ಹಿರಿಯ ವಿದ್ವಾಂಸ, ಅರ್ಥಧಾರಿ, ಸಂಶೋಧಕ ಡಾ. ಎಂ.ಪ್ರಭಾಕರ ಜೋಶಿ ಅವರಿಗೆ ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ಬಂಟ್ವಾಳ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ವತಿಯಿಂದ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿಯನ್ನು ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಡಾ. ಜೋಶಿ, ಕಲ್ಹಣನ ರಾಜತರಂಗಿಣಿಯನ್ನು ಅನುವಾದಿಸಿದ ಹಿರಿಮೆಯ ದಿ.ನೀರ್ಪಾಜೆಯವರು ಜೀವನದುದ್ದಕ್ಕೂ ಆದರ್ಶಗಳನ್ನು ಪಾಲಿಸಿದವರು. ಅಂಥವರ ಹೆಸರಲ್ಲಿ ದೊರಕುವ ಪ್ರಶಸ್ತಿ ಸಾರ್ಥಕ್ಯ ಭಾವ ಮೂಡಿಸುತ್ತದೆ ಎಂದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ, ಬಡಜನರ ಸಂಕಷ್ಟಗಳನ್ನು ಅರಿತು ಅವರೊಳಗೊಂದಾಗಿ ಬೆರೆತು ಸ್ಪಂದಿಸುವ ದಿ.ನೀರ್ಪಾಜೆಯವರ ಬದುಕು ಇತರರಿಗೆ ಆದರ್ಶಪ್ರಾಯವಾಗಿತ್ತು ಎಂದರು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಹಿರಿಯ ಅರ್ಥಧಾರಿ ಜಬ್ಬಾರ್ ಸಮೊ ಸಂಪಾಜೆ ಡಾ.ಜೋಶಿಯವರ ಅಭಿನಂದನಾ ಭಾಷಣ ಮಾಡಿ, ಬಹುಮುಖ ಪ್ರತಿಭಾವಂತರಾದ ಜೋಶಿ, ಪ್ರಬುದ್ಧವಾದ ನಿಲುವಿನವರು ಎಂದರು. ಗೌರವ ಅತಿಥಿಗಳಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಅಜಕ್ಕಳ ಗಿರೀಶ ಭಟ್ಟ, ಹಿರಿಯ ಅರ್ಥಧಾರಿ ಉಜಿರೆ ಅಶೋಕ್‌ ಭಟ್,  ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ನೀರ್ಪಾಜೆ ಭೀಮ ಭಟ್ಟರ ಪತ್ನಿ ಶಂಕರಿ ಬಿ.ಭಟ್ ಉಪಸ್ಥಿತರಿದ್ದರು.  ಹಿರಿಯ ಕವಿ ಸುಬ್ರಾಯ ಭಟ್ ನೆಕ್ಕರೆಕಳೆಯ ನೀರ್ಪಾಜೆ ಸಂಸ್ಮರಣೆ ಮಾಡಿದರು. ಇದೇ ವೇಳೆ ಎಂ.ಗೋಪಾಲಕೃಷ್ಣ ಭಟ್ಟರ ಕೃತಿ ಸ್ವಗತ ಮತ್ತು ಇತರ ಬರಹಗಳು, ದಿ. ಮುಳಿಯ ತಿಮ್ಮಪ್ಪಯ್ಯನವರ ಪಶ್ಚಾತ್ತಾಪ ಕೃತಿಯ ಹವಿಗನ್ನಡದ ರೂಪಾಂತರ, ರೇಷ್ಮಾ ಭಟ್ ಅವರ ಕಥಾಸಂಕಲನ ಕಥಾವ್ಯವಕಲನ  ಬಿಡುಗಡೆಗೊಂಡಿತು. ಮುಳಿಯ ರಾಘವಯ್ಯ ಮತ್ತು ಸುಭಾಷಿಣಿ ಕೃತಿ‌ಪರಿಚಯ ಮಾಡಿದರು.

ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗದ ಅಧ್ಯಕ್ಷ ಸುದರ್ಶನ ಜೈನ್, ಕಸಾಪ ತಾಲೂಕು ಅಧ್ಯಕ್ಷ ‌ಕೆ.ಮೋಹನ ರಾವ್, ಪ್ರಮುಖರಾದ ವಿ.ಸು.ಭಟ್ ಉಪಸ್ಥಿತರಿದ್ದರು. ಡಾ.ನಾಗವೇಣಿ ಮಂಚಿ ಮತ್ತು ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಮೋಹನ ಕೆ. ಶ್ರೀಯಾನ್ ವಂದಿಸಿದರು.

error: Content is protected !!
Share This