರಿಬ್ಬರ ಸ್ನೇಹ ಸಂಬಂಧವು ಅಭಿಮತ – ವಿಮರ್ಶಾ ಪೂರ್ವಕವಾಗಿ, ಭಾವಯುತವಾಗಿ, ವ್ಯಕ್ತಿಚಿತ್ರಣ ಸಹಿತ ಸಂಪಾದಕೀಯದಲ್ಲಿ ಅಡಕವಾಗಿ, ಸೊಗಸಾಗಿ ರೇಖಿತವಾಗಿದೆ.
ಈ ಗ್ರಂಥದಲ್ಲಿ ಹಲವು ಲೇಖನಗಳಿದ್ದು ಅವುಗಳಲ್ಲಿ ವಿವಿಧ ಕೋನಗಳ, ವಿವಿಧ ಸ್ತರಗಳ ನೋಟಗಳಿವೆ. ಅಭಿಮಾನ ಪೂರ್ವಕ ಹಿರಿತನದ ಹಾರೈಕೆಗಳಿವೆ (ಡಾ. ಬನಾರಿ, ವಿಶ್ವ ವಿನೋದ ಬನಾರಿ) ಜಬ್ಬಾರ್ ಮಾತುಗಾರಿಕೆಯ ಹೊಸ ಅಲೆಯ ಪ್ರಸ್ತಾವವನ್ನು ಹಲವರು ವಿವರಿಸಿದ್ದಾರೆ (ವಿ. ಸಂಕದಗುಂಡಿ, ಪ್ರಾ. ಶ್ರೀಧರ ಡಿ ಎಸ್) ವ್ಯಕ್ತಿತ್ವ, ಆತ್ಮೀಯತೆ, ಗುಣಗೌರವಗಳ ಬಗೆಗೆ ಬರೆಹಗಳಿವೆ. (ಗಣೇಶ ಶೆಟ್ಟಿ, ಪವನ್ ಕಿರಣಕೆರೆ,ಜಯಾನಂದ ಸಂಪಾಜೆ) ಕಲಾವಿಸ್ತರಣೆಯಾಗಿ ನೋಡಿದುದು(ಭಾಸ್ಕರ ರಾವ್) ಸುಧನ್ವ ದೇರಾಜೆ ಜಬ್ಬಾರ್ ಅವರ ಮುಸ್ಲಿಂ ಸಂವೇದನೆಯ ಅರ್ಥಗಾರಿಕೆಯ ವಿಶಿಷ್ಟ ಅಪೇಕ್ಷೆ ಪ್ರಸ್ತಾವಿಸಿದ್ದಾರೆ.
ಹಿರಿಯ ಅರ್ಥಧಾರಿ ಕಾರ್ಕಳ ನೆಲ್ಲಿಕಾರು ಖಾದ್ರಿ ಬ್ಯಾರಿ ಅವರ ನೆನಪಿನೊಂದಿಗೆ ಬರೆದಿದ್ದಾರೆ(ಕೊಲ್ಯಾರು ರಾಜು ಶೆಟ್ಟಿ) ಚಿಕ್ಕದಾದರೂ ಮಾಹಿತಿ ವಿಶ್ಲೇಷಣೆಯ ಬರೆಹ ಇದೆ (ಶಂಭು ಶರ್ಮ) ಜಬ್ಬಾರರ ಕಲಾವಿದತ್ವವನ್ನು ಸಾಮಾಜಿಕ ಮಹತ್ತ್ವದ ನೆಲೆಯಲ್ಲಿ ಮತ್ತು ಕಲಾವಿಸ್ಮಯವಾಗಿ ಕಂಡ ಲೇಖನಗಳಿವೆ (ನರೇಂದ್ರ ರೈ, ಮುಸ್ತಾಕ್ ಹೆನ್ನಾಬೈಲ್) ವಿದ್ಯಾರ್ಥಿ ಜಬ್ಬಾರರ ಬಗ್ಗೆ ಹರಸಿ ಬರೆದ ಬರೆಹ ಇದೆ (ಕೆ ಅರ್ ಗಂಗಾಧರ)
