ಕೆರೆಮನೆ ಯಕ್ಷಗಾನ ಮಂಡಳಿ, ನಾಟ್ಯೋತ್ಸವ ಸಲಹಾ ಸಮಿತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿಯಿಂದ ಘೋಷಣೆ

2019 ರ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಭಾರತದ ಕಲೆ ಮತ್ತು ಸಂಸ್ಕೃತಿಗೆ ಅನನ್ಯ ಕೊಡುಗೆಯನ್ನು ನೀಡಿರುವ ಪ್ರಸಿದ್ಧ ಭರತನಾಟ್ಯ ಕಲಾವಿದೆ, ಕಲಾ ಸಂಶೋಧಕರೂ ಆದ ಡಾ. ಪದ್ಮಸುಬ್ರಹ್ಮಣ್ಯ ಅವರಿಗೆ ಹಾಗೂ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಯಕ್ಷಗಾನದ ಮೇರು ಚಂಡೆ ಮತ್ತು ಮದ್ದಳೆ ವಾದಕರೂ, ಹಿರಿಯ ಕಲಾವಿದರೂ ಆದ ಕೃಷ್ಣ ಯಾಜಿ ಇಡಗುಂಜಿಗೆ ನೀಡಲು ಮಂಡಳಿ ಹಾಗೂ ನಾಟ್ಯೋತ್ಸವ ಸಲಹಾ ಸಮಿತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ನಿರ್ಧರಿಸಿದೆ.

ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ರೂ. ಇಪ್ಪತ್ತೈದು ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಇತರ ಗೌರವಗಳನ್ನು ಒಳಗೊಂಡಿದ್ದು ಕಲೆ, ಸಂಸ್ಕೃತಿ, ಸಾಹಿತ್ಯ ಹೀಗೆ ಸಕಲ ಕಲಾಕ್ಷೇತ್ರಕ್ಕೆ ವಿಸ್ತಾರಗೊಂಡಿದೆ. 2004ರಲ್ಲಿ ಸ್ಥಾಪನೆಯಾಗಿ ಮೊದಲ ಪ್ರಶಸ್ತಿ ಗುರು ಡಾ. ಮಾಯಾರಾವ್ ನಡರಾಜನ್ ಬೆಂಗಳೂರು (ಶಾಸ್ತ್ರೀಯ ನೃತ್ಯ) ಇವರಿಗೆ, ನಂತರ 2005ರ ಪ್ರಶಸ್ತಿಯನ್ನು ನೆಬ್ಬೂರು ನಾರಾಯಣ ಭಾಗವತ (ಯಕ್ಷಗಾನ) ಇವರಿಗೆ, 2006 ರ ಪ್ರಶಸ್ತಿಯನ್ನು ಖ್ಯಾತರಂಗ ನಟ ಏಣಗಿ ಬಾಳಪ್ಪ ಇವರಿಗೆ, 2007ರ ಪ್ರಶಸ್ತಿಯನ್ನು ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ (ಸಂಗೀತ), 2008ರ ಪ್ರಶಸ್ತಿಯನ್ನು ಕೆ.ಎಸ್. ನಾರಾಯಣ ಆಚಾರ್ಯ ಮೈಸೂರು (ಸಾಹಿತ್ಯ), 2009ರ ಪ್ರಶಸ್ತಿಯನ್ನು ಹೊಸ್ತೋಟ ಮಂಜುನಾಥ ಭಾಗ್ವತ್ ಶಿರಸಿ (ಯಕ್ಷಗಾನ), ೨೦೧೦ರ ಪ್ರಶಸ್ತಿಯನ್ನು ಸಂತ ಭದ್ರಗಿರಿ ಅಚ್ಯುತದಾಸ ಬೆಂಗಳೂರು (ಹರಿಕಥಾ ವಿದ್ವಾಂಸರು), 2011ರ ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಬೆಂಗಳೂರು, 2012ರ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ಟ, 2013ರ ಪ್ರಶಸ್ತಿಯನ್ನು ಬಡಗುತಿಟ್ಟಿನ ಯಕ್ಷಗಾನ ಕಲಾವಿದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, 2014ರ ಪ್ರಶಸ್ತಿಯನ್ನು ಪದ್ಮಶ್ರೀ ಸುರಭಿ ನಾಗೇಶ್ವರ ರಾವ್ ಹೈದರಾಬಾದ್, 2015ರ ಪ್ರಶಸ್ತಿ ದೆಹಲಿಯ ಸ್ಟಿಕ್ ಮೆಕೆ ಸಂಸ್ಥೆ, 2016ರ ಪ್ರಶಸ್ತಿಯನ್ನು ಮೇಲಟ್ಟೂರಿನ ಕಲೈಮಾಮಣಿ ಎಸ್. ನಟರಾಜ, ತಮಿಳುನಾಡು ಹಾಗೂ 2017ರ ಪ್ರಶಸ್ತಿಯನ್ನು ಕರ್ಕಿಯ ಹಾಸ್ಯಗಾರ ಮೇಳಕ್ಕೆ, 2018ರ ಪ್ರಶಸ್ತಿ ನೀನಾಸಂನ ಹೆಗ್ಗೋಡು ಸಂಸ್ಥೆಗೆ ನೀಡಲಾಗಿದೆ.

2020 ಫೆಬ್ರವರಿ 20 ರಿಂದ 24ರವರೆಗೆ ಗುಣವಂತೆ ಯಕ್ಷಾಂಗಣದಲ್ಲಿ ನಡೆಯಲಿರುವ 5 ದಿನಗಳ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಸಂದರ್ಭದಲ್ಲಿ ಫೆಬ್ರವರಿ 24ರಂದು ಆಗಮಿಸುವ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕೃಷ್ಣ ಯಾಜಿ ಇಡಗುಂಜಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ:

ಕೆರೆಮನೆ ಯಕ್ಷಗಾನ ಮಂಡಳಿಯ ಸಮರ್ಥ ಯಕ್ಷಗಾನ ಕಲಾವಿದ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮಿಂಚಿ ಮರೆಯಾದ, ಕೆರೆಮನೆ ಶಿವರಾಮ ಹೆಗಡೆಯವರ ಕಿರಿಯ ಪುತ್ರ ಕೆರೆಮನೆ ಗಜಾನನ ಹೆಗಡೆ ಇವರ ಹೆಸರಿನಲ್ಲಿ ಕಳೆದ 6 ವರ್ಷದಿಂದ (2012) ಯಕ್ಷಗಾನ ಕ್ಷೇತ್ರಕ್ಕೆ ಮೀಸಲಾದ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯು ರೂ. ಹದಿನೈದು ಸಾವಿರ ನಗದು, ಪ್ರಶಸ್ತಿ ಪತ್ರ, ಶಾಲು ಇತ್ಯಾದಿ ಗೌರವಗಳನ್ನು ಹೊಂದಿದೆ.

2019ರ ಈ ಪ್ರಶಸ್ತಿಯನ್ನು ಮಂಡಳಿ ಯಕ್ಷಗಾನದ ಮೇರು ಚಂಡೆ ಮತ್ತು ಮದ್ದಳೆ ವಾದಕರೂ, ಹಿರಿಯ ಕಲಾವಿದರೂ ಆದ ಕೃಷ್ಣ ಯಾಜಿ ಇಡಗುಂಜಿ ಇವರಿಗೆ ನೀಡಲಿದೆ.

error: Content is protected !!
Share This