ಡಾ.ಪ್ರಭಾಕರ ಜೋಷಿ ಯಕ್ಷಗಾನ ಕ್ಷೇತ್ರದ ಪ್ರಮುಖ “ಧ್ವನಿ”. ಇವರ ಅಧ್ಯಯನ ವ್ಯವಸಾಯ ತತ್ವಶಾಸ್ತ್ರ ಕ್ಷೇತ್ರಕ್ಕೂ ಹಬ್ಬಿದೆ. ಅದರಲ್ಲೂ ಭಾರತೀಯ ತತ್ವಶಾಸ್ತ್ರದ ಕುರಿತಂತೆ ಒಂದು ರೀತಿಯ obsessionನಿಂದ ಕೂಡಿದ ಆಸಕ್ತಿ ಮತ್ತು ತತ್ವಶಾಸ್ತ್ರದ ಕುರಿತಂತೆ ಒಂದು ಶಬ್ದ ನಾವಾಡಿದರೆ ತಾಸುಗಟ್ಟಲೆ ಅದರ ಕುರಿತು ಮಾತಾಡುವ ಉಮೇದು ಡಾ.ಜೋಷಿಯವರದ್ದು. ಇದು ನನ್ನ ವೈಯಕ್ತಿಕ ಅನುಭವ: ಒಂದುವರೆ ತಾಸು ಬಿಡದೆ ಭಾರತೀಯ ತತ್ವಶಾಸ್ತ್ರದ ಕುರಿತಾಗಿ ಕೇಳಿದ ಸಂತೋಷ ನನ್ನದು. ಅವರ ಮಾತು ಚುಟುಕು. ವಿಷಯದ ಆಳ ಅಗಾಧ. ಮದ್ದಿನ ಗುಳಿಗೆಗಳಂತಹಾ ಮಾತು. ಅದೇ ತರಹವೇ ಅವರ ಬರಹವೂ. ಸೂತ್ರರೂಪದಂತೆ. ಎಷ್ಟು ಬೇಕೋ ಅಷ್ಟು. No nonsense. ಭಾರತೀಯ ತತ್ವಶಾಸ್ತ್ರ ಪ್ರವೇಶ ಇದು ಅವರ ಇನ್ನೊಂದು ಗ್ರಂಥ ಪ್ರೊ.ಎಂ.ಎಂ.ಹೆಗಡೆಯವರೊಂದಿಗೆ.

ಆಕೃತಿ ಆಶಯ ಪಬ್ಲಿಕೇಷನ್ಸ್, ಮಂಗಳೂರು ಇವರು ಹೊರತಂದ ಡಾ.ಜೋಷಿಯವರ ಹೊಸ ಪುಸ್ತಕ “ತತ್ವ ಮನನ: ಧರ್ಮ, ತತ್ವದರ್ಶನ ಪುರಾಣ”. ನೂರಾತೊಂಭತ್ತೊಂದು ಪುಟಗಳಿಗೆ ಹರಡಿದ ವಿಚಾರಧಾರೆ. ಬೆಲೆ ಕೇವಲ ನೂರಾಎಂಭತ್ತು ರೂಪಾಯಿಗಳು.
ಹದಿನೇಳು ಅಧ್ಯಾಯಗಳು ಇಲ್ಲಿವೆ.

ಮೊದಲ ಅಧ್ಯಾಯದಲ್ಲಿ ಸಂಕ್ಷೇಪವಾಗಿ ಭಾರತೀಯ ತತ್ವಶಾಸ್ತ್ರದ ಪರಿಚಯ ಮಾಡಿಕೊಡುತ್ತಾರೆ. ಮೊದಲ ಅಧ್ಯಾಯದಲ್ಲಿ ಡಾ.ಜೋಷಿಯವರೆನ್ನುತ್ತಾರೆ ” ಭಾರತೀಯ ತತ್ವಶಾಸ್ತ್ರದಲ್ಲಿ ದೇವರನ್ನು ಒಪ್ಪುವುದು, ಒಪ್ಪದಿರುವುದು ಅಷ್ಟು ಮುಖ್ಯ ವಿಷಯವಲ್ಲ ಅಂದರೆ ಅಚ್ಚರಿಯಲ್ಲ. ಅದು ಪ್ರಮುಖ ಪ್ರಶ್ನೆಯಂತೂ ಅಲ್ಲ. ಜ್ಞಾನ ಮುಖ್ಯವೇ ಕರ್ಮವೇ? ವಸ್ತು ಸ್ವಭಾವ ನಿಯಮಗಳ ಯಾವುವು? ಮೋಕ್ಷದ ಸಾಧನೆಗೆ ಯಾವ ತಿಳಿವು. ಅದರ ಅನ್ವಯ ಇವು ಹೆಚ್ಚು ಮುಖ್ಯ? ಇವೇ ಪ್ರಧಾನವಾದವುಗಳು. ಪುರುಷಾರ್ಥಗಳು ಪ್ರಧಾನ. ” ಹೀಗೆ ಮೊದಲ ಅಧ್ಯಾಯದಲ್ಲಿ ಭಾರತೀಯ ತತ್ವ ಶಾಸ್ತ್ರದ ಒಂದು ಸ್ತೂಲ ಅವಲೋಕನ ದೊರಕುತ್ತದೆ. ವಿಸ್ತಾರವಾದ ಮತ್ತು ಗಂಭೀರ ಓದಿಗೆ ಬೇಕಾದ ಅಡಿಪಾಯ ಕಟ್ಟಿಕೊಡುತ್ತದೆ.