ಶಿಷ್ಯತ್ವಗಳ ನೆಲೆಯಲ್ಲಿ, ಜತೆಗೆ ಪ್ರೀತಿ, ಅಭಿಮಾನೊಟ್ಟು ಸಹವರ್ತಿ, ಸಹೃದಯತೆಯ ಪ್ರತೀಕವಾದ ಹಲವು ಲೇಖನಗಳಿವೆ (ಸುರೇಶ ಭಂಡಾರಿ, ದಿವಾಕರ ಆಚಾರ್ಯ, ವಿಶ್ವನಾಥ ಶೆಟ್ಟಿ, ಪಾಲೆತ್ತಾಡಿ, ದಾಮೋದರ ಸೆಟ್ಟಿ, ಜಯಪ್ರಕಾಶ ಪೆರ್ಮುದೆ, ಮಾನ್ಯ ವಿಜಯ ಕುಮಾರ, ಜನಾರ್ದನ ಮಂಡಗಾರು, ಡಾ. ದಿನಕರ ಪಚ್ಚನಾಡಿ, ಭಾಗವತ ಪಟ್ಲ ಸತೀಶ ಶೆಟ್ಟಿ, ಸೀತಾರಾಮ ಚಂದು, ಸೇರಾಜೆ, ಡಾ. ಕೇನಾಜೆ, ಸುಂಕಸಾಳ) ಸಹ ವೇಷಧಾರಿ,ಕಲಾವಿದರಾಗಿಕಂಡು ಬರೆದಿದ್ದಾರೆ (ಎಂ ಕೆ ರಮೇಶಾಚಾರ್, ಮಂಜುನಾಥ ಗೊರಮನೆ)ಅವರ ಭಾಷಾವಿಲಾಸದ ಬಗ್ಗೆ ಬರೆಹಗಳಿವೆ (ರಮಾನಂದ ಐನಕೈ) ಜತೆಗೆ ಛಂದೋವೃತ್ತವೊಂದರ ಹೋಲಿಕೆಯಲ್ಲಿ ಬರೆದ ‘ಮಂದಾಕ್ರಾಂತ’ ವಿಶಿಷ್ಟ ಲೇಖನವಿದೆ (ವಿದ್ಯಾ ಶರ್ಮ)
ಈ ಸಂಕಲನದ ವಿಶಿಷ್ಟವಾದ ಬರೆಹಗಳಾಗಿ ನೋಡಬೇಕಾದ ಒಂದು ಪಾತ್ರಾಭಿವ್ಯಕ್ತಿಯ ವಿಶ್ಲೇಷಣೆಯ ಕೌರವ (ಸುಣ್ಣಂಬಳ ವಿಶ್ವೇಶ್ವರ ಭಟ್) ಒಟ್ಟು ಅಭಿವ್ಯಕ್ತಿ – ವಿದ್ಯಮಾನವಾಗಿ ಕಂಡ ಬೌದ್ಧಿಕ ರಂಗ (ಪ್ರಾ. ಸುನೀತಾ ಶೆಟ್ಟಿ) ಹಾಗೆಯೇ ಇನ್ನೊಂದು ಲೇಖನ (ಗೋವಿಂದ ಭಟ್ ಕಲ್ಲುಕುಟ್ಟಿಮೂಲೆ) ಇದೆ.
ಈ ಮಾದರಿ ಒಬ್ಬ ಕಲಾವಿದನ ಪಾತ್ರಕಲ್ಪನೆಯ ಮತ್ತು ಒಟ್ಟು ಅರ್ಥಗಾರಿಕೆಯ – ಚರಿತ್ರೆಯ ದೃಷ್ಟಿಯಿಂದ ಮುಖ್ಯವಾದದ್ದು – ಇದು ವಿಸ್ತೃತವಾಗಬೇಕು, ಪ್ರಾಜ್ಞ ಶ್ರೋತೃ – ಸಹಕಲಾವಿದರಿಂದ ದಾಖಲೀಕರಣಗೊಂಡು ಬರಬೇಕು.ಈಗಾಗಲೇ ಒಂದು ಪ್ರಮಾಣದಲ್ಲಿ ಈ ಬಗೆಯ ಬರೆಹಗಳು ಬಂದಿವೆ. ಅದು ಇನ್ನಷ್ಟು ವಿಸ್ತರಿಸಿ, ಗೌರವ ಗ್ರಂಥಗಳ ಸಂದರ್ಭದಲ್ಲಿಯೂ, ಸ್ವತಂತ್ರವಾಗಿಯೂ, ಸಮಗ್ರ ಪಾತ್ರಚಿತ್ರ, ನೆನಪು, ತುಣುಕುಗಳಾಗಿ ಇದು ಲಿಖಿತವಾಗಿ ಬರುವುದು ಅಪೇಕ್ಷಣೀಯ. ಒಬ್ಬನೇ ಕಲಾವಿದನ ವಿವಿಧ ಪಾತ್ರಗಳ ದಾಖಲೀಕರಣ ಬೇಕು.
