ಶ್ರೀಮದೆಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರ ದ್ವಿತೀಯ ಚಾತುರ್ಮಾಸದ ಸಲುವಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ(ರಿ)ಸಂಪಾಜೆ ಪ್ರಾಯೋಜಿತ ಶ್ರೀಕೃಷ್ಣ ಚರಿತಮ್ ತಾಳಮದ್ದಳೆ ಸಪ್ತಾಹ ವರ್ತಮಾನ ಕಾಲಕ್ಕೆ ಬೌದ್ಧಿಕ ಮತ್ತು ವಾಚಿಕ ಶ್ರೇಷ್ಠತೆಯ ಮಾದರಿ ತಾಳಮದ್ದಳೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ನಾಲ್ಕು ತಲೆಮಾರಿನ ಪ್ರಗಲ್ಭ ಅರ್ಥಧಾರಿಗಳು ಒಂದೇ ವೇದಿಕೆಯಲ್ಲಿ ವಾಚಿಕ ವೈವಿಧ್ಯಗಳನ್ನು,ಅದರೊಳಗಿನ ಸಸೂಕ್ಷ್ಮ ತಾರ್ಕಿಕ ಮಥನವನ್ನು ಮೆರೆಸಿದ್ದು ಸಪ್ತಾಹದ ವೈಶಿಷ್ಟ್ಯ.

ನಿನ್ನೆ ನಡೆದ ‘ಮಾಗಧವಧೆ’ ಉಡುವೆಕೋಡಿ ಸುಬ್ಬಪ್ಪಯ್ಯನವರ ಮಾಗಧನಿರಬಹುದೆಂದು ಬಹು ನಿರೀಕ್ಷಿತವಾಗಿತ್ತು. ಆದರೆ ಅವರ ಅನುಪಸ್ಥಿತಿಯಲ್ಲಿ ಮಾಗಧನಾಗಿ ವೇದ, ವೇದಾಂತ, ವೈಚಾರಿಕ ಸಿದ್ದಾಂತಗಳ ಮಾತಿನಮಳೆಗೆರೆದವರು ವಿದ್ವಾಂಸ ಡಾ. ಪ್ರಭಾಕರ ಜೋಷಿ. ಅವರು ಶೇಣಿಯವರ ಮಾಗಧನೆದುರು ಕೃಷ್ಣನಾಗಿ ಅರಳಿದವರು. ಮಾಗಧನಾಗಿ ಶೇಣಿ ಯಾವ ಪಥ ಹಿಡಿದಿದ್ದಾರೋ ಅದೇ ಪಥದಲ್ಲಿನಡೆದ ಜೋಷಿಯವರ ಮಾಗಧನಲ್ಲಿ ಸೂಕ್ಷ್ಮ ಅರಿವುಳ್ಳ, ಅರ್ಥಪೂರಿತ ಮಾತುಗಳಿದ್ದವು.

ಅದರಲ್ಲಿ ವೇದೋಪನಿಷತ್ತು, ಮೀಮಾಂಸೆ, ಪುರುಷಾರ್ಥ ಜಿಜ್ಞಾಸೆಇತ್ತು. ಪ್ರಾಕೃತಿಕ ವಿಜ್ಞಾನ ದ ತತ್ವಗಳೂ ಇತ್ತು. ಅವರೊಡನೆ ಕೃಷ್ಣನಾಗಿ ಎದುರ್ಗೊಂಡವರು ಹಿರಿಯ ಅರ್ಥದಾರಿ ಶಂಭುಶರ್ಮ ವಿಟ್ಲ.

ಇವರಿಬ್ಬರೂ ಜತೆಗೂಡದೇ, ಮುಖಾಮುಖಿ ಆಗದೇ ದಶಕ ದಾಟಿದೆ. ಇಬ್ಬರೂ ಬಿಟ್ಟುಕೊಡದ ಮಾತುಗಾರರು. ಇವರನ್ನು ಮತ್ತೆ ಜತೆಗೂಡಿಸಿದ ಕೀರ್ತಿ ಈ ತಾಳಮದ್ದಳೆಯದ್ದು.

ಶಂಭುಶರ್ಮರದ್ದು ಚುಟುಕಾದ ಮಾತಿನ ಶೈಲಿ. ಅದು ಸಂವಾದ ಬೆಳೆಸುವ ವಾಚಿಕತೆ. ಪರಸ್ಪರ ನುಡಿಸುವ ಕ್ರಮ. ತಾಳಮದ್ದಳೆಯ ವಾಕ್ ದೃಶ್ಯಪೋಣಿಕೆಗಿದು ಅಪೇಕ್ಷಣೀಯ.

