- ಡಾ. ಎಂ. ಪ್ರಭಾಕರ ಜೋಶಿ
ಗೋಪಾಲ ನಾಯ್ಕ ಹೇಳಿರುವ ಸಿರಿ ಸಂಧಿ – ಕನ್ನಡ ಪ್ರಸ್ತಾವನೆ ಮತ್ತು ತುಳು ಪಠ್ಯ — ಈ ಕೃತಿಯು ಸಿರಿ ಕತೆಯ ಸಮಗ್ರ ಕನ್ನಡಾನುವಾದ, ಮೂಲ ತುಳು ಪಠ್ಯ ಮತ್ತು ಮೌಖಿಕ ಪರಂಪರೆಯ ಕಾವ್ಯದ ಮೌಲ್ಯಯುತ ವಿಶ್ಲೇಷಣೆಯನ್ನು ಒಳಗೊಂಡ ಬೆಲೆಯುಳ್ಳ ಕೊಡುಗೆಯಾಗಿದೆ. ಸಿರಿ ಪಠ್ಯಗಳು ಮತ್ತು ಸಿರಿ ಆಚರಣೆಯ ಕ್ಷೇತ್ರಗಳ ಮಾಹಿತಿ, ಸಂಪನ್ಮೂಲ ವ್ಯಕ್ತಿಯಾಗಿದ್ದ ಸಿರಿ ಗಾಯಕರ ಜ್ಞಾನದ ಪ್ರಸ್ತಾವ ಮತ್ತು ಚಿನ್ನಪ್ಪ ಗೌಡರ ದೀರ್ಘ ಕಾಲದ ಸಿರಿ ಅಧ್ಯಯನದ ಸ್ವಾನುಭವ ಕಥನ ಇವು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಸಿರಿ ಮಹಾಕಾವ್ಯದ ಅಥವಾ ಪುರಾಣದ ಬಹುಪಠ್ಯಗಳ ಪ್ರಕಟನೆ ಮತ್ತು ಈ ಬಗೆಯ ವಿಶ್ಲೇಷಣಾತ್ಮಕವಾದ ಈ ಅಧ್ಯಯನವು ನಾಡುನೆಲದ ಪುರಾಣಗಳ ಅಧ್ಯಯನ ಪರಂಪರೆಯ ಬಹುಮುಖ್ಯ ಘಟ್ಟವಾಗಿದೆ. ಈ ಸಂಪುಟದ ಪೀಠಿಕೆಯ ಭಾಗ, ಪಠ್ಯದ ಬಹುಮುಖೀ ವಿಶ್ಲೇಷಣೆ, ಅನ್ವಯೀ ವಿಷಯಗಳ ಜೋಡಣೆ ಸಮನ್ವಯ ಎಲ್ಲವೂ ಚೊಕ್ಕವಾಗಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಪಂಥ ಪೌರುಷಗಳ ಪ್ರದರ್ಶನಕ್ಕೆ ಹೋಗದ, ವಿವಿಧ ಅಭಿಮತಗಳ ಸಮತೂಕದ ದಾಖಲಾತಿಯನ್ನು ಚಿನ್ನಪ್ಪ ಗೌಡರು ಮಾಡಿದ್ದಾರೆ.

ಈ ಸಂಪುಟದ ಹತ್ತು ಅಧ್ಯಾಯಗಳಲ್ಲಿ ದಾಖಲಾಗಿರುವ ಮಾಹಿತಿಗಳು ಮತ್ತು ಅವುಗಳ ಅತಿಕರಣ ಇಲ್ಲದ ವಿಶ್ಲೇಷಣೆ, ಒಬ್ಬನೇ ಗಾಯಕ ಹಾಡಿದ ಮತ್ತು ಹೇಳಿದ ಸಿರಿ ಸಂಧಿಯ ಎರಡು ಪಠ್ಯಗಳ ತೌಲನಿಕ ತಖ್ತೆ, ಪಾತ್ರ ವಿವೇಚನೆ, ಕಾವ್ಯದಲ್ಲಿ ಬರುವ ವರ್ಣನೆಗಳು ಮತ್ತು ಅವುಗಳ ಪುನರಾವರ್ತನೆಯ ವಿನ್ಯಾಸಗಳು, ಕಾವ್ಯದ ವಸ್ತು ಮತ್ತು ವ್ಯಕ್ತಿತ್ವ ವಿಮರ್ಶೆ ಇಲ್ಲೆಲ್ಲ ಚಿನ್ನಪ್ಪ ಗೌಡರ ಅಸಾಧಾರಣ ವಿಮರ್ಶನ ಪರಿಕಲ್ಪನೆ , ನ್ಯಾಯೋಚಿತ ಒಳನೋಟಗಳಿವೆ. ಸಿರಿ ಮಹಾಕಾವ್ಯದ ಪಠ್ಯೀಕರಣ ಮತ್ತು ವಿಶ್ಲೇಷಣೆಗಳ ಉತ್ಕೃಷ್ಟವಾದ ಕೃತಿಯಾಗಿ ಮತ್ತು ಅಧ್ಯಯನದ ಅನನ್ಯ ವಿಧಾನವೊಂದಕ್ಕೆ ಮಾದರಿಯಾಗಿ ಈ ಕೃತಿ ಗಮನಸೆಳೆಯುತ್ತದೆ. ಇದೊಂದು ಪಕ್ವ ಸಾಧನೆ. ಬರವಣಿಗೆಯಲ್ಲಿ ಅನಗತ್ಯ ಸಂಕೀರ್ಣತೆಗಳಿಲ್ಲ. ಜಾರ್ಗನ್ ಗಳಿಲ್ಲ. ಸುಬೋಧ, ಸರಳ- ಗಹನ ಶೈಲಿ ಆದರ್ಶ ಬರಹದ ಒಂದು ನೀತಿ ಎಂಬಂತಿದೆ.