ಇದರೊಂದಿಗೆ, ಹಲವು ಗೌರವ ಗ್ರಂಥಗಳಲ್ಲಿರುವ, ಸ್ವಾಗತಾರ್ಹ ಅಂಶದ ಹಾಗೆ ಅಭಿನಂದಿತರ ಸಂಕ್ಷಿಪ್ತ ಆತ್ಮವೃತ್ತವಿದೆ. ಸುಮಾರು ಮೂವತ್ತು ಪುಟಗಳ ಈ ಬರೆಹವು ಸಾಂದ್ರ, ಅಡಕವಾದ ಪ್ರವಾಹದ ಶೈಲಿಯಲ್ಲಿ ಸೊಗಸಾಗಿ ರಚಿತವಾಗಿದೆ. ಇದರಲ್ಲಿ ಅನೇಕ ಮಹತ್ತ್ವದ ವಿವರಗಳಿದ್ದು, ಕುಟುಂಬ, ಬಾಲ್ಯದ ವಿವರ, ಅಂದಿನ ಕೌಮಾರ್ಯದ ಬೆರಗು – ಕನಸಿನ ಸ್ಮೃತಿಗಳ ಚಿತ್ರಣವಿದೆ.
ಇದನ್ನು ಓದುತ್ತಿರುವಾಗ, ಮುಖ್ಯವಾಗಿ ಮೊದಲ ಪುಟಗಳಲ್ಲಿ
ಸಾಮಾನ್ಯವಾಗಿ ನಮಗಿರುವ ತಪ್ಪು ಗ್ರಹಿಕೆಗಳೆಲ್ಲ ಮಾಯವಾಗುತ್ತವೆ. ಓರ್ವ ಮುಸ್ಲಿಂ ಹುಡುಗ, ಯಕ್ಷಗಾನದ ತೀವ್ರ ಆಸಕ್ತನಾಗಿ, ತಾರಾಮೌಲ್ಯದ ಕಲಾವಿದನಾಗಿ ಬೆಳೆದ ರೀತಿಯನ್ನು ಸಹಜವಾಗಿ, ಆವೇಶ ಅತಿಭಾವುಕತೆ ಇಲ್ಲದೆ, ಭಾವನಾತ್ಮಕತೆಯನ್ನು ಬಿಡದೆ ಬರೆದಿದ್ದಾರೆ. ಉಲ್ಲೇಖಿತವಾದ ಅನೇಕ ಹೆಸರುಗಳು, ಘಟನೆಗಳು ಪ್ರಾದೇಶಿಕ ಇತಿಹಾಸಕ್ಕೆ ಮಹತ್ತ್ವದ್ದಾಗಿವೆ. ವಿಷಯದ ಓಟ, ಲಂಘನ, ವಿಫಲವಾಗದ ತುಸು ವಿನೋದ (ಈ ಬಗ್ಗೆ ತುಂಬ ಎಚ್ಚರ ವಹಿಸಿದ್ದಾರೆ)ಗಳಿವೆ.
ತುಂಬ ಮಾಹಿತಿಗಳಿವೆ. ಕೆಲವೆಡೆ ಇರುವ ಧ್ವನಿಗಮನಾರ್ಹವಿದೆ. ಉದಾ. ಇವರ ಕುಟುಂಬದ ಕೃಷಿ ವಿಚಾರ. ಇವರ ದನಗಳ ಹಟ್ಟಿ ಮನೆಗಿಂತ ಚೆನ್ನಾಗಿತ್ತಂತೆ. ಇದರಲ್ಲಿ ಹಲವು ಅರ್ಥಗಳಿವೆ.
ಕೊನೆಯ ಭಾಗದಲ್ಲಿ ಬರೆಹ ಅವಸರದ ಓಟದಲ್ಲಿ ಮುಗಿದುದು ಸ್ಪಷ್ಟವಾಗಿದೆ. ಪುಟದ ಮಿತಿ, ಸಮಯದ ಅವಸರಗಳಿಂದಾಗಿ ಎಂಬುದು ಸ್ಪಷ್ಟ. ಆದರೆ, ಚಿಕ್ಕ ಗಾತ್ರದಲ್ಲಿ ಕಾಣುವ ಈ ವೃತ್ತಾಂತವು ಹನಿಯಲ್ಲಿ ಹಿಡಿದ ಆಗಸದ ಚಿತ್ರದಂತಿದ್ದು ಮನಸ್ಸನ್ನು ಹಿಡಿದು ಓದಿಸಿಕೊಂಡು ಹೋಗುತ್ತದೆ. ನಿರೀಕ್ಷೆಗಳನ್ನು ಮೂಡಿಸುತ್ತದೆ.ಅರ್ಥಗಾರಿಕೆಯಲ್ಲೂ, ಬರೆಹಗಳಲ್ಲೂ ಜಬ್ಬಾರರ ಶೈಲಿಯಲ್ಲೇ ಇತ್ತೀಚೆಗೆ ಒಂದು ಹೊಸ ಸಂಸ್ಕಾರ ಕಾಣಿಸಿಕೊಂಡಿದೆ. ಅದಕ್ಕೂ ಈ ಬರೆಹ ದೃಷ್ಟಾಂತವಾಗಿದೆ.
