ಡಾ. ಶಿಮಂತೂರು ನಾರಾಯಣ ಶೆಟ್ಟಿಗೆ 2018ರ ಪಟ್ಲ ಪ್ರಶಸ್ತಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಮೇ 27ರಂದು ಅಡ್ಯಾರು ಗಾರ್ಡನ್‌ನಲ್ಲಿ ನಡೆಯುವ ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ 2018ರ ಸಾಲಿನ ಪಟ್ಲ ಪ್ರಶಸ್ತಿಗೆ ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ.

ಶೇಣಿ ಗೋಪಾಲಕೃಷ್ಣ ಭಟ್ಟ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿಮಂತೂರು ನಾರಾಯಣ ಶೆಟ್ಟರಿಗೆ ಒಂದು ಲಕ್ಷ ರೂ. ನಗದು ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

ಸಮಾರಂಭದಲ್ಲಿ ಕುರಿಯ ಗಣಪತಿ ಶಾಸ್ತ್ರಿ, ಎಂ.ಕೆ. ರಮೇಶ್ ಆಚಾರ್ಯ, ಕುತ್ತೊಟ್ಟು ವಾಸು ಶೆಟ್ಟಿ, ಶೀಲಾ ಕೆ. ಶೆಟ್ಟಿ, ಆರ್ಗೋಡು ಮೋಹನದಾಸ ಶೆಣೈ, ಆನಂದ ಶೆಟ್ಟಿ ಐರಬೈಲು, ಪಾರೆಕೋಡಿ ಗಣಪತಿ ಭಟ್, ಮಹಾಲಕ್ಷ್ಮಿ ಡಿ. ರಾವ್ ಮೊದಲಾದವರನ್ನು ಯಕ್ಷಧ್ರುವ ಕಲಾ ಗೌರವ ನೀಡಿ ಸನ್ಮಾನಿಸಲಾಗುತ್ತದೆ. ಮೇ 27ರಂದು ಬೆಳಗ್ಗೆ 8.30ಕ್ಕೆ ಅಬ್ಬರ ತಾಳದಿಂದ ಕಾರ್ಯಕ್ರಮ ಪ್ರಾರಂಭವಾಗಿ ರಾತ್ರಿ 12ರವರೆಗೆ ನಡೆಯಲಿದೆ. ಸಮಾರಂಭದಲ್ಲಿ ಟ್ರಸ್ಟಿನ ಸದಸ್ಯರು ಮತ್ತು ಯಕ್ಷಾಭಿಮಾನಿಗಳಿಂದ ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರಿಗೆ ಮತ್ತು ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಉಚಿತ ಔಷಧ ವಿತರಣೆ ನಡೆಯಲಿದೆ.

ಸಮಾರಂಭದಲ್ಲಿ ‘ಯಕ್ಷಸಪ್ತ ಸ್ವರ’ ಎನ್ನುವ ಏಳು ಭಾಗವತರ ಭಾಗವತಿಕೆ, ಮಹಿಳಾ ಯಕ್ಷಗಾನ, ತಾಳಮದ್ದಳೆ, ದುಬೈ ಯಕ್ಷಮಿತ್ರರು ತಂಡದಿಂದ ಯಕ್ಷಗಾನ ಪ್ರದರ್ಶನ, ಯಕ್ಷಗಾನ ಹಾಸ್ಯ ವೈಭವ, ಯಕ್ಷಗಾನ ಬಯಲಾಟ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿದೆ. ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ನಟ ದೇವದಾಸ್ ಕಾಪಿಕಾಡ್ ಭಾಗವತಿಕೆ ನಡೆಸಲಿದ್ದಾರೆ. ಅದೇ ರೀತಿ ಕುಸೆಲ್ದರಸೆ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಮತ್ತಿತರ ಕಲಾವಿದರು ಹಾಸ್ಯ ಕಲಾವಿದರೊಂದಿಗೆ ಬಣ್ಣ ಹಚ್ಚಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ಸಿನೆಮಾ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಋಷಬ್ ಶೆಟ್ಟಿ, ಬಿಗ್‌ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ನ ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ ತಿಳಿಸಿದ್ದಾರೆ.

error: Content is protected !!
Share This