ಎರಡನೆಯ ಅಧ್ಯಾಯದಲ್ಲಿ ಬೌದ್ಧ ದರ್ಶನದ ಬಗ್ಗೆ ಬಹು ಸುಂದರವಾಗಿ ವಿವೇಚಿಸಿದ್ದಾರೆ. ಮೂರನೆಯ ಅಧ್ಯಾಯದಲ್ಲಿ ಶೈವದರ್ಶನದ ಕುರಿತಾಗಿ ವಿವೇಚಿಸಿದ್ದಾರೆ. ನಾಲ್ಕನೆಯ ಅಧ್ಯಾಯದಲ್ಲಿ ನಾಸ್ತಿಕ ದರ್ಶನದ ಕುರಿತು ಅತ್ಯಂತ ಆಸಕ್ತಿದಾಯಕ ಮತ್ತು ಕೆಲವು ಹೊಸ ಹೊಳಹನ್ನು ಕೊಡುವಂತಹಾ ವಿವೇಚನೆ ಇಲ್ಲಿದೆ. ಆಸ್ತಿಕ -ನಾಸ್ತಿಕ ಇವುಗಳ ವಿಚಾರದಲ್ಲಿ, ಪುಟ ಸಂಖ್ಯೆ ಎಪ್ಪತ್ತಾರರಲ್ಲಿ ರೋಚಕವಾದ ವಿಮರ್ಶೆಯನ್ನು ಡಾ.ಜೋಷಿಯವರ ಮಾಡಿದ್ದಾರೆ.

ಭಗವಾನ್ ಪರಶುರಾಮರ ಕುರಿತಾದ ಅಧ್ಯಾಯ ಆರರಲ್ಲಿದೆ. ಅಂತೆಯೇ ಚಿತ್ಪಾವನ ಬ್ರಾಹ್ಮಣರು ಮತ್ತು ಪರಶುರಾಮ ಹೀಗೆ ಚಿಂತಿಸುತ್ತಾ ಐತಿಹಾಸಿಕ ದೃಷ್ಟಿಯಿಂದ ಚಿತ್ಪಾವನ ಬ್ರಾಹ್ಮಣರ ಕುರಿತಾಗಿಯೂ ಇಲ್ಲಿ ವಿವೇಚಿಸಿದ್ದಾರೆ.

ಹೀಗೆ ಈ ಪುಸ್ತಕ ಭಾರತೀಯ ತತ್ವಶಾಸ್ತ್ರದ ಕುರಿತಾಗಿ ಆಸಕ್ತರಲ್ಲಿಯೂ ಮತ್ತು ಭಾರತೀಯ ಸಂಸ್ಕೃತಿ ಇತಿಹಾಸದ ಆಸಕ್ತರಿಗೆ ಅತ್ಯಂತ ಅಗತ್ಯದ ಓದಾಗಿ ಪರಿಣಮಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಮುಖ್ಯವಾಗಿ ಯಕ್ಷಗಾನ ಅರ್ಥಧಾರಿಗಳು ಈ ಗ್ರಂಥದಿಂದ ಖಂಡಿತವಾಗಿಯೂ ಉಪಕೃತರಾಗುತ್ತಾರೆ. ಒಳ್ಳೆಯ ಓದಿನ ಸಂತಸ ನಿಮ್ಮೊಂದಿಗೆ ಈ ಬರಹದೊಂದಿಗೆ ಹಂಚಿಕೊಂಡಿದ್ದೇನೆ.

ಕೃಷ್ಣಪ್ರಕಾಶ ಉಳಿತ್ತಾಯ
ಪೆರ್ಮಂಕಿ, ಉಳಾಯಿಬೆಟ್ಟು, ಮಂಗಳೂರು

error: Content is protected !!
Share This