ಜಬ್ಬಾರರಲ್ಲಿ ಅಪಾರವಾದ ನೆನಪುಗಳಿವೆ. ಅವುಗಳನ್ನು ಬಹು ಸ್ವಾರಸ್ಯವಾಗಿ ಹೇಳುವ ರೀತಿಯಿದೆ. ಕೆಲವೊಮ್ಮೆ ಮಾತ್ರ ಅದು ಮುಕ್ತವಾಗಿ ಕಾಣಿಸುತ್ತದೆ. ಇದು ನನ್ನ ಅವರ ಜತೆಗಿನ ಒಡನಾಟ, ಪ್ರಯಾಣಗಳಲ್ಲಿಯ ಅನುಭವ.(ರಂಗಸ್ಥಳದ ಹೊರಗೇಕುಣಿಯುವ ದುಶ್ಶಾಸನ, ಬೇರೆ ಪಾತ್ರದ ಅರ್ಥ ಹೇಳಿದ ಓರ್ವರ ಕಥೆ, ಲಘು, ಗಂಭೀರ ಪ್ರಸಂಗಗಳು – ಇವುಗಳನ್ನೆಲ್ಲ ಅವರಿಂದಲೇ ತಿಳಿಯಬೇಕು) ಇದೀಗ ಅವರ ವಿಸ್ತಾರವಾದ ಆತ್ಮಕಥೆಯು ಸಿದ್ಧವಾಗುತ್ತಿದ್ದು ಸದ್ಯವೇ ಪ್ರಕಟವಾಗಲಿ ಎಂಬುದು ಹಾರೈಕೆ.ಅಭಿನಂದನ ಗ್ರಂಥದ ಸಾಧ್ಯತೆಗಳು ಹಲವು. ಎಲ್ಲವೂ ಒಂದು ಗ್ರಂಥದಲ್ಲಿ ಸಾಧ್ಯವಲ್ಲ. ಒಂದೊಂದು ಸಂದರ್ಭ, ಉದ್ದೇಶ, ಮಿತಿಗಳಲ್ಲಿ ಆಗುತ್ತವೆ. ಅವುಗಳೆಲ್ಲವೂ ಮಹತ್ತ್ವದವುಗಳೇ ಆಗಿವೆ.
ಈ ಉಪಕ್ರಮವು ಜಬ್ಬಾರ್ ಅವರ ಕುರಿತಾದ ವ್ಯಾಪಕ ಅಭಿಮಾನ, ಅಂಗೀಕಾರಗಳ ಒಂದು ಅಭಿವ್ಯಕ್ತಿ. ಸಾಂಸ್ಕೃತಿಕವಾಗಿಯೂ ಮುಖ್ಯ ವಿದ್ಯಮಾನ.ಇದಕ್ಕಾಗಿ ಪ್ರಕಾಶಕ, ಸಂಪಾದಕರನ್ನು ಅಭಿನಂದಿಸುತ್ತೇನೆ.
ಓರ್ವ ವಿಶಿಷ್ಟ ಕಲಾವಿನ, ಸಹ ಕಲಾವಿದನ ಅಭಿನಂದನ ಗ್ರಂಥಕ್ಕೆ ಮುನ್ನುಡಿ ಬರೆಯುವ ಅವಕಾಶ ಒಂದು ಗೌರವ, ಒಂದು ಸಮ್ಮಾನವೇ ಆಗಿದೆ. ಅದಕ್ಕಾಗಿ ಕೃತಜ್ಞತೆಗಳು.
|| ಸರ್ವಂ ಶುಭಂ ||
ಡಾ.ಎಂ. ಪ್ರಭಾಕರ ಜೋಶಿ
ಭಾದ್ರಪದ ಶುಕ್ಲ ಚತುರ್ದಶಿ
ಹುಣ್ಣಿಮೆ
೧೮.೦೯.೨೦೨೪