
‘ಯಕ್ಷಗಾನ ಕಲೆಯಿಂದು ಬಹುಮುಖಿ ಆಯಾಮಗಳನ್ನು ಹೊಂದಿದೆ. ಪ್ರದರ್ಶನ, ಪ್ರಯೋಗ, ಸಂಶೋಧನೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಬೆಳೆದಿದೆ. ಈ ಬೆಳವಣಿಗೆಗೆ ಸಮೂಹ ಮಾಧ್ಯಮಗಳ ಕೊಡುಗೆ ಬಹಳ ಇದೆ. ಇಂದು ಯಕ್ಷಗಾನ ಕೇವಲ ಲೋಕಲ್ ಆಗಿ ಉಳಿದಿಲ್ಲ ; ಅದು ಗೋಕಲ್ ಆಗಿದೆ’ ಎಂದು ಯಕ್ಷಗಾನ ವಿಮರ್ಶಕ ಹಾಗೂ ಹಿರಿಯ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.
ಸಂತ ಅಲೋಶಿಯಸ್ ಕಾಲೇಜಿನ ‘ರೇಡಿಯೋ ಸಾರಂಗ್’ ಸಮುದಾಯ ಬಾನುಲಿಯ ‘ಹೃದಯ ರಾಗ’ ನೇರ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂವಾದವನ್ನು ನಡೆಸಿಕೊಟ್ಟರು.
ಅವರು ಮಾತನಾಡಿ ‘ಯಕ್ಷಗಾನ ರಂಗದಲ್ಲಿರುವವರು ಕೇವಲ ಗಳಿಕೆ, ಜನಪ್ರಿಯತೆಗಳಿಗೆ ಹಾತೊರೆಯದೆ ಪರಿಶ್ರಮ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ’ ಎಂದರು. ‘ವರ್ಷದ ಎಲ್ಲಾ ದಿನಗಳಲ್ಲಿ ನಿಗದಿತ ಅವಧಿಯಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಮೂಲಕ ರೇಡಿಯೋ ಸಾರಂಗ್ ಕಲಾಸಕ್ತರ ಮನಗೆದ್ದಿದೆ’ ಎಂದವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಮುದಾಯ ಬಾನುಲಿಯ ನಿರ್ದೇಶಕ ಫಾ.ಮೆಲ್ವಿನ್ ಪಿಂಟೋ ಅವರು ಡಾ.ಎಂ. ಪ್ರಭಾಕರ ಜೋಶಿ ಅವರಿಗೆ ‘ಸಾರಂಗ್ ಸಮ್ಮಾನ್’ ನೀಡಿ ಗೌರವಿಸಿದರು. ಆರ್.ಜೆ. ಅಭಿಷೇಕ್ ಶೆಟ್ಟಿ ಸ್ವಾಗತಿಸಿ, ಎಡ್ವರ್ಡ್ ಲೋಬೊ ತೊಕ್ಕೊಟ್ಟು ವಂದಿಸಿದರು. ಬಿಂದಿಯಾ ಕುಲಾಲ್ ನಿರೂಪಿಸಿದರು. ರೋಷನ್ ಕುಲಶೇಖರ, ಸೈಫುಲ್ಲಾ ಕುತ್ತಾರ್, ಶ್ವೇತಾ,ಎಲಿಟಾ ಉಪಸ್ಥಿತರಿದ್ದರು.