ಉಳಿದಂತೆ ಭೀಮನಾಗಿ ಸೂರಿಕುಮೇರು ಗೋವಿಂದ ಭಟ್ಟರು. ಅವರು ಬಯಲಾಟದ ರಂಗದಲ್ಲಿ ಮಾಗಧನಾಗಿ ಮೆರೆದವರು. ಆದ್ದರಿಂದ ಭೀಮನಡೆ ಗೊತ್ತುಳ್ಳವರು. ಅದನ್ನು 87ರ ಇಳಿ ಹರೆಯದಲ್ಲೂ ಅರ್ಥಪೂರ್ಣ ವಾಗಿ ಮೆರೆಸಿದ ಅವರು ಪ್ರಶಂನೀಯರು. ಅರ್ಜುನನಾಗಿ ಸವ್ಯಸಾಚಿ ಯುವಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ. ಕಳೆದ ಕಾಲದ ಪ್ರಗಲ್ಭ ಚತುರಮತಿ ಕಲಾವಿದರೊಂದಿಗೆ ರಂಗಹಂಚುವ ಅವಕಾಶ ಇವರಿಗೆ ಸಿಕ್ಕಿದ್ದು, ಅವರೊಳಗಣ ಪ್ರತಿಭೆಗೆ ಧ್ಯೋತಕ.

ವ್ಯಕ್ತಿಪ್ರತಿಷ್ಠೆ, ವೈಯ್ಯಕ್ತಿಕ ತರ್ಕ ಗಳಿಲ್ಲದೇ ಔಚಿತ್ಯಪ್ರಜ್ಞೆಯಿಂದ ಮಾತುಗಳು ಮಳೆಗೆರೆದು ‘ಮಾಗಧವಧೆ’ಯನ್ನು ಗೆಲ್ಲಿಸಿದೆ.

ಎಡನೀರು ಮಠದ ತಾಳಮದ್ದಳೆಗಳೆಂದರೆ ಕಲಾವಲಯದ ನುರಿತ, ಮೇರು ಪ್ರತಿಭೆಗಳೆಲ್ಲ ಪಾಲ್ಗೊಳ್ಳುತ್ತಿದ್ದ ಅಪೂರ್ವ ಕೂಟಗಳು. ಆ ಗತ ಪರಂಪರೆಗೆ ಏನೇನೂ ಧಕ್ಕೆ ಆಗದೇ ಅದೇ ಹಾದಿಯಲ್ಲಿ ವರ್ತಮಾನದ ತಾಳಮದ್ದಳೆಗಳು ಮುನ್ನಡೆಯುತ್ತಿವೆ.

ನಿನ್ನೆ ನಡೆದ ಮಾಗಧವಧೆ ತಾಳಮದ್ದಳೆ ಯ ಹಿಮ್ಮೇಳದಲ್ಲಿ ಏರುಶ್ರುತಿಯ ಸ್ವರಗಂಭೀರತೆಯ ಹೊಸಮೂಲೆ ಮತ್ತು ಸಿರಿಬಾಗಿಲು ಭಾಗವತಿಕೆ ನಡೆಸಿದರೆ ಹಿಮ್ಮೇಳದಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಶ್ರೀಧರ ವಿಟ್ಲ ಚೆಂಡೆ, ಮದ್ದಳೆ ನುಡಿಸಿದರು.

ತಾಳಮದ್ದಳೆಯ ಅರ್ಥಗಳು ಕೇವಲ ಪಾತ್ರಾರ್ಥಗಳಾಗದೇ ಅದು ಪಾತ್ರಧಾರಿಯ ಅರಿವಿನ ವಿಶ್ಲೇಷಣೆಗಳಾದಗಲೇ ಆಖ್ಯಾನಕ್ಕೊಂದು ಹೊಸ ಭಾವ. ಭಾಷೆ ಒದಗುತ್ತದೆ. ಈ ಅರ್ಥದಿಂದಲೇ ತಾಳಮದ್ದಳೆ ಯ ವಾಚಿಕವನ್ನು ಕಾವ್ಯ ಎನ್ನುತ್ತೇವೆ. ಇದಕ್ಕೊಂದು ಮಾದರಿ ಎಂಬಂತೆ ಎಡನೀರಿನ ಮಾಗಧವಧೆ ಅರಳಿದೆ. ಬಹುಕಾಲ ಮನದಲ್ಲುಳಿಯಲಿದೆ.

ಎಂ. ನಾ. ಚಂಬಲ್ತಿಮಾರ್@ಕಣಿಪುರ

error: Content is protected !!
Share This