ಡಾ.ಎಂ.ಪ್ರಬಾಕರ ಜೋಶಿ

ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ನೀಡುವ ಪ್ರಸಕ್ತ ಸಾಲಿನ ‘ಪಟ್ಲ ಪ್ರಶಸ್ತಿ’ಗೆ ಹಿರಿಯ ವಿದ್ವಾಂಸ, ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಬಾಕರ ಜೋಶಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರ ಪುರಸ್ಕಾರಗಳನ್ನೊಳಗೊಂಡಿದೆ. ಜೂನ್ 2 ರಂದು ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯುವ ‘ಯಕ್ಷಧ್ರುವ ಪಟ್ಲ ಸಂಭ್ರಮ -2019’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ನಿಟ್ಟೆ ವಿವಿ ಕುಲಪತಿ ಡಾ. ಎನ್. ವಿನಯ್ ಹೆಗ್ಡೆ ‘ಯಕ್ಷಧ್ರುವ ಪಟ್ಲ ಸಂಭ್ರಮ ಉದ್ಘಾಟಿಸಲಿದ್ದಾರೆ. ಉದ್ಯಮಿ ಕೆ.ಎಂ.ಶೆಟ್ಟಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಡಾ. ಸತೀಶ್ ರೈ ಆರೋಗ್ಯ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಸಂಜೆ 5ಕ್ಕೆ ಅಗರಿ ಶ್ರೀನಿವಾಸ ಭಾಗವತ ವೇದಿಕೆಯಲ್ಲಿ ಖ್ಯಾತ ವೈದ್ಯ ಪ್ರೊ. ಡಾ. ಎ.ಎ. ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಇದೇ ಸಂದರ್ಭ ಗತವರ್ಷದಲ್ಲಿ ಮೃತರಾದ ತೆಂಕುಬಡಗಿನ 10ಕಲಾವಿದರ ಕುಟುಂಬಗಳಿಗೆ ಯಕ್ಷಧ್ರುವ ಕಲಾ ಗೌರವ -2019 ಪುರಸ್ಕಾರ ತಲಾ 50 ಸಾವಿರ ರೂ. ಗೌರವಧನ, 15 ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಸಹಾಯಧನ, ಅಪಘಾತ ವಿಮಾ ಯೋಜನೆ, ಕಲಾವಿದರಿಗೆ ವೈದ್ಯಕೀಯ ನೆರವು, ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬಂಗಾರದ ಪದಕ ಪ್ರದಾನ ಮತ್ತು 200 ರಿಂದ 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಇನ್ನಿತರ ಸೇವಾಕಾರ್ಯಗಳು ನಡೆಯಲಿದೆ. ಬೆಳಗ್ಗೆ 8ರಿಂದ ರಾತ್ರಿ 12ರವರೆಗೆ ಕುರುಕ್ಷೇತ್ರಕ್ಕೊಂದು ಆಯೋಗ ವಿಶಿಷ್ಟ ಯಕ್ಷಗಾನ ಪ್ರಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಪ್ರಥಮ ಬಾರಿಗೆ ತೆಂಕು ಬಡಗಿನ ಕಲಾವಿದರಿಗೆ ಮೇ 28 ರಂದು ಮಂಗಳಾ ಕ್ರೀಡಾಂಗಣದಲ್ಲಿ ಒಂದು ದಿನದ ಕ್ರೀಡೋತ್ಸವ ಆಯೋಜಿಸಲಾಗಿದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ ಕೆ. ಅಡ್ಯಾರ್, ಸುದೇಶ್ ಕುಮಾರ್ ರೈ, ಡಾ. ಮನು ರಾವ್, ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ರಾಜೀವ ಪೂಜಾರಿ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Share This